ಕನಕಪುರ: ನಾವು ನಮ್ಮ ಜನರಿಗಾಗಿ ಪ್ರಾಣ ಕೊಡುವುದಕ್ಕೂ ಸಿದ್ಧವಿದ್ದೇವೆ. ಈ ದೇಹ ಇರುವುದೇ ನಮ್ಮ ಜನರಿಗಾಗಿ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (Lok Sabha Election 2024) ತಿಳಿಸಿದರು.
ಕನಕಪುರದ ದೊಡ್ಡಆಲಹಳ್ಳಿಯಲ್ಲಿ ಬುಧವಾರ ಚುನಾವಣೆ ಪ್ರಚಾರದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಜನ ನಮಗೆ ಬಹಳ ಪ್ರೀತಿ, ವಿಶ್ವಾಸ ತೋರಿದ್ದಾರೆ. ಅವರ ಆಶೀರ್ವಾದದಿಂದ ಇಡೀ ರಾಜ್ಯದ ಜನರ ಸೇವೆ ಮಾಡುವ ಅವಕಾಶ ಸಿಕ್ಕಿದೆ. ಇಡೀ ಊರಿಗೆ ಊರೇ ಒಗ್ಗಟ್ಟಿನಿಂದ ಆಶೀರ್ವಾದ ಮಾಡುತ್ತಿದೆ. ಜನರಿಗೆ ನನ್ನ ಮೇಲೆ ನಂಬಿಕೆ ಇದೆ. ಕ್ಷೇತ್ರ ಹಿಂದೆ ಹೇಗಿತ್ತು, ಈಗ ಯಾವ ರೀತಿ ಬದಲಾವಣೆ ಮಾಡಿದ್ದೇವೆ ಎಂದು ಜನರಿಗೆ ಗೊತ್ತಿದೆ.
ಇದನ್ನೂ ಓದಿ: Kotak Bank: ಕೊಟಕ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ನಿಷೇಧ; ಹಳೆಯ ಗ್ರಾಹಕರಿಗೆ ಏನು ತೊಂದರೆ? ಇಲ್ಲಿದೆ ಮಾಹಿತಿ
ಅನೇಕ ಕಡೆಗಳಲ್ಲಿ ನಮ್ಮ ಆಸ್ತಿಗಳನ್ನು ಮಕ್ಕಳ ವಿದ್ಯಾಭ್ಯಾಸಕ್ಕೆ ನಾವು ಬಿಟ್ಟುಕೊಟ್ಟಿದ್ದೇವೆ. ನಾವು ಸ್ವಾರ್ಥಕ್ಕಾಗಿ ರಾಜಕಾರಣ ಮಾಡುತ್ತಿಲ್ಲ ಎಂದು ಜನರಿಗೆ ಗೊತ್ತಿದೆ. ಬಿಜೆಪಿಯವರಾಗಲಿ, ಕುಮಾರಸ್ವಾಮಿ ಅವರಾಗಲಿ ಅವರ ಊರುಗಳಲ್ಲಿ ಇಂತಹ ಕೆಲಸ ಮಾಡಿದ್ದಾರಾ? ನಾವು ನಮ್ಮ ದೇಹ ಇರುವುದೇ ಜನರಿಗಾಗಿ. ನಾವು ಜನರಿಗಾಗಿ ಪ್ರಾಣ ಕೊಡುವುದಕ್ಕೂ ಸಿದ್ಧವಿದ್ದೇವೆ ಎಂದು ಅವರು ತಿಳಿಸಿದರು.
ಮೈತ್ರಿ ಅಭ್ಯರ್ಥಿ ಸೋಲಿನ ಭಯದಿಂದ ಐಟಿ ದಾಳಿ
ಆಪ್ತರ ಮನೆ ಮೇಲೆ ಐಟಿ ದಾಳಿ ನಡೆಯುತ್ತಿರುವ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಉದ್ದೇಶಪೂರ್ವಕವಾಗಿ ನಮ್ಮ ಬ್ಲಾಕ್ ಅಧ್ಯಕ್ಷರ ಮನೆಗಳ ಮೇಲೆ ಐಟಿ ದಾಳಿ ನಡೆಯುತ್ತಿವೆ. ನಮಗೆ ಕೆಟ್ಟ ಹೆಸರು ತರಬೇಕು, ನಮ್ಮ ಕಾರ್ಯಕರ್ತರು ಚುನಾವಣೆಯಲ್ಲಿ ಭಾಗವಹಿಸದಂತೆ ಮಾಡಲು ಈ ರೀತಿ ಮಾಡುತ್ತಿದ್ದಾರೆ.
ಬಿಜೆಪಿ ಹಾಗೂ ದಳದವರು ಯಾರೂ ಹಣ ಹಂಚುತ್ತಿಲ್ಲವೇ? ಅವರ ಮನೆಗಳ ಮೇಲೆ ಯಾಕೆ ದಾಳಿಯಾಗುತ್ತಿಲ್ಲ? ಅವರ ವಿಚಾರದಲ್ಲಿ ಐಟಿ ಅಧಿಕಾರಿಗಳು ಕಣ್ಣುಮುಚ್ಚಿ ಕೂತಿದ್ದಾರಾ? ಅವರು ಯಾರ ಮನೆ ಮೇಲೆ ದಾಳಿ ನಡೆಯಬೇಕು ಎಂದು ಪಟ್ಟಿ ಮಾಡಿದ್ದಾರೆ. ಬೇರೆ ಕಡೆಗಳಲ್ಲಿ ಗುತ್ತಿಗೆದಾರರ ಮನೆಯಲ್ಲಿ ಹಣ ಸಿಕ್ಕರೂ ಇದು ಡಿ.ಕೆ. ಶಿವಕುಮಾರ್ ಅವರ ಹಣ ಎಂದು ಹೇಳಲು ಒತ್ತಾಯಿಸುತ್ತಿದ್ದಾರೆ. ಇನ್ನು ನಮ್ಮ ಸುರೇಶ್ ಅವರ ಚಾಲಕನ ಮನೆ ಮೇಲೆ ದಾಳಿ ಮಾಡಿ ಆತನ ಹೆಂಡತಿ ಜುಟ್ಟನ್ನು ಎಳೆದಾಡಿದ್ದಾರೆ, ಮಕ್ಕಳ ಮೇಲೆ ಹಲ್ಲೆ ಮಾಡಿದ್ದಾರೆ. ಐಟಿ ಅಧಿಕಾರಿಗಳಿಗೆ ಎಲ್ಲೂ ಹಣ ಸಿಕ್ಕಿಲ್ಲ. ಕೇವಲ ಚುನಾವಣೆಯಲ್ಲಿ ಭಾಗವಹಿಸದಂತೆ ಮಾಡಲು ಈ ರೀತಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಇದನ್ನೂ ಓದಿ: Narsingh Yadav: ಕುಸ್ತಿ ಫೆಡರೇಷನ್‌ನ ಅಥ್ಲೀಟ್ ವಿಭಾಗಕ್ಕೆ ನರಸಿಂಗ್ ಯಾದವ್ ಅಧ್ಯಕ್ಷ
ಅವರ ಅಭ್ಯರ್ಥಿ ಸೋಲುತ್ತಾರೆ ಎಂಬ ಕಾರಣಕ್ಕೆ ಅಧಿಕಾರಿಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಆರೋಪಿಸಿದರು.