Site icon Vistara News

Lok Sabha Election 2024: ಚಿಕ್ಕಬಳ್ಳಾಪುರದಲ್ಲಿ ಮೈತ್ರಿಗೆ ಹಿನ್ನಡೆ; ಜೆಡಿಎಸ್‌ ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ ಕಾಂಗ್ರೆಸ್‌ ಸೇರ್ಪಡೆ

Lok Sabha Election 2024

ಬೆಂಗಳೂರು: ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆ (Lok Sabha Election 2024) ಹೊತ್ತಿನಲ್ಲಿ ಮೈತ್ರಿಗೆ ಹಿನ್ನಡೆಯಾಗಿದೆ. ಚಿಕ್ಕಬಳ್ಳಾಪುರ ಜೆಡಿಎಸ್ ಮಾಜಿ ಶಾಸಕ ಕೆ.ಪಿ. ಬಚ್ಚೇಗೌಡ‌‌ ಅವರು ತಮ್ಮ ಬೆಂಬಲಿಗರೊಂದಿಗೆ ಭಾನುವಾರ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಬಿಜೆಪಿ-ಜೆಡಿಎಸ್ ಮೈತ್ರಿಗೆ ವಿರೋಧ ವ್ಯಕ್ತಪಡಿಸಿದ್ದ ಕೆ.ಪಿ.ಬಚ್ಚೇಗೌಡ ಅವರು, ಸಿಎಂ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ಕಾಂಗ್ರೆಸ್‌ ಸೇರಿದ್ದಾರೆ.

ಬೆಂಗಳೂರಿನ ಕಾವೇರಿ ನಿವಾಸದಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಬಚ್ಚೇಗೌಡ ಅವರು ಭೇಟಿಯಾಗಿ ಕಾಂಗ್ರೆಸ್‌ ಸೇರ್ಪಡೆಯಾದರು. ಈ ವೇಳೆ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್‌ ಈಶ್ವರ್‌, ಲೋಕಸಭಾ ಚುನಾವಣೆಯ ಕಾಂಗ್ರೆಸ್‌ ಅಭ್ಯರ್ಥಿ ರಕ್ಷಾ ರಾಮಯ್ಯ, ಮಾಜಿ ಸಚಿವ ಎಂ.ಆರ್‌.ಸೀತಾರಾಂ ಮತ್ತಿತರರು ಉಪಸ್ಥಿತರಿದ್ದರು.

ಕೆ.ಪಿ. ಬಚ್ಚೇಗೌಡ ಅವರು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಮೈತ್ರಿ ಅಭ್ಯರ್ಥಿಯಾಗಿ ಮಾಜಿ ಸಚಿವ ಡಾ.ಕೆ. ಸುಧಾಕರ್​ಗೆ ಟಿಕೆಟ್​ ನೀಡಿದ ಹಿನ್ನೆಲೆಯಲ್ಲಿ ಕಾಂಗ್ರೆಸ್​ಗೆ ಸೇರಿದ್ದಾರೆ. ಬಚ್ಚೇಗೌಡ ಜತೆಗೆ ಜೆಡಿಎಸ್ ಜಿಲ್ಲಾಧ್ಯಕ್ಷ ಮುನೇಗೌಡ ಸೇರಿ 50ಕ್ಕೂ ಹೆಚ್ಚು ಮುಖಂಡರು ಕಾಂಗ್ರೆಸ್​ ಸೇರಿದ್ದು, ಏಪ್ರಿಲ್ 2ರಂದು ಅಧಿಕೃತವಾಗಿ ಕೆಪಿಸಿಸಿ ಕಚೇರಿಯಲ್ಲಿ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ.

ಜೆಡಿಎಸ್ ನಾಯಕರು ನಮ್ಮ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ನಮ್ಮ ರಾಜಕೀಯ ಎದುರಾಳಿ ಡಾ.ಕೆ. ಸುಧಾಕರ್ ಪರ ನಾನು ನಿಲ್ಲುವುದಿಲ್ಲ. ಹೀಗಾಗಿ ನಾನು ಕಾಂಗ್ರೆಸ್​ ಸೇರುತ್ತಿದ್ದೇನೆ ಎಂದು ಕೆ.ಪಿ ಬಚ್ಚೇಗೌಡ ಹೇಳಿದ್ದಾರೆ.

ಇದನ್ನೂ ಓದಿ | Lok Sabha Election 2024: ನಾಳೆಯಿಂದ ಕಾಂಗ್ರೆಸ್‌ನಲ್ಲಿ ನಾಮಪತ್ರ ಜಾತ್ರೆ; ಯಾವ ಅಭ್ಯರ್ಥಿಯಿಂದ ಎಂದು ಸಲ್ಲಿಕೆ?

ತುಮಕೂರು ಜೆಡಿಎಸ್ ಮುಖಂಡನಿಗೆ ಕಾಂಗ್ರೆಸ್‌ ಗಾಳ; ದೇವೇಗೌಡರ ಭೇಟಿ ಬೆನ್ನಲ್ಲೇ ರಿವರ್ಸ್‌ ಆಪರೇಷನ್!

ತುಮಕೂರು: ಲೋಕ‌ ಸಮರ ಹೊಸ್ತಿನಲ್ಲಿ (Lok Sabha Election 2024) ತುಮಕೂರಿನಲ್ಲಿ ಆಪರೇಷನ್ ಸದ್ದು ಜೋರಾಗಿದೆ. ಈ ಬಾರಿಯ ಚುನಾವಣೆ ಗೆಲ್ಲಲು ಕಾಂಗ್ರೆಸ್ ರಣತಂತ್ರ ರೂಪಿಸುತ್ತಿದ್ದು, ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಅವರು ಕಾಂಗ್ರೆಸ್‌ ಮುಖಂಡ ಹಾಗೂ ಮಾಜಿ ಶಾಸಕ ಎಚ್.ನಿಂಗಪ್ಪ ಮನೆಗೆ ಭೇಟಿ ನೀಡಿ ಪಕ್ಷಕ್ಕೆ ಆಹ್ವಾನ ನೀಡಿದ ಬೆನ್ನಲ್ಲೇ, ಜೆಡಿಎಸ್ ಮುಖಂಡನಿಗೆ ಕೈ ನಾಯಕರು ಗಾಳ ಹಾಕಿದ್ದಾರೆ.

ತುಮಕೂರು ‌ನಗರದ ಜೆಡಿಎಸ್ ಮುಖಂಡ ಗೋವಿಂದರಾಜು ಅವರನ್ನು ಕಾಂಗ್ರೆಸ್‌ಗೆ ಸೆಳೆಯಲು ಮುಂದಾಗಿರುವ ಕೈ ನಾಯಕರು, ಜೆಡಿಎಸ್‌ ಮುಖಂಡನ ಜತೆ ಗೌಪ್ಯವಾಗಿ ಸಭೆ ನಡೆಸಿದ್ದಾರೆ. ಗೋವಿಂದರಾಜು ಅವರು ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿಯಾಗಿದ್ದು, ಅವರೊಂದಿಗೆ ಸಹಕಾರ ಸಚಿವ ಕೆ.ಎನ್.ರಾಜಣ್ಣ ಮನೆಯಲ್ಲಿ ಗೌಪ್ಯ ಸಭೆ ನಡೆದಿದೆ. ಎಚ್‌.ಡಿ.ದೇವೇಗೌಡರಿಗೆ ಟಕ್ಕರ್ ಕಾಂಗ್ರೆಸ್ ರಿವರ್ಸ್ ಆಪರೇಷನ್ ಪ್ಲ್ಯಾನ್‌ ಮಾಡಿದೆ.

ಸಚಿವ ಕೆ.ಎನ್.ರಾಜಣ್ಣ ಹಾಗೂ ಗೃಹ ಸಚಿವ ಪರಮೇಶ್ವರ್ ನೇತೃತ್ವದಲ್ಲಿ ಸೀಕ್ರೆಟ್ ಮೀಟಿಂಗ್ ನಡೆದಿದ್ದು, ಸಭೆಯಲ್ಲಿ ಶಾಸಕ ಎಸ್.ಆರ್ ಶ್ರೀನಿವಾಸ್, ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಮುದ್ದಹನುಮೇಗೌಡ ಭಾಗಿಯಾಗಿದ್ದರು.

ಮಾತೃ ಪಕ್ಷ ಜೆಡಿಎಸ್‌ ಸೇರ್ತಾರಾ ಮಾಜಿ ಶಾಸಕ ಎಚ್.ನಿಂಗಪ್ಪ

ಇದನ್ನೂ ಓದಿ | Lok Sabha Election 2024: ಭ್ರಷ್ಟಾಚಾರ ಮರೆ ಮಾಚಲು ವಿಪಕ್ಷಗಳು ಒಗ್ಗೂಡಿವೆ; ಬಿಜೆಪಿ ವಾಗ್ದಾಳಿ

ಜೆಡಿಎಸ್‌ ಪಕ್ಷದಿಂದ ನಾಲ್ಕು ಸೋಲು ಕಂಡ ಬಳಿಕ 2004ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಗೆದ್ದಿದ್ದ ನಿಂಗಪ್ಪ ಅವರು, ನಂತರ ಕೆಜೆಪಿ, ಕಾಂಗ್ರೆಸ್‌ನಲ್ಲಿ ಸುತ್ತಾಟ ನಡೆಸಿ ಈಗ, ಮಾತೃ ಪಕ್ಷ ಜೆಡಿಎಸ್‌ ಸೇರಲು ಉತ್ಸುಕರಾಗಿದ್ದಾರೆ ಎಂದು ತಿಳಿದುಬಂದಿದೆ. ಕೈ ನಾಯಕರನ್ನು ಸೆಳೆಯಲು ದೇವೇಗೌಡರು ಪ್ಲ್ಯಾನ್‌ ರೂಪಿಸುತ್ತಿರುವ ನಡುವೆ, ದಳಪತಿಗಳಿಗೆ ಟಕ್ಕರ್‌ ನೀಡಲು ಕಾಂಗ್ರೆಸ್‌ ನಾಯಕರು ಕೂಡ ರಿವರ್ಸ್‌ ಆಪರೇಷನ್‌ ಶುರು ಮಾಡಿದ್ದಾರೆ.

Exit mobile version