Site icon Vistara News

Lok Sabha Election 2024: ನನಗೆ ಕ್ಷೇತ್ರ ಪರಿಚಯ ಇಲ್ಲ, ಆದ್ರೆ ಜನರ ಪರಿಚಯ ಇದೆ: ಡಾ.ಸಿ.ಎನ್‌.ಮಂಜುನಾಥ್‌

Dr CN Manjunath

ರಾಮನಗರ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ಡಾ‌. ಸಿ.ಎನ್. ಮಂಜುನಾಥ್ ಗೆಲುವಿಗಾಗಿ ಬಿಜೆಪಿ ನಾಯಕರು ಹೈವೋಲ್ಟೇಜ್ ಸರಣಿ ಸಭೆಗಳನ್ನು ನಡೆಸುತ್ತಿದ್ದಾರೆ. ಈಗಾಗಲೇ ಐದು ವಿಧಾಸಭೆ ಕ್ಷೇತ್ರಗಳಲ್ಲಿ ಸಭೆ ಮಾಡಿರುವ ಡಾಕ್ಟರ್ ಮಂಜುನಾಥ್ ಅವರು ಸೋಮವಾರ, ಡಿಸಿಎಂ ಸ್ವಕ್ಷೇತ್ರ ಕನಕಪುರದಲ್ಲಿ ಬಿಜೆಪಿ-ಜೆಡಿಎಸ್ ಕಾರ್ಯಕರ್ತರ ಸಮ್ಮಿಲನ ಸಭೆ ನಡೆಸಿದ್ದಾರೆ.

ಬಿಜೆಪಿ ಅಭ್ಯರ್ಥಿ ಡಾ.ಮಂಜುನಾಥ್ ಮಾತನಾಡಿ, ನನಗೆ ಕ್ಷೇತ್ರ ಪರಿಚಯ ಇಲ್ಲ. ಆದ್ರೆ ಜನ ಪರಿಚಯ ಇದ್ದಾರೆ. ನಿಮ್ಮ ಋಣ ತಿರಿಸುತ್ತೇವೆ ಅಂತ ಜನರೇ ಹೇಳುತ್ತಿದ್ದಾರೆ. ಟೀಕೆ ಟಿಪ್ಪಣಿಗಳಿಗೆ ನಗುವೇ ನನ್ನ ಉತ್ತರ. ಕಾರ್ಯಕರ್ತರ ಉತ್ಸಾಹ, ಹುರುಪು ನೋಡಿದರೆ ಖುಷಿ ಆಗುತ್ತದೆ. ಎರಡೂ ಪಕ್ಷದ ಕಾರ್ಯಕರ್ತರ ಸಮ್ಮಿಲನ ಆನೆ ಬಲ ಬಂದಂತೆ ಎಂದು ಹೇಳಿದರು.

ಜನ ಶಕ್ತಿ ಮುಂದೆ ಯಾವುದೇ ಶಕ್ತಿ ನಡೆಯಲ್ಲ. ಬಿಜೆಪಿ-ಜೆಡಿಎಸ್ ಎರಡೂ ಹೃದಯಗಳು ಜೋಡಣೆ ಆಗಿವೆ. ಕನಕಪುರದಲ್ಲಿ ಬರುವ ಒಂದೊಂದು ಮತಕ್ಕೂ ಬಹಳ ಸ್ವಾಭಿಮಾನ, ಪಾವಿತ್ರ್ಯತೆ ಇದೆ. ಇಲ್ಲಿಯ ಒಂದು ಮತ ಬೇರೆ ಕ್ಷೇತ್ರದ ಮೂರು ಮತಕ್ಕೆ ಸಮಾನ. ಟೀಕೆಗಳು ಸಾಯುತ್ತವೆ, ಕೆಲಸ ಉಳಿಯುತ್ತವೆ. ನಾವು ಆರೋಗ್ಯ ಕ್ಷೇತ್ರದಲ್ಲಿ 8 ಲಕ್ಷ ಜನಕ್ಕೆ ಹೃದಯ ಶಸ್ತ್ರಚಿಕಿತ್ಸೆ ಮಾಡಿದ್ದೇವೆ ಎಂದು ಹೇಳಿದರು.

ಇದನ್ನೂ ಓದಿ | ಲೋಕಸಭೆ ಚುನಾವಣೆ ಗೆಲುವಿಗಾಗಿ ಕಾರ್ಯಕರ್ತರಿಗೆ 100 ದಿನಗಳ ಟಾಸ್ಕ್‌ ಕೊಟ್ಟ ಮೋದಿ!

ಕನಕಪುರದಲ್ಲಿ ಸಮ್ಮಿಲನ ಸಭೆ ಆತ್ಮವಿಶ್ವಾಸ ಕೊಟ್ಟಿದೆ. ಉರಿ ಬಿಸಿಲಿನಲ್ಲಿ‌ ಜನರು ಕಿಕ್ಕಿರಿದು ಜನರು ಬಂದಿದ್ದಾರೆ. ಹೀಗಾಗಿ ನಾನು ಗೆಲ್ಲುವುದು 100% ಖಚಿತವಾಗಿದೆ. ಕನಕಪುರದಲ್ಲಿ ಗಣನೀಯವಾಗಿ ಜಾಸ್ತಿ ಮತಗಳು ಬರುತ್ತವೆ.
ಕಳೆದ ಬಾರಿಗಿಂತ ಈ ಬಾರಿ ಜೆಡಿಎಸ್ ಬಿಜೆಪಿ ಹೆಚ್ಚು ಮತಗಳನ್ನು ಗಳಿಸುತ್ತದೆ ಎಂದು ತಿಳಿಸಿದರು.

ಶಾಸಕ ಮುನಿರತ್ನ ಮಾತನಾಡಿ, ರಾಜಕಾರಣಕ್ಕೆ ಬಂದರೆ ಜನಸೇವೆ ಮಾಡಬೇಕು. ಡಾ.ಮಂಜುನಾಥ್ ಬಂದಿರುವುದು ಸ್ವಾರ್ಥಕ್ಕಲ್ಲ ಜನಸೇವೆಗೆ. ಬೇರೆಯವರಿಗೆ ಓಟ್ ಹಾಕಿದರೆ ಅದು ಸ್ವಾರ್ಥಕ್ಕೆ ಹೋಗುತ್ತೆ. ಡಾ.ಮಂಜುನಾಥ್ ಅವರ ಸೇವೆ 140 ಕೋಟಿ ಜನತೆಗೆ ಬೇಕು. ಇದನ್ನು ಬರೆದಿಟ್ಟುಕೊಳ್ಳಿ, ಮೈತ್ರಿ ಸಚಿವರು ಯಾರಾದರೂ ಇದ್ದರೆ ಅದು ಡಾ.ಮಂಜುನಾಥ್, ಸೂರ್ಯ, ಚಂದ್ರ ಇರುವುದು ಎಷ್ಟು ಸತ್ಯವೋ ಮೋದಿ ಮತ್ತೊಮ್ಮೆ ಪ್ರಧಾನಿ ಆಗುವುದು ಅಷ್ಟೇ ಸತ್ಯ. ಡಾ.ಮಂಜುನಾಥ್ ಅವರು ಮೋದಿ ಸಂಪುಟದಲ್ಲಿ ಸಚಿವರಾಗೋದು ಅಷ್ಟೇ ಸತ್ಯ ಎಂದು ಹೇಳಿದರು.

ಒಂದು ತಪ್ಪು ಮತ ಹಾಕಿದರೆ ನಿಮಗೆ ಯಮ ಕಾಣಿಸುತ್ತಾನೆ: ಮುನಿರತ್ನ

ಡಾ.ಮಂಜುನಾಥ್ ಕೇಂದ್ರ ಸಚಿವರಾಗುತ್ತಾರೆ ಅಂತಲೇ ನೀವು ಮತ ಕೇಳಿ! ನೀವು ಸ್ವರ್ಗಕ್ಕೆ ಹೋಗಬೇಕು ಅಂತ ಆಸೆ ಇದ್ದರೆ ಮಂಜುನಾಥ್‌ಗೆ ಮತ ನೀಡಿ. ಒಂದು ತಪ್ಪು ಮತ ಹಾಕಿದರೆ ನಿಮಗೆ ಯಮ ಕಾಣಿಸುತ್ತಾನೆ. ಕುದಿಯೋ ಎಣ್ಣೆಗೆ ಹಾಕುತ್ತಾನೆ, ಸ್ವರ್ಗಕ್ಕೆ ಹೋದರೆ ರಂಭೆ, ಊರ್ವಸಿ, ಮೇನಕೆ ನೋಡಬಹುದು. ನರಕಕ್ಕೆ ಯಾಕೆ ಹೋಗ್ತೀರಾ? ನಾನೇ ಕಠಾರಿವೀರ ಅಂತ ಒಂದು ಸಿನಿಮಾ ಮಾಡಿದ್ದೀನಿ. ಅದರಲ್ಲಿ ನೋಡಿ ಸ್ವರ್ಗ, ನರಕ ಹೇಗಿರುತ್ತೆ ಅಂತ. ಈ ಚುನಾವಣೆ ರಾಮ-ರಾವಣರ ಯುದ್ಧ, ನಿಮಗೆ ರಾಮ ಬೇಕಾ, ರಾವಣ ಬೇಕಾ! ನಾವು ಈ ರಾಮನನ್ನು ಪಾರ್ಲಿಮೆಂಟ್‌ಗೆ ಕಳುಹಿಸಬೇಕು ಎಂದು ಮುನಿರತ್ನ ಹೇಳಿದರು.

ಬಿಜೆಪಿ ಹೃದಯದಲ್ಲಿ ಜೆಡಿಎಸ್ ಇದೆ. ಓಟು ಹಾಕುವಾಗ ಜೆಡಿಎಸ್ ಇಲ್ಲ ಅಂತ ಗೊಂದಲಕ್ಕೀಡಾಗಬೇಡಿ. ಮಂಜುನಾಥ್ ಹೃದಯದಲ್ಲಿ ಜೆಡಿಎಸ್ ಇದೆ. ಹಾಗಾಗಿ ಬಿಜೆಪಿ ಚಿಹ್ನೆಗೆ ಮತ ಹಾಕಿ ಎಂದು ಮತದಾರರನ್ನು ಕೋರಿದರು.

ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಮಾತನಾಡಿ, ಈ ಹಿಂದೆ ಡಿ.ಕೆ.ಸುರೇಶ್ ಗೆಲುವಿಗೆ ನಾನೇ ಸಹಾಯ ಮಾಡಿದ್ದೆ. ನನ್ನ ತಮ್ಮನನ್ನು ಗೆಲ್ಲಿಸಿಕೊಡಿ ಅಂತ ಡಿಕೆಶಿ ಕಾಲಿಗೆ ಬಿದ್ದಿದ್ದರು. ರಾಜಕೀಯ ವ್ಯವಸಾಯದಲ್ಲಿ ಡಿಕೆ ಬ್ರದರ್ಸ್ ಪ್ರವೀಣರು. ಪ್ರತಿ ವರ್ಷ ಆಸ್ತಿ ಹೆಚ್ಚಿಸಿಕೊಂಡು ಶ್ರೀಮಂತರಾಗ್ತಿದ್ದಾರೆ. ಚನ್ನಪಟ್ಟಣದಲ್ಲಿ ನಾವು, ಜಿಡಿಎಸ್‌ನವರು ಒಟ್ಟಾಗಿ ಕೆಲಸ ಮಾಡ್ತಿದ್ದೀವಿ. ಕನಕಪುರದಲ್ಲಿ ಕಾಂಗ್ರೆಸ್ ತೆಗೆದುಕೊಳ್ಳುವ ಲೀಡನ್ನು ನಾವು ಚನ್ನಪಟ್ಟಣದಲ್ಲಿ ತೆಗೆದುಕೊಳ್ತೀವಿ. ಉಳಿದ ಎಲ್ಲಾ ಕ್ಷೇತ್ರದಲ್ಲಿ ಬಿಜೆಪಿಗೆ ಲೀಡ್ ಸಿಗುತ್ತೆ. ಹಾಗಾಗಿ ಈ ಚುನಾವಣೆಯಲ್ಲಿ ನಮ್ಮ ಗೆಲುವು ಖಚಿತ ಎಂದು ಹೇಳಿದರು.

ರಾಮನಗರ ಶಾಸಕ ಗಂಡಸ್ತನದ ವಿಚಾರ ಚರ್ಚೆ ಮಾಡ್ತಾನೆ. ಅವನಿಗೆ ಜನ ತಕ್ಕಪಾಠ ಕಲಿಸ್ತಾರೆ. ಮೊನ್ನೆ ಶಿವಮೊಗ್ಗದಲ್ಲಿ ಡಾ.ಮಂಜುನಾಥ್ ಮೋದಿಯವರನ್ನು ಭೇಟಿ ಮಾಡಿದ್ದರು. ಆಗ ಮೋದಿಯವರು ಡಾ.ಮಂಜುನಾಥ್ ಹೆಚ್ಚಿನ ಲೀಡ್‌ನಲ್ಲಿ ಗೆಲ್ಲಿಸುವಂತೆ ಕರೆ ಕೊಟ್ಟಿದ್ದಾರೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಕೂಡ ಡಾ.ಮಂಜುನಾಥ್ ಗೆಲ್ಲಿಸಲು ಇಬ್ಬರು ಒಗ್ಗಟ್ಟಾಗಿ ಕೆಲಸ ಮಾಡುವಂತೆ ಹೇಳಿದ್ದಾರೆ. ಡಿ.ಕೆ.ಬ್ರದರ್ಸ್‌ಗೆ ಅವರ ಆಡಳಿತ ವಿರೋಧಿ ಅಲೆ ಇದೆ. ಡಿ.ಕೆ.ಸುರೇಶ್ ದೇಶ ವಿರೋಧಿ ಹೇಳಿಕೆ ನೀಡಿ ಇಬ್ಭಾಗದ ಮಾತನಾಡಿದ್ದಾರೆ. ಕನಕಪುರ ಇಬ್ಭಾಗ ಮಾಡಾಯ್ತು, ಈಗ ದೇಶ ಇಬ್ಭಾಗ ಮಾಡಲು ಹೋಗ್ತಿದ್ದಾರೆ ಎಂದು ಕಿಡಿಕಾರಿದರು.

ಸ್ಟಾಲಿನ್ ಜೊತೆ ಸೇರಿ ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿದ್ದಾರೆ. ಇವರಿಗೆ ತಕ್ಕಪಾಠ ಕಲಿಸಬೇಕು. ಚುನಾವಣೆ ಕೊನೆ ದಿನದವರೆಗೂ ನಾನು ನಿಮ್ಮ ಜೊತೆ ನಿಲ್ಲುವೆ. ನೀವು ಯಾರಿಗೂ ಹೆದರದೇ ಎಲೆಕ್ಷನ್ ಮಾಡಿ. ಇಲ್ಲಿ ಫ್ರಾಕ್ಸಿ ಮತಗಳು ಬೀಳುವ ಆತಂಕ ಇದೆ. ಫ್ಯಾರಾಮಿಲಿಟರಿ ಕರೆಸಿ ಇಲ್ಲಿ ಪಾರದರ್ಶಕ ಚುನಾವಣೆ ಮಾಡ್ತೇವೆ. ರಾಜ್ಯ ಸರ್ಕಾರ ದಿವಾಳಿ ಆಗಿದೆ. ಈ ಎಲೆಕ್ಷನ್ ಮುಗಿದ ಮೇಲೆ ಗ್ಯಾರಂಟಿಗಳು ನಿಲ್ಲುತ್ತವೆ. ಸರ್ಕಾರದಲ್ಲಿ ಹಣ ಇಲ್ಲ ಎಂಬುದು ಗೊತ್ತಾಗ್ತಿದೆ.. ಕಾಂಗ್ರೆಸ್ ನಾಯಕರು ಸರ್ಕಾರದ ಖಜಾನೆ ಖಾಲಿ ಮಾಡಿದ್ದಾರೆ. ಹಾಗಾಗಿ ಇದನ್ನು ಜನ ಗಮನದಲ್ಲಿಟ್ಟುಕೊಂಡು ಮತಹಾಕಬೇಕು ಎಂದು ಹೇಳಿದರು.

ಇದನ್ನೂ ಓದಿ | PM Narendra Modi: ಮೋದಿ ಯುವ ಪಡೆಯ ಕಪಾಳಕ್ಕೆ ಹೊಡೆಯುವ ಶಕ್ತಿ ‘ಕೈ’ಗಿದೆಯೇ? ಪ್ರಲ್ಹಾದ್‌ ಜೋಶಿ ಪ್ರಶ್ನೆ

ಕಾಂಗ್ರೆಸ್ ಅಭ್ಯರ್ಥಿ ಹೇಗೆ 8 ಕ್ಷೇತ್ರಕ್ಕೂ ಹೋಗಬೇಕೋ. ಹಾಗೇ ನಾವು ಕನಕಪುರಕ್ಕೂ ಬಂದಿದ್ದೇವೆ. ಕನಕಪುರಕ್ಕೆ ಬರೋಕೆ ಯಾವ ಲೈಸೆನ್ಸ್ ತೆಗೆದುಕೊಂಡು ಬರಬೇಕಾಗಿಲ್ಲ. ಕನಕಪುರಕ್ಕೆ ಬಂದಾಗ ಸಣ್ಣಪುಟ್ಟ ವ್ಯತ್ಯಾಸವಾದರೆ, ಅವರು 8 ಕ್ಷೇತ್ರಕ್ಕೂ ಬರ್ತಾರಲ್ಲ. ರಾಮನಗರ ಜಿಲ್ಲೆ ಚುನಾವಣೆ ಪಾರದರ್ಶಕವಾಗಿ ನಡೆಯಲು ಒಳ್ಳೆಯ ವೇದಿಕೆ. ನಾವು ಪಾರದರ್ಶಕವಾಗಿ ಚುನಾವಣೆ ನಡೆಸುತ್ತೇವೆ. ಕನಕಪುರದಲ್ಲಿ ಸಾರ್ವಜನಿಕರು ಆಚೆ ಬಂದಿದ್ದಾರೆ, ನಾವಲ್ಲ. ಇಲ್ಲಿ ಯಾವ ಕಾರ್ಯಕರ್ತರಿಗೂ ದುಡ್ಡು‌ಕೊಟ್ಟು ಕರೆಸಿಲ್ಲ. ಕಾಂಗ್ರೆಸ್‌ನವರ ರೀತಿ ಸೀರೆ, ಪಂಚೆ ಕೊಟ್ಟು‌ ನಾವು ಯಾರನ್ನೂ ಕರೆದುಕೊಂಡು‌ ಬಂದಿಲ್ಲ. ಇಲ್ಲಿಗೆ ಬಂದವರು ಪ್ರಾಮಾಣಿಕೆ ಬಿಜೆಪಿ- ಜೆಡಿಎಸ್ ಕಾರ್ಯಕರ್ತರು ಎಂದರು ಹೇಳಿದರು.


Exit mobile version