ಹಾಸನ: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳ ನಾಯಕರ ವಾಕ್ಸಮರ ಹೆಚ್ಚುತ್ತಿದೆ. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ (HD Devegowda), ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಹಾಗೂ ಜೆಡಿಎಸ್ ಪಕ್ಷದ ಬಗ್ಗೆ ಲಘುವಾಗಿ ಟೀಕೆ ಮಾಡಿದ್ದ ಸಿಎಂ ಸಿದ್ದರಾಮಯ್ಯ (CM Siddaramaiah) ಅವರಿಗೆ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಸ್ಟ್ರಾಂಗ್ ಡೋಸ್ ನೀಡಿದ್ದಾರೆ. ಜೆಡಿಎಸ್ ಎಲ್ಲಿದೆ ಅಂತ ಕೇಳುವಷ್ಟು ಅಹಂ ಬಂತಾ ಅವರಿಗೆ? ನಿಮ್ಮ ಕಾಂಗ್ರೆಸ್ ಎಷ್ಟು ರಾಜ್ಯದಲ್ಲಿದೆ ಎಂದು ಹೇಳುವಿರಾ? ಹೋಗಲಿ ನಿಮ್ಮ I.N.D.I.A ಒಕ್ಕೂಟದಲ್ಲಿ ಪ್ರಧಾನಿ ಅಭ್ಯರ್ಥಿಯಾಗಲು ಅರ್ಹರಾದಂತಹ ವ್ಯಕ್ತಿತ್ವವುಳ್ಳ ಒಬ್ಬರ ಹೆಸರನ್ನು ಹೇಳಿ ನೋಡೋಣ ಎಂದು ಸವಾಲು ಹಾಕಿದ್ದಾರೆ.
ಹಾಸನ ತಾಲೂಕಿನ ಮೊಸಳೆಹೊಸಳ್ಳಿ ಗ್ರಾಮದಲ್ಲಿ ಜೆಡಿಎಸ್ ಪ್ರಚಾರ ಸಭೆಯಲ್ಲಿ ಮಾತನಾಡಿದ ಎಚ್.ಡಿ. ದೇವೇಗೌಡ, ಸಿದ್ದರಾಮಯ್ಯ ಬಹಳ ಟ್ವೀಟ್ ಮಾಡಿ ಬಿಟ್ಟಿದ್ದಾರೆ. ಎಲ್ಲಿದೆ ಜೆಡಿಎಸ್ ಅಂತ ಕೇಳ್ತಾರೆ? ಎಷ್ಟು ಅಹಂ ನೋಡಿ ಅವರಿಗೆ? ಈ ಸಂತೇಮಾಳದಲ್ಲಿ ಜೆಡಿಎಸ್ ಇದೇ ಅನ್ನೋದನ್ನು ತೋರಿಸಲು ನೀವು ಇಲ್ಲಿ ಸೇರಿದ್ದೀರಿ. ತುಮಕೂರಿನಲ್ಲಿ ನನ್ನನ್ನು ಹೇಗೆ ಸೋಲಿಸಿದರು? 2019 ಮಾರ್ಚ್ 13 ರಂದು ನಾನು ಚುನಾವಣೆಗೆ ನಿಲ್ಲಲ್ಲ ಎಂದು ಹೇಳಿದ್ದೆ. ಆದರೆ. ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ, ರಾಹುಲ್‌ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಏನೆಂದರು? ನನ್ನನ್ನು ಸೋಲಿಸಿ ಅವಮಾನ ಮಾಡಬೇಕು ಅಂತ ಆಗಲೇ ತೀರ್ಮಾನಿಸಿದ್ದರು.
ಇದನ್ನೂ ಓದಿ: Lok Sabha Election 2024: ನೀವೆಂಥವರೆಂದು ಗೊತ್ತಿದ್ದೂ ಮಾತನಾಡಿಲ್ಲ, ಘನತೆಯಿಂದ ಮಾತಾಡಿ; ಲಕ್ಷ್ಮಿಗೆ ಮಂಗಳಾ ವಾರ್ನಿಂಗ್
ನಾನು ಮತ್ತೆ ಚುನಾವಣೆಗೆ ನಿಲ್ಲಲ್ಲ
ನಾನು ಮತ್ತೆ ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ ಎಂದು ನಿರ್ಧಾರ ಮಾಡಿದ್ದೆ. ಆದರೆ, ನೀವು ಆ ಕಪ್ಪುಚುಕ್ಕೆ ಇಟ್ಟಿದ್ದೀರಲ್ಲ ಸಿದ್ದರಾಮಯ್ಯ ಅವರೇ. ನನಗೆ 91 ವಯಸ್ಸು ಈಗ ಎಂಬುದನ್ನು ನೆನಪಿನಲ್ಲಿ ಇಟ್ಟುಕೊಳ್ಳಿ ಸಿದ್ದರಾಮಯ್ಯ ಅವರೇ. ನಾನು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರ ನೇತೃತ್ವದ ಎನ್‌ಡಿಎ ಮೈತ್ರಿಕೂಟವನ್ನು ಸೇರಿರುವುದು ನಿಜ. ಆದರೆ, ಅಂದು ಪ್ರಧಾನಮಂತ್ರಿ ಸ್ಥಾನದಿಂದ ಏಕೆ ನನ್ನನ್ನು ತೆಗೆದಿರಿ? ಪಿ. ಚಿದಂಬರಂ ಹೇಳುತ್ತಾರೆ. ನಮ್ಮ ಅಕೌಂಟ್ ಸೀಜ್ ಮಾಡಿದ್ದಾರೆ ನನ್ನ ಹತ್ರ ದುಡ್ಡಿಲ್ಲ ಎನ್ನುತ್ತಾರೆ. ನನ್ನ ಅನುಭವದಲ್ಲಿ ಅರವತ್ತು ವರ್ಷದ ರಾಜಕೀಯ ಜೀವನ ನೋಡಿದ್ದೇನೆ. ಇಡೀ ಬೆಂಗಳೂರು ಒಬ್ಬನ ಕೈಯಲ್ಲಿದೆ. ಬಿಡಿಎ, ಕಾರ್ಪೋರೇಷನ್, ಪ್ಲಾನಿಂಗ್ ಕಮಿಷನ್ ಒಬ್ಬನ ಕೈಯಲ್ಲಿದೆ. ಅಷ್ಟೇ ಅಲ್ಲ ಇಡೀ ನೀರಾವರಿ ಅವರ ಕೈಯಲ್ಲಿ ಇದೆ ಎಂದು ಎಚ್.ಡಿ. ದೇವೇಗೌಡ ಕಿಡಿಕಾರಿದರು.
ಕರ್ನಾಟಕದಲ್ಲಿ ಜೆಡಿಎಸ್ ಎಲ್ಲಿದೆ ಎಂದು ಕೇಳುವ ಸಿದ್ದರಾಮಯ್ಯ ಅವರೇ, ನಿಮ್ಮ ಕಾಂಗ್ರೆಸ್ ಎಲ್ಲಿದೆ? ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‌ಗಢ, ಕೇರಳ, ಆಂಧ್ರಪ್ರದೇಶದಲ್ಲಿ ಇದೆಯಾ? ಕರ್ನಾಟಕ, ತೆಲಂಗಾಣದಲ್ಲಿ ಕಾಂಗ್ರೆಸ್‌ನಲ್ಲಿ ಮಾತ್ರ ಇದೆ. ಒರಿಸ್ಸಾ, ದೆಹಲಿ, ವೆಸ್ಟ್‌ಬೆಂಗಾಲ್‌ನಲ್ಲಿ ಇದೆಯಾ ಹೇಳಿ ಎಂದು ಸಿಎಂ ಸಿದ್ದರಾಮಯ್ಯ ಅವರನ್ನು ಎಚ್.ಡಿ. ದೇವೇಗೌಡ ಪ್ರಶ್ನೆ ಮಾಡಿದರು.
ಬೆಂಗಳೂರಿನಲ್ಲಿರುವ ಸಂಪತ್ತು, ನೀರಾವರಿ ಇಲಾಖೆಯ ಹಣವನ್ನು ಎಲ್ಲ ಕಡೆ ಚುನಾವಣೆಗೆ ಖರ್ಚು ಮಾಡುತ್ತಿದ್ದಾರೆ. ರಾಜಸ್ಥಾನದಲ್ಲಿ ಎಲೆಕ್ಷನ್ ಕಮಿಷನ್ ಅವರು ಹಣ ಹಿಡಿದರು. ಅದು ಯಾವ ಹಣ ಎಂದು ಎಚ್.ಡಿ. ದೇವೇಗೌಡ ಪ್ರಶ್ನೆ ಮಾಡಿದರು.
ನಾನು ಕುಳಿತಿರಬಹುದು, ನನ್ನ ಬುದ್ಧಿ ಕೆಲಸ ಮಾಡುತ್ತೆ
ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ಹಾರ್ಟ್ ಆಪರೇಷನ್ ಆಗಿ ಮೂರೇ ದಿನಕ್ಕೆ ಬಂದರು ಎಂದು ಒಬ್ಬರು ಹೇಳುತ್ತಾರೆ. ಈ ದೇಶದಲ್ಲಿ ಎಕ್ಸ್‌ಫರ್ಟ್ಸ್ ಇದ್ದಾರೆ. ಹೊಸ ಟೆಕ್ನಾಲಜಿಗಳು ಬಂದಿವೆ. ಸುಮ್ಮನೆ ಒಬ್ಬರ ಬಗ್ಗೆ ಮಾತನಾಡುವುದಲ್ಲ. ಎಚ್.ಡಿ. ಕುಮಾರಸ್ವಾಮಿನಾ ಈ ಸಾರಿ ಮುಗಿಸುತ್ತೇವೆ ಅಂತೀರಾ? ನಾನು ಇನ್ನೂ ಬದುಕಿದ್ದೇನೆ. ಈ ಕ್ಷೇತ್ರ ಮಾತ್ರವಲ್ಲ ನಿನ್ನೆ ತುಮಕೂರಿನಲ್ಲಿ ಇದನ್ನೇ ಹೇಳಿದ್ದೇನೆ. ಈ ಗರ್ವದ ಮಾತನ್ನು ಆಡಬೇಡಿ. ಜೆಡಿಎಸ್ ತೆಗೆಯುತ್ತೇನೆ ಎಂದು ಹೇಳುತ್ತಾರೆ. ನಿನ್ನ ಮಗನನ್ನು ಗೆಲ್ಲಿಸಲು ಆಗಲಿಲ್ಲ ಈಗ ಅವನೇ ನಿಂತು ಗೆಲ್ತಾನಾ ಅಂತಾರೆ? ಅಧಿಕಾರದ ಅಹಂ ಅನ್ನು ಇಳಿಸುತ್ತೇನೆ. ನಾನು ಈಗ ಕುಳಿತಿರಬಹುದು. ಆದರೆ, ನನ್ನ ಬುದ್ಧಿ ಕೆಲಸ ಮಾಡುತ್ತದೆ. ಯಾರಿಗೂ ಜಗ್ಗಲ್ಲ, ಇವರು ಏನೇನು ಮಾಡಿದ್ದಾರೆ ಎಂಬುದನ್ನು ಒಂದೊಂದು ಎಳೆಎಳೆಯಾಗಿ ಬಿಡಿಸುತ್ತೇನೆ ಎಂದು ಎಚ್.ಡಿ. ದೇವೇಗೌಡ ಕಿಡಿಕಾರಿದರು.
ಏ.4ರಂದು ಎಲ್ಲವನ್ನೂ ಹೇಳುತ್ತೇನೆ
ಏ.4ರಂದು ಹಾಸನದಲ್ಲಿ ಅರವತ್ತು, ಎಪ್ಪತ್ತು ಸಾವಿರ ಜನ ಸೇರುತ್ತಾ. ಆ ಸಮಾವೇಶದಲ್ಲಿ ಎಲ್ಲವನ್ನೂ ಹೇಳುತ್ತೇನೆ. ಅವರು ಏ. 5ಕ್ಕೆ ಹಾಸನಕ್ಕೆ ಬರುತ್ತಾರಂತೆ ಬರಲಿ. ಲೋಕಸಭಾ ಚುನಾವಣೆ ಆದ ಮೇಲೆ ಕಾಂಗ್ರೆಸ್ ಪರಿಸ್ಥಿತಿ ಏನಾಗುತ್ತದೆ ಎಂಬುದನ್ನು ಕಾದುನೋಡೋಣ. ಈ ಬಾರಿ ಜನ ತೀರ್ಮಾನ ಮಾಡುತ್ತಾರೆ ಎಂದು ಎಚ್.ಡಿ. ದೇವೇಗೌಡ ಮಾರ್ಮಿಕವಾಗಿ ಹೇಳಿದರು.
ಹಾಸನದಲ್ಲಿ ಪ್ರಜ್ವಲ್ ರೇವಣ್ಣ ವಿರುದ್ಧ ಹೋರಾಟ ಮಾಡಲು ಮೂರು ಸಾರಿ ಬರುತ್ತಾರಂತೆ, ಬರಲಿ ಬಿಡಿ. ನನ್ನ ಜನ ಇದ್ದಾರೆ, ಮೂರು ಸಾರಿ ಬರಬೇಡಿ ಅಂತ ನಾನ್ಯೇಕೆ ಹೇಳಲಿ ಎಂದು ಎಚ್.ಡಿ. ದೇವೇಗೌಡರು ಪ್ರಶ್ನಿಸಿದರು.
ಪ್ರಧಾನಿ ಆಗುವ ವ್ಯಕ್ತಿತ್ವ ಯಾರಿಗಿದೆ?
ದೆಹಲಿಯ ರಾಮಲೀಲಾ ಮೈದಾನದಲ್ಲಿ I.N.D.I.A ಸಮಾವೇಶ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದೆ ಎಚ್.ಡಿ. ದೇವೇಗೌಡ, ಈ ಸಮಾವೇಶವನ್ನು ನಡೆಸುತ್ತಿರುವುದು ತುಂಬಾ ಸಂತೋಷ. ಯಾರು ಪ್ರಧಾನ ಮಂತ್ರಿ ಆಗುವವರು ಎಂಬುದನ್ನು ಮೊದಲು ಹೇಳಿ ನೋಡೋಣ. ಪ್ರಧಾನ ಮಂತ್ರಿ ಆಗುವವರಒಬ್ಬರ ಹೆಸರು ಹೇಳಲಿ ನೋಡೋಣ? ಒಗ್ಗಟ್ಟು ಪ್ರಶ್ನೆ ಇಲ್ಲಿ ಬರುವುದಿಲ್ಲ. ಪ್ರಧಾನ ಮಂತ್ರಿ ಆಗುವ ಆ ಪರ್ಸನಾಲಿಟಿ ಯಾರಿಗಿದೆ? ಆ ಸ್ಥಾನದಲ್ಲಿ ಕುಳಿತು ಕೆಲಸ ಮಾಡುವ ವ್ಯಕ್ತಿತ್ವ ಯಾರಿಗಿದೆ ಎಂಬುದನ್ನು ದಯಮಾಡಿ ಹೇಳಿ ಎಂದು ಸವಾಲು ಹಾಕಿದರು.
ನನ್ನ ಬಗ್ಗೆ ಇರುವ ಪುಸ್ತಕ ಓದಿ ಆ ಮೇಲೆ ಕೇಳಿ!
ನನಗೆ ಪ್ರಶ್ನೆ ಕೇಳಿ ನೀವು ಪ್ರಧಾನಿಯಾಗಿದ್ದಾಗ ಹೇಗೆ ಮ್ಯಾನೇಜ್ ಮಾಡಿದಿರಿ? ಎಂದು ಮಾಧ್ಯಮದವರನ್ನೇ ಪ್ರಶ್ನಿಸಿದ ಎಚ್.ಡಿ. ದೇವೇಗೌಡ, ಅದೆಲ್ಲ ದೈವದ ಆಜ್ಞೆ ಎಂದು ಆಕಾಶದ ಕಡೆ ಕೈ ತೋರಿದರು. ಒಂದೂ ತಪ್ಪಿಲ್ಲದೆ, ಹದಿಮೂರು ಪಾರ್ಟಿಯನ್ನು ಒಟ್ಟಿಗೆ ಸೇರಿಸಿ ಹತ್ತು ತಿಂಗಳು 21 ದಿನ ಏನು ಕೆಲಸ ಮಾಡಿದ್ದೇನೆ ಎಂಬುದನ್ನು ಪುಸ್ತಕದಲ್ಲಿ ಬರೆಯಲಾಗಿದೆ. ಅದನ್ನು ಓದಿ ಆಮೇಲೆ ನನ್ನನ್ನು ಕೇಳಿ ಎಂದು ಹೇಳಿದರು.