Site icon Vistara News

Lockup Death: ಚನ್ನಗಿರಿ ಲಾಕಪ್‌ ಡೆತ್‌ ಪ್ರಕರಣ; ಡಿವೈಎಸ್ಪಿ ಸೇರಿ ಮೂವರು ಪೊಲೀಸ್‌ ಅಧಿಕಾರಿಗಳ ಸಸ್ಪೆಂಡ್

Lockup Death

ದಾವಣಗೆರೆ: ಚನ್ನಗಿರಿ ಯುವಕನ ಲಾಕಪ್‌ ಡೆತ್‌ ಪ್ರಕರಣ (Lockup Death) ಸಂಬಂಧ ಚನ್ನಗಿರಿ ಡಿವೈಎಸ್‌ಪಿ ಪ್ರಶಾಂತ್ ಮುನ್ನೊಳ್ಳಿ, ಸರ್ಕಲ್‌ ಇನ್‌ಸ್ಪೆಕ್ಟರ್ ನಿರಂಜನ. ಬಿ ಹಾಗೂ ಪಿಎಸ್‌ಐ ಅಕ್ತರ್ ಅಮಾನತುಗೊಂಡಿದ್ದಾರೆ. ಮೂವರು ಅಧಿಕಾರಿಗಳನ್ನ ಸೇವೆಯಿಂದ ಬಿಡುಗಡೆ ಮಾಡಿ ಸಿಎಂ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಡಾ. ಜಿ. ಪರಮೇಶ್ವರ್‌ ಆದೇಶ ಹೊರಡಿಸಿದ್ದಾರೆ.

ಮೇ 24 ರಂದು ದಾವಣಗೆರೆ ಜಿಲ್ಲೆಯ ಚನ್ನಗಿರಿ ಠಾಣೆಯಲ್ಲಿದ್ದ ಆದಿಲ್ ಎಂಬ ಯುವಕ ಮೃತಪಟ್ಟಿದ್ದರಿಂದ ಕುಟುಂಬಸ್ಥರು ಲಾಕಪ್ ಡೆತ್ ಆರೋಪ ಮಾಡಿ, ಪೊಲೀಸರೇ ಹೊಡೆದು ಯುವಕನನ್ನು ಕೊಂದಿದ್ದರು ಎಂದು ಹೇಳಿದ್ದರು. ನಂತರ ಸಂಬಂಧಿಕರು, ಸ್ಥಳೀಯರು ಚನ್ನಗಿರಿ ಪೊಲೀಸ್‌ ಠಾಣೆ ಎದುರು ಪ್ರತಿಭಟನೆ ನಡೆಸಿದ್ದರು.

ಪ್ರತಿಭಟನೆ ವೇಳೆ ಕೆಲ ಕಿಡಿಗೇಡಿಗಳು ಪೊಲೀಸ್‌ ಠಾಣೆ ಮೇಲೆ ಕಲ್ಲು ತೂರಾಟ ನಡೆಸಿದ್ದರಿಂದ ಐದು ಪೊಲೀಸ್ ವಾಹನ‌‌ ಜಖಂಗೊಂಡು, ಹನ್ನೊಂದು ಪೊಲೀಸರಿಗೆ ಗಾಯಗಳಾಗಿದ್ದವು. ಹೀಗಾಗಿ ಪ್ರಕರಣ ಸಂಬಂಧ ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಈ ಬಗ್ಗೆ ಪೂರ್ವ ವಲಯ ಐಜಿಪಿ ಡಾ. ತ್ಯಾಗರಾಜನ್ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ | Self Harming: ಮೇಲಧಿಕಾರಿಗಳ ಕಿರುಕುಳ, ಹಗರಣದ ಕರಿನೆರಳು: ವಾಲ್ಮೀಕಿ ಅಭಿವೃದ್ಧಿ ನಿಗಮದ ಸೂಪರಿಂಟೆಂಡೆಂಟ್ ಆತ್ಮಹತ್ಯೆ

ಸಿಐಡಿಗೆ ಆದಿಲ್ ಸಾವು ಪ್ರಕರಣದ ತನಿಖೆಯ ಹೊಣೆ

ಚನ್ನಗಿರಿ ಆದಿಲ್ ಸಾವು ಪ್ರಕರಣ (Lockup Death) ಹಾಗೂ ಚನ್ನಗಿರಿ ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ಪ್ರಕರಣದ ತನಿಖೆಯನ್ನು ಸಿಐಡಿಗೆ ವರ್ಗಾವಣೆ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ಈ ಬಗ್ಗೆ ದಾವಣಗೆರೆ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಭಾನುವಾರ ಮಾಹಿತಿ ನೀಡಿದ್ದರು.

ಇದುವರೆಗೂ ಘಟನೆಗೆ ಸಂಬಂಧಿಸಿದಂತೆ 25 ಜನರನ್ನು ಬಂಧಿಸಲಾಗಿದೆ. ಅವರೆಲ್ಲಾ ನ್ಯಾಯಾಂಗ ಬಂಧನದಲ್ಲಿದ್ದು, ಬಂಧಿತರ ಮೇಲೆ ಯಾವುದೇ ಹಳೇ ಕೇಸ್‌ಗಳಿಲ್ಲ. ಗುಂಪಿನಲ್ಲಿದ್ದ ಕೆಲ ಯುವಕರು ಠಾಣೆ ಮೇಲೆ ಕಲ್ಲೆಸೆದಿದ್ದಾರೆ. ಚನ್ನಗಿರಿ ಟೌನ್ ಮತ್ತು ತಾಲೂಕಿನ ಹೊನ್ನೇಬಾಗಿ ನಲ್ಲೂರು ಸೇರಿ ವಿವಿಧ ಹಳ್ಳಿಗಳಿಂದ ಬಂದ ಯುವಕರು ಗುಂಪಿನಲ್ಲಿದ್ದರು. ಬಂಧಿತರ ಮೇಲೆ ಐಪಿಸಿ 353 ಮತ್ತು 307 ಅನ್ವಯ ಪ್ರಕರಣ ದಾಖಲಾಗಿದೆ ಎಂದು ತಿಳಿಸಿದ್ದರು.

Exit mobile version