ದಾವಣಗೆರೆ: ಹಾವೇರಿ ಲೋಕಸಭಾ ಕ್ಷೇತ್ರದಿಂದ (Lok Sabha Election 2024) ಬಿಜೆಪಿ ಟಿಕೆಟ್ ಸಿಕ್ಕಿದರೆ ಸ್ಪರ್ಧಿಸುತ್ತೇನೆ. ಪಕ್ಷ ಬೇರೆಯವರಿಗೆ ಟಿಕೆಟ್ ಕೊಟ್ಟರೂ ಬೆಂಬಲವನ್ನು ನೀಡುತ್ತೇನೆ. ಯಾರಿಗೆ, ಯಾವುದೇ ಜಾತಿಯವರಿಗೆ ಟಿಕೆಟ್ ಕೊಟ್ಟರೂ ನನ್ನ ಬೆಂಬಲ ಇದ್ದೇ ಇರುತ್ತದೆ. ಆದರೆ, ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ (Former Deputy CM KS Eshwarappa) ಪುತ್ರ ಕೆ.ಇ. ಕಾಂತೇಶ್ ಹಾವೇರಿಗೆ ಬಂದು ಸ್ಪರ್ಧೆ ಮಾಡಿದರೆ ಗೆಲ್ಲುವುದು ಕಷ್ಟ ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ್ (Former minister BC Patil) ಹೇಳಿದರು.
ಇಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಬಿ.ಸಿ. ಪಾಟೀಲ್, ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಯಾರಿಗೆ ಟಿಕೆಟ್ ಕೊಟ್ಟರೂ ಬೆಂಬಲವನ್ನು ಕೊಡುತ್ತೇನೆ. ಆದರೆ, ಹಾವೇರಿ-ಗದಗ ಜಿಲ್ಲೆಯ ಕಾರ್ಯಕರ್ತರಿಗೆ ಟಿಕೆಟ್ ಕೊಡಬೇಕು ಎಂದು ಪರೋಕ್ಷವಾಗಿ ಕೆ.ಎಸ್. ಈಶ್ವರಪ್ಪ ಪುತ್ರ ಕಾಂತೇಶ್ ಸ್ಪರ್ಧೆಗೆ ವಿರೋಧ ವ್ಯಕ್ತಪಡಿಸಿದರು.
ಇದನ್ನೂ ಓದಿ: Karnataka Politics : ಪಕ್ಷ ಹಾನಿ ಹೇಳಿಕೆ ಕೊಟ್ಟರೆ ಶಿಸ್ತು ಕ್ರಮ; ಸಚಿವ, ಶಾಸಕರಿಗೆ ಸುರ್ಜೇವಾಲ ವಾರ್ನಿಂಗ್
ಈಶ್ವರಪ್ಪ ಪುತ್ರ ಕಾಂತೇಶ್ ಹಾವೇರಿ ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದಾರಲ್ಲವೇ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಬಿ.ಸಿ. ಪಾಟೀಲ್, ಈಶ್ವರಪ್ಪ ಪುತ್ರ ಹಾವೇರಿಗೆ ಬಂದರೆ ಗೆಲ್ಲುವುದು ಕಷ್ಟ ಎಂದು ಉತ್ತರಿಸಿದರು.
ಆಪರೇಷನ್ ಕಮಲ ಅನ್ನೋದು ಮೂರ್ಖತನದ ಪರಮಾವಧಿಯಾಗಿದೆ. ಜನರ ದಿಕ್ಕು ತಪ್ಪಿಸಲು ಕಾಂಗ್ರೆಸ್ ಇಂತಹ ಗಿಮಿಕ್ ಮಾಡುತ್ತಿದೆ. ಕಾಂಗ್ರೆಸ್ ಸರ್ಕಾರವನ್ನು ಯಾರೂ ಬೀಳಿಸಲ್ಲ. ಅವರಾಗೇ ಅವರ ಸರ್ಕಾರವನ್ನು ಬೀಳಿಸಿಕೊಳ್ಳುತ್ತಾರೆ. ಸಚಿವ ಸತೀಶ್ ಜಾರಕಿಹೊಳಿ, ಮೇಲ್ಮನೆ ಸದಸ್ಯ ಬಿ.ಕೆ.ಹರಿಪ್ರಸಾದ್, ಶಾಸಕರಾದ ಶಾಮನೂರು ಶಿವಶಂಕರಪ್ಪ, ರಾಯರೆಡ್ಡಿ ಅವರೇ ಕಾಂಗ್ರೆಸ್ ಬುಡವನ್ನು ಅಲ್ಲಾಡಿಸುತ್ತಿದ್ದಾರೆ ಎಂದು ಬಿ.ಸಿ. ಪಾಟೀಲ್ ಹರಿಹಾಯ್ದರು.
ಸಿಎಂ ಸಿದ್ದರಾಮಯ್ಯ ಅವರ ಗುಂಪು ಒಂದು ಕಡೆ ಸಭೆ ಮಾಡತ್ತದೆ. ಡಿ.ಕೆ. ಶಿವಕುಮಾರ್ ಅವರ ಗುಂಪು ಮತ್ತೊಂದು ಕಡೆ ಸಭೆ ಮಾಡುತ್ತಾ ಇದೆ. ಸಿಎಂ ಗಾದಿಗಾಗಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಕಿತ್ತಾಟ ನಡೆಸುತ್ತಿದ್ದಾರೆ. ಸರ್ಕಾರದ ಅಭಿವೃದ್ಧಿ ಶೂನ್ಯವಾಗಿದೆ. ಇದನ್ನು ಮರೆಮಾಚಲು ಆಪರೇಷನ್ ಕಮಲ, ಹುಲಿ ಉಗುರು ಅಂತ ನಾಟಕ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ್ ಹೇಳಿದರು.
ಇದನ್ನೂ ಓದಿ: Karnataka Politics : ನಿಗಮ-ಮಂಡಳಿ ಶಾಸಕರಿಗೆಂದ ಸಿಎಂ, ಕಾರ್ಯಕರ್ತರಿಗೂ ಬೇಕೆಂದ ಡಿಕೆಶಿ; ನೇಮಕ ಮುಂದೂಡಿಕೆ
ಮಹಾರಾಷ್ಟ್ರ ಮಾದರಿ ಸರ್ಕಾರ ಬೀಳಲಿದೆ
ಆಪರೇಷನ್ ಕಮಲ ಮಾಡಬೇಕು ಅಂದರೆ 90 ಜನ ಎಂಎಲ್ಎಗಳನ್ನು ಸೆಳೆಯಬೇಕು. ಅವರಿಗೆ ಯಾರು ದುಡ್ಡು ಕೊಟ್ಟು ಕರೆದುಕೊಂಡು ಬರುತ್ತಾರೆ? ಬಿಜೆಪಿಯಲ್ಲಿ ಯಾರೂ ಸಿಎಂ ಆಗಬೇಕು ಎಂದು ಪ್ರಯತ್ನ ಪಡುತ್ತಿಲ್ಲ. ಕಾಂಗ್ರೆಸ್ ಸುಳ್ಳು ಭರವಸೆ ಕೊಟ್ಟು ಅಧಿಕಾರಕ್ಕೆ ಬಂದಿದೆ. ಭಾಗ್ಯಗಳಿಗೆ 65-70 ಸಾವಿರ ಕೋಟಿ ರೂಪಾಯಿ ಸಾಲ ಮಾಡುತ್ತಿದೆ. ರಾಜ್ಯದಲ್ಲಿ ಅಭಿವೃದ್ಧಿ ಅನ್ನೋದು ಶೂನ್ಯವಾಗಿದೆ. ಮಹಾರಾಷ್ಟ್ರ ಮಾದರಿಯಲ್ಲಿ ಅವರೇ ಕಿತ್ತಾಡಿಕೊಂಡು ಅಧಿಕಾರ ಕಳೆದುಕೊಳ್ಳುತ್ತಾರೆ ಎಂದು ಬಿ.ಸಿ. ಪಾಟೀಲ್ ಹೇಳಿದರು.