Site icon Vistara News

Lok Sabha Election 2024: ಮೋದಿಯ ಖಾಲಿ ಚೆಂಬು ದೇವೇಗೌಡರಿಗೆ ಅಕ್ಷಯ ಪಾತ್ರೆಯಂತೆ ಕಾಣಿಸಿದ್ದು ಹೇಗೆ? ಸಿಎಂ ಸಿದ್ದರಾಮಯ್ಯ

cm siddaramaiah

ಕೋಲಾರ: ಚಿಕ್ಕಬಳ್ಳಾಪುರದಲ್ಲಿ ಹಾಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಹಾಗೂ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ (HD Devegowda) ಅವರು ಒಟ್ಟಾಗಿ ಜಿಲ್ಲೆಯ ಜನತೆಗೆ ಜೋಡಿ ಸುಳ್ಳುಗಳನ್ನು ಹೇಳಿ ಹೋಗಿದ್ದಾರೆ. ಮೋದಿ ಕೊಟ್ಟ ಖಾಲಿ ಚೆಂಬನ್ನು ಅಕ್ಷಯಪಾತ್ರೆ ಎಂದು ದೇವೇಗೌಡರು ರೈಲು ಬಿಟ್ಟಿದ್ದಾರೆ. ಖಾಲಿ ಚೆಂಬು ನಿಮ್ಮ ಕಣ್ಣಿಗೆ ಅಕ್ಷಯ ಪಾತ್ರೆಯಂತೆ ಕಾಣಿಸಿದರೆ ರಾಜ್ಯದ ಪಾಲಿನ ತೆರಿಗೆ ಹಣ ವಾಪಸ್ ಯಾಕೆ ಬರ್ಲಿಲ್ಲ? ಬರಗಾಲದ ಅನುದಾನ ಏಕೆ ಬರಲಿಲ್ಲ? ಪ್ರವಾಹದ ವೇಳೆ ರಾಜ್ಯದ ಅನುದಾನ ಏಕೆ ಬರಲಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಅವರು ಲೋಕಸಭಾ ಚುನಾವಣಾ (Lok Sabha Election 2024) ಪ್ರಚಾರದ ವೇಳೆ ದೇವೇಗೌಡರನ್ನು ಪ್ರಶ್ನೆ ಮಾಡಿದ್ದಾರೆ.

ಕೋಲಾರ ಜಿಲ್ಲೆಯ ಬಂಗಾರಪೇಟೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಕೆ.ವಿ. ಗೌತಮ್‌ ಪರ ರೋಡ್ ಶೋನಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರಧಾನಿ ನರೇಂದ್ರ ಮೋದಿಯವರ ಚೆಂಬು ನಿಮಗೆ ಅಕ್ಷಯ ಪಾತ್ರೆಯಂತೆ ಕಾಣಿಸಿದರೆ, ರಾಜ್ಯದ ರೈತರ ಸಾಲ ಏಕೆ ಮನ್ನಾ ಮಾಡುತ್ತಿಲ್ಲ? ಮೋದಿಯವರ ಚೆಂಬು ನಿಮಗೆ ಅಕ್ಷಯ ಪಾತ್ರೆಯಂತೆ ಕಾಣಿಸಿದರೆ, ಮೋದಿಯವರೇಕೆ ರಾಜ್ಯದ ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನೀಡುತ್ತಿಲ್ಲ? ಎಂದು ಸಿಎಂ ಸಿದ್ದರಾಮಯ್ಯ ಕೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರ ಚೆಂಬು ಅತ್ಯಂತ ಶ್ರೀಮಂತರ, ಉದ್ಯಮಿಗಳ ಲಕ್ಷ ಲಕ್ಷ ಕೋಟಿ ಸಾಲ ಮನ್ನಾ ಮಾಡಿದರು. ಇದು ಅತಿ ಶ್ರೀಮಂತರ ಅಕ್ಷಯ ಪಾತ್ರೆ. ಭಾರತೀಯರ ಪಾಲಿಗೆ, ನಾಡಿನ ಜನರ ಪಾಲಿಗೆ ಖಾಲಿ ಚೆಂಬು ಅಷ್ಟೇ ಅಲ್ವಾ ದೇವೇಗೌಡರೇ ಎಂದು ಸಿಎಂ ಪ್ರಶ್ನಿಸಿದರು.

ಹದಿನೈದನೇ ಹಣಕಾಸು ಆಯೋಗದಲ್ಲಿ ರಾಜ್ಯಕ್ಕೆ ಮಾಡಿದ ಮೋಸವನ್ನು ಮೋದಿಯವರ ಖಾಲಿ ಚೆಂಬು ಸಾಕ್ಷಿಯಾಗಿದೆ. ದೇವೇಗೌಡರೇ ಈ ಚೆಂಬು ನಿಮ್ಮ ಕಣ್ಣಿಗೆ ಅಕ್ಷಯ ಪಾತ್ರೆಯಾಗಿದ್ದರೆ 15ನೇ ಹಣಕಾಸು ಆಯೋಗದಲ್ಲಿ‌ ಆಗಿರುವ ನಷ್ಟ, ಅನ್ಯಾಯವನ್ನು ತುಂಬಿ ಕೊಡಿಸಿ. ಅಕ್ಷಯ ಪಾತ್ರೆಯಿಂದ ಉದುರಿಸಿ ನೋಡೋಣ ಎಂದು ಸಿಎಂ ಸಿದ್ದರಾಮಯ್ಯ ಸವಾಲು ಹಾಕಿದರು.

ಮುಂದಿನ ಜನ್ಮದಲ್ಲಿ ಮುಸ್ಲಿಂ ಆಗಿ ಹುಟ್ಟುತ್ತೇನೆ ಎಂದಿದ್ದ ದೇವೇಗೌಡರು, ನರೇಂದ್ರ ಮೋದಿ ಪ್ರಧಾನಿಯಾದರೆ ದೇಶ ಬಿಟ್ಟು ಹೋಗುವುದಾಗಿ ಘೋಷಿಸಿದ್ದರು. ಈಗ ಅದೇ ದೇವೇಗೌಡರು ಮೋದಿ ಮತ್ತು ತಾವು ಭಾಯಿ ಭಾಯಿ ಎನ್ನುತ್ತಿದ್ದಾರೆ. ಅಲ್ಲದೆ, ದೇವೇಗೌಡರು ಮೋದಿಯವರ ಖಾಲಿ ಚೆಂಬನ್ನು ಅಕ್ಷಯ ಪಾತ್ರೆ ಎನ್ನುತ್ತಿದ್ದಾರೆ. ಆದ್ದರಿಂದ ಕೋಲಾರದಲ್ಲಿ ದೇವೇಗೌಡರು ಮತ್ತು ಮೋದಿಯವರ ಖಾಲಿ ಚೆಂಬನ್ನು ಸೋಲಿಸಿ ನಮ್ಮ ಗ್ಯಾರಂಟಿಗಳಿಗೆ ಆಶೀರ್ವದಿಸುವ ಮೂಲಕ ಕಾಂಗ್ರೆಸ್ ಅಭ್ಯರ್ಥಿ ಗೌತಮ್ ಅವರನ್ನು ಗೆಲ್ಲಿಸಿ ಎಂದು ಸಿಎಂ ಸಿದ್ದರಾಮಯ್ಯ ಕರೆ ನೀಡಿದರು.

ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಗೌತಮ್ ಗೆಲುವು ನಿಶ್ಚಿತವಾಗಿದೆ. ಬಂಗಾರಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಹೆಚ್ಚು ಬಹುಮತ ನೀಡಿ ಶಾಸಕ ನಾರಾಯಣಸ್ವಾಮಿಯವರಿಗೆ ಹೆಚ್ಚಿನ ಶಕ್ತಿ ನೀಡಿ ಎಂದು ಸಿಎಂ ಸಿದ್ದರಾಮಯ್ಯ ಮನವಿ ಮಾಡಿದರು.

ಇದನ್ನೂ ಓದಿ: Lok Sabha Election 2024: ಕಾಂಗ್ರೆಸ್‌ ಕೊಟ್ಟ ಚೆಂಬುಗಳ ಪಟ್ಟಿ ಕೊಟ್ಟ ಅಶೋಕ್‌; ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹ

ರೋಡ್ ಶೋದಲ್ಲಿ ಚೆಂಬಿನ ಸದ್ದು

ಬಂಗಾರಪೇಟೆಯಲ್ಲಿ ಸಿಎಂ ಸಿದ್ದರಾಮಯ್ಯ ನಡೆಸಿದ ರೋಡ್ ಶೋದಲ್ಲಿ ಕೇಂದ್ರ ಸರ್ಕಾರದ ಖಾಲಿ ಚೆಂಬು ಜೋರು ಸದ್ದು ಮಾಡಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಳಿದ ಎಲ್ಲ ಪ್ರಶ್ನೆಗಳಿಗೂ ಸೇರಿದ್ದ ಕಾಂಗ್ರೆಸ್‌ ಕಾರ್ಯಕರ್ತರು ಮತ್ತು ನಾಗರಿಕರು ಚೆಂಬು ಚೆಂಬು ಎಂದು ಕೂಗಿದರು.

ಕೋಲಾರದಲ್ಲಿ ಸಾವಿರ ಎಕರೆ ಜಾಗದಲ್ಲಿ ಕೈಗಾರಿಕಾ ಪಾರ್ಕ್, ಟೌನ್ ಶಿಪ್ ಮಾಡುವ ಬೇಡಿಕೆ ಇದೆ. ಈ ಬಗ್ಗೆ ಸಕಾರಾತ್ಮಕವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಇದೇ ವೇಳೆ ಭರವಸೆ ನೀಡಿದರು.

Exit mobile version