ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್‌ಗೆ ಬಹುಮತ ಬಂದಿರುವ ಹಿನ್ನೆಲೆಯಲ್ಲಿ (Karnataka Election Results ಸಿಎಂ, ಡಿಸಿಎಂ ಹಾಗೂ ಸಚಿವ ಸ್ಥಾನಗಳಿಗಾಗಿ ಲಾಬಿ ಶುರುವಾಗಿದೆ. ಒಕ್ಕಲಿಗ, ಲಿಂಗಾಯತ, ವಾಲ್ಮೀಕಿ ಹಾಗೂ ದಲಿತ ಸಮುದಾಯಗಳ ಸ್ವಾಮೀಜಿಗಳು ಹಾಗೂ ಮುಖಂಡರು ತಮ್ಮ ಸಮಾಜದ ನಾಯಕರಿಗೆ ಸಿಎಂ ಸ್ಥಾನ ನೀಡಬೇಕು ಎಂದು ಒತ್ತಾಯಿಸುತ್ತಿರುವುದು ಕಂಡುಬಂದಿದೆ.
ಲಿಂಗಾಯತ ಸಮುದಾಯಕ್ಕೆ ಸಿಎಂ ಹುದ್ದೆ ನೀಡಿ: ಡಾ. ಅಲ್ಲಮಪ್ರಭು ಸ್ವಾಮೀಜಿ
ಬೆಳಗಾವಿ: ಒಕ್ಕಲಿಗ, ಕುರುಬ ಸಮುದಾಯದ ನಾಯಕರಿಗೆ ಸಿಎಂ ಸ್ಥಾನಕ್ಕೆ ಬೇಡಿಕೆ ಇಟ್ಟಿರುವ ಬೆನ್ನಲ್ಲೇ ತಮ್ಮ ಸಮುದಾಯಕ್ಕೆ ಸಿಎಂ ಪಟ್ಟ ನೀಡಬೇಕು ಎಂದು ಕಾಂಗ್ರೆಸ್ ಹೈಕಮಾಂಡ್‌ಗೆ ಲಿಂಗಾಯತ ಸ್ವಾಮೀಜಿ ಒತ್ತಡ ಹಾಕಿದ್ದಾರೆ.
ಬೆಳಗಾವಿಯ ನಾಗನೂರು ರುದ್ರಾಕ್ಷಿಮಠದ ಡಾ. ಅಲ್ಲಮಪ್ರಭು ಸ್ವಾಮೀಜಿ ಅವರು, ಲಿಂಗಾಯತ ಸಮುದಾಯಕ್ಕೆ ಸಿಎಂ ಹುದ್ದೆ ನೀಡುವಂತೆ ಒತ್ತಾಯಿಸಿದ್ದಾರೆ. ಲಿಂಗಾಯತರ ಬೆಂಬಲದೊಂದಿಗೆ ಕಾಂಗ್ರೆಸ್ ಅಭೂತಪೂರ್ವ ಗೆಲುವು ದಾಖಲಿಸಿದೆ. ಸುಮಾರು 34 ಜನ ಲಿಂಗಾಯತ ಶಾಸಕರು ಕಾಂಗ್ರೆಸ್‌ನಿಂದ ಗೆದ್ದಿದ್ದಾರೆ. ಜನಸಂಖ್ಯೆ ಹಾಗೂ ಸಂಖ್ಯಾಬಲ ದೃಷ್ಟಿಯಿಂದ ಲಿಂಗಾಯತರಿಗೆ ಸಿಎಂ ಹುದ್ದೆ ನೀಡಬೇಕು ಎಂಬುದು ನಮ್ಮ ಬೇಡಿಕೆ ಎಂದು ತಿಳಿಸಿದ್ದಾರೆ.
ಎಂ.ಬಿ. ಪಾಟೀಲ ಅವರು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಕಾಂಗ್ರೆಸ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಈ ಹಿಂದೆ ಕಾಂಗ್ರೆಸ್ ನೀಡಿದ ಹಲವು ಹುದ್ದೆಗಳನ್ನು ಎಂ.ಬಿ. ಪಾಟೀಲ್ ಯಶಸ್ವಿಯಾಗಿ ನಿಭಾಯಿಸಿದ್ದಾರೆ. ಹೀಗಾಗಿ ಅವರಿಗೆ ಸಿಎಂ ಹುದ್ದೆ ನೀಡುವುದರಿಂದ ಕಾಂಗ್ರೆಸ್‌ಗೆ ಲಿಂಗಾಯತರ ಬೆಂಬಲ ಇರಲಿದೆ ಎಂದು ಹೇಳಿದ್ದಾರೆ.
ಲಿಂಗಾಯತ ಸಿಎಂಗೆ ಶಾಮನೂರು ಶಿವಶಂಕರಪ್ಪ ಪಟ್ಟು
ದಾವಣಗೆರೆ: ಲಿಂಗಾಯತ ಸಮುದಾಯದವರು ಈ ಬಾರಿ ಕಾಂಗ್ರೆಸ್ ಕೈ ಹಿಡಿದಿದೆ. ಹೀಗಾಗಿ ಲಿಂಗಾಯತರಿಗೆ ಸಿಎಂ ಸ್ಥಾನ ನೀಡಬೇಕು ಎಂದು ಕಾಂಗ್ರೆಸ್ ಹೈಕಮಾಂಡ್ ಅನ್ನು ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾ ಅಧ್ಯಕ್ಷ, ದಾವಣಗೆರೆ ದಕ್ಷಿಣ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಆಗ್ರಹಿಸಿದ್ದಾರೆ. ಈ ಹಿಂದೆ ಲಿಂಗಾಯತರು ಹೆಚ್ಚಿನ ಸಂಖ್ಯೆಯಲ್ಲಿ ಗೆದ್ದರೆ ಸಿಎಂ ಸ್ಥಾನಕ್ಕೆ ಒತ್ತಾಯಿಸುತ್ತೇವೆ ಎಂದಿದ್ದ ಡಾ. ಶಾಮನೂರು ಶಿವಶಂಕರಪ್ಪ, ಚುನಾವಣೆ ಫಲಿತಾಂಶದ ಬಳಿಕ ಲಿಂಗಾಯತರಿಗೆ ಸಿಎಂ ಸ್ಥಾನ ನೀಡಬೇಕು ಎಂದು ಒತ್ತಾಯಿಸುತ್ತಿದ್ದಾರೆ.
ಇದನ್ನೂ ಓದಿ | dk shivakumar : ಡಿ ಕೆ ಶಿವಕುಮಾರ್ ಸಿಎಂ ಹುದ್ದೆಗೆ ಪಟ್ಟು ಹಿಡಿಯಲು ಅಜ್ಜಯ್ಯನ ಮಠದ ಶಕುನ ಕಾರಣವೇ?
ತುಮಕೂರಿನಲ್ಲಿ ಜೋರಾಯ್ತು ದಲಿತ ಸಿಎಂ ಕೂಗು
ತುಮಕೂರು: ತುಮಕೂರಿನಲ್ಲಿ ದಲಿತ ಸಿಎಂ ಕೂಗು ಜೋರಾಗಿದೆ. ಪರಮೇಶ್ವರ್ ಅವರನ್ನು ಸಿಎಂ ಮಾಡುವಂತೆ ದಲಿತ ಸಂಘಟನೆಗಳು ಒತ್ತಾಯಿಸಿವೆ. ತುಮಕೂರಿನ ಟೌನ್ ಹಾಲ್ ಬಳಿ ಡಾ.ಜಿ. ಪರಮೇಶ್ವರ್‌ಗೆ ಸಿಎಂ ಸ್ಥಾನ ನೀಡಬೇಕು ಎಂಬ ಪೋಸ್ಟರ್ ಹಿಡಿದು ನೂರಕ್ಕೂ ಹೆಚ್ಚು ಜನರು ಪ್ರತಿಭಟನೆ ನಡೆಸಿ, ದಲಿತರಿಗೆ ನ್ಯಾಯ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಸತೀಶ್ ಜಾರಕಿಹೊಳಿಗೆ ಸಿಎಂ ಸ್ಥಾನ ನೀಡಿ: ವಾಲ್ಮೀಕಿ ಸಮಾಜ
ಹಾವೇರಿ: ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ಅವರಿಗೆ ಸಿಎಂ ಸ್ಥಾನ ನೀಡಬೇಕು ಎಂದು ಹಾವೇರಿ ವಾಲ್ಮೀಕಿ ಸಮಾಜದ ಮುಖಂಡರು ಒತ್ತಾಯಿಸಿದ್ದಾರೆ. ನಗರದಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಾಲ್ಮೀಕಿ ಸಮಾಜದ ಮುಖಂಡ ರಮೇಶ ಆನವಟ್ಟಿ, ಎಸ್‌ಟಿ ಸಮಾಜದ 15 ಶಾಸಕರನ್ನು ಗೆಲ್ಲಿಸುವಲ್ಲಿ ಸತೀಶ್ ಜಾರಕಿಹೋಳಿ ಅವರ ಅಪಾರ ಕೊಡುಗೆಯಿದೆ. ಡಿಸಿಎಂ ಮಾಡುವುದಾಗಿ ಬಿಜೆಪಿಯವರು ಶ್ರೀರಾಮುಲು ಅವರಿಗೆ ಮೋಸ ಮಾಡಿದರು. ಬಿಜೆಪಿ ಮಾಡಿದ ತಪ್ಪನ್ನು ಕಾಂಗ್ರೆಸ್ ಮಾಡಬಾರದು. ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಇಬ್ಬರನ್ನೂ ಬಿಟ್ಟು ಮೂರನೆಯವರಿಗೆ ಅವಕಾಶ ಮಾಡಿ ಕೊಡಲಿ ಎಂದು ಒತ್ತಾಯಿಸಿದರು.
ಸತೀಶ್ ಜಾರಕಿಹೊಳಿಗೆ ಡಿಸಿಎಂ ಸ್ಥಾನ ನೀಡಲು ಆಗ್ರಹ
ಬೆಳಗಾವಿ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿಗೆ ಡಿಸಿಎಂ ಸ್ಥಾನ ನೀಡಬೇಕು ಎಂದು ಬೆಳಗಾವಿ ಉತ್ತರ ಕ್ಷೇತ್ರದ ಕಾಂಗ್ರೆಸ್ ಶಾಸಕ ಆಸೀಫ್ ಸೇಠ್ ಒತ್ತಾಯಿಸಿದರು. ನಗರದಲ್ಲಿ ಮಾತನಾಡಿರುವ ಅವರು, ಸತೀಶ್ ಜಾರಕಿಹೊಳಿ ಡಿಸಿಎಂ ಮಾಡಬೇಕು ಎಂದು ಹೈಕಮಾಂಡ್‌ಗೆ ವಿನಂತಿ ಮಾಡುತ್ತೇನೆ. ನಾನು ಪ್ರಚಾರ ಭಾಷಣದಲ್ಲಿ ನೀಡಿದ ಹೇಳಿಕೆಗೆ ಬದ್ಧನಿದ್ದೇನೆ ಎಂದು ಹೇಳಿದರು.
ಇದನ್ನೂ ಓದಿ | Ramanath Rai: ಚುನಾವಣಾ ರಾಜಕೀಯ ನಿವೃತ್ತಿ ಘೋಷಿಸಿದ ರಮಾನಾಥ ರೈ; ಕೊಟ್ಟ ಮಾತಿನಂತೆ ನಡೆದ ಮಾಜಿ ಸಚಿವ
ಜಮೀರ್ ಅಹಮ್ಮದ್‌ಗೆ ಡಿಸಿಎಂ ಸ್ಥಾನ ನೀಡಲು ಮುಸ್ಲಿಂ ಸಮುದಾಯ ಆಗ್ರಹ ವಿಚಾರಕ್ಕೆ ಪ್ರತಿಕ್ರಿಯಿಸಿ, ಅದು ಹೈಕಮಾಂಡ್‌ಗೆ ಬಿಟ್ಟಿದ್ದು ಎಂದು ತಿಳಿಸಿದರು. ಸಿಎಂ ಹುದ್ದೆಗಾಗಿ ಸಿದ್ದರಾಮಯ್ಯ, ಡಿಕೆಶಿ ಮಧ್ಯೆ ಪೈಪೋಟಿ ವಿಚಾರಕ್ಕೆ ಪ್ರತಿಕ್ರಿಯಿಸಿ, ರಾಜ್ಯದಲ್ಲಿ ಸಿಎಂ ಯಾರಾಗಬೇಕು ಎಂಬುದು ಹೈಕಮಾಂಡ್‌ಗೆ ಬಿಟ್ಟದ್ದು, ಈಗಾಗಲೇ ಎಲ್ಲ ಕಾಂಗ್ರೆಸ್ ಶಾಸಕರು ಹೈಕಮಾಂಡ್ ನಿರ್ಣಯ ಮಾಡಲಿ ಎಂದು ಹೇಳಿರುವುದಾಗಿ ಆಸೀಫ್ ಸೇಠ್ ಹೇಳಿದರು.