Site icon Vistara News

Lok Sabha Election 2024: ಮತದಾನ ಬಹಿಷ್ಕರಿಸಿದ್ದ 2 ಗ್ರಾಮದ ಜನ, ಸಂಜೆಗೆ ಮನವೊಲಿಕೆ; 7 ಗಂಟೆ ದಾಟಿದರೂ ಮುಗಿಯದ ಮತದಾನ

Lok Sabha Election 2024 2 villagers who boycotted voting cast their votes in evening

ಚಿತ್ರದುರ್ಗ: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಶುಕ್ರವಾರ (ಏಪ್ರಿಲ್‌ 26) ಮೊದಲ ಹಂತದ ಮತದಾನ (First phase of polling) ಎಲ್ಲ ಕಡೆ ಮುಕ್ತಾಯಗೊಂಡಿದೆ. ಆದರೆ, ಜಿಲ್ಲೆಯ ಯರೆಹಳ್ಳಿ, ಸಿದ್ದಾಪುರ ಗ್ರಾಮದಲ್ಲಿ ಮಾತ್ರ ಸಂಜೆ 7 ಗಂಟೆಯಾದರೂ ಮತದಾನ ನಿಂತಿಲ್ಲ!

ಹೌದು. ಯರೆಹಳ್ಳಿ, ಸಿದ್ದಾಪುರ ಗ್ರಾಮದ ಜನತೆಯು ತಮಗೆ ಮೂಲ ಸೌಕರ್ಯ ಕಲ್ಪಿಸಿಲ್ಲ. ಎಷ್ಟೇ ಮನವಿ ಮಾಡಿದರೂ ಜನಪ್ರತಿನಿಧಿಗಳು ಕ್ಯಾರೇ ಎನ್ನುತ್ತಿಲ್ಲ. ಚುನಾವಣೆ ಬಂದಾಗ ಮಾತ್ರ ನಮ್ಮ ನೆನಪು ಬರುತ್ತದೆ. ಹೀಗಾಗಿ ನಾವು ಈ ಬಾರಿ ಮತವನ್ನೇ ಚಲಾವಣೆ ಮಾಡುವುದಿಲ್ಲ ಎಂದು ಪಟ್ಟು ಹಿಡಿದು, ಮತದಾನವನ್ನು ಬಹಿಷ್ಕರಿಸಿ ಕುಳಿತಿದ್ದರು.

ಆದರೆ, ಚುನಾವಣಾ ಅಧಿಕಾರಿಗಳು ಈ ಗ್ರಾಮಸ್ಥರ ಮನವೊಲಿಕೆಗೆ ಬೆಳಗ್ಗೆಯಿಂದಲೇ ಕಸರತ್ತು ನಡೆಸಿದ್ದರು. ಕೊನೆಗೂ ಅವರ ಮನವೊಲಿಸುವಲ್ಲಿ ಸಫಲರಾದರು. ಹೀಗಾಗಿ ಸಂಜೆ ವೇಳೆಗೆ ಮತದಾನ ಪ್ರಕ್ರಿಯೆ ಶುರುವಾಯಿತು. ಇದರಿಂದಾಗಿ ಸಂಜೆ 7 ಗಂಟೆಯಾದರೂ ಮತದಾನ ಮುಕ್ತಾಯವಾಗಿರಲಿಲ್ಲ.

ಇವಿಎಂ, ವಿವಿಪ್ಯಾಟ್‌ನೊಂದಿಗೆ ಸ್ಟ್ರಾಂಗ್‌ ರೂಂನತ್ತ ಚುನಾವಣಾಧಿಕಾರಿಗಳು

ಉಳಿದೆಡೆ ಸ್ಟ್ರಾಂಗ್‌ ರೂಂನತ್ತ ಇವಿಎಂ, ವಿವಿಪ್ಯಾಟ್‌

ಮತದಾನ ಮುಕ್ತಾಯವಾದ ಕಡೆ ಚುನಾವಣಾಧಿಕಾರಿಗಳು ಇವಿಎಂ (EVM), ವಿವಿ ಪ್ಯಾಟ್‌ ಬಾಕ್ಸ್‌ಗಳನ್ನು ಪ್ಯಾಕಿಂಗ್ ಮಾಡುವ ಕಾರ್ಯದಲ್ಲಿ ನಿರತರಾಗಿದ್ದರು. ಪ್ಯಾಕಿಂಗ್ ಮಾಡಿದವರು ಚಾಮರಾಜನಗರದ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿರುವ ಸ್ಟ್ರಾಂಗ್ ರೂಂಗೆ ತೆಗೆದುಕೊಂಡು ಹೋಗಿ ಇಡುತ್ತಿದ್ದಾರೆ. ದೂರದ ಕಡೆಗಳಿಂದ ಬರುವವರು ಸ್ಟ್ರಾಂಗ್‌ ರೂಂನತ್ತ ಬರುತ್ತಿದ್ದಾರೆ.

ಆಕ್ಸಿಜನ್‌ ಸಹಾಯದಿಂದ ಮತ ಚಲಾಯಿಸಿದ ಮಹಿಳೆ; ವೋಟು ಹಾಕಿ ಕುಸಿದು ಮೃತಪಟ್ಟ ವೃದ್ಧೆ!

ಬೆಂಗಳೂರು: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಶುಕ್ರವಾರ (ಏಪ್ರಿಲ್‌ 26) ಮೊದಲ ಹಂತದ ಮತದಾನ (First phase of polling) ನಡೆಯುತ್ತಿದ್ದು, ಎಲ್ಲರೂ ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದಾರೆ. ಬೆಂಗಳೂರಿನಲ್ಲಿ ವೃದ್ಧೆಯೊಬ್ಬರು ಆಸ್ಪತ್ರೆಗೆ ದಾಖಲಾಗಿದ್ದರೂ, ಆಕ್ಸಿಜನ್‌ ಸಮೇತ ಮತಗಟ್ಟೆಗೆ ಬಂದು ಹಕ್ಕು ಚಲಾಯಿಸಿದ್ದಾರೆ. ಇನ್ನು ಮೈಸೂರಿನ ಹುಣಸೂರಿನಲ್ಲಿ ವೃದ್ಧೆಯೊಬ್ಬರು ಮತ ಚಲಾಯಿಸಿ ಮೃತಪಟ್ಟಿದ್ದಾರೆ.

ಆಕ್ಸಿಜನ್ ಸಮೇತ ಹಕ್ಕು ಚಲಾಯಿಸಿದ ವೃದ್ಧೆ

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ (Bangalore South Lok Sabha constituency) ಜಯನಗರದಲ್ಲಿ ವೃದ್ಧೆಯೊಬ್ಬರು ಆಕ್ಸಿಜನ್‌ ಸಹಾಯದಿಂದಲೇ ಮತಗಟ್ಟೆಗೆ ಬಂದು ಹಕ್ಕು ಚಲಾವಣೆ ಮಾಡಿದ್ದಾರೆ. 78 ವರ್ಷದ ಕಲಾವತಿ ಎಂಬುವವರೇ ಆಕ್ಸಿಜನ್ ಸಮೇತ ಹಕ್ಕು ಚಲಾಯಿಸಿದ ವೃದ್ಧೆಯಾಗಿದ್ದಾರೆ. ಕಲಾವತಿ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು. ಇವರನ್ನು ಏಪ್ರಿಲ್‌ 23ರಂದು ಜಯನಗರದ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶುಕ್ರವಾರ ಅವರನ್ನು ಆಂಬ್ಯುಲೆನ್ಸ್‌ ಮೂಲಕ ವೈದ್ಯಕೀಯ ಸಿಬ್ಬಂದಿ ಜತೆ ಕರೆತರಲಾಗಿದ್ದು, ಮತ ಚಲಾವಣೆಗೆ ಅವಕಾಶ ಕಲ್ಪಿಸಲಾಗಿತ್ತು. ಕೊನೆಗೂ ಅವರು ತಮ್ಮ ಹಕ್ಕು ಚಲಾವಣೆ ಮಾಡಿದ್ದಾರೆ.

ವೋಟು ಹಾಕಿ ಬಂದು ವೃದ್ಧೆ ನಿಧನ

ಮೈಸೂರು: ಮೈಸೂರು ಲೋಕಸಭಾ ಕ್ಷೇತ್ರದ (Mysore Lok Sabha constituency) ಹುಣಸೂರು ತಾಲೂಕಿನ ತಿಪ್ಪೂರು ಗ್ರಾಮದ ವೃದ್ಧೆಯೊಬ್ಬರು ತಿಪ್ಪೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ 172ರಲ್ಲಿ ಮತ ಚಲಾವಣೆ ಮಾಡಿದ್ದಾರೆ. ಮತ ಹಾಕಿ ಹೊರ ಬರುತ್ತಿದ್ದಂತೆ ಅವರು ಕುಸಿದು ಮೃತಪಟ್ಟಿದ್ದಾರೆ.

ಹುಣಸೂರು ತಾಲೂಕಿನ ತಿಪ್ಪೂರು ಗ್ರಾಮದ ಪುಟ್ಟಮ್ಮ (90) ಮೃತರು. ಇವರು ಪ್ರತಿ ಚುನಾವಣೆಯಂತೆ ಈ ಬಾರಿಯೂ ತಮ್ಮ ಹಕ್ಕನ್ನು ತಪ್ಪದೇ ಚಲಾವಣೆ ಮಾಡಿದ್ದಾರೆ. ಮತ ಹಾಕಿ ಅದೇ ಖುಷಿಯಲ್ಲಿ ವಾಪಸಾಗುತ್ತಿದ್ದಾಗ ದಿಢೀರ್‌ ಕುಸಿದುಬಿದ್ದಿದ್ದು, ಅಲ್ಲಿಯೇ ಮೃತಪಟ್ಟಿದ್ದಾರೆ.

ಮತಗಟ್ಟೆಯಲ್ಲಿ ಮಹಿಳೆಗೆ ಹೃದಯ ಸ್ತಂಭನ; ಮತ ಹಾಕಲು ಬಂದಿದ್ದ ವೈದ್ಯನಿಂದ ಪ್ರಾಣ ರಕ್ಷಣೆ

ಬೆಂಗಳೂರು: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಮೊದಲ ಹಂತದ ಮತದಾನ (First phase of polling) ಪ್ರಕ್ರಿಯೆಗೆ ಚಾಲನೆ ಸಿಕ್ಕಿದ್ದು, ಜೆ.ಪಿ.ನಗರ 8ನೇ ಹಂತದ ಜಂಬೂ ಸವಾರಿ ದಿನ್ನೆಯಲ್ಲಿ ಮತ ಚಲಾಯಿಸಲು ಬಂದ ಮಹಿಳೆಯೊಬ್ಬರಿಗೆ ಹೃದಯ ಸ್ತಂಭನ (cardiac arrest) ಆಗಿದೆ. ಬಳಿಕ ಅಲ್ಲಿಯೇ ಮತ ಚಲಾಯಿಸಲು ಬಂದಿದ್ದರಿಂದ ಅವರ ಜೀವ ಉಳಿದಿದೆ. ಜೆ.ಪಿ. ನಗರದ 8ನೇ ಹಂತದ ಜಂಬೂ ಸವಾರಿ ದಿನ್ನೆಯಲ್ಲಿ ಮಹಿಳೆಯೊಬ್ಬರು ಮತದಾನ ಮಾಡಲು ಬಂದಿದ್ದಾರೆ. ಅವರು ಆಯಾಸವಾಗಿದೆ ಎಂದು ಮತಗಟ್ಟೆಯಲ್ಲಿ ಇಟ್ಟಿದ್ದ ನೀರು ಕುಡಿಯಲು ಹೋಗಿದ್ದಾರೆ. ಅದೇ ವೇಳೆಗೆ ಅವರು ಕುಸಿದು ಬಿದ್ದಿದ್ದಾರೆ. ಅದೇ ಸಮಯದಲ್ಲಿ ಅಲ್ಲಿಗೆ ಬಂದಿದ್ದ ಬೊಮ್ಮಸಂದ್ರದ ನಾರಾಯಣ ಆರೋಗ್ಯ ಕೇಂದ್ರದ ಮೂತ್ರಪಿಂಡ ತಜ್ಞ ಡಾ. ಗಣೇಶ್ ಶ್ರೀನಿವಾಸ ಪ್ರಸಾದ್ ಅವರು ರಕ್ಷಣೆಗೆ ದಾವಿಸಿದ್ದಾರೆ.

ನಾಡಿಮಿಡಿತವನ್ನು ಪರಿಶೀಲಿಸಿದ ಡಾ. ಗಣೇಶ್ ಶ್ರೀನಿವಾಸ ಪ್ರಸಾದ್, ಪಲ್ಸ್‌ ರೇಟ್‌ ಕಡಿಮೆಯಾಗುತ್ತಿರುವುದನ್ನು ಗಮನಿಸಿದ್ದಾರೆ. ಆ ಸಮಯದಲ್ಲಿ ದೇಹ ಕೂಡ ಯಾವುದೇ ಸ್ಪಂದನೆಯನ್ನು ಮಾಡುತ್ತಿರಲಿಲ್ಲ. ಹೀಗಾಗಿ ಕೂಡಲೇ ಸಿಪಿಆರ್‌ ಮಾಡಿದ್ದು, ಪರಿಸ್ಥಿತಿಯು ಕೊಂಚ ಮಟ್ಟಿಗೆ ಸುಧಾರಿಸುವಂತೆ ಮಾಡಿದ್ದಾರೆ. ಚುನಾವಣಾ ಕರ್ತವ್ಯದಲ್ಲಿದ್ದವರು ಧಾವಿಸಿ ಜ್ಯೂಸ್ ನೀಡಿದ್ದಾರೆ. ಕೂಡಲೇ ಆಂಬ್ಯುಲೆನ್ಸ್‌ಗೆ ಕರೆ ಮಾಡಲಾಗಿದೆ. ಐದು ನಿಮಿಷದೊಳಗೆ ಮತಗಟ್ಟೆ ಬಳಿ ಆಂಬ್ಯುಲೆನ್ಸ್ ಬಂದಿದ್ದು, ಮಹಿಳೆಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

Exit mobile version