ಬೆಂಗಳೂರು: ಮುಂದಿನ ವಿಧಾನಸಭಾ ಚುನಾವಣೆಗೆ 130 ಸ್ಥಾನಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಸಿದ್ಧಗೊಂಡಿದೆ ಎಂಬುದಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ನಿವಾಸದಲ್ಲಿ ನಡೆದ ಸಿಇಸಿ (ಕೇಂದ್ರೀಯ ಚುನಾವಣಾ ಸಮಿತಿ) ಸಭೆಯ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿ ಈ ಮಾಹಿತಿ ಪ್ರಕಟಿಸಿದರು. ಇದೇ ವೇಳೆ ಅವರು ರಾಹುಲ್ ಗಾಂಧಿ ರಾಜ್ಯಕ್ಕೆ ಭೇಟಿ ನೀಡಿದ ಬಳಿಕ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುವುದಾಗಿ ಹೇಳಿದರು. ಈ ಮೂಲಕ ಬಿಜೆಪಿಗಿಂತ ಮೊದಲೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗುವುದು ಖಚಿತವಾಗಿದೆ.
ಟಿಕೆಟ್ ಯಾರಿಗೆ ನೀಡಬೇಕೆಂಬುದನ್ನು ಚರ್ಚೆ ಮಾಡಿ ತೀರ್ಮಾನ ಮಾಡಿದ್ದೇವೆ. ಒಮ್ಮತದ ಅಭಿಪ್ರಾಯ ವ್ಯಕ್ತಪಡಿಸಿದ ಬಳಿಕ ಪಟ್ಟಿ ತಯಾರಿಸಲಾಗಿದೆ. ಹಾಲಿ ಶಾಸಕರಿಗೆ ಟಿಕೆಟ್ ದೊರೆಯಲಿದೆ. ಹೀಗಾಗಿ ಪಟ್ಟಿ ಘೋಷಣೆ ಬಳಿಕ ಭಿನ್ನಾಭಿಪ್ರಾಯ ಬರುವ ಸಾಧ್ಯತೆಗಳಿಲ್ಲ ಎಂದ ಹೇಳಿದರು.
ಚುನಾವಣಾ ಪೂರ್ವದಲ್ಲಿ ಯಾವುದೇ ಪಕ್ಷಗಳ ಜತೆ ಮೈತ್ರಿ ಇಲ್ಲ ಎಂಬುದಾಗಿ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಅದರೆ, ಒಂದು ಕ್ಷೇತ್ರದಲ್ಲಿ ಮೈತ್ರಿ ಮಾಡುವ ಬೇಡಿಕೆಯಿದೆ. ಆದರೆ ಆ ಬಗ್ಗೆ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳುತ್ತೇವೆ ಎಂಬುದಾಗಿ ಅವರು ಹೇಳಿದರು.
ಡಿಕೆ ಸುರೇಶ್ ಅವರು ರಾಮನಗರದಿಂದ ಸ್ಪರ್ಧೆ ಮಾಡಬೇಕು ಎಂಬ ಒತ್ತಾಯ ಕೇಳಿ ಬಂದಿದೆ. ಆ ಬಗ್ಗೆಯೂ ತೀರ್ಮಾನ ಕೈಗೊಂಡಿಲ್ಲ. ಅವರು ಲೋಕಸಭೆಯಲ್ಲಿ ಇರಬೇಕು ಎಂಬುದೇ ಹೈಕಮಾಂಡ್ ಅಭಿಪ್ರಾಯ ಎಂಬುದಾಗಿ ಡಿಕೆ ಶಿವಕುಮಾರ್ ಹೇಳಿದರು.
ಮೂರು ಗಂಟೆ ಸಭೆ
ಅಭ್ಯರ್ಥಿಗಳ ಪಟ್ಟಿ ಪ್ರಕಟಕ್ಕಾಗಿ ಮೂರು ಗಂಟೆಗಳ ಕಾಲ ಸತತವಾಗಿ ಸಭೆ ನಡೆಯಿತು. ಹಾಲಿ ಶಾಸಕರಿಗೆ ಎಲ್ಲರಿಗೂ ಟಿಕೆಟ್ ನೀಡಬೇಕು ಎಂದು ಹಿರಿಯ ನಾಯಕರನೇಕರು ಒತ್ತಾಯ ಮಾಡಿದರು. ಆದರೆ, ಕೆಲವರಿಗೆ ಟಿಕೆಟ್ ನೀಡುವುದು ಬೇಡ ಎಂಬ ಅಭಿಪ್ರಾಯವೂ ವ್ಯಕ್ತಗೊಂಡಿತು. ಹೀಗಾಗಿ ಆರು ಕ್ಷೇತ್ರಗಳಲ್ಲಿ ಹೊಸ ಅಭ್ಯರ್ಥಿಗಳು ಅವಕಾಶ ಪಡೆಯುವ ಸಾಧ್ಯತೆಗಳಿವೆ ಎನ್ನಲಾಗಿದೆ.
ಸಭೆಯಲ್ಲಿ ಸಿದ್ದರಾಮಯ್ಯ, ಪರಮೇಶ್ವರ್, ಎಂಬಿ ಪಾಟೀಲ್, ಬಿಕೆ ಹರಿಪ್ರಸಾದ್ ಮತ್ತಿರರು ಇದ್ದರು.