ಮೈಸೂರು: ರಾಜ್ಯದಲ್ಲಿ ಈ ಬಾರಿ 20ಕ್ಕೂ ಹೆಚ್ಚು ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲುವ ಗುರಿ ಹೊಂದಿದೆ. ಹೀಗಾಗಿ ತವರು ಕ್ಷೇತ್ರ ಮೈಸೂರು ಮತ್ತು ಚಾಮರಾಜನಗರ ಕ್ಷೇತ್ರವನ್ನು ಸಿಎಂ ಸಿದ್ದರಾಮಯ್ಯ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ. ಈಗಾಗಲೇ ಆಪರೇಷನ್ ಹಸ್ತ ಶುರು ಮಾಡಿರುವ ಸಿಎಂ, ಹಲವು ನಾಯಕರನ್ನು ಕಾಂಗ್ರೆಸ್‌ಗೆ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಧೀರಜ್ ಪ್ರಸಾದ್ ಕಾಂಗ್ರೆಸ್ ಸೇರಿದ ಬೆನ್ನಲ್ಲೇ ಅವರ ಮಾವ ಹಾಗೂ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಅವರನ್ನು ಪಕ್ಷಕ್ಕೆ ವಾಪಸ್ ಕರೆತರಲು ಪ್ರಯತ್ನಗಳು ನಡೆಯುತ್ತಿವೆ. ಈ ನಡುವೆ ಸ್ವತಃ ಸಿಎಂ ಸಿದ್ದರಾಮಯ್ಯ ಅವರೇ ವಿ.ಶ್ರೀನಿವಾಸ್ ಪ್ರಸಾದ್ ಅವರ ಮನೆಗೆ ಭೇಟಿ ನೀಡಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ಹೌದು, ಸೋಮವಾರದಿಂದ 3 ದಿನಗಳ ಕಾಲ ಸಿಎಂ ಸಿದ್ದರಾಮಯ್ಯ ಅವರು ಮೈಸೂರು ಪ್ರವಾಸ ಕೈಗೊಂಡಿದ್ದಾರೆ. ಈಗಾಗಲೇ ಸಚಿವ ಡಾ.ಮಹದೇವಪ್ಪ, ಕೆ.ವೆಂಕಟೇಶ್ ಹಾಗೂ ಸಿಎಂ ಪುತ್ರ ಡಾ.ಯತೀಂದ್ರ ಅವರು ವಿ.ಶ್ರೀನಿವಾಸ್ ಪ್ರಸಾದ್ ಅವರನ್ನು ಭೇಟಿಯಾಗಿ ಚಾಮರಾಜನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗೆ ಸಹಕರಿಸಲು ಕೋರಿದ್ದರು. ಆದ್ದರಿಂದ ಒಂದೆರಡು ದಿನದಲ್ಲಿ ಮತ್ತೆ ಮೈಸೂರಿಗೆ ಸಿಎಂ ಆಗಮಿಸಲಿದ್ದು, ಆಗ ಶ್ರೀನಿವಾಸ್ ಪ್ರಸಾದ್ ನಿವಾಸಕ್ಕೆ ಸಿಎಂ ಭೇಟಿ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕಳೆದ ವಾರವಷ್ಟೇ ನಾಲ್ಕು ದಿನ ಮೈಸೂರನಲ್ಲೇ ವಾಸ್ತವ್ಯ ಹೂಡಿ ರಣತಂತ್ರ ರೂಪಿಸಿದ್ದ ಸಿಎಂ. ಈಗ ಮತ್ತೆ ನಾಳೆಯಿಂದ ತವರು ಕ್ಷೇತ್ರಗಳ ಪ್ರವಾಸಕ್ಕೆ ಹೊರಟಿದ್ದಾರೆ. ಮೈಸೂರಿನಲ್ಲಿ ಯದುವೀರ್ ಒಡೆಯರ್ ಸೋಲಿಸಲು ರಣತಂತ್ರ ರೂಪಿಸುತ್ತಿರುವ ಸಿಎಂ, ಚಾಮರಾಜನಗರ ಕ್ಷೇತ್ರದಲ್ಲೂ ಆಪ್ತ ಸಚಿವ ಮಹದೇವಪ್ಪನವರ ಪುತ್ರ ಸುನಿಲ್ ಬೋಸ್‌ರನ್ನು ಗೆಲ್ಲಿಸಲು ಜವಾಬ್ದಾರಿ ಹೊತ್ತಿದ್ದಾರೆ. ಕೈ ಅಭ್ಯರ್ಥಿಗಳ ಗೆಲುವಿಗೆ ಬೇಕಾದ ರಣತಂತ್ರ ರೂಪಿಸುವ ನಿಟ್ಟಿನಲ್ಲಿ ಮೂರು ದಿನ ಕಾಂಗ್ರೆಸ್ ಮುಖಂಡರ ಜತೆ ಮಹತ್ವದ ಸಮಾಲೋಚನೆ ನಡೆಸಲಿದ್ದಾರೆ.
ಮುನಿಸು ಮರೆತು ಮುಖಾಮುಖಿಯಾಗಲಿರುವ ದಿಗ್ಗಜ ನಾಯಕರು
ಕಳೆದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಸಚಿವ ಸಂಪುಟದಿಂದ ವಿ.ಶ್ರೀನಿವಾಸ್ ಪ್ರಸಾದ್‌ರನ್ನು ಸಿಎಂ ಕೈಬಿಟ್ಟಿದ್ದರು. ಅದಾದ ಬಳಿಕ ಪಕ್ಷಕ್ಕೆ ರಾಜೀನಾಮೆ ಕೊಟ್ಟು ಸಿದ್ದರಾಮಯ್ಯ ವಿರುದ್ಧ ತೊಡೆತಟ್ಟಿದ್ದರು. ಇದಾದ ಬಳಿಕ ನಂಜನಗೂಡು ಉಪಚುನಾವಣೆಯಲ್ಲಿ ಶ್ರೀನಿವಾಸ ಪ್ರಸಾದ್ ಸೋತಿದ್ದರು. ನಂತರ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸೋಲಿಗೆ ಪರೋಕ್ಷ ಕಾರಣರಾಗಿದ್ದರು. ಅಂದಿನಿಂದ ಸಿದ್ದರಾಮಯ್ಯ ಹೆಸರು ಹೇಳಿದರೆ ಸಂಸದ ಕೆಂಡಕಾರುತ್ತಿದ್ದರು. ಇದೀಗ ಹಳೆ ಮುನಿಸು ಮರೆತು ಒಂದಾಗಲು ವೇದಿಕೆ ಸಜ್ಜಾಗುತ್ತಿದೆ.
ಈಗಾಗಲೇ ಚುನಾವಣಾ ರಾಜಕೀಯದಿಂದ ಶ್ರೀನಿವಾಸ ಪ್ರಸಾದ್ ನಿವೃತ್ತಿಯಾಗಿದ್ದಾರೆ. ರಾಜಕೀಯ ನಿವೃತ್ತಿ, ಆರೋಗ್ಯ ವಿಚಾರಿಸುವ ನೆಪದಲ್ಲಿ ಅವರನ್ನು ಭೇಟಿಯಾಗಲು ಸಿಎಂ ಮುಂದಾಗಿದ್ದಾರೆ. ಈಗಾಗಲೇ ಸಂಸದನ ತಂಗಿ ಮಗ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಹೀಗಾಗಿ ದಿಗ್ಗಜರ ಭೇಟಿ ಸಾಕಷ್ಟು ಕುತೂಹಲ ಮೂಡಿಸಿದೆ.
ಇದನ್ನೂ ಓದಿ | Parliament Flashback: ಮೂವರು ಸಿನಿ ತಾರೆಯರು ಪ್ರತಿನಿಧಿಸಿದ್ದ ಮಂಡ್ಯ ಲೋಕಸಭೆ ಕ್ಷೇತ್ರ!
ಸಿಎಂ ಮೈಸೂರು ಪ್ರವಾಸದ ವೇಳಾಪಟ್ಟಿ
ಏಪ್ರಿಲ್ 1: ಬೆಳಗ್ಗೆ 10.45ಕ್ಕೆ ಮೈಸೂರು ವಿಮಾನ ನಿಲ್ದಾಣಕ್ಕೆ ಸಿಎಂ ಆಗಮನ.
11 ಗಂಟೆಗೆ ವರುಣ ವಿಧಾನಸಭಾ ಕ್ಷೇತ್ರದ ಬಿಳಿಗೆರೆ ಗ್ರಾಮದಲ್ಲಿ ಚುನಾವಣಾ ಪ್ರಚಾರ.
ಮಧ್ಯಾಹ್ನ 3 ಗಂಟೆಗೆ ತಿ.ನರಸೀಪುರ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ.
ಸಂಜೆ 6ಕ್ಕೆ ಬಿಷಪ್ ನಿವಾಸಕ್ಕೆ ಭೇಟಿ.
ಏಪ್ರಿಲ್ 2: ಬೆಳಗ್ಗೆ 10ಕ್ಕೆ ಶಂಕರಮಠಕ್ಕೆ ಸಿಎಂ ಭೇಟಿ
ಬೆಳಗ್ಗೆ 11ಗಂಟೆಗೆ ಚಾಮರಾಜ ವಿಧಾನಸಭಾ ಕ್ಷೇತ್ರದಲ್ಲಿ ಸಿಎಂ ಚುನಾವಣಾ ಪ್ರಚಾರ.
ಸಂಜೆ 4ಕ್ಕೆ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಸಿಎಂ ಸಭೆ ಹಾಗೂ ಚುನಾವಣಾ ಪ್ರಚಾರ
ಏಪ್ರಿಲ್ 3: ಬೆಳಗ್ಗೆ 9.30ಕ್ಕೆ ಸುತ್ತೂರು ಮಠಕ್ಕೆ ಸಿಎಂ ಭೇಟಿ.
ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಆಶೀರ್ವಾದ ಪಡೆಯಲಿರುವ ಸಿಎಂ.
ಬೆಳಗ್ಗೆ 10.35 ಕ್ಕೆ ಚಾಮರಾಜನಗರ ಜಿಲ್ಲೆಗೆ ಸಿಎಂ ಭೇಟಿ.
ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಬೋಸ್ ನಾಮಪತ್ರ ಸಲ್ಲಿಕೆಯಲ್ಲಿ ವೇಳೆ ಭಾಗಿ.
ಮಧ್ಯಾಗ್ನ 1ಕ್ಕೆ ಮೈಸೂರು-ಕೊಡಗು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್ ನಾಮಪತ್ರ ಸಲ್ಲಿಕೆ ವೇಳೆ ಸಿಎಂ ಉಪಸ್ಥಿತಿ.