Site icon Vistara News

Lok Sabha Election 2024 : ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಗೀತಾ ಶಿವರಾಜಕುಮಾರ್ ಸ್ಪರ್ಧೆ?

Geetha Shivarajkumar infront of parliament new building and congress logo

ಬೆಂಗಳೂರು: ಮುಂಬರುವ ಲೋಕಸಭಾ ಚುನಾವಣೆಯನ್ನು (Lok Sabha Election 2024) ಗಂಭೀರವಾಗಿ ಪರಿಗಣಿಸಿರುವ ಕಾಂಗ್ರೆಸ್‌ ಈಗಾಗಲೇ ರಾಜ್ಯದಲ್ಲಿ 20 ಕ್ಷೇತ್ರಗಳನ್ನು ಗೆಲ್ಲುವ ಗುರಿಯನ್ನು ಇಟ್ಟುಕೊಂಡಿದೆ. ಅಲ್ಲದೆ, ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನೂ ಸಿದ್ಧಪಡಿಸಿಕೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ. ಈ ನಿಟ್ಟಿನಲ್ಲಿ ಕೆಲವು ಚರ್ಚೆಗಳೂ ನಡೆದಿವೆ. ಇದೇ ವೇಳೆ ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಸಿದ್ದರಾಮಯ್ಯ (CM Siddaramaiah) ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ (Deputy CM DK Shivakumar) ನೇತೃತ್ವದಲ್ಲಿ ನಡೆದ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರ ಸಭೆಯಲ್ಲಿ ಲೋಕಸಭಾ ಚುನಾವಣೆಯ ಅಭ್ಯರ್ಥಿಯ ಬಗ್ಗೆ ಗಂಭೀರ ಚರ್ಚೆ ನಡೆದಿದೆ. ಈ ವೇಳೆ ಮಾಜಿ ಸಿಎಂ ಸಾರೇಕೊಪ್ಪ ಬಂಗಾರಪ್ಪ (Sarekoppa Bangarappa) ಅವರ ಪುತ್ರಿ, ಸಚಿವ ಮಧು ಬಂಗಾರಪ್ಪ (Madhu Bangarappa) ಅವರ ಸಹೋದರಿ ಗೀತಾ ಶಿವರಾಜ್‌ಕುಮಾರ್‌ (Geetha Shivarajkumar) ಅವರನ್ನೇ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಬೇಕು ಎಂಬ ಮಾತುಕತೆ ನಡೆದಿದೆ ಎಂದು ತಿಳಿದು ಬಂದಿದೆ.

ಶಿವಮೊಗ್ಗ ಲೋಕಸಭಾ ಚುನಾವಣೆಗೆ ಮತ್ತೆ ಗೀತಾ ಶಿವರಾಜ್‌ಕುಮಾರ್ ಅವರು ಸ್ಪರ್ಧೆ ಮಾಡಲಿದ್ದಾರೆ ಎಂಬ ಚರ್ಚೆಗೆ ಈ ಸಭೆಯಲ್ಲಿ ನಡೆದ ವಿದ್ಯಮಾನ ಮತ್ತಷ್ಟು ಪುಷ್ಟಿ ನೀಡಿದೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಯಾರನ್ನು ಅಭ್ಯರ್ಥಿಯನ್ನಾಗಿ ಮಾಡಿದರೆ ಗೆಲ್ಲುವ ಅವಕಾಶ ಇದೆ ಎಂಬ ಬಗ್ಗೆ ಚರ್ಚೆ ನಡೆದಿದೆ. ಸಭೆಯಲ್ಲಿ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಶಾಸಕರಾದ ಸಂಗಮೇಶ್ ಮತ್ತು ಬೆಳೂರು ಗೋಪಾಲಕೃಷ್ಣ ಭಾಗಿಯಾಗಿದ್ದರು.

ಯಾರು ಯಾರ ಹೆಸರು ಪ್ರಸ್ತಾಪ?

ಶಿವಮೊಗ್ಗ ಜಿಲ್ಲೆಯ ಅಭಿವೃದ್ಧಿ ವಿಚಾರವಾಗಿ ಚರ್ಚೆ ನಡೆದ ಬಳಿಕ ಲೋಕಸಭಾ ಅಭ್ಯರ್ಥಿಗಳ ಬಗ್ಗೆ ಚರ್ಚೆ ನಡೆದಿದ್ದು, ಮುಂಬರುವ ಲೋಕಸಭಾ ಚುನಾವಣಾ ಬಗ್ಗೆ ಕ್ಷೇತ್ರದಲ್ಲಿ ಇರುವ ಟ್ರೆಂಡ್‌ ಬಗ್ಗೆ ಸಿಎಂ ಹಾಗೂ ಡಿಸಿಎಂ ಸಮ್ಮುಖದಲ್ಲಿ ಚರ್ಚೆಯಾಗಿದೆ. ಈ ವೇಳೆ ಗೀತಾ ಶಿವರಾಜ್‌ಕುಮಾರ್ ಮತ್ತು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಸೇರಿದಂತೆ ಇನ್ನೂ ಎರಡ್ಮೂರು ಹೆಸರು ಪ್ರಸ್ತಾಪವಾಗಿದೆ. ಅಂತಿಮವಾಗಿ ಜಿಲ್ಲೆಯ ನಾಯಕರೆಲ್ಲರೂ ಕುಳಿತು ಒಮ್ಮತದ ಅಭ್ಯರ್ಥಿಯನ್ನು ಪಟ್ಟಿ ಮಾಡಿಕೊಂಡು ಬನ್ನಿ ಎಂದು ಸಿಎಂ, ಡಿಸಿಎಂ ಇಬ್ಬರೂ ಸೂಚಿಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: Operation Hasta : ಬಿಜೆಪಿಯಲ್ಲಿ ಬೇಸರ ಆಗಿದೆ ಎಂದ ಎಸ್‌.ಟಿ. ಸೋಮಶೇಖರ್; 4 ದಿನದ ಡೆಡ್‌ಲೈನ್‌ ಕೊಟ್ಟರೇ?

ಗೀತಾ ಶಿವರಾಜ್‌ಕುಮಾರ್‌ಗೆ ಮಣೆ?

ಆದರೆ, ಈಗ ಜಿಲ್ಲಾ ಉಸ್ತುವಾರಿ ಸಚಿವರಾಗಿ ಮಧು ಬಂಗಾರಪ್ಪ ಇರುವುದರಿಂದ ಗೀತಾ ಶಿವರಾಜ್‌ಕುಮಾರ್‌ ಅವರನ್ನೇ ಅಭ್ಯರ್ಥಿ ಮಾಡಿದರೆ ಹೆಚ್ಚು ಅನುಕೂಲ ಎಂಬ ನಿಟ್ಟಿನಲ್ಲಿ ಚಿಂತನೆ ನಡೆದಿದೆ ಎಂದು ಹೇಳಲಾಗಿದೆ. ಜತೆಗೆ 2014ರಲ್ಲಿ ಗೀತಾ ಜೆಡಿಎಸ್‌ನಿಂದ ಸ್ಪರ್ಧೆ ಮಾಡಿದ್ದರು. ಆಗ ಬಿಜೆಪಿಯಲ್ಲಿ ಎದುರಾಳಿ ಮಾಜಿ ಸಿಎಂ ಬಿ.ಎಸ್.‌ ಯಡಿಯೂರಪ್ಪ ಆಗಿದ್ದರು. ಜತೆಗೆ ದೇಶಾದ್ಯಂತ ನರೇಂದ್ರ ಮೋದಿ ಅವರ ಅಲೆ ಇತ್ತು. ಹೀಗಾಗಿ ಯಡಿಯೂರಪ್ಪ ಅವರು 606216 ಮತಗಳನ್ನು ಪಡೆದುಕೊಂಡಿದ್ದರು. ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡಿದ್ದ ಮಂಜುನಾಥ್‌ ಭಂಡಾರಿ 242911 ಮತಗಳನ್ನು ಪಡೆದುಕೊಂಡಿದ್ದರು. ಇನ್ನು ಜೆಡಿಎಸ್‌ನಿಂದ ಸ್ಪರ್ಧೆ ಮಾಡಿದ್ದ ಗೀತಾ ಶಿವರಾಜ್‌ಕುಮಾರ್‌ 240636 ಮತಗಳನ್ನು ಪಡೆದಿದ್ದರು. ಆದರೆ, ಈಗ ಕಾಲ ಬದಲಾಗಿದೆ. ಜಿಲ್ಲೆಯಲ್ಲಿ ಜೆಡಿಎಸ್‌ಗೆ ಅಷ್ಟಾಗಿ ನೆಲೆ ಇಲ್ಲ. ಕಾಂಗ್ರೆಸ್‌ ಮತಗಳ ಸಹಿತ ಶಿವರಾಜ್‌ಕುಮಾರ್ ಅವರ ಅಭಿಮಾನಿಗಳ ಮತಗಳೂ ಒಲಿದರೆ ಗೆಲುವಿನ ದಡ ಸೇರಬಹುದು ಎಂಬ ಲೆಕ್ಕಾಚಾರವನ್ನು ಹಾಕಿಕೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ.

Exit mobile version