Site icon Vistara News

Lok Sabha Election 2024 : ದಕ್ಷಿಣ ರಾಜ್ಯಗಳಲ್ಲಿ ಬಿಜೆಪಿ ಸಂಕಟ; ಮೈತ್ರಿಗೆ ದಳ ಶಾಸಕರ ಹೊಸ ದಾಳ!

New parlimentary building PM Narendra Modi

ಬೆಂಗಳೂರು: ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಗೆ (Lok Sabha Election 2024) ರಾಜಕೀಯ ಪಕ್ಷಗಳು ಈಗಾಗಲೇ ತಾಲೀಮು ಶುರು ಮಾಡಿವೆ. ಆಯಾ ಪಕ್ಷಗಳು ತಮ್ಮದೇ ಆದ ಲೆಕ್ಕಾಚಾರಗಳಲ್ಲಿ ಮುಳುಗಿವೆ. ಇನ್ನು ಸತತವಾಗಿ ಎರಡು ಬಾರಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರನ್ನು ಮಣಿಸಬೇಕು ಎಂದು ಮಹಾಘಟನಬಂಧನ್‌ (Mahagathbandhan) ಭಾಗವಾಗಿ ವಿಪಕ್ಷಗಳು “ಇಂಡಿಯಾ” ಮೈತ್ರಿಕೂಟವನ್ನು (INDIA Alliance) ರಚನೆ ಮಾಡಿ ಶಕ್ತಿ ಪ್ರದರ್ಶನವನ್ನು ಮಾಡಿವೆ. ಈ ನಿಟ್ಟಿನಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸಹ ಪುನರುಜ್ಜೀವನಕ್ಕೆ ಹವಣಿಸುತ್ತಿದೆ. ತನ್ನದೇ ಆದ ಲೆಕ್ಕಾಚಾರದಲ್ಲಿ ಮುಳುಗಿದೆ. ಈ ನಡುವೆ ದಕ್ಷಿಣ ಭಾರತದಲ್ಲಿ ಹೆಚ್ಚಿನ ಬಲ ಪಡೆಯಲು ಪ್ರಾದೇಶಿಕ ಪಕ್ಷಗಳಿಗೆ ಬಿಜೆಪಿ ನಾಯಕರು ಮಣೆ ಹಾಕಲು ಮುಂದಾಗಿದೆ. ಇದರ ಪರಿಣಾಮವಾಗಿ ಜೆಡಿಎಸ್‌ ಜತೆಗೆ ಮಾತುಕತೆ ನಡೆಯುತ್ತಿದೆ. ಆದರೆ, ಇದು ಎರಡೂ ಪಕ್ಷದೊಳಗಿನ ಶಾಸಕರು, ಪ್ರಮುಖರ ಒಳ ಬೇಗುದಿಗೂ ಕಾರಣವಾಗಿದೆ.

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಜಾಗ್ರತೆಯ ಹೆಜ್ಜೆಯನ್ನಿಡಲು ಮುಂದಾಗಿರುವ ಬಿಜೆಪಿ ಹೈಕಮಾಂಡ್, ಕರ್ನಾಟಕದಲ್ಲಿ ಕ್ಷೇತ್ರವಾರು ಮಾಹಿತಿಯನ್ನು ಪಡೆದುಕೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಪಕ್ಷ ಸಂಘಟನೆಗೆ ಒತ್ತು ಕೊಡುತ್ತಾ, ಸಂಭಾವ್ಯ ಅಭ್ಯರ್ಥಿಗಳ ತಯಾರಿಗೂ ಇಳಿದಿದೆ. ಇದಲ್ಲದೆ, ಮೈತ್ರಿ ಚರ್ಚೆ ನಡೆಯುತ್ತಿರುವುದು ರಾಜ್ಯ ಬಿಜೆಪಿ ನಾಯಕರನ್ನು ಗೊಂದಲಕ್ಕೀಡು ಮಾಡಿದೆ. ಒಂದು ಕಡೆ ಹಳೇ ಮೈಸೂರಲ್ಲಿ ಪಕ್ಷ ಗಟ್ಟಿ ಮಾಡುವ ಸಂಬಂಧ ವಿಧಾನಸಭಾ ಚುನಾವಣೆಯಲ್ಲಿ (Karnataka Assembly Election 2023) ಕಿತ್ತಾಡಲಾಗಿತ್ತು. ಈಗ ಮೈತ್ರಿ ಮಾಡಿಕೊಳ್ಳಬೇಕು ಎಂದರೆ ಹೇಗೆ ಎಂಬ ಪ್ರಶ್ನೆಗಳು ಎದ್ದಿವೆ. ಆದರೆ, ಈ ಬಗ್ಗೆ ಯಾರೊಬ್ಬರೂ ಧ್ವನಿ ಎತ್ತುವ ಸಾಹಸಕ್ಕೆ ಕೈಹಾಕಿಲ್ಲ.

ದಕ್ಷಿಣದ ರಾಜ್ಯಗಳಲ್ಲಿ ಬಿಜೆಪಿ ಸಂಕಟ

ಲೋಕಸಭೆ ಚುನಾವಣೆಗೆ ತಯಾರಿ ನಡೆಸಿರುವ ಬಿಜೆಪಿ, ದಕ್ಷಿಣದ ರಾಜ್ಯಗಳಲ್ಲಿ (Southern States) ಹೆಚ್ಚಿನ ಬಲ ಹೊಂದುವ ಸಂಬಂಧ ಪ್ರಾದೇಶಿಕ ಪಕ್ಷಗಳಿಗೆ (Regional Parties) ಮಣೆ ಹಾಕಿದೆ. ನಾಯಕರ ಈ ನಡೆಯಿಂದ ಸ್ಥಳೀಯ ರಾಜ್ಯ ಬಿಜೆಪಿ ನಾಯಕರಿಗೆ ಇರಿಸುಮುರಿಸು ತಂದೊಡ್ಡಿದೆ.

ತೆಲಂಗಾಣದಲ್ಲಿ ಬಿಆರ್‌ಎಸ್ ಕುರಿತು ಬಿಜೆಪಿ ದಿಢೀರ್ ಮೃದು ಧೋರಣೆ ತೋರಿದೆ. ಡೆಲ್ಲಿ ಲಿಕ್ಕರ್ ಹಗರಣದಲ್ಲಿ ಅಲ್ಲಿನ ಸಿಎಂ ಕೆ. ಚಂದ್ರಶೇಖರ್‌ ರಾವ್‌ (ಕೆಸಿಆರ್) ಪುತ್ರಿ ಕೆ.‌ ಕವಿತಾ ಹೆಸರು ಕೇಳಿಬಂದಿತ್ತು. ಅವರನ್ನು ಕೂಡಲೇ ಬಂಧನ ಮಾಡಬೇಕು. ಸೂಕ್ತ ತನಿಖೆ ನಡೆಸಬೇಕು ಎಂದು ತೆಲಂಗಾಣ ಬಿಜೆಪಿ ಉಗ್ರವಾಗಿ ಪ್ರತಿಭಟನೆ ನಡೆಸಿತ್ತು. ಈಗ ಇದ್ದಕ್ಕಿದ್ದಂತೆ ಬಿಆರ್‌ಎಸ್ ಕುರಿತು ಕೇಂದ್ರ ನಾಯಕರು ಮೃದು ಧೋರಣೆ ತೋರಿದ್ದಾರೆ. ಇದು ಅಲ್ಲಿನ ಬಿಜೆಪಿ ನಾಯಕರಿಗೆ ಸಹಿಸಲು ಆಗುತ್ತಿಲ್ಲ. ಈ ಕಾರಣಕ್ಕಾಗಿಯೇ ಶನಿವಾರ ಹೈದರಾಬಾದ್‌ನಲ್ಲಿ ಕೇಂದ್ರ ಮಾಜಿ ಸಚಿವ, ಬಿಜೆಪಿ ಹಿರಿಯ ನಾಯಕ ಪ್ರಕಾಶ್ ಜಾವಡೇಕರ್ (Prakash Javdekar) ನೇತೃತ್ವದಲ್ಲಿ ನಡೆಸಿದ್ದ ಸಭೆಯಲ್ಲಿ ಸ್ಥಳೀಯ ಮುಖಂಡರು ಅಸಮಾಧಾನವನ್ನು ಹೊರಹಾಕಿದ್ದರು.

ಕರ್ನಾಟಕದಲ್ಲೂ ಸಂಕಷ್ಟ

ಕರ್ನಾಟಕದಲ್ಲಿ ಈಗ ಇದ್ದಕ್ಕಿದ್ದಂತೆ ಜೆಡಿಎಸ್ ಜತೆಗೆ ಬಿಜೆಪಿ ಮೈತ್ರಿ ಮಾಡಿಕೊಳ್ಳುತ್ತಿರುವ ಬಗ್ಗೆ ಚರ್ಚೆಗಳು ಆರಂಭವಾಗಿವೆ. ಇದಕ್ಕೆ ಪುಷ್ಟೀಕರಣ ನೀಡುವಂತೆ ಬಿಜೆಪಿಯ ಹಲವು ನಾಯಕರು ಹಾಗೂ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ, ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಸಹ ಮಾತನಾಡಿದ್ದಾರೆ. ಆದರೆ, ಸ್ಥಳೀಯ ನಾಯಕರಿಗೆ ಇದು ಗೊಂದಲವನ್ನು ಉಂಟು ಮಾಡಿದೆ.

ವಿಧಾನಸಭಾ ಚುನಾವಣೆಗೂ ಮುನ್ನ ಬಿಜೆಪಿ-ಜೆಡಿಎಸ್ ಪರಸ್ಪರ ಸೆಣೆಸಾಡಿದ್ದವು. ಹಳೇ ಮೈಸೂರಿನಲ್ಲಿ ಜೆಡಿಎಸ್‌ ವಿರುದ್ಧ ಬಿಜೆಪಿ ತೊಡೆತಟ್ಟಿತ್ತು. ಕಾರ್ಯಕರ್ತರನ್ನು ಈ ನಿಟ್ಟಿನಲ್ಲಿ ಅಣಿಗೊಳಿಸಿತ್ತು. ಈಗ ಲೋಕಸಭೆಗಾಗಿ ಮೈತ್ರಿಗೆ ಕೇಂದ್ರದ ವರಿಷ್ಠರು ಮುಂದಾಗಿದ್ದಾರೆ. ಇದರ ಬಗ್ಗೆ ಸ್ಥಳೀಯ ಮುಖಂಡರಿಗೆ ಏನೂ ತೋಚದಂತೆ ಆಗಿದೆ.

ಮಾಜಿ ಸಿಎಂ ಬಸವರಾಜ ಬೊಮ್ಮಾಯಿ‌ ಬಿಟ್ಟರೆ ಯಾರೂ ಮುಕ್ತವಾಗಿ ಜೆಡಿಎಸ್‌ ಮೈತ್ರಿ ಬಗ್ಗೆ ಮಾತನಾಡುತ್ತಿಲ್ಲ. ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಮಾತುಕತೆ ನಡೆಸುತ್ತಿದ್ದಾರೆ. ಹೀಗಾಗಿ ಕಾರ್ಯಕರ್ತರಲ್ಲಿ ಅಸಮಾಧಾನ ಹೊಗೆಯಾಡುತ್ತಿದೆ. 25 ಸ್ಥಾನ ಇರುವವರು 1 ಸ್ಥಾನ ಇರುವವರಿಗೆ ನಾಯಕತ್ವ ನೀಡಬೇಕೇ ಎಂದು ಕಾರ್ಯಕರ್ತರು ಪ್ರಶ್ನೆ ಮಾಡುತ್ತಿದ್ದಾರೆ. ಹೀಗಾಗಿ ಸ್ಥಳೀಯ ಬಿಜೆಪಿ ಘಟಕಗಳು ಕೇಂದ್ರದ ನಾಯಕರ ನಿರ್ಧಾರವನ್ನು ಜೀರ್ಣಿಸಿಕೊಳ್ಳಲು ಹೆಣಗಾಡುತ್ತಿವೆ.

ಜೆಡಿಎಸ್‌ ಶಾಸಕರ ವಿಚಿತ್ರ ಬೇಡಿಕೆ

ಈಚೆಗೆ ನಡೆದ ಜೆಡಿಎಸ್ ಶಾಸಕಾಂಗ ಸಭೆಯಲ್ಲಿ ಲೋಕಸಭಾ ಚುನಾವಣಾ ಹೊತ್ತಿಗೆ ಬಿಜೆಪಿ ಜತೆ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಚಿಂತನೆ ಇದೆ ಎಂಬ ಸಂದೇಶ ದಳಪತಿಗಳು ನೀಡಿದ್ದಾರೆ. ಆಗ ಪಕ್ಷದ ಶಾಸಕರು ವಿಚಿತ್ರ ಬೇಡಿಕೆ ಇಟ್ಟಿದ್ದಾರೆ. ಇದು ಮೈತ್ರಿ ಮಾತುಕತೆಯಲ್ಲಿರುವ ನಾಯಕರಿಗೆ ಇಕ್ಕಟ್ಟನ್ನು ತಂದೊಡ್ಡಿದೆ.

ಹಳೇ ಮೈಸೂರು ಭಾಗಕ್ಕೆ ಮಾತ್ರ ಮೈತ್ರಿ!

ಮೈತ್ರಿ ಮಾಡಿಕೊಳ್ಳುವುದಿದ್ದರೆ ಹಳೇ ಮೈಸೂರು ಭಾಗಕ್ಕೆ ಮಾತ್ರ ಮಾಡಿಕೊಳ್ಳಿ. ರಾಯಚೂರು, ಕಲಬುರಗಿ, ಬೀದರ್ ಕ್ಷೇತ್ರವನ್ನು ನಮ್ಮ ವಿವೇಚನೆಗೆ ಬಿಡಿ ಎಂದು ಶಾಸಕರು ಒತ್ತಾಯ ಮಾಡಿದ್ದಾರೆ. ಬಿಜೆಪಿ ಜತೆ ಹೋದರೆ ಮುಂದಿನ ಚುನಾವಣೆಗೆ ಸಂಕಷ್ಟ ಎದುರಾಗಲಿದೆ ಎಂದು ಶಾಸಕರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: NICE Road : ʼನೈಸ್ʼ ಕರ್ಮಕಥೆ ಪಾರಾಯಣ ಮಾಡಿ; ಸಿಎಂ ಸಿದ್ದರಾಮಯ್ಯ ಏಟಿಗೆ ಎಚ್‌ಡಿಕೆ ಎದಿರೇಟು!

ಜೆಡಿಎಸ್ ನಾಯಕರ ಬೇಡಿಕೆಗೆ ಕಾರಣವೇನು!?

ಬಿಜೆಪಿ ಜತೆಗಿನ ಮೈತ್ರಿಯಿಂದ ಕಾರ್ಯಕರ್ತರ ನಡುವೆ ಭಿನ್ನಾಭಿಪ್ರಾಯಕ್ಕೆ ಕಾರಣವಾಗಬಹುದು. ತಳಮಟ್ಟದಲ್ಲಿ ಹೊಂದಾಣಿಕೆ ರಾಜಕಾರಣ ಕಷ್ಟ ಹಾಗೂ ಪ್ರಾದೇಶಿಕ ಪಕ್ಷದ ಅಸ್ತಿತ್ವ ಉಳಿಸಿಕೊಳ್ಳುವುದು ಕಷ್ಟವಾಗುತ್ತದೆ ಎಂಬ ಆತಂಕದಲ್ಲಿ ಜೆಡಿಎಸ್‌ ನಾಯಕರಿದ್ದಾರೆ.

Exit mobile version