ಬಳ್ಳಾರಿ: ಪ್ರಧಾನಿ ನರೇಂದ್ರ ಮೋದಿಯವರ ʼಭಾರತೀಯ ಚೊಂಬು ಪಾರ್ಟಿʼ ದೇಶ, ರಾಜ್ಯಕ್ಕೆ ಖಾಲಿ ಖಾಲಿ ಚೊಂಬು ಕೊಟ್ಟಿದ್ದಾರೆ. ಬರ ಪರಿಹಾರ ನೀಡುವಲ್ಲಿಯೂ ಕರ್ನಾಟಕಕ್ಕೆ ಖಾಲಿ ಚೊಂಬು ನೀಡಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Lok Sabha Election 2024) ತೀವ್ರ ವಾಗ್ದಾಳಿ ನಡೆಸಿದರು.
ಲೋಕಸಭಾ ಚುನಾವಣೆ ಹಿನ್ನೆಲೆ ನಗರದ ಮುನ್ಸಿಪಲ್ ಕಾಲೇಜು ಮೈದಾನದಲ್ಲಿ ಶುಕ್ರವಾರ ಜಿಲ್ಲಾ ಕಾಂಗ್ರೆಸ್ ಸಮಿತಿ ಹಮ್ಮಿಕೊಂಡಿದ್ದ ಕಾಂಗ್ರೆಸ್ ಸಮಾವೇಶದಲ್ಲಿ ಅವರು ಮಾತನಾಡಿದರು.
ಈ ಚುನಾವಣೆಯು ಸಂವಿಧಾನ ರಕ್ಷಣೆ ಮಾಡುವುದಕ್ಕೆ ನಡೆಯುತ್ತಿರುವ ಚುನಾವಣೆಯಾಗಿದೆ. ಈ ಬಾರಿ ಬಿಜೆಪಿಗೆ ಅಧಿಕಾರ ಕೊಟ್ಟರೆ ಸಂವಿಧಾನ ಬದಲಾಯಿಸುತ್ತೇವೆ ಎಂದು ಹೇಳುತ್ತಾರೆ. ಆದರೆ ಸಂವಿಧಾನ ಬದಲಾಯಿಸುವ ಶಕ್ತಿ ಯಾರಿಗೂ ಇಲ್ಲ ಎಂದ ಅವರು, ಕಾಂಗ್ರೆಸ್, ಇಂಡಿಯಾ ಒಕ್ಕೂಟ ಸಂವಿಧಾನ ಉಳಿಸುವ ಕೆಲಸ ಮಾಡುತ್ತಿದೆ ಎಂದರು.
ಇದನ್ನೂ ಓದಿ: Lok Sabha Election : ಕರ್ನಾಟಕದಲ್ಲಿ ಮೊದಲ ಹಂತದ ಮತದಾನ ಮುಕ್ತಾಯ; ದಾಖಲೆ ಪ್ರಮಾಣದಲ್ಲಿ ಮತ ಚಲಾವಣೆ
ಬಿಜೆಪಿಯು ಅದಾನಿಯಂತಹ ಜನರಿಗೆ ದೇಶದ ಹಣ ಕೊಡುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದ ಅವರು, ಬಿಜೆಪಿ ಸಿರಿವಂತರಿಗೆ ಹಣ ಕೊಟ್ಟರೆ, ನಾವು ಬಡವರಿಗೆ ಹಣ ಕೊಡುತ್ತೇವೆ ಎಂದು ತಿಳಿಸಿದರು.
ಮೋದಿ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ
ನರೇಂದ್ರ ಮೋದಿ ಅವರು ಕೋವಿಡ್‌ನಂತೆ ನಿರುದ್ಯೋಗವನ್ನು ತಂದಿದ್ದಾರೆ. ಕೊರೊನಾ ಓಡಿಸಲು ದೇಶದ ಜನತೆಗೆ ರಸ್ತೆಯಲ್ಲಿ ನಿಂತು ಗಂಟೆ ಜಾಗಟೆ ಭಾರಿಸಿ ಎಂದಿದ್ದರು, ಈಗ ನಿರುದ್ಯೋಗಿಗಳಿಗೆ ರಸ್ತೆ ಬದಿ ಪಕೋಡ ಮಾರಾಟ ಮಾಡಿ ಎನ್ನುತ್ತಿದ್ದಾರೆ. ಹೀಗಾಗಿ, ಕಾಂಗ್ರೆಸ್‌ನಿಂದ ನಿರುದ್ಯೋಗಿಗಳಿಗೆ ಉದ್ಯೋಗ ಒದಗಿಸುವ ಹೊಸ ಯೋಜನೆ ರೂಪಿಸಲಾಗುವುದು ಎಂದರು.
ಇದನ್ನೂ ಓದಿ: Lok Sabha Election 2024: ಮತದಾನ ಬಹಿಷ್ಕರಿಸಿದ್ದ 2 ಗ್ರಾಮದ ಜನ, ಸಂಜೆಗೆ ಮನವೊಲಿಕೆ; 7 ಗಂಟೆ ದಾಟಿದರೂ ಮುಗಿಯದ ಮತದಾನ
ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳ ಮೂಲಕ ಇಡೀ ದೇಶದ ಜನತೆಗೆ ದಾರಿ ತೋರಿಸಿದೆ. ಗೃಹಲಕ್ಷ್ಮಿ, ಅನ್ನಭಾಗ್ಯ, ಶಕ್ತಿ ಯೋಜನೆ, ಯುವನಿಧಿ, ಗೃಹಜ್ಯೋತಿ ಮೂಲಕ ರಾಜ್ಯದ ಜನತೆಗೆ ನೀಡುತ್ತಿದೆ. ಈವರೆಗೂ ಯಾವುದೇ ಸರ್ಕಾರ ಈ ಯೋಜನೆಗಳನ್ನು ನೀಡಿಲ್ಲ ಎಂದ ಅವರು, ಪ್ರತಿ ಬಡ ಕುಟುಂಬದ ಮಹಿಳೆಯನ್ನು ಆಯ್ಕೆ ಮಾಡಿ ಅವರ ಬ್ಯಾಂಕ್ ಖಾತೆಗೆ ಒಂದು ಲಕ್ಷ ರೂ. ಹಾಕಲಾಗುವುದು. ದೇಶದ ಕೋಟ್ಯಾಂತರ ಮಹಿಳೆಯರು, ಬಡವರು, ನಿರುದ್ಯೋಗಿಗಳನ್ನು ಲಕ್ಷಾಧೀಶ್ವರರನ್ನಾಗಿ ಮಾಡಲಾಗುವುದು ಎಂದು ತಿಳಿಸಿದರು.
ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ರೈತರ ಎಲ್ಲ ಸಾಲ ಮನ್ನಾ ಮಾಡಲಾಗುವುದು. ಅಗ್ನಿವೀರ ಯೋಜನೆಯನ್ನು ರದ್ದುಗೊಳಿಸಲಾಗುವುದು. ಜಿಎಸ್‌ಟಿಯನ್ನು ಸರಳಗೊಳಿಸಲಾಗುವುದು ಎಂದು ಇದೇ ವೇಳೆ ರಾಹುಲ್ ಗಾಂಧಿ ತಿಳಿಸಿದರು.
ಗೇಟ್ ಗಟ್ಟಿ ಇದ್ದರೆ ಕಿತ್ತು ಒಳಗಡೆ ಬನ್ನಿ ಎಂದ ಸಚಿವ
ಕಾಂಗ್ರೆಸ್ ಸಮಾವೇಶದಲ್ಲಿ ಕಾರ್ಯಕರ್ತರನ್ನು ಹುರಿದುಂಬಿಸಲು ಸಚಿವ ಬಿ.ನಾಗೇಂದ್ರ , ಗೇಟ್ ಗಟ್ಟಿ ಇದ್ದರೆ ಕಿತ್ತು ಒಳಗಡೆ ಬನ್ನಿ. ಸೈನಿಕರಂತೆ ಕಾಂಗ್ರೆಸ್ ಗೆಲುವಿಗೆ ಶ್ರಮಿಸಿ. ಬಿಜೆಪಿಯನ್ನು ಮನೆಗೆ ಕಳಿಸುವವರೆಗೆ ವಿಶ್ರಮಿಸಬಾರದು ಎಂದು ಹುರಿದುಂಬಿಸಿದರು. ಈ ವೇಳೆ ಸಚಿವರ ಕರೆಗೆ ಓಗೊಟ್ಟು ಬ್ಯಾರಿಕೇಡ್‌ಗಳನ್ನು ತಳ್ಳಿ ಜನತೆ ನುಗ್ಗಿದ ಪ್ರಸಂಗ ನಡೆಯಿತು.
ಇದನ್ನೂ ಓದಿ: IPL 2024 : ಅಂಕಪಟ್ಟಿಯ ಅಗ್ರಸ್ಥಾನಿ ರಾಜಸ್ಥಾನ್ಗೆ ಸವಾಲೊಡ್ಡುವುದೇ ಲಕ್ನೊ ಸೂಪರ್ ಜೈಂಟ್ಸ್
ಸಮಾವೇಶದಲ್ಲಿ ಸಚಿವರಾದ ಶಿವರಾಜ್ ತಂಗಡಗಿ, ಜಮೀರ್ ಅಹ್ಮದ್ ಖಾನ್ ಮಾತನಾಡಿದರು.