Site icon Vistara News

Lok Sabha Election 2024: ಗೀತಾ ಶಿವರಾಜ್‌ಕುಮಾರ್‌ ಬಳಿ ಇದೆ 11.54 ಕೆಜಿ ಚಿನ್ನ, 30 ಕೆಜಿ ಬೆಳ್ಳಿ; ಒಟ್ಟು ಆಸ್ತಿ ಎಷ್ಟು?

Geetha Shivaraj kumar

ಶಿವಮೊಗ್ಗ: ಶಿವಮೊಗ್ಗದಿಂದ ಎರಡನೇ ಬಾರಿ ಲೋಕಸಭಾ ಚುನಾವಣೆಗೆ (Lok Sabha Election 2024) ಸ್ಪರ್ಧಿಸುತ್ತಿರುವ ಕಾಂಗ್ರೆಸ್‌ ಅಭ್ಯರ್ಥಿ ಗೀತಾ ಶಿವರಾಜ್‌ಕುಮಾರ್‌ ಅವರು ಸೋಮವಾರ ನಾಮಪತ್ರ ಸಲ್ಲಿಸಿದ್ದು, ಈ ವೇಳೆ ತಮ್ಮ ಆಸ್ತಿ ಘೋಷಿಸಿಕೊಂಡಿದ್ದಾರೆ. ಮಾಜಿ ಸಿಎಂ ಬಂಗಾರಪ್ಪ ಅವರ ಪುತ್ರಿ, ದೊಡ್ಮನೆ ಸೊಸೆ (Geetha Shivarajkumar) ಕುಟುಂಬವು 89.04 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿರುವುದಾಗಿ ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ.

ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ಅವರ ಪತ್ನಿ ಗೀತಾ ಶಿವರಾಜ್‌ಕುಮಾರ್‌ ಅವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದ್ದಾರೆ. ತಮ್ಮ ಬಳಿ 40.04 ಕೋಟಿ ರೂಪಾಯಿ ಆಸ್ತಿ ಇದ್ದು, ಪತಿ ಶಿವರಾಜ್ ಕುಮಾರ್ ಬಳಿ ಇದೆ 49 ಕೋಟಿ ರೂ. ಆಸ್ತಿ ಇದೆ. ಒಟ್ಟಾರೆ ಪತಿ-ಪತ್ನಿ ಬಳಿ 89.04 ಕೋಟಿ ರೂ. ಆಸ್ತಿ ಇರುವುದಾಗಿ ಮಾಹಿತಿ ನೀಡಿದ್ದಾರೆ.

2022-23ರಲ್ಲಿ ತಮ್ಮ ವಾರ್ಷಿಕ ಆದಾಯ 1.48 ಕೋಟಿ ರೂ. ಇದ್ದು, ಪತಿ ಆದಾಯ 2.97 ಕೋಟಿ ರೂ. ಇದೆ. ಇನ್ನು ತಮ್ಮ ಮೇಲೆ ಯಾವುದೇ ಕ್ರಿಮಿನಲ್ ಪ್ರಕರಣವಿಲ್ಲ ಅಂತ ಉಲ್ಲೇಖ ಮಾಡಿದ್ದಾರೆ. ಅದೇ ರೀತಿ
ಶಿವಣ್ಣ ಬಳಿ 22,58,338 ರೂಪಾಯಿ ಕ್ಯಾಷ್ ಇದೆ. ತಮ್ಮ ಬಳಿ 3 ಲಕ್ಷ ರೂಪಾಯಿ ಕ್ಯಾಶ್ ಇದೆ ಅಂತ ಹೇಳಿದ್ದಾರೆ.

11.54 ಕೆಜಿ ಚಿನ್ನ, 30 ಕೆಜಿ ಬೆಳ್ಳಿ!

ಗೀತಾ ಅವರ ಬಳಿ ಬರೋಬ್ಬರಿ 11.54 ಕೆಜಿ ತೂಕದ ಚಿನ್ನ ಹಾಗೂ ವಜ್ರದ ಆಭರಣಗಳಿವೆ. ಇದರ ಮೌಲ್ಯ 3.5 ಕೋಟಿ ರೂ. ಆಗಿದೆ. ಅಲ್ಲದೇ 30 ಕೆಜಿ ಬೆಳ್ಳಿ ಹೊಂದಿದ್ದಾರೆ. ಇದಲ್ಲದೇ ಗೀತಾ ಶಿವರಾಜ್ ಕುಮಾರ್ ಹಾಗೂ ಶಿವರಾಜ್ ಕುಮಾರ್ ಜಂಟಿ ಒಡೆತನದಲ್ಲಿ ಕನಕಪುರದಲ್ಲಿ 5.05 ಎಕರೆ ವಿಸ್ತೀರ್ಣದ ಕೃಷಿ ಭೂಮಿ ಹೊಂದಿದ್ದಾರೆ. ಇದರ ಮೌಲ್ಯ ಒಟ್ಟು 3 ಕೋಟಿ ರೂ. ಆಗಿದೆ. ಮಾನ್ಯತಾ ರೆಸಿಡೆನ್ಸಿಯಲ್ಲಿ ಬರೋಬ್ಬರಿ 1.48 ಎಕರೆಯಲ್ಲಿ ಜಂಟಿಯಾಗಿ ಗೀತಾ ಶಿವರಾಜ್ ಕುಮಾರ್ ಹಾಗೂ ಶಿವರಾಜ್‌ಕುಮಾರ್ ಮನೆ ಹೊಂದಿದ್ದು, ಇದರ ಮೌಲ್ಯವೇ 54 ಕೋಟಿ ರೂ. (ತಲಾ 27 ಕೊಟಿ ರೂ.) ಎಂದು ಹೇಳಿದ್ದಾರೆ.

ಇದನ್ನೂ ಓದಿ | Lok Sabha Election 2024: ಗೀತಾ ಶಿವರಾಜ್‌ ಕುಮಾರ್‌, ಸಂಯುಕ್ತಾ ಪಾಟೀಲ್‌ ಸೇರಿ ವಿವಿಧ ಕಾಂಗ್ರೆಸ್‌ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ

ಅದ್ಧೂರಿ ರೋಡ್ ಶೋ ಮೂಲಕ ದೊಡ್ಮನೆ ಸೊಸೆ ನಾಮಪತ್ರ ಸಲ್ಲಿಕೆ

ಶಿವಮೊಗ್ಗ: ನಗರದಲ್ಲಿ ಅದ್ಧೂರಿ ರೋಡ್‌ ಶೋ ನಡೆಸುವ ಮೂಲಕ ಜಿಲ್ಲಾಧಿಕಾರಿ ಹಾಗೂ ಚುನಾವಣಾಧಿಕಾರಿ ಗುರುದತ್ ಹೆಗ್ಡೆ ಅವರಿಗೆ ಕಾಂಗ್ರೆಸ್‌ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಅವರು ನಾಮಪತ್ರ ಸಲ್ಲಿಸಿದರು. ಅವರಿಗೆ ಪತಿ ಶಿವರಾಜ್ ಕುಮಾರ್, ಸಚಿವ, ಸಹೋದರ ಮಧು ಬಂಗಾರಪ್ಪ ಸಾಥ್ ನೀಡಿದರು. ಈ ವೇಳೆ ಬೇಳೂರು ಗೋಪಾಲಕೃಷ್ಣ, ಆಯನೂರು ಮಂಜುನಾಥ್, ಗೋಪಾಲ್ ಪೂಜಾರಿ ಉಪಸ್ಥಿತರಿದ್ದರು. ನಾಮ‌ಪತ್ರ ಸಲ್ಲಿಕೆ ಹಿನ್ನೆಲೆಯಲ್ಲಿ ನಗರದ ರಾಮಣ್ಣ ಶ್ರೇಷ್ಠಿ ಪಾರ್ಕ್‌ನಿಂದ ಆರಂಭವಾದ ಮೆರವಣಿಗೆ ಗಾಂಧಿ ಬಜಾರ್, ನೆಹರು ರಸ್ತೆ, ಬಾಲರಾಜ್ ರಸ್ತೆ ಮೂಲಕ ಸಾಗಿತು. ಮೆರವಣಿಗೆಯಲ್ಲಿ ಸಾವಿರಾರು ಜನ ಭಾಗಿಯಾಗಿದ್ದರು.

Exit mobile version