ಬೆಂಗಳೂರು: ನೂತನ ಕಾಂಗ್ರೆಸ್ ಸರ್ಕಾರ ರಚನೆಯಾಗಿದ್ದು, ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ 8 ಸಚಿವರು ಈಗಾಗಲೇ ಪ್ರಮಾಣವಚನ ಸ್ವೀಕರಿಸಿದ್ದಾರೆ. ಇನ್ನುಳಿದ ಸಚಿವ ಸ್ಥಾನಗಳಿಗಾಗಿ (Karnataka Cabinet) ವಿವಿಧ ಶಾಸಕರು ಲಾಬಿ ಶುರು ಮಾಡಿದ್ದಾರೆ. ಇದಲ್ಲದೆ ತಮ್ಮ ನಾಯಕರಿಗೆ ಮಂತ್ರಿ ಸ್ಥಾನ ನೀಡಬೇಕು ಎಂದು ಬೆಂಬಲಿಗರು, ಕಾರ್ಯಕರ್ತರು ಕಾಂಗ್ರೆಸ್ ಹೈ ಕಮಾಂಡ್ ಅನ್ನು ಒತ್ತಾಯಿಸುವ ತಂತ್ರಗಳನ್ನೂ ಹೂಡಲಾಗುತ್ತಿದೆ.
ದೆಹಲಿಗೆ ದೌಡಾಯಿಸಿದ ಕೆ.ಎನ್.ರಾಜಣ್ಣ
ತುಮಕೂರು: ಸಚಿವ ಸಂಪುಟದಲ್ಲಿ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಮಧುಗಿರಿ ಶಾಸಕ ಕೆ.ಎನ್.ರಾಜಣ್ಣ ಅವರು ದೆಹಲಿಗೆ ದೌಡಾಯಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಅತ್ಯಾಪ್ತರಾಗಿರುವ ರಾಜಣ್ಣ, ಕಾಂಗ್ರೆಸ್ ಸರ್ಕಾರದಲ್ಲಿ ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದಾರೆ. ಮೊದಲ ಪಟ್ಟಿಯಲ್ಲಿ ಸಚಿವ ಸ್ಥಾನ ಕೈತಪ್ಪಿದ ಹಿನ್ನೆಲೆಯಲ್ಲಿ ಹೈ ಕಮಾಂಡ್ ಭೇಟಿಗೆ ದೆಹಲಿಯತ್ತ ಪ್ರಯಾಣ ಬೆಳೆಸಿದ್ದಾರೆ.
ರಾಜಣ್ಣ ಅವರು ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿಯನ್ನು ಭೇಟಿ ಮಾಡುವ ಸಾಧ್ಯತೆ ಇದೆ. ಸಚಿವ ಸ್ಥಾನ ಸಿಕ್ಕೇ ಸಿಗುತ್ತದೆ ಎಂಬ ನಂಬಿಕೆಯಲ್ಲಿದ್ದ ರಾಜಣ್ಣ, ಸಹಕಾರ ಖಾತೆ ಮೇಲೆ ಕಣ್ಣಿಟ್ಟಿದ್ದರು. ಹೀಗಾಗಿ ಸಚಿವ ಸ್ಥಾನದ ಬಗ್ಗೆ ಚರ್ಚಿಸಲು ದೆಹಲಿಗೆ ತೆರಳಿದ್ದಾರೆ.
ಇದನ್ನೂ ಓದಿ | BS Yediyurappa: ಕಾಂಗ್ರೆಸ್ ಗ್ಯಾರಂಟಿ ಜಾರಿ ಬಗ್ಗೆ ನನಗೆ ಗ್ಯಾರಂಟಿ ಇದೆ: ಬಿ.ಎಸ್. ಯಡಿಯೂರಪ್ಪ
ನನಗೆ ಸಚಿವ ಸ್ಥಾನ ಸಿಗುವುದು ಖಚಿತ: ಚಾಮರಾಜನಗರ ಶಾಸಕ ಪುಟ್ಟರಂಗಶೆಟ್ಟಿ
ಚಾಮರಾಜನಗರ: ಹೈಕಮಾಂಡ್ ಆದೇಶದ ಹಿನ್ನೆಲೆಯಲ್ಲಿ ಶನಿವಾರ 8 ಸಚಿವರ ಪ್ರಮಾಣ ವಚನ ಸ್ವೀಕಾರ ಆಗಿದೆ. ಇನ್ನು 25 ರಿಂದ 28 ಸಚಿವ ಸ್ಥಾನ ಭರ್ತಿ ಆಗಬೇಕು. ಅಧಿವೇಶನ ಬಳಿಕ ಆ ಕೆಲಸವೂ ಸುಗಮವಾಗಿ ಆಗುತ್ತವೆ. ನನಗೆ ಸಚಿವ ಸ್ಥಾನ ಸಿಗುವುದು ಖಚಿತ ಎಂದು ಶಾಸಕ ಪುಟ್ಟರಂಗಶೆಟ್ಟಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಾನು ನಾಲ್ಕು ಬಾರಿ ಗೆದ್ದಿದ್ದೇನೆ, ಚಾಮರಾಜನಗರದಲ್ಲಿ ನಾನೇ ಸೀನಿಯರ್. ನಾನು ಹಿಂದುಳಿದ ವರ್ಗದ ಉಪ್ಪಾರ ಸಮುದಾಯದಿಂದ ಗೆದ್ದಿರುವ ಏಕೈಕ ಶಾಸಕ. ಯಾವ ಖಾತೆ ಕೊಟ್ಟರೂ ನಿಭಾಯಿಸುತ್ತೇನೆ ಎಂದ ಅವರು, ಐದು ಗ್ಯಾರಂಟಿಗಳನ್ನು ಈಡೇರಿಸುತ್ತೇವೆ. ಹನ್ನೊಂದು ಬಾರಿ ಬಜೆಟ್ ಮಂಡಿಸಿರುವ ಸಿದ್ದರಾಮಯ್ಯ ಅವರಿಗೆ ಎಲ್ಲವೂ ಗೊತ್ತಿದೆ ಎಂದು ತಿಳಿಸಿದರು.
ಕೇಂದ್ರದಿಂದ ಬರುವ ಅನುದಾನ ಕಡಿತವಾಗಿದೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿ, ಸಿದ್ದರಾಮಯ್ಯ ಸುಳ್ಳು ಹೇಳಲ್ಲ. ಅವರು ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಾರೆ. ಕೇಂದ್ರ ಸರ್ಕಾರ ದುಡ್ಡು ಕೊಟ್ಟಿಲ್ಲ, ಎಂಬುವುದು ನಿಜ, ಅದನ್ನೇ ಸಿದ್ದರಾಮಯ್ಯ ಹೇಳಿದ್ದಾರೆ. ಕಳೆದ ಬಾರಿ 165 ಭರವಸೆ ಕೊಟ್ಟು, ಎಲ್ಲವನ್ನೂ ಈಡೇರಿಸಿದ್ದಾರೆ, ಬಿಜೆಪಿಯವರು ಯಾವ ಭರವಸೆಯನ್ನೂ ಈಡೇರಿಸಲಿಲ್ಲ. ನಮಗೆ ಒಳ್ಳೆಯ ಸಿಎಂ ಸಿಕ್ಕಿದ್ದಾರೆ, ಚಾಮರಾಜನಗರ ಕ್ಷೇತ್ರದಲ್ಲಿ ಆಗಬೇಕಿರುವ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.
ಮೈಸೂರಿನಲ್ಲಿ ಸನ್ಮಾನ ಕಾರ್ಯಕ್ರಮಕ್ಕೆ ಗೈರಾದ ಮೈಸೂರಿನ ಸಚಿವಾಕಾಂಕ್ಷಿಗಳು
ಮೈಸೂರು: ಜಿಲ್ಲಾ ಕಾಂಗ್ರೆಸ್ ಸನ್ಮಾನ ಕಾರ್ಯಕ್ರಮಕ್ಕೆ ಗೈರಾದ ಮೈಸೂರಿನ ಸಚಿವಾಕಾಂಕ್ಷಿಗಳು.
ಜಿಲ್ಲೆಯಲ್ಲಿ ಗೆದ್ದ ಕಾಂಗ್ರೆಸ್ ಶಾಸಕರಿಗೆ ಜಿಲ್ಲಾ ಕಾಂಗ್ರೆಸ್‌ನಿಂದ ಭಾನುವಾರ ಸನ್ಮಾನ ಸಮಾರಂಭ ಆಯೋಜಿಸಲಾಗಿತ್ತು. ಆದರೆ, ಸಚಿವ ಸ್ಥಾನದ ಆಕಾಂಕ್ಷಿಗಳಾದ ಡಾ.ಎಚ್.ಸಿ ಮಹದೇವಪ್ಪ, ತನ್ವೀರ್ ಸೇಠ್, ಕೆ.ವೆಂಕಟೇಶ್ ಗೈರಾಗಿದ್ದರು. ಸಚಿವ ಸ್ಥಾನ ಸಿಗಲಿಲ್ಲ ಎಂದು ಕೈ ನಾಯಕರ ವಿರುದ್ಧ ಹಿರಿಯ ಶಾಸಕರು ಕಾರ್ಯಕ್ರಮಕ್ಕೆ ಗೈರಾಗುವ ಮೂಲಕ ಅಸಮಾಧಾನ ಹೊರಹಾಕಿದ್ದಾರೆ ಎನ್ನಲಾಗಿದೆ.
ನಗರದ ಕಾಂಗ್ರೆಸ್ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ನೂತನ ಶಾಸಕರಾದ ಅನಿಲ್ ಚಿಕ್ಕಮಾದು, ಡಿ.ರವಿ ಶಂಕರ್, ಹರೀಶ್ ಗೌಡ, ದರ್ಶನ್ ಧ್ರುವನಾರಾಯಣ್‌ಗೆ ಜಿಲ್ಲಾ ಕಾಂಗ್ರೆಸ್‌ನಿಂದ ಸನ್ಮಾನ ಮಾಡಲಾಯಿತು.
ಜಿ.ಎಸ್.ಪಾಟೀಲ್‌ಗೆ ಸಚಿವ ಸ್ಥಾನ ನೀಡದಿದ್ದರೆ ಸಾಮೂಹಿಕ ರಾಜೀನಾಮೆ: ಬೆಂಬಲಿಗರ ಎಚ್ಚರಿಕೆ
ಗದಗ: ಜಿಲ್ಲೆಯ ರೋಣ ಕ್ಷೇತ್ರದ ಶಾಸಕ ಜಿ.ಎಸ್. ಪಾಟೀಲ್‌ಗೆ ಸಚಿವ ಸ್ಥಾನ ನೀಡಬೇಕು, ಒಂದು ವೇಳೆ ಅವರಿಗೆ ಮಂತ್ರಿ ಸ್ಥಾನ ನೀಡದಿದ್ದರೆ ಪಕ್ಷದ ಸದಸ್ಯತ್ವಕ್ಕೆ ಸಾಮೂಹಿಕ ರಾಜೀನಾಮೆ ನೀಡುವುದಾಗಿ ಬೆಂಬಲಿಗರು ಎಚ್ಚರಿಕೆ ನೀಡಿದ್ದಾರೆ. ಗದಗ ನಗರದ ಸಂಭಾಪೂರ ರಸ್ತೆಯಲ್ಲಿನ ಜಿ.ಎಸ್. ಪಾಟೀಲ್ ನಿವಾಸದಲ್ಲಿ ಬೆಂಬಲಿಗರು ತಮ್ಮ ನಾಯಕನಿಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯ ಮಾಡಿದ್ದಾರೆ.
ಇದನ್ನೂ ಓದಿ | MB Patil: ಬಿಜೆಪಿ ಅವಧಿಯ ಎಲ್ಲ ಹಗರಣಗಳ ತನಿಖೆ ನಡೆಯಲಿದೆ ಎಂದ ಎಂ.ಬಿ ಪಾಟೀಲ್
ರೋಣ ಕ್ಷೇತ್ರದಿಂದ ಜಿ.ಎಸ್.ಪಾಟೀಲ್ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಅವರು ಗೆದ್ದಾಗೆಲ್ಲ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದೆ. ಈ ಬಾರಿಯೂ ಸಹ ಅತಿ ಹೆಚ್ಚು ಮತಗಳಿಂದ ಗೆಲುವು ದಾಖಲಿಸಿದ್ದಾರೆ. ಹೀಗಾಗಿ ಅವರಿಗೆ ಒಂದು ಬಾರಿಯಾದರೂ ಸಚಿವ ಸ್ಥಾನ ನೀಡಬೇಕು ಎಂದು ಬೆಂಬಲಿಗರು ಒತ್ತಾಯಿಸಿದ್ದಾರೆ.