ಬೆಂಗಳೂರು: ಇಡೀ ದೇಶದಲ್ಲೆ ಪ್ರಪ್ರಥಮ ಬಾರಿಗೆ ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಮಗ್ರ ಶಿಶು ಯೋಜನೆಯಡಿ ಆರಂಭಿಸಲಾಗಿರುವ ಸರ್ಕಾರಿ ಮಾಂಟೆಸ್ಸರಿ (L.K.G, UKG) ತರಗತಿಗಳಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸೋಮವಾರ ಚಾಲನೆ ನೀಡಿದರು. ಬೆಂಗಳೂರಿನ ಗೋವಿಂದರಾಜನಗರ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಪಟ್ಟೇಗಾರ ಪಾಳ್ಯದಲ್ಲಿರುವ ಅಂಗನವಾಡಿ ಕೇಂದ್ರದಲ್ಲಿ ಪೂರ್ವ ಪ್ರಾಥಮಿಕ ತರಗತಿಗಳಿಗೆ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು, ಅಂಗನವಾಡಿ ಕೇಂದ್ರಗಳ ಉನ್ನತೀಕರಣದ ಮೊದಲ ಭಾಗವಾಗಿ ಬೆಂಗಳೂರು ನಗರ ಜಿಲ್ಲೆಯಲ್ಲಿ ಇಂದು ಪೂರ್ವ ಪ್ರಾಥಮಿಕ ಶಾಲೆಗಳಿಗೆ ಚಾಲನೆ ನೀಡಿದ್ದು, ಇನ್ಮುಂದೆ ನಮ್ಮ ಪುಟಾಣಿಗಳು ಅಂಗನವಾಡಿ ಕೇಂದ್ರಗಳಲ್ಲೇ ಕನ್ನಡ ಹಾಗೂ ಇಂಗ್ಲಿಷ್ ಮಾಧ್ಯಮದಲ್ಲಿ ಕಲಿಯಲಿದ್ದಾರೆ. ಇಂದು ಮೊದಲ ಹಂತದಲ್ಲಿ ಬೆಂಗಳೂರು ನಗರ ಜಿಲ್ಲೆಯಲ್ಲಿ 250 ಹಾಗೂ ರಾಜ್ಯಾದ್ಯಂತ 500 ಅಂಗನವಾಡಿ ಕೇಂದ್ರಗಳಲ್ಲಿ ಪೂರ್ವ ಪ್ರಾಥಮಿಕ ಶಾಲೆಗಳು ಆರಂಭಗೊಳ್ಳಲಿವೆ ಎಂದು ತಿಳಿಸಿದರು.
ಈ ವೇಳೆ ವಿಜಯನಗರ ಕ್ಷೇತ್ರದ ಶಾಸಕ ಎಂ.ಕೃಷ್ಣಪ್ಪ, ವಿಧಾನ ಪರಿಷತ್ ಸದಸ್ಯರಾದ ಚನ್ನರಾಜ್ ಹಟ್ಟಿಹೊಳಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಡಾ.ಜಿ.ಸಿ.ಪ್ರಕಾಶ್, ಇಲಾಖೆಯ ನಿರ್ದೇಶಕರಾದ ಎನ್.ಸಿದ್ದೇಶ್ವರ್, ವಿಕಲಾಂಗ ಇಲಾಖೆಯ ಆಯುಕ್ತರಾದ ದಾಸ್ ಸೂರ್ಯವಂಶಿ, ಸಚಿವರ ವಿಶೇಷ ಕರ್ತವ್ಯಾಧಿಕಾರಿ ಬಿ.ಎಚ್. ನಿಶ್ಚಲ್, ಸೇರಿದಂತೆ ಇಲಾಖೆಯ ಅಧಿಕಾರಿಗಳು, ಕಾವೇರಿಪುರ ವಾರ್ಡ್ ನ ಪ್ರಮುಖರು ಉಪಸ್ಥಿತರಿದ್ದರು.
ಇದನ್ನೂ ಓದಿ | Economic Survey 2023-24: ದೇಶದ ಆರ್ಥಿಕತೆ ಸುಭದ್ರ, ಜಿಡಿಪಿ 7% ಬೆಳವಣಿಗೆ; ಆರ್ಥಿಕ ಸಮೀಕ್ಷೆ ಪ್ರಕಟ
ಸರ್ಕಾರದಿಂದಲೇ ಬ್ಯಾಗ್, ಪುಸ್ತಕ, ಸಮವಸ್ತ್ರ ಉಚಿತ
ಇಡೀ ದೇಶಕ್ಕೆ ಮಾದರಿಯಾಗಿರುವ ಕರ್ನಾಟಕದ ಅಂಗನವಾಡಿ ಕೇಂದ್ರಗಳ ಉನ್ನತೀಕರಣದ (LKG UKG in Anganwadis) ಮೊದಲ ಭಾಗವಾಗಿ ಜುಲೈ 22ರಂದು ರಾಜ್ಯದ 250 ಅಂಗನವಾಡಿ ಕೇಂದ್ರಗಳಲ್ಲಿ ಪೂರ್ವ ಪ್ರಾಥಮಿಕ (ಎಲ್‌ಕೆಜಿ, ಯುಕೆಜಿ) ತರಗತಿಗಳನ್ನು ಸಾಂಕೇತಿಕವಾಗಿ ಆರಂಭಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಇತ್ತೀಚೆಗೆ ತಿಳಿಸಿದ್ದರು.
ಪೂರ್ವ ಪ್ರಾಥಮಿಕ ಶಾಲಾ ಮಕ್ಕಳಿಗೆ ಇಲಾಖೆ ವತಿಯಿಂದಲೇ ಬ್ಯಾಗ್, ಪುಸ್ತಕ ಹಾಗೂ ಸಮವಸ್ತ್ರಗಳನ್ನು ವಿತರಿಸಲಾಗುವುದು. ಮೊದಲ ಹಂತದಲ್ಲಿ 15 ರಿಂದ 20 ಸಾವಿರ ಶಾಲೆಗಳಲ್ಲಿ ಗವರ್ನಮೆಂಟ್ ಮಾಂಟೆಸ್ಸರಿ ಆರಂಭಿಸಲಾಗುತ್ತಿದೆ. ಅಂಗನವಾಡಿ ಕೇಂದ್ರಗಳನ್ನು ಉನ್ನತೀಕರಣ ಮಾಡುವುದೇ ಇಲಾಖೆಯ ಉದ್ದೇಶ. ಈಗಾಗಲೇ ಇಲಾಖೆ ವತಿಯಿಂದ ಅಂಗನವಾಡಿ ಕೇಂದ್ರಗಳ ಮಕ್ಕಳಿಗೆ ಗುಣಮಟ್ಟದ ಆಹಾರ, ಶಿಕ್ಷಕಿಯರಿಗೆ ಸೀರೆ ನೀಡಲಾಗಿದೆ. ಯಾವುದೇ ಕಾರಣಕ್ಕೂ ಅಂಗನವಾಡಿ ಶಿಕ್ಷಕಿಯರನ್ನು ತೆಗೆಯುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದರು.
30 ವರ್ಷಕ್ಕಿಂತ ಮೇಲ್ಪಟ್ಟ ಅಂಗನವಾಡಿ ಕೇಂದ್ರಗಳನ್ನು ಉನ್ನತ ದರ್ಜೆಗೆ ಏರಿಸಲಾಗುವುದು. ನನ್ನ ಅಧಿಕಾರ ಅವಧಿಯಲ್ಲಿ ಇಲಾಖೆಗೆ ಕೈಲಾದಷ್ಟು ಉತ್ತಮ ಕೆಲಸ ಮಾಡುವೆ. ಕಾರ್ಯಕರ್ತೆಯರ ಹೋರಾಟದ ಶಕ್ತಿಯೇ ಅಂಗನವಾಡಿ ಉನ್ನತೀಕರಣಕ್ಕೆ ಕಾರಣ ಎಂದು ಹೇಳಿದ್ದರು.
ಇದನ್ನೂ ಓದಿ | NEET UG 2024: ಅಧಿವೇಶನದಲ್ಲಿ ‘ನೀಟ್’ ಪ್ರಸ್ತಾಪಿಸಿದ ರಾಹುಲ್ ಗಾಂಧಿ; ಪ್ರತ್ಯುತ್ತರ ಕೊಟ್ಟ ಕೇಂದ್ರ ಸಚಿವ
ಈ ಮೊದಲು ಪ್ರಾಥಮಿಕ ಶಾಲೆಗಳಲ್ಲೇ ಎಲ್‌ಕೆಜಿ, ಯುಕೆಜಿ ತರಗತಿ ಆರಂಭಿಸಲು ಸರ್ಕಾರ ನಿರ್ಧರಿಸಿತ್ತು. ಆದರೆ, ಇದಕ್ಕೆ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ವಿರೋಧ ವ್ಯಕ್ತಪಡಿಸಿದ್ದರು. ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ತರಗತಿ ಆರಂಭಿಸಿದರೆ ಅಂಗನವಾಡಿ ಕೇಂದ್ರಗಳ ಅಸ್ತಿತ್ವಕ್ಕೆ ಧಕ್ಕೆಯಾಗಲಿದೆ. ಹೀಗಾಗಿ ಅಂಗನವಾಡಿಗಳಲ್ಲೇ ಎಲ್‌ಕೆಜಿ, ಯುಕೆಜಿ ಆರಂಭಿಸಬೇಕು ಎಂದು ಒತ್ತಾಯ ಕೇಳಿಬಂದಿತ್ತು. ಹೀಗಾಗಿ ಅಂಗನವಾಡಿ ಕೇಂದ್ರಗಳಲ್ಲೇ ಪೂರ್ವ ಪ್ರಾಥಮಿಕ ತರಗತಿಗಳನ್ನು ರಾಜ್ಯ ಸರ್ಕಾರ ಆರಂಭಿಸಿದೆ.