Site icon Vistara News

Lok Adalat : ದಾಖಲೆ ಬರೆದ ಲೋಕ ಅದಾಲತ್;‌ ಒಂದೇ ದಿನ 34 ಲಕ್ಷ ಕೇಸ್‌ ಇತ್ಯರ್ಥ!

Lok Adalat success

ಬೆಂಗಳೂರು: ರಾಜ್ಯದ ನ್ಯಾಯಾಲಯಗಳಲ್ಲಿ ಅದೆಷ್ಟೋ ವರ್ಷಗಳಿಂದ ಕೊಳೆಯುತ್ತಿರುವ ಹಳೆ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಪಡಿಸುವುದಕ್ಕಾಗಿ ಹುಟ್ಟಿಕೊಂಡ ಲೋಕ ಅದಾಲತ್‌ (Lok Adalat) ಈಗ ಒಂದು ಹೊಸ ದಾಖಲೆಯನ್ನೇ ಬರೆದಿದೆ. ಶನಿವಾರ (ಜುಲೈ 8) ನಡೆದ ಈ ಅದಾಲತ್‌ನಲ್ಲಿ ಒಂದೇ ದಿನ 34 ಲಕ್ಷ ಪ್ರಕರಣಗಳನ್ನು ಇತ್ಯರ್ಥಪಡಿಸಿದೆ. ನಿಜವೆಂದರೆ, ರಾಜ್ಯ ಕಾನೂನು ಸೇವಾ ಪ್ರಾಧಿಕಾರ (Rajya Kanoonu seva Pradhikara) ಇಟ್ಟುಕೊಂಡಿದ್ದ ಟಾರ್ಗೆಟ್ಟೇ 25 ಲಕ್ಷ ಆಗಿತ್ತು. ಆದರೆ, ಶೇಕಡಾ 125 ಸಾಧನೆ ಮಾಡಿ ಗಮನ ಸೆಳೆದಿದೆ ಲೋಕ ಅದಾಲತ್‌.

ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಕಾರ್ಯಕಾರಿ ಅಧ್ಯಕ್ಷರಾದ ನ್ಯಾಯಮೂರ್ತಿ ಜಿ ನರೇಂದರ್‌ (Justice G Narendar) ಅವರು ಮಾಧ್ಯಮ ಗೋಷ್ಠಿಯಲ್ಲಿ ಈ ವಿಚಾರ ತಿಳಿಸಿದರು. ಜುಲೈ 8ರಂದು ರಾಜ್ಯದಲ್ಲಿ 1,020 ಪೀಠಗಳು ಕಾರ್ಯ ನಿರ್ವಹಿಸಿದ್ದು, ಒಟ್ಟು 34,76,231 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ಈ ಪೈಕಿ 2,50,344 ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದ್ದು, 32,25,887 ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ ಎಂದರು.

ಒಂದಾದರು 243 ಜೋಡಿ

ಅದಾಲತ್‌ನಲ್ಲಿ ಒಟ್ಟು 1,874 ವೈವಾಹಿಕ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದ್ದು, ರಾಜ್ಯದ ವಿವಿಧ ಭಾಗಗಳ 243 ಜೋಡಿಗಳನ್ನು ಒಂದು ಮಾಡಲಾಗಿದೆ. ಆಸ್ತಿಗೆ ಸಂಬಂಧಿಸಿದ 3,844 ವಿಭಾಗ ದಾವೆಗಳನ್ನು ಇತ್ಯರ್ಥಪಡಿಸಲಾಗಿದೆ. ಮೋಟಾರು ವಾಹನ ಅಪರಾಧಕ್ಕೆ ಸಂಬಂಧಿಸಿದ 5,007 ಪ್ರಕರಣಗಳಿಗೆ ಮುಕ್ತಿ ನೀಡಲಾಗಿದ್ದು, 224 ಕೋಟಿ ರೂಪಾಯಿ ಪರಿಹಾರ ಕೊಡಿಸಲಾಗಿದೆ. 11,982 ಚೆಕ್‌ ಬೌನ್ಸ್‌ ಪ್ರಕರಣಗಳು ಅದಾಲತ್‌ನಲ್ಲಿ ಅಂತ್ಯ ಕಂಡಿವೆ. 615 ಭೂಸ್ವಾಧೀನ ಎಕ್ಸಿಕ್ಯೂಷನ್‌ ಪ್ರಕರಣಗಳನ್ನು ಇತ್ಯರ್ಥಪಡಿಸಿ, ₹141 ಕೋಟಿ ಪರಿಹಾರ ಕೊಡಿಸಲಾಗಿದೆ ಎಂದು ವಿವರಿಸಿದರು.

4,921 ಎಕ್ಸಿಕ್ಯೂಷನ್‌ ಪ್ರಕರಣಗಳನ್ನು ಇತ್ಯರ್ಥಪಡಿಸಿ, ₹234 ಕೋಟಿ ಪರಿಹಾರ ಪಾವತಿಸುವಂತೆ ಮಾಡಲಾಗಿದೆ. ರೇರಾ ವ್ಯಾಪ್ತಿಗೆ ಬರುವ 98 ಪ್ರಕರಣಗಳನ್ನು ಪರಿಹರಿಸಿ, ₹14 ಕೋಟಿ ಪರಿಹಾರ ಕೊಡಿಸಲಾಗಿದೆ. 180 ಗ್ರಾಹಕರ ವ್ಯಾಜ್ಯ ಸಂಬಂಧಿ ಪ್ರಕರಣಗಳನ್ನು ಬಗೆಹರಿಸುವ ಮೂಲಕ ₹6 ಕೋಟಿ ಪರಿಹಾರ ಕೊಡಿಸಲಾಗಿದೆ. ಹೀಗೆ ನೀಡಿರುವ ಒಟ್ಟು ಪರಿಹಾರದ ಮೊತ್ತ 1911 ಕೋಟಿ ರೂ.ಗಳು!

ಇತ್ಯರ್ಥವಾದ ವಿಶೇಷ ಪ್ರಕರಣಗಳು

ಈ ಬಾರಿಯ ಲೋಕಾ ಅದಾಲತ್‌ನಲ್ಲಿ ಕೆಲವು ವಿಶೇಷ ಪ್ರಕರಣಗಳು ಇತ್ಯರ್ಥಗೊಂಡಿದ್ದು, ಅದರಲ್ಲಿ ಅಪಘಾತ ಪ್ರಕರಣದಲ್ಲಿ ಶ್ರೀರಾಮ್ ಇನ್ಶೂರೆನ್ಸ್ ಕಂಪನಿಯಿಂದ ಕಕ್ಷಿದಾರರಿಗೆ 1.15 ಕೋಟಿ ಪರಿಹಾರ ಕೊಡಿಸಿದ್ದು ಸೇರಿದೆ.
ಪಾಲು ವಿಭಜನೆ ಪ್ರಕರಣದಲ್ಲಿ ಆಂಬ್ಯುಲೆನ್ಸ್ ನಲ್ಲಿ ಬಂದಿದ್ದ ಕಕ್ಷಿದಾರರ 74ರ ವೃದ್ಧೆ ಲಲಿತಮ್ಮ ಬಳಿ ನ್ಯಾಯಮೂರ್ತಿಗಳೇ ಹೇಳಿಕೆ ಪಡೆದು ಪ್ರಕರಣ ಇತ್ಯರ್ಥಗೊಳಿಸಿದರು. ಹೊಸದುರ್ಗ ನ್ಯಾಯಲಯದಲ್ಲಿ 13 ವರ್ಷಗಳಿಂದ ವಿಚ್ಚೇದನ ಕೋರಿ ಸಲ್ಲಿಸಿದ್ದ ಪ್ರಕರಣ ರಾಜಿ ಸಂಧಾನದ ಸುಖಾಂತ್ಯವಾಗಿದೆ ಎಂದು ಹೈಕೋರ್ಟ್‌ ನ್ಯಾಯಮೂರ್ತಿ ಸೋಮಶೇಖರ್‌ ಹೇಳಿದರು.

ಇದನ್ನೂ ಓದಿ: High court order : ಪ್ರಧಾನಿಯ ನಿಂದನೆ ಬೇಜವಾಬ್ದಾರಿಯುತ, ಆದರೆ ದೇಶದ್ರೋಹ ಅಲ್ಲ; ಹೈಕೋರ್ಟ್‌ ತೀರ್ಪು

Exit mobile version