Site icon Vistara News

Load Shedding : ವೇಣು, ಸುರ್ಜೇವಾಲಾಗೆ ಕಮಿಷನ್‌ ಕೊಡಲು ಸರ್ಕಾರದಿಂದಲೇ ಕೃತಕ ವಿದ್ಯುತ್‌ ಅಭಾವ ಸೃಷ್ಟಿ: ಎಚ್‌ಡಿಕೆ

HD Kumaraswamy

ಬೆಂಗಳೂರು: ರಾಜ್ಯ ಸರ್ಕಾರವೇ ಕೃತಕ ವಿದ್ಯುತ್ ಅಭಾವವನ್ನು (Artificial Power Crisis) ತೋರಿಸುತ್ತಿದೆ. ಕೃತಕ ಅಭಾವ ಸೃಷ್ಟಿಯಾದರೆ ಮಾತ್ರ ಹೈಕಮಾಂಡ್‌ ನಾಯಕರಾದ ಕೆ.ಸಿ. ವೇಣುಗೋಪಾಲ್ ಮತ್ತು ರಣದೀಪ್‌ ಸಿಂಗ್ ಸುರ್ಜೇವಾಲಾಗೆ (Kc Venugopal and Randeep Singh Surjewala) ಕಮಿಷನ್ ಕಳುಹಿಸುವುದಕ್ಕೆ ಆಗುತ್ತದೆ. ಹಾಗಾಗಿ ಈ ಕೃತಕ ಅಭಾವ‌ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ (Former CM HD Kumaraswamy) ಆರೋಪ ಮಾಡಿದ್ದಾರೆ. ಸರ್ಕಾರವು ಸಮರ್ಪಕವಾಗಿ ವ್ಯವಸ್ಥೆ ಮಾಡಿದರೆ ರಾಜ್ಯದಲ್ಲಿ ಲೋಡ್‌ ಶೆಡ್ಡಿಂಗ್‌ (Load Shedding) ಮಾಡುವ ಪ್ರಮೇಯವೇ ಬರುತ್ತಿರಲಿಲ್ಲ ಎಂದು ಹೇಳಿದ್ದಾರೆ.

ಶನಿವಾರ (ಅ. 21) ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಚ್‌.ಡಿ. ಕುಮಾರಸ್ವಾಮಿ, ಈಗ ರಾಜ್ಯ ಸರ್ಕಾರದ ಲೆಕ್ಕಾಚಾರವನ್ನೇ ತೆಗೆದುಕೊಳ್ಳೋಣ. ಏಳು ಗಂಟೆ ವಿದ್ಯುತ್ ಕೊಟ್ಟರೂ 28 ಕೋಟಿ ಯುನಿಟ್ ಬೇಕು. 25 ಕೋಟಿ ಯುನಿಟ್ ವಿದ್ಯುತ್ ಉತ್ಪಾದನೆ ಆಗಿದೆ ಎಂದು ಹೇಳುತ್ತಿದ್ದಾರೆ. ಅವರ ಹೇಳಿಕೆ ಪ್ರಕಾರ ಮೂರು ಕೋಟಿ ಯುನಿಟ್‌ ವಿದ್ಯುತ್ ಮಾತ್ರ ಕೊರತೆ ಆಗುತ್ತದೆ. ವಿದ್ಯುತ್‌ ಕೃತಕ ಅಭಾವ ಸೃಷ್ಟಿ ಹಿಂದೆ ಇರೋದು ರಾಜ್ಯ ಸರ್ಕಾರ. ಇಂಧನ ಸಚಿವ ಕೆ.ಜೆ. ಜಾರ್ಜ್‌ಗೆ ದುಡ್ಡಿನ ಅವಶ್ಯಕತೆ ಇಲ್ಲ. ಇದೆಲ್ಲ ಕೇಂದ್ರದಲ್ಲಿರುವ ಕಾಂಗ್ರೆಸ್‌ ನಾಯಕರಿಗೆ ಕಮಿಷನ್‌ ಹಣ ಕೊಡಲು ಮಾಡುತ್ತಿರುವುದು ಎಂದು ಹೇಳಿದರು.

ರಾಜ್ಯದಲ್ಲಿಯೇ ಇರುವ ಇತರೆ ಮೂಲಗಳಿಂದ ಸರಿಯಾಗಿ ಉತ್ಪಾದನೆ ಮಾಡಿದರೆ ಐದು ಕೋಟಿ ಹೆಚ್ಚುವರಿ ವಿದ್ಯುತ್ ಉತ್ಪಾದನೆ ಮಾಡಬಹುದು. ಇದಕ್ಕಾಗಿ ಬೇರೆ ಕಡೆಗಳಿಂದ ವಿದ್ಯುತ್ ಖರೀದಿ ಮಾಡುವುದು ಬೇಡ. ನಾವೇ ಮಾಡಬಹುದು. ಗ್ಯಾರಂಟಿ ಕಡೆ ಗಮನ ಕೊಟ್ಟು ವಿದ್ಯುತ್ ಉತ್ಪಾದನೆಯನ್ನು ಮರೆತರು. ಈಗ ಕಮಿಷನ್‌ಗಾಗಿ ಕೃತಕ ಅಭಾವ ಸೃಷ್ಟಿ ಮಾಡುತ್ತಿದ್ದಾರೆ. ನನ್ನ ಕಾಲದಲ್ಲಿ ಎರಡು ಅವಧಿಯಲ್ಲೂ ಒಂದು ರೂಪಾಯಿ ಅವ್ಯವಹಾರ ಆಗಿಲ್ಲ. ಹಿಂದೆ ಮಾಡಿಲ್ಲ, ಮುಂದೆ ಮಾಡಲ್ಲ ಎಂದು ಎಚ್.ಡಿ. ಕುಮಾರಸ್ವಾಮಿ ತಿಳಿಸಿದರು.

ಇದನ್ನೂ ಓದಿ: Karnataka Weather : ಸಂಡೆ ಆದ್ಮೇಲೆ ಮಂಡೆ ಬರ್ತದೆ; ಮಳೆಯೇ ಆಗದೆ ಮಂಡೆ ಬಿಸಿ ಆಗ್ತಿದೆ!

ಸೋಲಾರ್ ಪಾರ್ಕ್ ಅನ್ನು ಯಾಕೆ ಸರ್ಕಾರ ಮಾಡಲಿಲ್ಲ?

ಪಾವಗಡ ಸೋಲಾರ್ ಪಾರ್ಕ್ ಅನ್ನು ಯಾಕೆ ಸರ್ಕಾರ ಮಾಡಲಿಲ್ಲ? ಯಾರ ಬೇನಾಮಿಗಳು ಅದರ ಹಿಂದೆ ಇದ್ದಾರೆ. ಏಳು ನಿಮಿಷ ಅರ್ಜಿ ಸಲ್ಲಿಕೆಗೆ ಅವಕಾಶ ಇತ್ತು. ಯಾರು ಸಲ್ಲಿಕೆ ಮಾಡಿದರು? 1627 ಮಿಲಿಯನ್ ಯುನಿಟ್ ವಿದ್ಯುತ್‌ ಅನ್ನು ಐದು ತಿಂಗಳಲ್ಲಿ ಖರೀದಿ ಮಾಡಿದ್ದಾರೆ. ನಮ್ಮ ಕಾಲದ ದಾಖಲೆ ತೆಗೆಯಿರಿ ನಾವು 30 ಪೈಸೆ ಕಡಿಮೆ ಮಾಡಿದ್ದೇವೆ ಎಂದು ಎಚ್.ಡಿ. ಕುಮಾರಸ್ವಾಮಿ ಹೇಳಿದರು.

ರಾಜ್ಯಕ್ಕೆ ಕತ್ತಲು ತರಿಸಿದ್ದು ನೀವು ಮಾಡಿದ ಪುಣ್ಯವಾ?

ಬಿಜೆಪಿ ಪಾಪದ ಫಲದಿಂದ ರಾಜ್ಯದಲ್ಲಿ ವಿದ್ಯುತ್ ಕೊರತೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಆಯಿತು ಅವರದ್ದು ಪಾಪದ ಫಲವೆಂದೇ ಅಂದುಕೊಳ್ಳೋಣ, ನಿಮ್ಮದು ಪುಣ್ಯದ ಫಲವೇನು? ರಾಜ್ಯಕ್ಕೆ ಕತ್ತಲು ತರಿಸಿದ್ದು ನೀವು ಮಾಡಿದ ಪುಣ್ಯವಾ? ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ಸಂದರ್ಭದಲ್ಲಿ ಹೇಳಿದ್ದೆ. ಬರಗಾಲಕ್ಕೆ ಇಲ್ಲಿಯವರೆಗೂ ಒಂದು ರೂಪಾಯಿ ಬಿಡುಗಡೆ ಬಗ್ಗೆ ಮಾಹಿತಿ ಇಲ್ಲ. ಡಿಸಿ ಅಕೌಂಟ್‌ನಲ್ಲಿ ಹಣ ಇದೆ ಎಂದು ಹೇಳುತ್ತೀರಿ. ಅಕೌಂಟ್‌ನಲಿ ಹಣ ಇಟ್ಟುಕೊಂಡು ಏನಾಗಬೇಕು? ರೈತರ ಸಮಸ್ಯೆಯನ್ನು ಕೇವಲವಾಗಿ ತೆಗೆದುಕೊಳ್ಳಬೇಡಿ. ಹಣಕ್ಕಾಗಿ ಈಗ ಕೇಂದ್ರ ಸರ್ಕಾರವನ್ನು ನೋಡಬೇಡಿ. ರಾಜ್ಯದಿಂದ ಮೊದಲು ಪರಿಹಾರ ಕೊಡಿ. ನಿಮ್ಮದೇ ಮಾಡೆಲ್ ಅಂತೀರಿ. ದೇಶದ ವಿವಿಧ ರಾಜ್ಯಗಳಲ್ಲಿ ಈ ಗ್ಯಾರಂಟಿ ಘೋಷಣೆ ಮಾಡಿದ್ದೀರಿ. ಮುಂದೆ ಏನಾಗುತ್ತದೆಯೋ ಗೊತ್ತಿಲ್ಲ. ರಾಜ್ಯದಲ್ಲಿ ತೆರಿಗೆ ಸಂಗ್ರಹ ಕಡಿಮೆ ಆಗಿಲ್ಲ. ಬರೀ ಗ್ಯಾರಂಟಿ ಅಂತ ಹೇಳಿಕೊಂಡು ಹೊರಟಿದ್ದೀರಿ ಎಂದು ಎಚ್.ಡಿ. ಕುಮಾರಸ್ವಾಮಿ ಹೇಳಿದರು.

ರೈತರ ಬಳಿ ಹೋಗಿ ಏನೂ ಬೆಳೆಯಬೇಡಿ ಎಂದು ಹೇಳುತ್ತೀರಾ?

ವಿದ್ಯುತ್ ಖರೀದಿ ಬಗ್ಗೆ ಸಿಎಂ ಸಭೆ ಮಾಡಿದರು. ಸೋರಿಕೆ ಬಗ್ಗೆ ಚರ್ಚೆ ಆಗಿದೆ. ಸೋರಿಕೆ ಒಂದು ಭಾಗ ಮಾತ್ರ. ಉತ್ಪಾದನೆ ಕುಂಠಿತಗೊಳಿಸಿದ್ದಾರೆ. ಎಸಿ ರೂಂ ಬಿಟ್ಟು ಉತ್ಪಾದನೆ ಘಟಕಕ್ಕೆ ಹೋಗಿ ಅಂತ ಹೇಳಿದ್ದೀರಿ. ರೈತರನ್ನು ಮನವರಿಕೆ ಮಾಡಿ ಎಂದು ಹೇಳಿದ್ದೀರಿ. ರೈತರ ಬಳಿ ಹೋಗಿ ಏನೂ ಬೆಳೆಯಬೇಡಿ ಎಂದು ಹೇಳುತ್ತೀರಾ? ಎಂದು ಎಚ್.ಡಿ. ಕುಮಾರಸ್ವಾಮಿ ಖಾರವಾಗಿ ಪ್ರಶ್ನೆ ಮಾಡಿದರು.

ಸರ್ಕಾರದ ವೈಫಲ್ಯ

ರಾಜ್ಯದಲ್ಲಿ ನೈಸರ್ಗಿಕ ವಿದ್ಯುತ್ ಮೂಲಗಳಿಂದ 17848.08 ಮೆಗಾ ವ್ಯಾಟ್ ಉತ್ಪಾದನೆ ಆಗುತ್ತಿದೆ. ಖಾಸಗಿ ಮತ್ತು ರಾಜ್ಯ ಸರ್ಕಾರದಿಂದ 32,912 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಬಹುದು. ಥರ್ಮಲ್ ಪ್ಲಾಂಟ್‌ನಿಂದ 9947 ಮೆಗಾ ವ್ಯಾಟ್ ಉತ್ಪಾದನೆ ಮಾಡಬೇಕು. ನೀವು ಕಲ್ಲಿದ್ದಲು ಸಂಗ್ರಹ ಮಾಡಿಕೊಂಡಿಲ್ಲ. ಸಂಗ್ರಹ ಮಾಡಿಕೊಂಡಿದ್ದರೆ 16867.63 ಮೆಗಾ ವ್ಯಾಟ್ ಉತ್ಪಾದನೆ ಮಾಡಬಹುದಿತ್ತು. ಆದರೆ, ಅದಕ್ಕೆ ಅಗತ್ಯ ಕ್ರಮಗಳನ್ನು ನೀವು ತೆಗೆದುಕೊಂಡಿಲ್ಲ. ನಮ್ಮ ರಾಜ್ಯದಲ್ಲಿ ಖಾಸಗಿ ಹಾಗೂ ಸರ್ಕಾರದಿಂದ 32912 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಸಾಮರ್ಥ್ಯ ಇದೆ. ಜಲ ವಿದ್ಯುತ್‌ನಿಂದ 1933 ಮೆಗಾ ವ್ಯಾಟ್ ಹಾಗೂ ಥರ್ಮಲ್ ಪ್ಲಾಂಟ್‌ನಿಂದ 9947 ಮೆಗಾ ವ್ಯಾಟ್‌ ವಿದ್ಯುತ್‌ ಉತ್ಪಾದನೆ ಮಾಡಬಹುದು. ಸೋಲಾರ್‌ನಿಂದ 3894 ಮೆಗಾ ವ್ಯಾಟ್ ಉತ್ಪಾದನೆ ಆಗತ್ತದೆ. ಎಲ್ಲ ಸೇರಿ ಪ್ರಸ್ತುತ ಕನಿಷ್ಠ 16867 ಮೆಗಾ ವ್ಯಾಟ್ ಉತ್ಪಾದನೆ ಮಾಡಬಹುದಿತ್ತು. ಆದರೆ, ಸರ್ಕಾರದ ವೈಫಲ್ಯದಿಂದ ಸಾಧ್ಯವಾಗಿಲ್ಲ ಎಚ್.ಡಿ. ಕುಮಾರಸ್ವಾಮಿ ಆರೋಪ ಮಾಡಿದರು.

ಸರ್ಕಾರ ಶ್ವೇತಪತ್ರ ಹೊರಡಿಸಲಿ

ವಿದ್ಯುತ್ ಖರೀದಿ ಬಗ್ಗೆ ರಾಜ್ಯ ಸರ್ಕಾರ ಶ್ವೇತ ಪತ್ರ ಹೊರಡಿಸಲಿ. ಪ್ರತಿ ತಿಂಗಳಿಗೆ ಎಷ್ಟು ಖರ್ಚು ಆಗುತ್ತಿದೆ ಎಂದು ಹೇಳಲಿ. ನನ್ನ ಬಗ್ಗೆ ಕಾಂಗ್ರೆಸ್ ಸೋಷಿಯಲ್ ಮೀಡಿಯಾದಲ್ಲಿ ಬರೆದಿದ್ದಾರೆ. ನಾವು ಇರುವ ಹತ್ತು ತಿಂಗಳಲ್ಲಿ ಕೆಲಸ ಮಾಡಿದ್ದೇವೆ. ಏನಾದರೂ ಇದ್ದರೆ ಬಿಚ್ಚಿಡಿ. ಪ್ರಥಮವಾಗಿ ಬಂಧೀಖಾನೆ ಸಚಿವರಾಗಿ ಬಂದಿರಿ. ಬಿಚ್ಚಿಡ್ತೀನಿ ಬಿಚ್ಚಿಡ್ತೀನಿ ಅಂತ ಮತ್ತೇನೋ ಆದರೆ ಕಷ್ಟ. ಹಾಗಾಗಿ ಬೇಗ ಬಿಚ್ಚಿಡಿ ಎಂದು ಡಿ.ಕೆ. ಶಿವಕುಮಾರ್‌ ವಿರುದ್ಧ ಎಚ್.ಡಿ. ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: Basavaraj Bommai : ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಆರೋಗ್ಯ ವಿಚಾರಿಸಿದ ಸಿಎಂ ಸಿದ್ದರಾಮಯ್ಯ

ವರ್ಗಾವಣೆ, ಕಮಿಷನ್‌ ಚರ್ಚೆ

ಇತ್ತೀಚೆಗೆ ರಾಜ್ಯದಲ್ಲಿ ಕಮಿಷನ್ ಬಗ್ಗೆ ಚರ್ಚೆ ಆಗುತ್ತಿದೆ. 40% ಕಮಿಷನ್ ಆರೋಪ ಮಾಡಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದಿದೆ. ಈಗ ಇವರ ವಿರುದ್ಧವೂ ನಮ್ಮ ಮಿತ್ರ ಪಕ್ಷ ಕಮಿಷನ್ ಆರೋಪ ಮಾಡಿದೆ. ಜನರಿಗೆ ಮನೋರಂಜನೆ ಅಂತೂ ದೊರಕುತ್ತಿದೆ. ಇವರ ಯೋಜನೆಗಳ ಬಗ್ಗೆ ಚರ್ಚೆ ಆಗುತ್ತಿಲ್ಲ. ಬರೀ ವರ್ಗಾವಣೆ ಸೇರಿದಂತೆ ಕಮಿಷನ್ ಬಗ್ಗೆ ಚರ್ಚೆ ಆಗುತ್ತಿದೆ. ಇದು ಸತ್ಯ ಹರಿಶ್ಚಂದ್ರ ಸರ್ಕಾರ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಆಕ್ರೋಶವನ್ನು ಹೊರಹಾಕಿದ್ದಾರೆ.

ಸರ್ಕಾರದ ಗ್ಯಾರಂಟಿ ಯೋಜನೆಗಳ ನಡುವೆ ಜನರಿಗೆ ಎದುರಾಗಿರುವ ಸಂಕಷ್ಟವನ್ನು ದೂರ ಮಾಡುವ ಕೆಲಸವನ್ನು ನಾಡದೇವತೆ ಮಾಡಲಿ. ನುಡಿದಂತೆ ನಡೆಯುತ್ತಿರುವ ಕಾಂಗ್ರೆಸ್ ಸರ್ಕಾರವು ನಾವು ಮಾಡಿದ್ದೇ ಸರಿ, ಅದಕ್ಕೆ ಜನರ ಒಪ್ಪಿಗೆ ಇದೆ ಎಂದು ಹೇಳುತ್ತಿದೆ ಎಂದು ಕಿಡಿಕಾರಿದರು.

ದೆಹಲಿ ಪ್ರತಿನಿಧಿ ಹೋಗಿ ಕೂರಲಿ

ಇವರು ಹೇಗೆ ಸರ್ಕಾರವನ್ನು ನಡೆಸುತ್ತಿದ್ದಾರೆ? ಐದು ಗ್ಯಾರಂಟಿಗಳಲ್ಲಿ ನಾಲ್ಕು ಗ್ಯಾರಂಟಿ ಜಾರಿ ಮಾಡಿದ್ದೇವೆ. ಜನರು ಸುಭಿಕ್ಷವಾಗಿದ್ದಾರೆ ಅಂತ ಹೇಳುತ್ತಿದ್ದಾರೆ. ಆದರೆ, ಮತ್ತೊಂದು ಕಡೆ ಸರ್ಕಾರ ಆರ್ಥಿಕ ಸಂಕಷ್ಟದಲ್ಲಿ ಇದೆ. ವಿಪಕ್ಷಗಳು ಏನಾದರೂ ಹೇಳಿದರೆ ಅದನ್ನು ನುಡಿ ಮುತ್ತುಗಳು ಅಂತ ಡಿಸಿಎಂ ಡಿ.ಕೆ. ಶಿವಕುಮಾರ್‌ ಹೇಳುತ್ತಿದ್ದಾರೆ. 33,700 ಕೋಟಿ ರೂಪಾಯಿ ನಷ್ಟ ಆಗಿದೆ ಎಂದು ರಾಜ್ಯ ಸರ್ಕಾರ ಹೇಳಿದೆ. ಕೇಂದ್ರದಿಂದ ಅನುದಾನ ಬೇಕು. ಪತ್ರ ಬರೆಯಲಾಗಿದ್ದು, ಭೇಟಿಗೆ ಅವಕಾಶ ಕೊಡುತ್ತಿಲ್ಲ ಅಂತ ಸಿಎಂ ಹೇಳುತ್ತಿದ್ದೀರಿ. ಆದರೆ, ನೀವು ದೆಹಲಿ ಪ್ರತಿನಿಧಿಯನ್ನು ಮಾಡಿದ್ದೀರಿ. ಅಲ್ಲಿ ಹೋಗಿ ಕೂರುವ ಕೆಲಸವನ್ನು ಮಾಡಬೇಕು ಎಂದು ಎಚ್.ಡಿ. ಕುಮಾರಸ್ವಾಮಿ ಸಲಹೆ ನೀಡಿದರು.

ಪತ್ರ ಬರೆದರೆ ಆಗಲ್ಲ. ದೆಹಲಿ ಪ್ರತಿನಿಧಿಗಳು ಒತ್ತಾಯ ಮಾಡಿ ಸಮಯ ಪಡೆಯಬೇಕು. ಹೊಸ ಕಾರು ಪಡೆದಿದ್ದೀರಿ. ಇದು ದೆಹಲಿ ಅವರಿಗೂ ಇದೆಯೋ ಇಲ್ಲವೋ? ಎಂದು ಎಚ್.ಡಿ. ಕುಮಾರಸ್ವಾಮಿ ಪ್ರಶ್ನೆ ಮಾಡಿದರು.

ಆಹಾರ ಧಾನ್ಯಗಳನ್ನು ಹೊರ ದೇಶಗಳಿಂದ ತರುವ ಪರಿಸ್ಥಿತಿ ಬಂದಿದೆ. ಬೆಳಗ್ಗೆ ಎದ್ದರೆ ಇಬ್ಬರು ಸೇರಿ ಕೈ ಎತ್ತುತ್ತೀರಿ. ಬೆಳಗ್ಗೆ ಪೇಪರ್‌ನಲ್ಲಿ ನೋಡಿದರೆ ನಿಮ್ಮ ದೇ ಹೆಡ್‌ಲೈನ್ ಇರುತ್ತದೆ. ನಮಗೂ ಕೈ ಎತ್ತಿ ಬಫೂನ್ ಮಾಡಿದಿರಿ ಎಂದು ಎಚ್.ಡಿ. ಕುಮಾರಸ್ವಾಮಿ ಹೇಳಿದರು.

ಕುರಿ ಕಾಯಲು ತೋಳ ಬಿಟ್ಟರು

2013ರಲ್ಲಿ ವಿದ್ಯುತ್ ಹಗರಣ ಆದಾಗ ಅಂದಿನ ಸಚಿವರ ಅಧ್ಯಕ್ಷತೆಯಲ್ಲಿ ಸದನ ಸಮಿತಿ ರಚನೆ ಮಾಡಿದರು. ಕುರಿ ಕಾಯಲು ತೋಳವನ್ನು ಕರೆದುಕೊಂಡು ಹೋದಂತೆ ರಚನೆ ಮಾಡಿದಿರಿ ಎಂದು ಸಿಎಂ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ವಿರುದ್ಧ ಎಚ್.ಡಿ. ಕುಮಾರಸ್ವಾಮಿ‌ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: Police Insurance : ಹುತಾತ್ಮ ಪೊಲೀಸ್‌ ಸಿಬ್ಬಂದಿ ಗುಂಪು ವಿಮಾ ಮೊತ್ತ ಇನ್ನು 50 ಲಕ್ಷ ರೂ.: ಸಿಎಂ ಸಿದ್ದರಾಮಯ್ಯ

ಯಾರು ಬಟ್ಟೆ ಹರಿದುಕೊಂಡು ಓಡಾಡುತ್ತಾರೆ ನೋಡೋಣ

ನಾನು ಬಟ್ಟೆ ಹರಿದುಕೊಂಡು ಓಡಾಡುತ್ತೇನೆಂದು ಯಾರೋ ಹೇಳಿದ್ದಾರೆ. ಕೆಲ ದಿನ ಕಾಯಿರಿ, ಯಾರು ಬಟ್ಟೆ ಹರಿದುಕೊಂಡು ಓಡಾಡುತ್ತಾರೆ ನೋಡೋಣ ಎಂದು ಹೇಳಿದ ಎಚ್.ಡಿ. ಕುಮಾರಸ್ವಾಮಿ, ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಕ್ರಿಕೆಟ್ ನೋಡಲು ಹೋಗಿದ್ದರು. ಯಾರಿಗೆ ಸಪೋರ್ಟ್ ಕೊಡಲು ಹೋಗಿದ್ದರು? ಪಾಕಿಸ್ತಾನಕ್ಕೆ ಸಪೋರ್ಟ್ ಕೊಡಲು ಹೋಗಿದ್ದರಾ? ಕ್ರೀಡೆಗೆ ನನ್ನ ವಿರೋಧ ಇಲ್ಲ. ಆದರೆ, ಎಂಟೆಂಟು ಗಂಟೆ ಮ್ಯಾಚ್ ನೋಡಲು ಹೋಗುತ್ತೀರ. ಅದೇ ವಿದ್ಯುತ್ ಸಮಸ್ಯೆ ಇದೆ ಎಂದು ಹೇಳುತ್ತಿದ್ದೀರಿ, ಬರಗಾಲ ಇದೆ ಅಂತ ಹೇಳುತ್ತಿದ್ದೀರಿ. ಇವುಗಳನ್ನು ಬಗೆಹರಿಸುವುದನ್ನು ಬಿಟ್ಟು ಮ್ಯಾಚ್ ನೋಡಲು ಹೋಗುತ್ತೀರಾ? ಎಂದು ಎಚ್.ಡಿ. ಕುಮಾರಸ್ವಾಮಿ ಪ್ರಶ್ನೆ ಮಾಡಿದರು.

Exit mobile version