Site icon Vistara News

Lok Sabha Election 2024: ಜೆಡಿಎಸ್ ಪಟ್ಟಿ ಬಿಡುಗಡೆ; ಮಂಡ್ಯದಿಂದ ಎಚ್‌ಡಿಕೆ, ಕೋಲಾರ, ಹಾಸನಕ್ಕೆ ಯಾರು?

Lok Sabha Election 2024

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ (Lok Sabha Election 2024) ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್‌ನಿಂದ ಮೂರು ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು (JDS candidates list) ಅಂತಿಮಗೊಂಡಿದ್ದು, ಅಭ್ಯರ್ಥಿಗಳ ಅಧಿಕೃತ ಪಟ್ಟಿ ಶುಕ್ರವಾರ ಬಿಡುಗಡೆಯಾಗಿದೆ. ಮಂಡ್ಯದಿಂದ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ, ಕೋಲಾರ ಕ್ಷೇತ್ರದಿಂದ ಮಲ್ಲೇಶ್ ಬಾಬು ಹಾಗೂ ಹಾಸನದಿಂದ ಪ್ರಜ್ವಲ್ ರೇವಣ್ಣ ಸ್ಪರ್ಧೆ ಮಾಡಲಿದ್ದಾರೆ.

ರಾಜ್ಯ ಜೆಡಿಎಸ್‌ನಿಂದ ಸಾಮಾಜಿಕ ಜಾಲತಾಣದಲ್ಲಿ ಜೆಡಿಎಸ್‌ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗಿದೆ. ಇತ್ತೀಚೆಗೆ ನಡೆದ ಜೆಡಿಎಸ್‌ ಕೋರ್‌ ಕಮಿಟಿ ಸಭೆಯಲ್ಲಿ ಅಭ್ಯರ್ಥಿಗಳನ್ನು ಅಂತಿಮ ಮಾಡಲಾಗಿದೆ. ಆದರೆ, ಕಾರಣಾಂತರಗಳಿಂದ ಪಟ್ಟಿ ಘೋಷಣೆ ಮುಂದೂಡಿಕೆಯಾಗಿತ್ತು. ಇದೀಗ ಮಾಜಿ ಸಿಎಂ ಎಚ್‌ಡಿಕೆ ಅವರು, ಜೆಡಿಎಸ್‌ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡುವ ಮೂಲಕ ಕಾರ್ಯಕರ್ತರ ಕುತೂಹಲಕ್ಕೆ ತೆರೆ ಎಳೆದಿದ್ದಾರೆ.

Lok Sabha Election 2024

ನಿರೀಕ್ಷೆಯಂತೆ ಹಾಸನದಿಂದ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಸ್ಪರ್ಧಿಸುತ್ತಿದ್ದು, ಹಾಸನದಲ್ಲಿ ಹಾಲಿ ಸಂಸದ ಪ್ರಜ್ವಲ್‌ ರೇವಣ್ಣಗೆ ಟಿಕೆಟ್‌ ನೀಡಲಾಗಿದೆ. ಇನ್ನು ಕೋಲಾರದಲ್ಲಿ ಮಲ್ಲೇಶ್‌ ಬಾಬುಗೆ ಟಿಕೆಟ್‌ ನೀಡಿರುವುದು ಕಂಡುಬಂದಿದೆ.

ಕೋಲಾರ ಕ್ಷೇತ್ರದಲ್ಲಿ ಮುಳಬಾಗಿಲು ಶಾಸಕ ಸಮೃದ್ಧಿ ಮಂಜುನಾಥ, ಬಂಗಾರಪೇಟೆ ವಿಧಾನಸಭೆ ಚುನಾವಣೆಯ ಪರಾಜಿತ ಅಭ್ಯರ್ಥಿ ಮಲ್ಲೇಶ್ ಬಾಬು, ದೇವನಹಳ್ಳಿ ಮಾಜಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಪ್ರಬಲ ಆಕಾಂಕ್ಷಿಗಳಾಗಿದ್ದರು. ಈ ಪೈಕಿ ಸಮೃದ್ಧಿ ಮಂಜುನಾಥ್ ಹೆಸರು ಮುಂಚೂಣಿಯಲ್ಲಿತ್ತು. ಆದರೆ, ಅಂತಿಮವಾಗಿ ಮಲ್ಲೇಶ್ ಬಾಬು ಅವರಿಗೆ ಪಕ್ಷ ಮಣೆ ಹಾಕಿದೆ.

ಇದನ್ನೂ ಓದಿ | Lok Sabha Election 2024: ಅನುಮಾನ ಬೇಡ, ಮೋದಿ ಮತ್ತೊಮ್ಮೆ ಪ್ರಧಾನಿಯಾಗ್ತಾರೆ: ಸಾಹಿತಿ ಎಸ್.ಎಲ್. ಭೈರಪ್ಪ

ಪಕ್ಷದ ಉಳಿವಿಗಾಗಿ ನನ್ನ ತೀರ್ಮಾನ: ಎಚ್‌.ಡಿ. ಕುಮಾರಸ್ವಾಮಿ

ಇತ್ತೀಚೆಗೆ ಜೆಡಿಎಸ್‌ ಕೋರ್‌ ಕಮಿಟಿ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಎಚ್.ಡಿ. ಕುಮಾರಸ್ವಾಮಿ, ನಾನು ಮಂಡ್ಯದಿಂದ ಅನಿವಾರ್ಯವಾಗಿ ಕಣಕ್ಕಿಳಿಯುವ ಬಗ್ಗೆ ಚನ್ನಪಟ್ಟಣ ಜನತೆಗೆ ಮನವರಿಕೆ ಮಾಡಿಕೊಟ್ಟಿದ್ದೇನೆ. ಇದಕ್ಕೆ ಚನ್ನಪಟ್ಟಣ ಮುಖಂಡರು ಸಹಮತವನ್ನು ವ್ಯಕ್ತಪಡಿಸಿದ್ದಾರೆ. ನಾವು ಇವತ್ತು ನೆಲ‌ಕಚ್ಚಿದ್ದೇವೆ, ಮತ್ತೆ ಪುಟಿದೇಳಬೇಕು. ನಮ್ಮಲ್ಲಿ ಲೋಪದೋಷಗಳಿದ್ದು, ಅದನ್ನು ಸರಿಪಡಿಸಿಕೊಳ್ಳುತ್ತೇವೆ. ನನ್ನ ಪಕ್ಷದ ಭವಿಷ್ಯ, ಪಕ್ಷದ ಹೃದಯ ಭಾಗ ಮಂಡ್ಯದ ಜನರ ಅಪೇಕ್ಷೆಯಂತೆ ಪಕ್ಷವನ್ನು ಗಟ್ಟಿಗೊಳಿಸಲು ಮಂಡ್ಯದಿಂದ ಸ್ಪರ್ಧಿಸುವ ತೀರ್ಮಾನ ಮಾಡಿದ್ದೇನೆ ಎಂದು ಹೇಳಿದ್ದರು.

ಕರ್ನಾಟಕ ಲೋಕಸಭಾ ಕ್ಷೇತ್ರಗಳಲ್ಲಿ 28ಕ್ಕೆ 28 ಕ್ಷೇತ್ರಗಳನ್ನು ಗೆಲ್ಲಿಸಿಕೊಂಡು ಬರಬೇಕು ಎಂಬ ಗುರಿಯನ್ನು ಹಾಕಿಕೊಂಡಿದ್ದೇವೆ. ಮಂಡ್ಯ ಜಿಲ್ಲೆಯ ಕಾರ್ಯಕರ್ತರ ತೀರ್ಮಾನಕ್ಕೆ ಗೌರವ ಕೊಡುವುದು ನಮ್ಮ ಕರ್ತವ್ಯವಾಗಿದೆ. ನಿಖಿಲ್‌ ಕುಮಾರಸ್ವಾಮಿ ಸ್ಪರ್ಧೆಗೆ ಒತ್ತಾಯ ಮಾಡಲಾಗಿತ್ತು. ಆದರೆ, ಅವರು ಸ್ಪರ್ಧೆಗೆ ನಿರಾಕರಿಸಿದ್ದಾರೆ. ನಾನು ಈಗಾಗಲೇ ನೋವು ತಿಂದಿದ್ದೇನೆ. ಹೀಗಾಗಿ ಸ್ಪರ್ಧೆ ಮಾಡುವುದಿಲ್ಲ ಎಂದು ಹೇಳಿದ್ದಾರೆ. ನನಗೆ ಸಿ.ಎಸ್. ಪುಟ್ಟರಾಜು ಅಥವಾ ನಿಖಿಲ್‌ರನ್ನು ಕಣಕ್ಕಿಳಿಸಬೇಕು ಎಂಬ ಆಸೆ ಇತ್ತು. ಆದರೆ, ಅವರು ಅವರು ಸ್ಪರ್ಧೆ ಸಾಧ್ಯವಿಲ್ಲ ಎಂದು ಕಠಿಣ ನಿರ್ಣಯ ಮಾಡಿಕೊಂಡಿದ್ದಾರೆ. ಆ ಜಿಲ್ಲೆಯ ಜನರ ಋಣವನ್ನು ತೀರಿಸಬೇಕು. ಇಡೀ ನಾಡೇ ನನ್ನ ಕರ್ಮ ಭೂಮಿಯಾಗಿದೆ. ಹಾಗಂತ ರಾಮನಗರ ಬಿಟ್ಟು ನಾನು ಹೋಗುವುದಿಲ್ಲ. ಈ ಪಕ್ಷದ ಉಳಿವಿಗಾಗಿ ಒಂದು ತೀರ್ಮಾನವನ್ನು ಕೈಗೊಳ್ಳಬೇಕಾಗಿತ್ತು ಎಂದು ಎಚ್.ಡಿ. ಕುಮಾರಸ್ವಾಮಿ ತಿಳಿಸಿದ್ದರು.

Exit mobile version