ತುಮಕೂರು: ಲೋಕಸಭೆ ಚುನಾವಣೆ (Lok Sabha Election 2024) ಹೊಸ್ತಿಲಿನಲ್ಲಿ ಕಾಂಗ್ರೆಸ್‌ಗೆ ದೊಡ್ಡಗೌಡರು ಶಾಕ್ ನೀಡಿದ್ದಾರೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಶನಿವಾರ ಮನೆಗೆ ಹೋಗಿ ಮನವೊಲಿಸಿದ ಬೆನ್ನಲ್ಲೇ ಕುಣಿಗಲ್ ಮಾಜಿ ಶಾಸಕ ಎಚ್.ನಿಂಗಪ್ಪ ಅವರು ಕಾಂಗ್ರೆಸ್ ತೊರೆದಿದ್ದು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ರಾಜೀನಾಮೆ ಪತ್ರ ರವಾನೆ ಮಾಡಿದ್ದಾರೆ.
ಸೋಮವಾರ ಕಾಂಗ್ರೆಸ್‌ನ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿರುವ ಎಚ್.ನಿಂಗಪ್ಪ ಅವರು, ಮಂಗಳವಾರ ಬೆಂಗಳೂರಿನ ಜೆಡಿಎಸ್ ಕಚೇರಿಯಲ್ಲಿ ಪಕ್ಷ ಸೇರ್ಪಡೆಯಾಗಲಿದ್ದಾರೆ. ತುಮಕೂರಿನಲ್ಲಿ ಪ್ರಚಾರಕ್ಕೆ ಹೋದ ಮೊದಲು ದಿನವೇ ದಾಳ ಉರುಳಿಸಿದ್ದ ಎಚ್.ಡಿ ದೇವೇಗೌಡರು, ಕಾಂಗ್ರೆಸ್‌ಗೆ ಆಘಾತ ನೀಡಿದ್ದಾರೆ.
ಜೆಡಿಎಸ್ ಪಕ್ಷದಿಂದ ನಾಲ್ಕು ಸೋಲು ಕಂಡ ಬಳಿಕ 2004ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಗೆದ್ದಿದ್ದ ನಿಂಗಪ್ಪ ಅವರು, ನಂತರ ಕೆಜೆಪಿ, ಕಾಂಗ್ರೆಸ್‌ನಲ್ಲಿ ಸುತ್ತಾಟ ನಡೆಸಿ ಈಗ, ಮಾತೃ ಪಕ್ಷ ಜೆಡಿಎಸ್‌ಗೆ ಮರಳಿದ್ದಾರೆ.
ಕಾಂಗ್ರೆಸ್‌ನಿಂದ ರಿವರ್ಸ್ ಆಪರೇಷನ್
ತುಮಕೂರು: ಲೋಕ ಸಮರ ಹೊಸ್ತಿನಲ್ಲಿ (Lok Sabha Election 2024) ತುಮಕೂರಿನಲ್ಲಿ ಆಪರೇಷನ್ ಸದ್ದು ಜೋರಾಗಿದೆ. ಈ ಬಾರಿಯ ಚುನಾವಣೆ ಗೆಲ್ಲಲು ಕಾಂಗ್ರೆಸ್ ರಣತಂತ್ರ ರೂಪಿಸುತ್ತಿದ್ದು, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಶಾಸಕ ಎಚ್.ನಿಂಗಪ್ಪ ಮನೆಗೆ ಭೇಟಿ ನೀಡಿ ಪಕ್ಷಕ್ಕೆ ಆಹ್ವಾನ ನೀಡಿದ ಬೆನ್ನಲ್ಲೇ, ಜೆಡಿಎಸ್ ಮುಖಂಡನಿಗೆ ಕೈ ನಾಯಕರು ಗಾಳ ಹಾಕಿದ್ದಾರೆ.
ತುಮಕೂರು ನಗರದ ಜೆಡಿಎಸ್ ಮುಖಂಡ ಗೋವಿಂದರಾಜು ಅವರನ್ನು ಕಾಂಗ್ರೆಸ್‌ಗೆ ಸೆಳೆಯಲು ಮುಂದಾಗಿರುವ ಕೈ ನಾಯಕರು, ಜೆಡಿಎಸ್ ಮುಖಂಡನ ಜತೆ ಗೌಪ್ಯವಾಗಿ ಸಭೆ ನಡೆಸಿದ್ದಾರೆ. ಗೋವಿಂದರಾಜು ಅವರು ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿಯಾಗಿದ್ದು, ಅವರೊಂದಿಗೆ ಸಹಕಾರ ಸಚಿವ ಕೆ.ಎನ್.ರಾಜಣ್ಣ ಮನೆಯಲ್ಲಿ ಭಾನುವಾರ ಗೌಪ್ಯ ಸಭೆ ನಡೆದಿದೆ. ಎಚ್.ಡಿ.ದೇವೇಗೌಡರಿಗೆ ಟಕ್ಕರ್ ಕಾಂಗ್ರೆಸ್ ರಿವರ್ಸ್ ಆಪರೇಷನ್ ಪ್ಲ್ಯಾನ್ ಮಾಡಿದೆ. ಸಚಿವ ಕೆ.ಎನ್.ರಾಜಣ್ಣ ಹಾಗೂ ಗೃಹ ಸಚಿವ ಪರಮೇಶ್ವರ್ ನೇತೃತ್ವದಲ್ಲಿ ಸೀಕ್ರೆಟ್ ಮೀಟಿಂಗ್ ನಡೆದಿದ್ದು, ಸಭೆಯಲ್ಲಿ ಶಾಸಕ ಎಸ್.ಆರ್ ಶ್ರೀನಿವಾಸ್, ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಮುದ್ದಹನುಮೇಗೌಡ ಭಾಗಿಯಾಗಿದ್ದರು.
ಇದನ್ನೂ ಓದಿ | Yaduveer: ಬಿಜೆಪಿಯ ಯದುವೀರ್ ಆಸ್ತಿ ಮೌಲ್ಯ 4.99 ಕೋಟಿ ರೂ.; ಇವರ ಬಳಿ ಸ್ವಂತ ಕಾರೂ ಇಲ್ಲ
ಕಾಂಗ್ರೆಸ್ ಬಿಟ್ಟು ಜೆಡಿಎಸ್ ಸೇರಿದ ಅಂಬಿ ಆಪ್ತ
ಮಂಡ್ಯ: ಒಂದು ಕಾಲದ ಮಾಜಿ ಸಚಿವ ಅಂಬರೀಶ್ ಅವರ ಆಪ್ತ ಅಮರಾವತಿ ಚಂದ್ರು ಅವರು ಕಾಂಗ್ರೆಸ್ ಬಿಟ್ಟು ಜೆಡಿಎಸ್ ಸೇರಿದ್ದಾರೆ. ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಸಮ್ಮುಖದಲ್ಲಿ ಅವರು ಸೋಮವಾರ ಜೆಡಿಎಸ್ ಸೇರ್ಪಡೆಯಾಗಿದ್ದಾರೆ.
ಅಂಬರೀಶ್ ಅತ್ಯಾಪ್ತರಾಗಿದ್ದ ಅಮರಾವತಿ ಚಂದ್ರು, 2018, 2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಬಯಸಿದ್ದರು. ಆದ್ರೆ ಟಿಕೆಟ್ ಸಿಗದಿದ್ದಕ್ಕೆ ಬೇಸರಗೊಂಡಿದ್ದರು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ರವಿಕುಮಾರ್ ಗಣಿಗ ಅವರಿಗೆ ಟಿಕೆಟ್ ನೀಡಿದ್ದಕ್ಕೆ ಬಹಿರಂಗವಾಗಿಯೇ ಅಸಮಧಾನ ಹೊರ ಹಾಕಿದ್ದ ಅಮರಾವತಿ ಚಂದ್ರು, ಚುನಾವಣೆ ನಂತ್ರ ಕಾಂಗ್ರೆಸ್ ಜೊತೆಗೆ ಅಂತರ ಕಾಯ್ದುಕೊಂಡಿದ್ದರು. ಇದೀಗ ಮಾಜಿ ಸಿಎಂ ಕುಮಾರಸ್ವಾಮಿ ಸಮ್ಮುಖದಲ್ಲಿ ಜೆಡಿಎಸ್ ಸೇರ್ಪಡೆಯಾಗಿದ್ದಾರೆ.