ಬಳ್ಳಾರಿ: ಲೋಕಸಭಾ ಚುನಾವಣಾ (Lok Sabha Election 2024) ಕಣ ದಿನೇ ದಿನೆ ರಂಗೇರುತ್ತಿದೆ. ಎಲ್ಲ ಕಡೆ ನಾಮಪತ್ರ ಸಲ್ಲಿಕೆ ಭರಾಟೆ, ಅಬ್ಬರದ ಪ್ರಚಾರ ಸೇರಿದಂತೆ ವಿವಿಧ ರಾಜಕೀಯ ಚಟುವಟಿಕೆ ನಡೆಯುತ್ತಿವೆ. ಈ ನಡುವೆ ಇತ್ತೀಚೆಗಷ್ಟೇ ಮಾಜಿ ಸಚಿವ ಜನಾರ್ದನ ರೆಡ್ಡಿ (Janardhana Reddy) ಅವರ ಕಲ್ಯಾಣ ರಾಜ್ಯ ಪ್ರಗತಿ ಪಕ್ಷವು (ಕೆಆರ್‌ಪಿಪಿ) ಬಿಜೆಪಿಯಲ್ಲಿ ವಿಲೀನವಾಗಿದೆ. ಈಗ ಬಳ್ಳಾರಿಯಲ್ಲಿ ರಾಜಕೀಯ ಬೆಳವಣಿಗೆ ಬಿರುಸುಗೊಂಡಿದೆ. ಬರೋಬ್ಬರಿ ಹದಿಮೂರು ವರ್ಷದ ಬಳಿಕ ಬಳ್ಳಾರಿ ಜಿಲ್ಲಾ ಬಿಜೆಪಿ ಕಚೇರಿಗೆ ಜನಾರ್ದನ ರೆಡ್ಡಿ ಪತ್ನಿ ಲಕ್ಷ್ಮೀ ಅರುಣಾ (Lakshmi Aruna) ಕಾಲಿಟ್ಟಿದ್ದಾರೆ. ಅವರು ಬಿಜೆಪಿ ಕಚೇರಿಗೆ ರೇಂಜ್ ರೋವರ್ ಕಾರಿನಲ್ಲಿ ಗ್ರಾಂಡ್ ಎಂಟ್ರಿ ಕೊಟ್ಟಿದ್ದಾರೆ.
101 ಕಾರುಗಳಲ್ಲಿ ಅಪಾರ ಬೆಂಬಲಿಗರೊಂದಿಗೆ ಬಿಜೆಪಿ ಕಚೇರಿಗೆ ಬಂದ ಜನಾರ್ದನ ರೆಡ್ಡಿ ಪತ್ನಿ ಲಕ್ಷ್ಮೀ ಅರುಣಾ ಅವರಿಗೆ ಬಿಜೆಪಿ ಕಚೇರಿಯಲ್ಲಿ ಮಹಿಳಾ ಮೋರ್ಚಾದಿಂದ ಅದ್ಧೂರಿ ಸ್ವಾಗತ ಸಿಕ್ಕಿದೆ. ಒಂಬತ್ತು ಆರತಿಗಳನ್ನು ಬೆಳಗಿ ಬಿಜೆಪಿ ಕಚೇರಿಗೆ ಸ್ವಾಗತಿಸಲಾಯಿತು.
ಬಳಿಕ ಬಿಜೆಪಿ ಜಿಲ್ಲಾಧ್ಯಕ್ಷ ಅನಿಲ್ ನಾಯ್ಡು, ಗೋನಾಳ್ ರಾಜಶೇಖರ್ ಗೌಡ, ಇತರ ನಾಯಕರ ಜತೆ ಈ ವೇಳೆ ಅರುಣಾ ಸಭೆ ನಡೆಸಿದ್ದಾರೆ. ಜನಾರ್ದನ ರೆಡ್ಡಿ ಪತ್ನಿ ಲಕ್ಷ್ಮೀ ಅರುಣಾ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಬಿಜೆಪಿಯನ್ನು ಹಿಂದಿಕ್ಕಿ ಎರಡನೇ ಸ್ಥಾನಕ್ಕೆ ಬರುವ ಮೂಲಕ ಬಿಜೆಪಿ ಸೋಲಿಗೆ ಕಾರಣವಾಗಿದ್ದರು. ಈಗ ಅವರ ಆಗಮನದಿಂದ ಬಿಜೆಪಿಗೆ ಬಲ ಬಂದಂತೆ ಆಗಿದೆ.
ಲೋಕಸಭೆ ಚುನಾವಣೆಯಲ್ಲಿ (Lok Sabha Election 2024) ಬಿಜೆಪಿಗೆ ಪ್ಲಸ್
ಒಂದು ವೇಳೆ ಜನಾರ್ದನ ರೆಡ್ಡಿ ಅವರು ಬಿಜೆಪಿ ಸೇರ್ಪಡೆಯಾಗಿರುವುದು ಈ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಪ್ಲಸ್ ಆಗಲಿದೆ. ಕಾರಣ, ಅವರಿಗೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಒಳ್ಳೆಯ ಹಿಡಿತವಿದೆ. ಅಲ್ಲದೆ, ಕಳೆದ ಚುನಾವಣೆಯಲ್ಲಿ ಕೆಲವು ಕ್ಷೇತ್ರಗಳಲ್ಲಿ ಕೆಆರ್‌ಪಿಪಿಯಿಂದ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದ್ದರಿಂದ ಬಿಜೆಪಿ ಅಭ್ಯರ್ಥಿಗಳು ಸೋತಿದ್ದರು. ಈಗ ಅವರು ಜತೆಯಾಗಿದ್ದರಿಂದ ಸುತ್ತಮುತ್ತಲ ಕೆಲವು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಗೆಲುವಿಗೆ ಸಹಕಾರಿಯಾಗಲಿದೆ ಎಂದು ಹೇಳಲಾಗುತ್ತಿದೆ.
ಅಮಿತ್ ಶಾ ಭೇಟಿ ಮಾಡಿದ್ದ ರೆಡ್ಡಿ
ಇದೇ ಮಾರ್ಚ್ 14ರಂದು ಗೃಹ ಸಚಿವ ಅಮಿತ್ ಶಾ ಅವರನ್ನು ಮಾಜಿ ಸಚಿವ ಜನಾರ್ದನ ರೆಡ್ಡಿ ಭೇಟಿ ಮಾಡಿದ್ದರು. ಇದು ಕುತೂಹಲಕ್ಕೆ ಕಾರಣವಾಗಿದೆ. ಈ ಚುನಾವಣೆಯಲ್ಲಿ ಅವರು ಬಿಜೆಪಿಯನ್ನು ಬೆಂಬಲಿಸಲಿದ್ದಾರಾ? ಎಂಬ ಪ್ರಶ್ನೆ ಮೂಡಿತ್ತು. ಈಗ ಇದಕ್ಕೆ ಉತ್ತರ ಸಿಗುವ ಕಾಲ ಸನ್ನಿಹಿತವಾಗಿದೆ.
ರೆಡ್ಡಿಯನ್ನು ಬಿಜೆಪಿ ದೂರ ಇಟ್ಟಿದ್ದು ಏಕೆ?
ಜನಾರ್ದನ ರೆಡ್ಡಿ ಅವರು ಬಿಜೆಪಿಯ ಹಳೇ ಕಲಿ. ಆದರೆ, ಬದಲಾದ ಸನ್ನಿವೇಶದಲ್ಲಿ ಅವರು ಸಚಿವರಾಗಿದ್ದಾಗಲೇ ಜೈಲು ಸೇರಬೇಕಾದ ಪರಿಸ್ಥಿತಿ ಬಂದೊದಗಿತು. ಅಲ್ಲದೆ, ಅಕ್ರಮ ಗಣಿಗಾರಿಕೆ (Illegal mining) ಪ್ರಕರಣದಲ್ಲಿ ವರ್ಷ ಕಾಲ ಜೈಲುವಾಸವನ್ನು ಅನುಭವಿಸಿದ್ದರು. ಅಲ್ಲದೆ, 2013ರ ವಿಧಾನಸಭಾ ಚುನಾವಣೆ ವೇಳೆ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಬೆಂಗಳೂರಿನಿಂದ ಬಳ್ಳಾರಿಗೆ ಪಾದಯಾತ್ರೆ ಮಾಡುವ ಮೂಲಕ ಜನಾಭಿಪ್ರಾಯವನ್ನು ಸಂಗ್ರಹ ಮಾಡಲಾಗಿತ್ತು. ಆಗ ಸಿದ್ದರಾಮಯ್ಯ ಅವರು “ರಿಪಬ್ಲಿಕ್ ಆಫ್ ಬಳ್ಳಾರಿ” ಎಂದು ಕರೆದಿದ್ದಲ್ಲದೆ, ರೆಡ್ಡಿ ಸಹೋದರರ ವಿರುದ್ಧ ತೊಡೆ ತಟ್ಟಿದ್ದರು. ಬಳಿಕ ಆ ಚುನಾವಣೆಯಲ್ಲಿ ಸಿದ್ದರಾಮಯ್ಯ ಸರ್ಕಾರ ಅಸ್ತಿತ್ವಕ್ಕೆ ಬಂದಿತ್ತು. ಹೀಗಾಗಿ ಬಿಜೆಪಿ ಅವರನ್ನು ತುಸು ದೂರವೇ ಇಟ್ಟಿತ್ತು.
ಕಳೆದ ಚುನಾವಣೆಯಲ್ಲಿ ಜನಾರ್ದನ ರೆಡ್ಡಿ ಅವರಿಗೆ ಬಿಜೆಪಿಯಿಂದ ಸ್ಪರ್ಧೆ ಮಾಡಬೇಕೆಂಬ ಆಸೆ ಇತ್ತಾದರೂ ಬಿಜೆಪಿ ಅವರನ್ನು ಸೇರಿಸಿಕೊಳ್ಳಲಿಲ್ಲ. ಹೀಗಾಗಿ ಅವರು ಕಲ್ಯಾಣ ರಾಜ್ಯ ಪ್ರಗತಿ ಪಕ್ಷವನ್ನು ಕಟ್ಟಿದರು. ಈ ಪಕ್ಷದಿಂದ ತಾವೊಬ್ಬರೇ ಗೆದ್ದರೂ ಹಲವು ಕಡೆ ಬಿಜೆಪಿಯ ಅಭ್ಯರ್ಥಿಗಳನ್ನು ಸೋಲಿಸುವಲ್ಲಿ ಯಶಸ್ವಿಯಾಗಿದ್ದರು. ಇದು ಬಿಜೆಪಿಗೆ ದೊಡ್ಡ ಮಟ್ಟದ ಹೊಡೆತವನ್ನೇ ಕೊಟ್ಟಿತ್ತು. ಅಲ್ಲದೆ, ಈಚೆಗೆ ನಡೆದ ರಾಜ್ಯಸಭಾ ಚುನಾವಣೆಯಲ್ಲಿಯೂ ರೆಡಿ ಬಿಜೆಪಿಯನ್ನು ಬೆಂಬಲಿಸಲು ತಯಾರಾಗಿದ್ದರು. ಆದರೆ, ಬಿಜೆಪಿ ಹೈಕಮಾಂಡ್ ಒಲವು ತೋರದ ಕಾರಣ ಅವರು ಕಾಂಗ್ರೆಸ್ ಬೆಂಬಲಕ್ಕೆ ನಿಂತಿದ್ದರು. ಆದರೆ, ಅದಾದ ಬಳಿಕ ಅಮಿತ್ ಶಾ ಅವರು ರೆಡ್ಡಿಯನ್ನು ಕರೆಸಿಕೊಂಡು ಮಾತನಾಡಿದ್ದರು. ಅದಾದ ಬಳಿಕ ರೆಡ್ಡಿ ಸುದ್ದಿಗೋಷ್ಠಿ ನಡೆಸಿ ಬಿಜೆಪಿಯಲ್ಲಿ ತಮ್ಮ ಪಕ್ಷವನ್ನು ವಿಲೀನ ಮಾಡುತ್ತಿರುವುದಾಗಿ ಘೋಷಿಸಿದ್ದರು.
ಇದನ್ನೂ ಓದಿ: Lok Sabha Election 2024: ಡಿ.ಕೆ. ಸುರೇಶ್ ಮಣಿಸಲು ಬಿಜೆಪಿ ಹೈಕಮಾಂಡ್ ಪ್ಲ್ಯಾನ್; ಟಾರ್ಗೆಟ್ ಡಿಕೆಶಿ!
ಈಗ ಕಾಂಗ್ರೆಸ್ ದೂರುವ ಹಾಗೂ ಇಲ್ಲ!
ಈಗ ಜನಾರ್ದನ ರೆಡ್ಡಿ ಅವರು ಬಿಜೆಪಿ ಸೇರ್ಪಡೆಯಾಗಿದ್ದಾರೆ. ಆದರೆ, ಕಾಂಗ್ರೆಸ್ ಈಗ ದೂರುವ ಅವಕಾಶವನ್ನು ಕೈಚೆಲ್ಲಿ ಕುಳಿತಿದೆ. ರೆಡ್ಡಿ ಜೈಲಿನಿಂದ ಬಂದವರು, ಅಕ್ರಮ ಗಣಿಗಾರಿಕೆ ಆರೋಪ ಹೊತ್ತವರು. ಇಂಥವರನ್ನು ಬಿಜೆಪಿ ಪೋಷಿಸುತ್ತಿದೆ ಎಂದು ಈ ಹಿಂದೆ ಕಾಂಗ್ರೆಸ್ ಆರೋಪ ಮಾಡಿತ್ತು. ಆದರೆ, ಈಚೆಗೆ ನಡೆದಿದ್ದ ರಾಜ್ಯಸಭೆ ಚುನಾವಣೆಯಲ್ಲಿ ಜನಾರ್ದನ ರೆಡ್ಡಿ ಬೆಂಬಲವನ್ನು ಕಾಂಗ್ರೆಸ್ ಪಡೆದುಕೊಂಡಿತ್ತು. ಸ್ವತಃ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ರೆಡ್ಡಿ ಭೇಟಿಯಾಗಿ ಚರ್ಚೆ ನಡೆಸಿದ್ದರು. ಬಳಿಕ ತಮ್ಮ ಬೆಂಬಲವನ್ನು ಕಾಂಗ್ರೆಸ್‌ಗೆ ನೀಡಿದ್ದರು. ಹೀಗಾಗಿ ಈಗ ರೆಡ್ಡಿ ಬಿಜೆಪಿ ಸೇರ್ಪಡೆ ಬಗ್ಗೆ ಕಾಂಗ್ರೆಸ್‌ಗೆ ಆರೋಪ ಮಾಡಲು ವಿಷಯ ಇಲ್ಲದಂತಾಗಿದೆ.