Site icon Vistara News

Loan App torture : ಲೋನ್‌ ಆ್ಯಪ್ ಹಿಂಸೆಗೆ ತತ್ತರಿಸಿ ಎಂಜಿನಿಯರಿಂಗ್‌ ವಿದ್ಯಾರ್ಥಿ ಆತ್ಮಹತ್ಯೆ

Loan app torture kills student Tejas

ಬೆಂಗಳೂರು: ತ್ವರಿತವಾಗಿ ಮತ್ತು ಯಾವುದೇ ದಾಖಲೆ ಇಲ್ಲದೆ ಲೋನ್‌ ಕೊಡುತ್ತೇವೆ ಎಂದು ನಂಬಿಸಿ ಬಳಿಕ ಚಿತ್ರಹಿಂಸೆ ನೀಡುವ ಲೋನ್‌ ಆ್ಯಪ್‌ಗಳು (Loan App torture) ಮತ್ತೊಮ್ಮೆ ಸೌಂಡ್‌ ಮಾಡಿವೆ. ಇವುಗಳಿಂದ ಲೋನ್‌ ಪಡೆದು, ಚಿತ್ರಹಿಂಸೆಯನ್ನು ಸಹಿಸಲಾರದೆ ಒಬ್ಬ ಪ್ರತಿಭಾನ್ವಿತ ವಿದ್ಯಾರ್ಥಿ ಪ್ರಾಣವನ್ನೇ ಕಳೆದುಕೊಂಡಿದ್ದಾನೆ (Student ends life). ಯಲಹಂಕದ ನಿಟ್ಟೆ ಮೀನಾಕ್ಷಿ ಕಾಲೇಜಿನಲ್ಲಿ ಆರನೇ ಸೆಮಿಸ್ಟರ್ ಎಂಜಿನಿಯರಿಂಗ್‌ (Engineering student) ಓದುತ್ತಿದ್ದ ತೇಜಸ್ ಎಂಬಾತನೇ ಸಾವಿಗೆ ಶರಣಾದ ವಿದ್ಯಾರ್ಥಿ.

ನಿಟ್ಟೆ ಮೀನಾಕ್ಷಿ ಕಾಲೇಜಿನಲ್ಲಿ ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ವಿಭಾಗದಲ್ಲಿ ಆರನೇ ಸೆಮಿಸ್ಟರ್‌ ಓದುತ್ತಿದ್ದ ಯಶಸ್‌ನ ಮನೆ ಅದೇ ಪ್ರದೇಶದಲ್ಲಿದೆ. ಯಶಸ್‌ ಪಿಯುಸಿಯಲ್ಲೂ ಉತ್ತಮ ಅಂಕ ಪಡೆದು ಮೆರಿಟ್‌ನಲ್ಲಿ ಸೀಟು ಪಡೆದುಕೊಂಡಿದ್ದ. ಎಂಜಿನಿಯರಿಂಗ್‌ ಕಲಿಕೆಯಲ್ಲಂತೂ ಅವರು ಕಾಲೇಜಿಗೇ ಟಾಪರ್‌ ಆಗಿದ್ದ.

ಸಂಭ್ರಮದಲ್ಲಿದ್ದ ತೇಜಸ್‌

ಮನೆಯಲ್ಲೂ ಉತ್ತಮ ವಾತಾವರಣವಿದ್ದು, ಕಲಿಕೆಯಲ್ಲಿ ಒಳ್ಳೆಯ ಸಾಧನೆ ಮಾಡು ಎಂದು ಹೆತ್ತವರೂ ಬೆನ್ನು ತಟ್ಟುತ್ತಿದ್ದರು. ಹೀಗಾಗಿ ಅವನು ಯಾವುದೇ ತಂಟೆ ತಕರಾರು ಇಲ್ಲದೆ, ನೆಮ್ಮದಿಯಾಗಿ ವಿದ್ಯಾಭ್ಯಾಸ ಮಾಡುತ್ತಿದ್ದ.

ಕಲಿಕೆಯಲ್ಲಿ ಮುಂದಿದ್ದ ಆತ ಸಹಪಾಠಿಗಳಿಗೆ ಮತ್ತು ಕಿರಿಯರಿಗೆ ಪಾಠ ಮತ್ತು ಇತರ ವಿಷಯದಲ್ಲಿ ಮಾರ್ಗದರ್ಶನವನ್ನೂ ನೀಡುತ್ತಿದ್ದ. ಬದುಕನ್ನು ತುಂಬ ಲವಲವಿಕೆಯಿಂದ ಕಳೆಯುತ್ತಿದ್ದ ಹುಡುಗ ಅವನು.

ಎಷ್ಟೊಂದು ಖುಷಿ ಇತ್ತು, ಲೋನ್‌ ಆಪ್‌ ಬೆಂಕಿ ಹಚ್ಚಿತು

ಅಂಥವನ ಬದುಕು ಕಳೆದ ಕೆಲವು ತಿಂಗಳುಗಳಿಂದ ಬರಬಾರದ ಕಷ್ಟ, ಹೇಳಲಾಗದಷ್ಟು ಹಿಂಸೆಯಿಂದ ತತ್ತರಿಸಿ ಹೋಗಿತ್ತು. ಅವನು ಪಡೆದ ಸಾಲವೇ ಅವನ ಪಾಲಿಗೆ ಶೂಲವಾಗಿ ಇರಿಯುತ್ತಿತ್ತು.

ಅವನು ಸ್ಲೈಸ್‌ ಪೇ (Slicepay), ಕಿಷ್ತ್‌ (kissht) ಆ್ಯಪ್‌ಗಳ ಮೂಲಕ ಲೋನ್‌ ಪಡೆದಿದ್ದ. ಜತೆಗೆ ಕೋಟಕ್‌ ಮಹೀಂದ್ರಾ ಬ್ಯಾಂಕ್‌ನಲ್ಲೂ ಸಾಲ ಮಾಡಿದ್ದ. ಸ್ಲೈಸ್‌ ಪೇ ಮತ್ತು ಕಿಷ್ತ್‌ ಆ್ಯಪ್‌ಗಳು ಕಳೆದ ಕೆಲವು ಸಮಯದಿಂದ ಹಣ ಮರುಪಾವತಿಗೆ ಬೆನ್ನು ಬಿದ್ದಿದ್ದವು. ಆದರೆ, ಹಣ ಪಾವತಿಸಲು ಸಾಧ್ಯವಾಗಿರಲಿಲ್ಲ. ಹಣ ಪಡೆದ ಬಳಿಕ ಸಾಕಷ್ಟು ಬಾರಿ ಮರುಪಾವತಿ ಮಾಡಿದ್ದರೂ ಲೋನ್‌ ಮುಗಿಯುತ್ತಲೇ ಇರಲಿಲ್ಲ. ಹೀಗಾಗಿ ಕೆಲವು ತಿಂಗಳಿನಿಂದ ಕಟ್ಟಲಾಗಿರಲಿಲ್ಲ. ಇದರಿಂದ ಈ ಎರಡೂ ಆ್ಯಪ್‌ಗಳ ಕಡೆಯಿಂದ ಚಿತ್ರಹಿಂಸೆ ಆರಂಭವಾಗಿತ್ತು.

ನಿಜವೆಂದರೆ, ಸಾಲ ಪಡೆದ್ದು ಅವನಿಗಾಗಿ ಅಲ್ಲ

ಇಷ್ಟೆಲ್ಲ ನಿರಾಳವಾಗಿದ್ದ ಹುಡುಗ ಲೋನ್‌ ಆ್ಯಪ್‌ಗಳಿಂದ ಸಾಲ ಪಡೆದಿದ್ದು ಯಾಕೆ ಎಂಬುದು ನಿಮ್ಮ ಪ್ರಶ್ನೆಯಾಗಿದ್ದರೆ, ಅವನ ಒಳ್ಳೆಯತನವೇ ಅವನಿಗೆ ಮುಳ್ಳಾಗಿತ್ತು ಎನ್ನುವ ಉತ್ತರ ಕೊಡಬಹುದು. ನಿಜವೆಂದರೆ ಆತ ತನಗಾಗಿ ಸಾಲ ಮಾಡಿರಲಿಲ್ಲ. ತನ್ನ ಜತೆಗೆ ಕಲಿಯುವ, ಗೆಳೆಯ ಹಣಕಾಸಿನ ಮುಗ್ಗಟ್ಟಿನಲ್ಲಿದ್ದಾಗ, ಅವನ ಕೋರಿಕೆಯ ಮೇರೆಗೆ ಅವನಿಗೆ ಸಹಾಯ ಮಾಡಲು ಮುಂದಾಗಿದ್ದೇ ಅವನನ್ನು ಚಿತ್ರಹಿಂಸೆಯ ಕೂಪಕ್ಕೆ ತಳ್ಳಿತ್ತು.

ಹಕ್ಕಿಯಂತೆ ಹಾರುವ ಆಸೆ ಹೊತ್ತಿದ್ದ ಹುಡುಗ

ತೇಜಸ್‌ನ ಸ್ನೇಹಿತ ಮಹೇಶ್‌ ಕಳೆದ ಒಂದು ವರ್ಷದಿಂದ ಲೋನ್‌ ಕಟ್ಟದೆ ಇದ್ದುದರಿಂದ ಆ್ಯಪ್‌ಗಳ ಸಿಬ್ಬಂದಿ ಬೆನ್ನು ಬಿದ್ದಿದ್ದವು. ಆತನಿಗೆ ಬಗೆ ಬಗೆಯಲ್ಲಿ ಹೆದರಿಸುವುದು, ಬೆದರಿಸುವುದು, ಅಶ್ಲೀಲ ಚಿತ್ರಗಳನ್ನು ಮಾಡಿ ಮನೆಯವರಿಗೆ ಕಳುಹಿಸುವುದಾಗಿ ಎಚ್ಚರಿಸುವುದು, ಸ್ನೇಹಿತರಿಕೆ ಕರೆ ಮಾಡುವುದು ಹೀಗೆ ಚಿತ್ರ ವಿಚಿತ್ರ ರೀತಿಯಲ್ಲಿ ಮಾನಸಿಕ ಹಿಂಸೆ ನೀಡುತ್ತಿದ್ದವು.

ಕಳೆದ ಕೆಲವು ಸಮಯದಿಂದ ಎದುರಿಸುತ್ತಿರುವ ಈ ಮಾನಸಿಕ ಹಿಂಸೆಯಿಂದ ತೇಜಸ್‌ಗೆ ಪಾಠದ ಮೇಲೆ ಏಕಾಗ್ರತೆ ಸಾಧಿಸಲೂ ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಅವನು ಇದರಿಂದ ಬಚಾವಾಗಲು ಇರುವುದು ಒಂದೇ ದಾರಿ, ಅದು ಸಾವು ಎಂಬ ತೀರ್ಮಾನಕ್ಕೆ ಬಂದು ಪ್ರಾಣತ್ಯಾಗ ಮಾಡಿದ್ದಾನೆ.

ಮಂಗಳವಾರ ಸಂಜೆ ಆರು ಗಂಟೆಯ ಸುಮಾರಿಗೆ ಮನೆಯಲ್ಲಿ ತನ್ನ ತಾಯಿಯ ವೇಲ್‌ನ್ನೇ ನೇಣಾಗಿಸಿ ಕೊರಳಿಗೆ ಬಿಗಿದುಕೊಂಡು ಅತ್ಮಹತ್ಯೆ ಮಾಡಿಕೊಂಡಿದ್ದಾನೆ. ಮನೆಯವರು ಗಮನಿಸಿ ಪೊಲೀಸರಿಗೆ ತಿಳಿಸಿ, ಇಳಿಸಿದಾಗ ತೇಜಸ್‌ ಪ್ರಾಣ ಕಳೆದುಕೊಂಡಿದ್ದಾನೆ.

ಇದೀಗ ಪೋಷಕರು ಜಾಲಹಳ್ಳಿ ಪೋಲಿಸ್ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣದ ಸಮಗ್ರ ತನಿಖೆ ನಡೆಸಬೇಕು ಎಂದು ಮನವಿ ಮಾಡಿದ್ದಾರೆ. ಮಗನ ಸಾವಿಗೆ ನ್ಯಾಯ ಕೊಡಿಸಬೇಕು ಎಂದು ಕೇಳಿಕೊಂಡಿದ್ದಾರೆ.

ಸ್ನೇಹಿತರ ಜತೆ ಖುಷಿಯ ಕ್ಷಣ ಕಳೆಯುತ್ತಿದ್ದ ತೇಜಸ್‌

ಡೆತ್‌ ನೋಟ್‌ ಬರೆದಿಟ್ಟಿದ್ದ ತೇಜಸ್‌

ಈ ನಡುವೆ, ತೇಜಸ್‌ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಡೆತ್‌ ನೋಟ್‌ ಬರೆದಿಟ್ಟಿದ್ದಾನೆ. ಅದರಲ್ಲಿ ʻʻಅಮ್ಮ, ಅಪ್ಪ ನನ್ನನ್ನು ಕ್ಷಮಿಸಿ.. ನಾನು ಮಾಡಿರುವ ತಪ್ಪಿಗೆ ಬೇರೆ ದಾರಿಯಿಲ್ಲ.. ನಾನು ಮಾಡಿರುವ ಸಾಲ ತೀರಿಸಲು ಆಗೋದಿಲ್ಲ ಅದಕ್ಕಾಗಿ ಇದು ನನ್ನ ಕೊನೆಯ ತೀರ್ಮಾನ ..ಥ್ಯಾಂಕ್ಸು ಗುಡ್ ಬಾಯ್ʼʼ ಎಂದಿದ್ದಾನೆ. ಅಂತೂ ಒಳ್ಳೆಯ ಮನೆಯಲ್ಲಿ ಹುಟ್ಟಿ ನಿರಾಳವಾದ ಬದುಕು ಕಟ್ಟಿಕೊಂಡಿದ್ದರೂ ಲೋನ್‌ ಆ್ಯಪ್‌ಗಳ ಸುಳಿಗೆ ಸಿಲುಕಿ ಪ್ರತಿಭಾವಂತ ಯುವಕನ ಬದುಕು ನಾಶವಾಗಿದೆ ಹೋಗಿದೆ.

ಇದನ್ನೂ ಓದಿ : ಮದುವೆಯಾಗುವುದೇ ವೃತ್ತಿ, ಲಕ್ಷಲಕ್ಷ ಹಣ ಸಂಪಾದನೆ​; 15ನೇ ಹೆಂಡತಿಯಿಂದ ಪೊಲೀಸರಿಗೆ ಸಿಕ್ಕಿಬಿದ್ದ!

ಲೋನ್‌ ಆ್ಯಪ್‌ಗಳ ಬಗ್ಗೆ ಎಚ್ಚರವಿರಲಿ

ದೇಶದಲ್ಲಿ ಸುಲಭದಲ್ಲಿ ಲೋನ್‌ ಕೊಡುತ್ತೇವೆ ಎಂದು ನಂಬಿಸಿ ನಂತರ ಸಾಲದ ಸುಳಿಯಲ್ಲಿ ಕೆಡಹುವ ಆ್ಯಪ್‌ಗಳು ಬಹಳಷ್ಟು ಸಂಖ್ಯೆಯಲ್ಲಿವೆ. ಕೇಂದ್ರ ಸರಕಾರ ಹಿಂದೆ Lazyapp, Kissht, Meity, Easyloan, Slicepay ಮೊದಲಾದ ‘Buy Now Pay Later’ (BNPL) appಗಳನ್ನು ನಿಷೇಧ ಮಾಡಿತ್ತು. ಇವುಗಳಲ್ಲಿ ಕೆಲವು ವಿದೇಶದಿಂದ ಕಾರ್ಯಾಚರಿಸುತ್ತಿದ್ದರೆ ಇನ್ನು ಕೆಲವು ನಾನಾ ರಾಜ್ಯಗಳಿಂದ ಕಾರ್ಯಾಚರಿಸುತ್ತಿವೆ. ಇವುಗಳು ಸುಲಭದಲ್ಲಿ, ಒಂದೇ ಕ್ಲಿಕ್‌ನಲ್ಲಿ ಸಾಲ ನೀಡಿ ನಂತರ ಚಿತ್ರಹಿಂಸೆ ನೀಡಿ ಹತ್ತಾರುಪಟ್ಟು ವಸೂಲು ಮಾಡುವುದು ಇವುಗಳ ಕಾರ್ಯತಂತ್ರ. ಇವುಗಳಿಗೆ ಬಲಿಯಾಗಿ ಅದೆಷ್ಟೋ ಮಂದಿ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಇದರ ಬಗ್ಗೆ ಎಚ್ಚರಿಕೆಯಿಂದ ವ್ಯವಹರಿಸಬೇಕು. ಎಷ್ಟೇ ಕಷ್ಟವಾದರೂ ರಾಷ್ಟ್ರೀಕೃತ ಬ್ಯಾಂಕ್‌ ಇಲ್ಲವೇ ನಂಬಲರ್ಹ ಸಹಕಾರ ಮತ್ತಿತರ ಸ್ಥಳೀಯ ಬ್ಯಾಂಕ್‌ಗಳಿಂದೇ ಲೋನ್‌ ಪಡೆಯುವುದು ಉತ್ತಮ ಎನ್ನುವುದು ತಜ್ಞರು ನೀಡುವ ಸಲಹೆ.

Exit mobile version