Site icon Vistara News

Load Shedding : ರಾಜ್ಯದಲ್ಲಿ 1500 ಮೆಗಾ ವ್ಯಾಟ್ ಕೊರತೆ; ಇಂಧನ ಖರೀದಿಗೆ ಮುಂದಾಗಿದ್ದೇವೆಂದ ಜಾರ್ಜ್

Load shedding in karnataka

ನವ ದೆಹಲಿ: ಕರ್ನಾಟಕದಲ್ಲಿ ಮಳೆ ಅಭಾವ (Rain Scarcity) ಇರುವುದು ಎಲ್ಲರಿಗೂ ಗೊತ್ತಿದೆ. ಈ ಸೆಪ್ಟೆಂಬರ್ ತಿಂಗಳಲ್ಲಿ ವಿದ್ಯುತ್ ಕೊರತೆ ಜಾಸ್ತಿ ಇದೆ. 16000 ಮೆಗಾ ವ್ಯಾಟ್ ವಿದ್ಯುತ್‌ಗೆ ಬೇಡಿಕೆ ಇದೆ. 1500 ಮೆಗಾ ವ್ಯಾಟ್ ಕೊರತೆ ಇದೆ. ಕೊರತೆಯನ್ನು ನೀಗಿಸಲು ಇಂಧನ ಖರೀದಿಗೆ ಮುಂದಾಗಿದ್ದೇವೆ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್‌ (Energy Minister KJ George) ಹೇಳಿದ್ದಾರೆ. ಈ ಮೂಲಕ ಲೋಡ್‌ ಶೆಡ್ಡಿಂಗ್‌ಗೆ (Load Shedding) ವಿದ್ಯುತ್‌ ಕೊರತೆಯೇ (Power shortage) ಇರುವ ಕಾರಣ ಎಂಬುದನ್ನು ಪರೋಕ್ಷವಾಗಿ ಹೇಳಿದ್ದಾರೆ.

ನವ ದೆಹಲಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಕೆ.ಜೆ. ಜಾರ್ಜ್‌, ವಿದ್ಯುತ್‌ ಕೊರತೆ ನೀಗಿಸಲು ಬೇರೆ ಬೇರೆ ರಾಜ್ಯಗಳ ಬಗ್ಗೆ ಮಾತನಾಡುತ್ತಾ ಇದ್ದೇವೆ. ನಮಗೆ ತೊಂದರೆ ಆಗಿದೆ. ಇದಕ್ಕೆ ಬಿಜೆಪಿ ಕಾರಣ. ಕಳೆದ 4 ವರ್ಷಗಳ ಬಿಜೆಪಿ ಆಡಳಿತದಲ್ಲಿ ವಿದ್ಯುತ್ ಅನ್ನು ಹೆಚ್ಚಿಸುವ ಯಾವ ಕೆಲಸವನ್ನೂ ಈ ಸರ್ಕಾರ ಮಾಡಿಲ್ಲ. ನಮ್ಮ ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ಇಂಧನದ ಉತ್ಪಾದನೆಯನ್ನು ಹೆಚ್ಚು ಮಾಡಿದ್ದೆವು. ಆದರೆ, ಬಿಜೆಪಿಯವರು 4 ವರ್ಷ ನಿದ್ದೆ ಮಾಡಿರುವ ಸಲುವಾಗಿ ಇಂದು ನಮಗೆ ವಿದ್ಯುತ್ ಕೊರತೆ ಆಗಿದೆ ಎಂದು ಹೇಳಿದರು.

ವಿದ್ಯುತ್‌ ಕೊರತೆ ನೀಗಿಸಲು ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕಾರ್ಯಪ್ರವೃತ್ತವಾಗಿದೆ. ಬೇರೆ ರಾಜ್ಯದಿಂದ ವಿದ್ಯುತ್‌ ಖರೀದಿ ಮಾಡಿ ನೀಡಲಾಗುವುದು ಎಂದು ಕೆ.ಜೆ. ಜಾರ್ಜ್‌ ಹೇಳಿದರು.

ಬಿಜೆಪಿಗೆ ತಿರುಗೇಟು

ಕೆ.ಜೆ. ಜಾರ್ಜ್ ಕಾಣೆಯಾಗಿದ್ದಾರೆ ಎಂದು ಬಿಜೆಪಿ ಪೋಸ್ಟರ್‌ ಮಾಡಿ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿದ್ದರ ಬಗ್ಗೆ ಪ್ರತಿಕ್ರಿಯೆ ನೀಡಿ, ಬಿಜೆಪಿಯವರು 4 ವರ್ಷ ನಿದ್ದೆ ಮಾಡಿದ್ದಾರೆ. ಜಾರ್ಜ್ ಕಾಣೆಯಾಗಿಲ್ಲ. ನಾನು ದೆಹಲಿಗೆ ಬಂದು ಕೇಂದ್ರದ ಇಂಧನ ಸಚಿವರನ್ನು ಭೇಟಿ ಮಾಡಿದ್ದೇನೆ. ರಾಜ್ಯಕ್ಕೆ ಹೆಚ್ಚಿನ ವಿದ್ಯುತ್ ಪೂರೈಸುವಂತೆ ಮನವಿ ಮಾಡಿದ್ದೇನೆ. ಅಲ್ಲದೆ, ಇತರೆ ಕೇಂದ್ರ ಸರ್ಕಾರದ ಅಧಿಕಾರಗಳನ್ನು ಇಂಧನ ವಿಚಾರವಾಗಿಯೇ ಭೇಟಿ ಮಾಡಿದ್ದೇನೆ. ನಾನು ದೆಹಲಿಗೆ ಬಂದಿದ್ದರೂ ಕರ್ನಾಟಕದ ವಿಚಾರವನ್ನೇ ಮಾತನಾಡುತ್ತಿದ್ದೇನೆ. ಬಿಜೆಪಿಯವರಿಂದಾಗಿಯೇ ಈ ಕೊರತೆ ಬಂದಿದೆ. ಒಂದು ದಿನದಲ್ಲಿ ಈ ಕೊರತೆ ನೀಗಿಸಲು ಸಾಧ್ಯ ಇಲ್ಲ. ಹಾಗಾಗಿ ಕೊರತೆ ಸರಿದೂಗಿಸಲು ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.

ನಿದ್ದೆ ಮಾಡಿದ್ದು ಬಿಜೆಪಿ ಗ್ಯಾರಂಟಿನಾ?

ಕರೆಂಟ್ ಕಟ್ ಎಂಬುದು ಕಾಂಗ್ರೆಸ್ ಗ್ಯಾರಂಟಿನಾ ಎಂಬ ಬಿಜೆಪಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಕೆ.ಜೆ. ಜಾರ್ಜ್‌, 4 ವರ್ಷ ಸುಮ್ಮನೆ ಕುಳಿತು, ನಿದ್ದೆ ಮಾಡಿದ್ದು ಬಿಜೆಪಿ ಗ್ಯಾರಂಟಿನಾ? ಇಂಧನ ಸಚಿವರು ಕಾಣೆಯಾಗಿದ್ದಾರೆ ಎಂದು ಬಿಜೆಪಿಯವರು ಹೇಳುತ್ತಾರೆ. ಹಾಗಾದರೆ ನಾನೇನು ಹೋಗಿ ಬಿಜೆಪಿ ಆಫೀಸ್‌ನಲ್ಲಿ ಕುಳಿತುಕೊಳ್ಳಲಾ? ಅಥವಾ ಬಸವರಾಜ ಬೊಮ್ಮಾಯಿ ಅವರ ಮನೆಗೆ ಹೋಗಿ ಕುಳಿತುಕೊಳ್ಳಲೇ? ನಾನಂತೂ ಕಾಣೆಯಾಗಿಲ್ಲ. ನಾನು ನವ ದೆಹಲಿಗೆ ಬಂದು ಏನು ಮಾಡಿದ್ದೇನೆ ಎಂದು ಫೋಟೊ ಸಮೇತ ಹಾಕಿದ್ದೇನೆ. ಬಿಜೆಪಿಯನ್ನು ಜನ ಸಂಪೂರ್ಣ ತಿರಸ್ಕಾರ ಮಾಡಿದ್ದಾರೆ. ಅದಕ್ಕೆ ಅವರು ಹತಾಶೆಯಿಂದ ಮಾತನಾಡುತ್ತಿದ್ದಾರೆ. ಜನ ಅಥವಾ ರೈತರು ಪ್ರತಿಭಟನೆ ಮಾಡೋದಾದರೆ ಬಿಜೆಪಿ ಆಫೀಸ್ ಮುಂದೆ ಹೋಗಿ ಪ್ರತಿಭಟನೆ ಮಾಡಲಿ. ಅವರೇ ಇವತ್ತಿನ ಸ್ಥಿತಿಗೆ ಹೊಣೆ ಎಂದು ಹೇಳಿದರು.

ಇದನ್ನೂ ಓದಿ: Load Shedding : ಕೆ.ಜೆ. ಜಾರ್ಜ್‌ ಕಾಣೆ; ಹುಡುಕಿಕೊಟ್ಟರೆ ಸಿಂಗಲ್‌ ಫೇಸ್‌ ವಿದ್ಯುತ್‌ ಉಚಿತ, ಖಚಿತ, ನಿಶ್ಚಿತ!

ಸೋಲಾರ್ ಪ್ಲಾಂಟ್ ನಿರ್ಮಾಣಕ್ಕೆ ಜಾಗ ಕೇಳಿದ್ದೇವೆ

ಸಬ್ ಸ್ಟೇಷನ್‌ಗಳಲ್ಲಿ ಸೋಲಾರ್ ಎನರ್ಜಿ ಅಳವಡಿಕೆ ಕ್ರಮ ವಹಿಸಲಾಗಿದೆ. ಸೋಲಾರ್ ಪ್ಲಾಂಟ್ ನಿರ್ಮಾಣ ಮಾಡುವುದಕ್ಕೆ ಕೆಲ ಸರ್ಕಾರಿ ಭೂಮಿಗಳನ್ನು ಸಹ ಇಂಧನ ಇಲಾಖೆಯಿಂದ ಕೇಳಿದ್ದೇವೆ. ಖಾಸಗಿಯವರಿಂದ ವಿದ್ಯುತ್ ಖರೀದಿ ಮಾಡುವ ಸಲುವಾಗಿ ಕ್ರಮ ಕೈಗೊಳ್ಳಲಾಗಿದೆ. ಸಕ್ಕರೆ ಕಾರ್ಖಾನೆಗಳ ಮಾಲೀಕರಿಗೂ ಸಹ ವಿದ್ಯುತ್ ಪೂರೈಕೆ ಮಾಡುವಂತೆ ಮನವಿ ಮಾಡುತ್ತಿದ್ದೇವೆ ಎಂದು ಕೆ.ಜೆ. ಜಾರ್ಜ್‌ ಹೇಳಿದರು.

Exit mobile version