Site icon Vistara News

Lok Sabha Election 2024: ಪ್ರಲ್ಹಾದ್‌ ಜೋಶಿ, ಬೊಮ್ಮಾಯಿ, ಜೊಲ್ಲೆ ಸೇರಿ ಐವರು ಬಿಜೆಪಿ ನಾಯಕರಿಂದ ನಾಮಪತ್ರ ಸಲ್ಲಿಕೆ

ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ (Lok Sabha Election 2024) ಬಿಜೆಪಿ ಅಭ್ಯರ್ಥಿಗಳಾದ ಕೇಂದ್ರ ಸಚಿವರಾದ ಪ್ರಲ್ಹಾದ್‌ ಜೋಶಿ, ಭಗವಂತ ಖೂಬಾ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ರಾಜಾ ಅಮರೇಶ್ವರ ನಾಯಕ್, ಅಣ್ಣಾಸಾಹೇಬ್‌ ಜೊಲ್ಲೆ ಅವರು ಸೋಮವಾರ ನಾಮಪತ್ರ ಸಲ್ಲಿಸಿದರು. ಸಾವಿರಾರು ಬೆಂಬಲಿಗರು, ಕಾರ್ಯಕರ್ತರೊಂದಿಗೆ ಮೆರವಣಿಗೆಯಲ್ಲಿ ಬಿಜೆಪಿ ನಾಯಕರು ತೆರಳಿ ಉಮೇದುವಾರಿಕೆ ಸಲ್ಲಿಸಿದರು.

ಧಾರವಾಡದಲ್ಲಿ ಬಿಜೆಪಿ ಅಭ್ಯರ್ಥಿ ಪ್ರಲ್ಹಾದ್‌ ಜೋಶಿ ನಾಮ ಪತ್ರ ಸಲ್ಲಿಕೆ

ಧಾರವಾಡ: ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪ್ರಲ್ಹಾದ್‌ ಜೋಶಿ ಅವರು ಜಿಲ್ಲಾಧಿಕಾರಿ ದಿವ್ಯಪ್ರಭು ಅವರಿಗೆ ನಾಮಪತ್ರ ಸಲ್ಲಿಕೆ ಮಾಡಿದರು. ಈ ವೇಳೆ ಅವರಿಗೆ ಮಾಜಿ ಸಿಎಂಗಳಾದ ಬಿ.ಎಸ್. ಯಡಿಯೂರಪ್ಪ, ಜಗದೀಶ ಶೆಟ್ಟರ್, ಪ್ರಲ್ಹಾದ್‌ ಜೋಶಿ ಅವರ ಪತ್ನಿ ಜ್ಯೋತಿ ಜೋಶಿ ಸಾಥ್ ನೀಡಿದರು.

ಒಟ್ಟು ಮೂರು ಸೆಟ್‌ಗಳಲ್ಲಿ ಜೋಶಿ ಅವರು ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಕೆಗೂ ಮುನ್ನಾ ಬೃಹತ್‌ ಮೆರವಣಿಗೆಯಲ್ಲಿ ಜೋಶಿ ಅವರು ಡಿಸಿ ಕಚೇರಿಗೆ ತೆರಳಿದರು. ನಂತರ ಮಾತನಾಡಿದ ಅವರು, ಇವತ್ತು ಶುಭ ಮುಹೂರ್ತದಲ್ಲಿ ಮೋದಿ ಅವರ ಅಭಿಮಾನಿಗಳ ಜೊತೆಯಲ್ಲಿ ಬಂದು ನಾಮಪತ್ರ ಸಲ್ಲಿಸಿದ್ದೇನೆ. ಯಡಿಯೂರಪ್ಪ, ಕೋರೆ, ಶೆಟ್ಟರ್ ಸೇರಿದಂತೆ ಹಲವು ನಾಯಕರ ಜೊತೆ ಸೇರಿ ಬಂದು ನಾಮಪತ್ರ ಸಲ್ಲಿಸಿದ್ದೇನೆ. ಬಸವರಾಜ ಬೊಮ್ಮಾಯಿ ಅವರು ಬರಬೇಕಿತ್ತು, ಅವರದು ನಾಮ ಪತ್ರ ಸಲ್ಲಿಕೆ ಇದ್ದಿದ್ದರಿಂದ ಅವರು ಬಂದಿಲ್ಲ ಎಂದು ಹೇಳಿದರು.

ಇದನ್ನೂ ಓದಿ | DK Shivakumar: ದೆಹಲಿಯಲ್ಲಿ ಎಲ್ಲವೂ ತೀರ್ಮಾನವಾಗಿದೆ; ಸಿಎಂ ಬದಲಾವಣೆ ಸುಳಿವು ನೀಡಿದ ಡಿಕೆಶಿ!

ಹಾವೇರಿಯಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಉಮೇದುವಾರಿಕೆ

ಹಾವೇರಿ: ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಸಾಂಕೇತಿಕವಾಗಿ ನಾಮಪತ್ರ ಸಲ್ಲಿಕೆ ಮಾಡಿದರು. ಹಾವೇರಿ ಜಿಲ್ಲಾಧಿಕಾರಿ ರಘುನಂಧನಮೂರ್ತಿಗೆ ಅವರು ನಾಮಪತ್ರ ಸಲ್ಲಿಕೆ ಮಾಡಿದರು. ಬಸವರಾಜ ಬೊಮ್ಮಾಯಿಗೆ ಮಾಜಿ‌ ಸಚಿವ ಬಿ.ಸಿ. ಪಾಟೀಲ್, ಶಾಸಕ ಚಂದ್ರು ಲಮಾಣಿ, ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ‌ ಸಾಥ್‌ ನೀಡಿದರು.

ನಂತರ ಬಸವರಾಜ ಬೊಮ್ಮಾಯಿ ಮಾತನಾಡಿ, ಇವತ್ತು ಒಳ್ಳೆಯ ಮುಹೂರ್ತ ಇತ್ತು, ಹೀಗಾಗಿ ಎರಡು ಸೆಟ್ ನಾಮಪತ್ರ ಸಲ್ಲಿಸಿದ್ದೇನೆ. ಏಪ್ರೀಲ್ 19ರಂದು ಮತ್ತೆ ನಾಮಪತ್ರ ಸಲ್ಲಿಸುವೆ. ಅವತ್ತು ನಮ್ಮ ನಾಯಕರಾದ ಯಡಿಯೂರಪ್ಪ, ಬೈರತಿ ಬಸವರಾಜ ಸೇರಿ ಹಲವು ನಾಯಕರು ಬರುತ್ತಾರೆ. ಅತಿ ಹೆಚ್ಚು ಮತಗಳ ಅಂತರಗಳಲ್ಲಿ ಗೆಲ್ಲುವ ಆತ್ಮವಿಶ್ವಾಸ ಇದೆ ಎಂದು ಹೇಳಿದರು.

ರಾಯಚೂರಲ್ಲಿ ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ್ ನಾಮಿನೇಷನ್

ರಾಯಚೂರು: ರಾಯಚೂರು-ಯಾದಗಿರಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ್ ಅವರು ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದರು. ಜಿಲ್ಲಾಧಿಕಾರಿ ಕಚೇರಿಯಲ್ಲಿ ಬಿಜೆಪಿ ಅಭ್ಯರ್ಥಿ ನಾಮಪತ್ರ ಸಲ್ಲಿಸಿದರು.

ಬಳಿಕ ರಾಜಾ ಅಮರೇಶ್ವರ ನಾಯಕ್ ಪ್ರತಿಕ್ರಿಯಿಸಿ, ಸೋಮವಾರ ನಮ್ಮ ಮನೆ ದೇವರು ಅಮರೇಶ್ವರ ದೇವರ ವಾರ. ಆದ್ದರಿಂದ ಇಂದು ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದ್ದೀನಿ. ಏ. 18 ರಂದು ಕಾರ್ಯಕರ್ತರ ಜೊತೆ ರ್ಯಾಲಿ ಮೂಲಕ ತೆರಳಿ ನಾಮಪತ್ರ ಸಲ್ಲಿಸುವೆ. ಬಿ.ವೈ ವಿಜೆಯೇಂದ್ರ ಮತ್ತು ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ್ದೀನಿ. ಮೊದಲ ಹಂತದ ಚುನಾವಣೆ ಹಿನ್ನೆಲೆ ಅವರು ಬ್ಯುಸಿ ಇದ್ದಾರೆ. ಸಾಧ್ಯವಾದರೆ ನಾಮಪತ್ರ ಸಲ್ಲಿಸುವ ದಿನ ಬರೋದಾಗಿ ಕುಮಾರಸ್ವಾಮಿ ಹೇಳಿದ್ದಾರೆ, ವಿಜೆಯೇಂದ್ರ ಕೂಡ ಬರೋ ಸಾಧ್ಯತೆಯಿದೆ ಎಂದು ಹೇಳಿದರು.

ಕುಮಾರಸ್ವಾಮಿ ಚುನಾವಣೆ ಪ್ರಚಾರಕ್ಕೆ ಬರ್ತಾರೆ. ಕೇಂದ್ರ ಸಚಿವ ನಾರಾಯಣ ಸ್ವಾಮಿ ಬರಲಿದ್ದಾರೆ. ಹಾಗೆಯೇ ಜನಾರ್ದನ ರೆಡ್ಡಿ ಅವರು ನಾಮಪತ್ರ ಸಲ್ಲಿಸುವ ದಿನ ಬರುತ್ತಾರೆ. ಅತಿ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರ ಜೊತೆ ಹೋಗಿ ಮತ್ತೊಮ್ಮೆ ನಾಮಪತ್ರ ಸಲ್ಲಿಸುವೆ ಎಂದು ತಿಳಿಸಿದರು.

ಕೇಂದ್ರ‌ ಸಚಿವ ಭಗವಂತ ಖೂಬಾ ನಾಮಪತ್ರ

ಬೀದರ್: ಕ್ಷೇತ್ರದಲ್ಲಿ ಕೇಂದ್ರ‌ ಸಚಿವ ಭಗವಂತ ಖೂಬಾ ಅವರು ಸಾಂಕೇತಿಕವಾಗಿ ಚುನಾವಣಾಧಿಕಾರಿಗೆ‌ ನಾಮಪತ್ರ ಸಲ್ಲಿಸಿದರು. ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಬೀದರ್‌ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ನಾಮಪತ್ರ ಸಲ್ಲಿಕೆ ಮಾಡಿದರು. ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ್ ಪಾಟೀಲ್, ಎಂಎಲ್‌ಸಿ ರಘುನಾಥ್ ರಾವ್ ಮಲ್ಕಾಪುರ, ಮಾಜಿ ಶಾಸಕ ಎಂ.ಜಿ. ಮೂಳೆ ಬಿಜೆಪಿ ಮುಖಂಡರ ಬಸವರಾಜ್ ಆರ್ಯ ಸಾಥ್‌ ನೀಡಿದರು. ಇವರು ಏ. 18 ರಂದು ಬಿಜೆಪಿ ಶಕ್ತಿ ಪ್ರದರ್ಶನ ಮಾಡಿ ಮತ್ತೊಮ್ಮೆ ನಾಮಪತ್ರ ಸಲ್ಲಿಸಲಿದ್ದಾರೆ. ಅಂದು ಮಹಾರಾಷ್ಟ್ರ ಮಾಜಿ ಸಿಎಂ ದೇವೇಂದ್ರ ಫಡ್ನವೀಸ್ ಸೇರಿದಂತೆ ರಾಜ್ಯದ ಬಿಜೆಪಿ ನಾಯಕರು ಭಾಗಿ ಸಾಧ್ಯತೆ ಇದೆ.

ಇದನ್ನೂ ಓದಿ | K. Annamalai: ಬದುಕು ಬದಲಿಸಿದ ಮಾನಸ ಸರೋವರ ಯಾತ್ರೆ! ಕೆ.ಅಣ್ಣಾಮಲೈ ಕುರಿತ ಕುತೂಹಲಕರ ಸಂಗತಿಗಳಿವು

ಚಿಕ್ಕೋಡಿಯಲ್ಲಿ ಅಣ್ಣಾ ಸಾಹೇಬ ಜೊಲ್ಲೆ ನಾಮಪತ್ರ ಸಲ್ಲಿಕೆ

ಚಿಕ್ಕೋಡಿ: ಚಿಕ್ಕೋಡಿ ಲೋಕಸಭಾ ಬಿಜೆಪಿ ಅಭ್ಯರ್ಥಿಯಾಗಿ ಅಣ್ಣಾಸಾಹೇಬ ಜೊಲ್ಲೆ ನಾಮಪತ್ರ ಸಲ್ಲಿಕೆ ಮಾಡಿದರು. ಚಿಕ್ಕೋಡಿ ಪಟ್ಟಣದ ಎಸಿ ಕಚೇರಿಯಲ್ಲಿ ಜೋಲ್ಲೆ ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಕೆಗೂ ಮುನ್ನಾ ಅಣ್ಣಾಸಾಸೇಬ ಜೊಲ್ಲೆ ದಂಪತಿ ದೇವರ ಮೊರೆ ಹೋಗಿದ್ದರು. ಈ ವೇಳೆ ಮಾಜಿ ಶಾಸಕರಾದ ಮಹೇಶ್ ಕುಮಟಳ್ಳಿ, ಶ್ರೀಮಂತ ಪಾಟೀಲ್, ಶಾಸಕ ದುರ್ಯೋಧನ ಐಹೋಳೆ, ಚುನಾವಣಾ ಉಸ್ತುವಾರಿ ಬಿ.ಎಚ್. ಪೂಜಾರ ಉಪಸ್ಥಿತರಿದ್ದರು.

ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ನಾಮಪತ್ರ ಸಲ್ಲಿಕೆ

ಬೆಳಗಾವಿ ಡಿಸಿ ಕಚೇರಿಯಲ್ಲಿ ಚುನಾವಣಾಧಿಕಾರಿ ನಿತೇಶ ಪಾಟೀಲ್‌ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಸಾಂಕೇತಿಕವಾಗಿ ನಾಮಪತ್ರ ಸಲ್ಲಿಕೆ ಮಾಡಿದರು. ಈ ವೇಳೆ ಬಿಜೆಪಿ ರಾಜ್ಯ ಉಪಾಧ್ಯಕ್ಷ ಅನಿಲ್, ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಸಂಸದೆ ಮಂಗಲ್ ಅಂಗಡಿ, ಹನುಮಂತ ನಿರಾಣಿ ಇದ್ದರು. ಏಪ್ರಿಲ್ 17 ರಂದು ಮತ್ತೊಮ್ಮೆ ಶಕ್ತಿಪ್ರದರ್ಶನ ಮಾಡಿ ಶೆಟ್ಟರ್ ನಾಮಪತ್ರ‌ ಸಲ್ಲಿಸಲಿದ್ದಾರೆ.

Exit mobile version