ಮೈಸೂರು: ಎಚ್.ಡಿ. ದೇವೇಗೌಡರು ವಾಚಾಮಗೋಚರವಾಗಿ ಬಿಜೆಪಿಯನ್ನು ಬೈಯ್ಯುತ್ತಿದ್ದರು. ಈಗ ನಾಚಿಗೆ ಇಲ್ಲದೆ ಮೂರು ಸೀಟಿಗಾಗಿ ಬಿಜೆಪಿ ಜತೆ ಹೋಗಿದ್ದಾರೆ. ಅದರಲ್ಲೂ ಮಗ, ಅಳಿಯ, ಮೊಮ್ಮಗ ಚುನಾವಣೆಗೆ ನಿಂತಿದ್ದಾರೆ. ಕೋಲಾರ ಮೀಸಲು ಕ್ಷೇತ್ರವಾಗಿರದಿದ್ದರೆ ಇವರು ಕುಟುಂಬದ ಸದಸ್ಯನಿಗೆ ಟಿಕೆಟ್ ಕೊಡುತ್ತಿದ್ದರು. ಹಾಸನದಲ್ಲೂ ಇವರ ಕುಟುಂಬದವರೇ ಅಧಿಕಾರದಲ್ಲಿ ಇರೋದು. ದೇವೇಗೌಡರು ಯಾರ ಬೆಳವಣಿಗೆಯನ್ನೂ ಸಹಿಸೋದಿಲ್ಲ. ನಾನು ಕುರುಬ ಪರವಾಗಿಲ್ಲ. ಚೆಲುವರಾಯಸ್ವಾಮಿ, ಡಿ.ಕೆ.ಶಿವಕುಮಾರ್ ಒಕ್ಕಲಿಗರು ಅಲ್ವಾ? ಅವರನ್ನು ಕಂಡರೂ ಇವರಿಗೆ ಸಹಿಸಲು ಆಗೋದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಕೆ.ಆರ್.ನಗರದಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿ ರೈತರ ಆದಾಯ ಡಬಲ್ ಮಾಡುತ್ತೇನೆ ಎಂದಿದ್ದರು. ಆದ್ರೆ ಕೊಟ್ಟ ಭರವಸೆ ಈಡೇರಿಸಿಲ್ಲ. ನಾನು ಮುಖ್ಯಮಂತ್ರಿ ಆಗಿದ್ದಾಗ ರೈತರ ಸಾಲ ಮನ್ನಾ ಮಾಡಿದ್ದೆ. ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಮಾಡಲಿಲ್ಲ. ಆದರೆ, ಕೇಂದ್ರದಲ್ಲಿ ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ರೈತರ ಸಾಲ ಮನ್ನಾ ಮಾಡುತ್ತೇವೆ ಎಂದು ಭರವಸೆ ನೀಡಿದರು.
ಬಹಳ ದೀರ್ಘಕಾಲ ಪ್ರಧಾನಿ ಆದವರು ನರೇಂದ್ರ ಮೋದಿ. ಹತ್ತು ವರ್ಷದ ಆಡಳಿತದಲ್ಲಿ ಜನರಿಗೆ ಏನು ಕೊಟ್ಟಿದ್ದಾರೆ ಹೇಳಿ? ಅವರು ಹೇಳಿದಂತೆ ನಡೆದುಕೊಂಡಿದ್ದಾರಾ? ಅವಲೋಕನ ಮಾಡಿ. ಇವತ್ತು ಮೋದಿ ಹೆಸರಿನಲ್ಲಿ ಮೈತ್ರಿ ಪಕ್ಷಗಳು ಮತ ಕೇಳುತ್ತಿವೆ. ಇವರಿಗೆ ಮತ ಕೇಳುವ ನೈತಿಕತೆ ಇದಿಯಾ? ಯುವಕರು ಉದ್ಯೋಗ ಕೇಳಿದ್ರೆ ಪಕೋಡ ಮಾರಿ ಅಂದ್ರಲ್ಲ, ನೀವು ಪ್ರಧಾನಿ ಆಗಲು ಲಾಯಕ್ಕ ಎಂದು ಕಿಡಿಕಾರಿದರು.
ಇದನ್ನೂ ಓದಿ | Lok Sabha Election 2024: ಈ ಬಾರಿ ಕೇಂದ್ರದಲ್ಲೂ ಬಿಜೆಪಿ ಅಧಿಕಾರಕ್ಕೆ ಬರೋದಿಲ್ಲ: ಸಿಎಂ ಸಿದ್ದರಾಮಯ್ಯ ಭವಿಷ್ಯ
ನಮ್ಮ ಸರ್ಕಾರ ಪತನ ಮಾಡುವ ಬಗ್ಗೆ ಪದೇ ಪದೇ ಮಾತನಾಡುತ್ತಾರೆ. ದೇವೇಗೌಡರು ಹಗಲು ಕನಸು ಕಾಣುತ್ತಿದ್ದಾರೆ. ದೇವೇಗೌಡರೇ, ಕುಮಾರಸ್ವಾಮಿ ನಿಮ್ಮ ಕನಸೂ ನನಸಾಗಲ್ಲ. ನಮ್ಮ ಸರ್ಕಾರ ಐದು ವರ್ಷ ಇರುತ್ತೆ.
ಮುಂದೆ ಚುನಾವಣೆಯಲ್ಲೂ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದು ಹೇಳಿದರು.
ಮಿಸ್ಟರ್ ನರೇಂದ್ರ ಮೋದೀಜಿ ಕ್ಯೂ ಜೂಟ್ ಬೋಲಿಯಾ? ಮೋದಿ ಅವರಿಗೆ ಚುನಾವಣೆ ವೇಳೆ ಮಾತ್ರ ಕರ್ನಾಟಕ ನೆನಪಾಗುತ್ತದೆ. ಮತ ಕೇಳಲು ರೋಡ್ ಶೋ, ಸಮಾವೇಶ ಮಾಡುತ್ತಾರೆ. ನಾನು ಮೋದಿಯನ್ನು ಟೀಕೆ ಮಾಡಿದ್ರೆ ಸಿದ್ದರಾಮಯ್ಯಗೆ ಗರ್ವ ಅಂತಾರೆ. ಮೋದಿಯನ್ನು ಟೀಕೆ ಮಾಡಬಾರದಿತ್ತು ಅಂತ ದೇವೇಗೌಡರು ಹೇಳುತ್ತಾರೆ.
ಯಾಕೆ ನಾನು ಸತ್ಯ ಹೇಳಬಾರದಾ? ದೇವೇಗೌಡರ ಬಗ್ಗೆ ನನಗೆ ವೈಯಕ್ತಿಕ ಗೌರವವಿದೆ. ಗಂಡಸರ ಬಳಿ ಕಿತ್ತು ಕೊಂಡು ಹೆಣ್ಣು ಮಕ್ಕಳಿಗೆ ಹಣ ಕೊಡಲಾಗ್ತಿದೆ ಅಂತಾರೆ. ನಾವು ಗಂಡಸರ ಬಳಿ ಹಣ ಕೀಳುತ್ತಿಲ್ಲ. ಅವರಿಗೆ ಇನ್ನೂ ಹಣ ಉಳಿಸಿದ್ದೇವೆ ಎಂದರು.
ಇದನ್ನೂ ಓದಿ | CM Siddaramaiah: ಸಿಎಂ ಸಿದ್ದರಾಮಯ್ಯ ಬಳಿ ಗನ್ ತಂದಿದ್ದ ಕೇಸ್; ನಾಲ್ವರು ಪೊಲೀಸರು ಸಸ್ಪೆಂಡ್
ಬಿಜೆಪಿ – ಜೆಡಿಎಸ್‌ನ ಸುಳ್ಳು ಮತ್ತು ಕಾಂಗ್ರೆಸ್ ನ ಸತ್ಯದ ನಡುವಿನ ಹೋರಾಟವಿದು. ಸತ್ಯ ಹೇಳೋಕೆ ನಾನು ಹೆದರಲ್ಲ. ಯಾರೂ ಹೆದರಬಾರದು. ಕಾಂಗ್ರೆಸ್ ಗ್ಯಾರಂಟಿ ತಾತ್ಕಾಲಿಕ ಅಂತ ವಿಜಯೇಂದ್ರ ಹೇಳಿದ್ದಾರೆ. ಯಾವ ಕಾರಣಕ್ಕೂ ನಾವು ಕೊಟ್ಟಿರುವ ಯಾವ ಯೋಜನೆಯೂ ನಿಲ್ಲಿಸಲ್ಲ ಎಂದು ತಿಳಿಸಿದರು.