Site icon Vistara News

Lok sabha Election 2024 : ಲೋಕಸಭೆಗೆ ನಮ್ಮದು ಸ್ವತಂತ್ರ ಸ್ಪರ್ಧೆ; ಆದರೆ… ಎಂದ ಎಚ್‌.ಡಿ. ದೇವೇಗೌಡ!

HD Devegowda and HD Kumaraswamy

ಬೆಂಗಳೂರು: ಮುಂದಿನ ವರ್ಷ ನಡೆಯುಲಿರುವ ಲೋಕಸಭಾ ಚುನಾವಣೆಯಲ್ಲಿ (Lok sabha Election 2024) ನಮ್ಮದು ಸ್ವತಂತ್ರ ಸ್ಪರ್ಧೆ. ನಾವು ಎಷ್ಟು ಸೀಟು ಗೆಲ್ಲುತ್ತೇವೋ? ಬಿಡುತ್ತೇವೋ? ಗೊತ್ತಿಲ್ಲ. ಸ್ಪರ್ಧೆಯನ್ನಂತೂ ಮಾಡುತ್ತೇವೆ. ಇನ್ನು ಮೈತ್ರಿ ವಿಚಾರಕ್ಕೆ ಬಹಳವೇ ಸಮಯ ಇದೆ. ಚುನಾವಣೆ ವೇಳೆ ಪರಿಸ್ಥಿತಿ ನೋಡಿಕೊಂಡು ಬೇಕಿದ್ದರೆ ನಿರ್ಧಾರವನ್ನು ಮಾಡೋಣ ಎಂದು ಮಾಜಿ ಪ್ರಧಾನಿ, ಜೆಡಿಎಸ್‌ ವರಿಷ್ಠ ಎಚ್.ಡಿ. ದೇವೇಗೌಡ (HD Devegowda) ಹೇಳಿದರು.

ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಕರ್ನಾಟಕದಲ್ಲಿ 28 ಲೋಕಸಭಾ ಕ್ಷೇತ್ರಗಳಿವೆ. ಯಾವ ಕ್ಷೇತ್ರದಲ್ಲಿ ನಮಗೆ ಎಲ್ಲಿ ಶಕ್ತಿ ಇದೆ ಎಂಬುದು ನಮಗೆ ಗೊತ್ತಿದೆ. ಅಲ್ಲಿ ಎಲ್ಲ ಕಡೆ ನಮ್ಮ ಸ್ಪರ್ಧೆ ನಡೆಯಲಿದೆ. ನಮ್ಮ ಸೋತ ಅಭ್ಯರ್ಥಿಗಳ ಜತೆಯೂ ಚರ್ಚೆ ಮಾಡುತ್ತೇವೆ. ಅಭ್ಯರ್ಥಿ ಯಾರಿದ್ದಾರೆ ಎಂಬುದನ್ನು ನೋಡಿ ಯಾರನ್ನು ಕಣಕ್ಕೆ ಇಳಿಸಬೇಕು ಎಂಬುದನ್ನು ತೀರ್ಮಾನ ಮಾಡುತ್ತೇವೆ ಎಂದು ಹೇಳಿದರು.

ಇದನ್ನೂ ಓದಿ: HD Devegowda : ಬಿಜೆಪಿಗೆ ಯತ್ನಾಳ್‌ ವಿಪಕ್ಷ ನಾಯಕ, ಸಿ.ಟಿ. ರವಿ ರಾಜ್ಯಾಧ್ಯಕ್ಷ; ಘೋಷಣೆ ಮಾಡಿದವರು ಎಚ್‌.ಡಿ ದೇವೇಗೌಡ!

ಬಿಜೆಪಿ ಜತೆ ಹೊಂದಾಣಿಕೆ ಇಲ್ಲ

ಸದನದಲ್ಲಿ ಬಿಜೆಪಿ-ಜೆಡಿಎಸ್ ಒಟ್ಟಿಗೆ ಹೋಗುತ್ತಿರುವ ವಿಚಾರದ ಬಗ್ಗೆ ಮಾತನಾಡಿದ ಎಚ್.ಡಿ. ದೇವೇಗೌಡ, ಅಧಿಕೃತ ವಿರೋಧ ಪಕ್ಷ ಬಿಜೆಪಿ. ನಮ್ಮದು ಅನಧಿಕೃತ ವಿಪಕ್ಷವಾಗಿದೆ. ಎಚ್.ಡಿ. ಕುಮಾರಸ್ವಾಮಿ (HD Kumaraswamy) ಅವರು ಬಿಜೆಪಿ ಜತೆಗೆ ಹೋಗಿಲ್ಲ. ವಿರೋಧಿ ವಿಚಾರ ಬಂದಾಗ ಹೋರಾಟ ನಡೆಯುತ್ತದೆ. ಕಾಂಗ್ರೆಸ್ ಇದ್ದಾಗಲೂ ಈ ಹೋರಾಟ ನಡೆದಿದೆ. ಬಿಜೆಪಿ ಇದ್ದಾಗಲೂ ನಡೆಯುತ್ತಿದೆ. ಕಾಂಗ್ರೆಸ್ ವಿಪಕ್ಷ ಇದ್ದಾಗಲೂ ಒಟ್ಟಿಗೆ ವಿರೋಧ ಮಾಡಿದ್ದೇವೆ. ಇದರಲ್ಲಿ ಹೊಂದಾಣಿಕೆ ಎಂಬ ಪದವನ್ನು ಬಳಸುವುದು ಬೇಡ ಎಂದು ಹೇಳಿದರು.

1983ರಿಂದ ಇಲ್ಲಿಯವರೆಗೂ ಜೆಡಿಎಸ್ ಇದೆ. ನಾನು ಮುಖ್ಯಮಂತ್ರಿ, ಪ್ರಧಾನಿ ಆದೆನು. ಎಚ್.ಡಿ. ಕುಮಾರಸ್ವಾಮಿ ಸೇರಿದಂತೆ ಅನೇಕರು ಸಿಎಂ ಆಗಿದ್ದಾರೆ. ಈ ಪಕ್ಷವನ್ನು ಯಾರಾದರೂ ಅಳಿಸಿ ಹಾಕುತ್ತಾರೆ ಎಂದು ಹೇಳಿದರೆ, ಖಂಡಿತಾ ಅದು ಸಾಧ್ಯವಿಲ್ಲ. ನಮ್ಮ 19 ಶಾಸಕರು, 7 ವಿಧಾನ ಪರಿಷತ್ ಸದಸ್ಯರ ಜತೆ ಕುಳಿತು ಎಚ್.ಡಿ. ಕುಮಾರಸ್ವಾಮಿ ಚರ್ಚೆ ಮಾಡಿದ್ದಾರೆ. ಜಿ.ಟಿ. ದೇವೇಗೌಡರ ಅಧ್ಯಕ್ಷತೆಯಲ್ಲಿ ಕಮಿಟಿ ಮಾಡಿ, ಕಾರ್ಯಕ್ರಮ ರೂಪಿಸಲು ಸಲಹೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಕಾರ್ಯಕ್ರಮ ಆಯೋಜನೆ ಮಾಡುವ ತೀರ್ಮಾನ ಕೈಗೊಳ್ಳಲಾಗುವುದು. ಲಕ್ಷಾಂತರ ಕಾರ್ಯಕರ್ತರ ಅಭಿಪ್ರಾಯ ಪಡೆದು ಒಂದುಗೂಡಿಸುವ ಕೆಲಸ ಮಾಡಲಾಗುವುದು ಎಂದು ಎಚ್.ಡಿ. ದೇವೇಗೌಡ ತಿಳಿಸಿದರು.

ಕಾಂಗ್ರೆಸ್‌ ಮತ್ತು ಸೆಕ್ಯುಲರ್‌ ಬಗ್ಗೆ ಎಚ್.ಡಿ. ದೇವೇಗೌಡರು ಹೇಳಿದ್ದು ಹೀಗೆ!

ಸಮಯ ಬಂದಾಗ ಮಾತ್ರ ಕಾಂಗ್ರೆಸ್‌ ಸೆಕ್ಯುಲರ್‌

ಸಮಯ ಬಂದಾಗ ಮಾತ್ರ ಕಾಂಗ್ರೆಸ್‌ ಸೆಕ್ಯುಲರ್‌‌ (Congress Secular) ಆಗಿರುತ್ತದೆ. ಅವರಿಗೆ ದರ್ದು ಬಂದಾಗ ನೋ ಸೆಕ್ಯುಲರ್. ನಿಮಗೆ ಬೇಕು ಅಂದಾಗ ಬೇಕಾದಂತೆ ಬರುತ್ತೀರಾ ಎಂದು ಕಾಂಗ್ರೆಸ್‌ ವಿರುದ್ಧ ಎಚ್.ಡಿ. ದೇವೇಗೌಡ ತೀವ್ರ ವಾಗ್ದಾಳಿ ನಡೆಸಿದರು. ರಾಜ್ಯದಲ್ಲಿ ಮೊದಲ ಬಾರಿಗೆ 1983ರಲ್ಲಿ ಕಾಂಗ್ರೆಸ್ಸೇತರ ಸರ್ಕಾರ ರಚನೆ ಮಾಡಲಾಯ್ತು. ಜನತಾ ಪಕ್ಷದ ಸರ್ಕಾರವನ್ನು ರಚಿಸಲಾಯಿತು. ಆ ಸರ್ಕಾರದಲ್ಲಿ ಸಿದ್ದರಾಮಯ್ಯ ಕಾವಲು ಸಮಿತಿ ಅಧ್ಯಕ್ಷ ಆಗಿದ್ದರು ಎಂದು ಎಚ್.ಡಿ. ದೇವೇಗೌಡ ಹೇಳಿದರು.

ಜೆಡಿಎಸ್‌ ಮುಗಿಸಲು ಸಾಧ್ಯವಿಲ್ಲ; ದೇವೇಗೌಡ ಹೇಳಿರುವ ವಿಡಿಯೊ ಇಲ್ಲಿದೆ

“ಇಂಡಿಯಾ”ಕ್ಕೆ ನಾನು ಬರೋದು ಕೈ ನಾಯಕರಿಗೆ ಇಷ್ಟ ಇಲ್ಲ

ಕೇಂದ್ರದಲ್ಲಿ ಬಿಜೆಪಿಯೇತರ ಸರ್ಕಾರ ರಚನೆಗಾಗಿ ಮಹಾಘಟಬಂಧನ್ ಅಡಿಯಲ್ಲಿ “ಇಂಡಿಯಾ” ಒಕ್ಕೂಟವನ್ನು (INDIA Alliance) ರಚನೆ ಮಾಡಿಕೊಳ್ಳಲಾಗಿದೆ. ಈ ಸಂಬಂಧ ನಡೆದ ಸಭೆಗೆ ನಾನು ಬರುವುದು ಕೆಲವು ಕಾಂಗ್ರೆಸ್ ನಾಯಕರಿಗೇ ಇಷ್ಟ ಇರಲಿಲ್ಲ. ನಾನು ಬಂದರೆ, ತಾವು ಬರುವುದಿಲ್ಲ ಎಂದು ಕೆಲವರು ಹೇಳಿದರು. ಹಾಗಾಗಿ ನಾನು ಹೋಗಲಿಲ್ಲ. ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ (Bihar CM Nitish Kumar) ನನ್ನ ಸೇಹಿತರು. ಅವರು ಕರೆದಾಗ ನಾನು ಬರೋದಿಲ್ಲ ಅಂತ ಹೇಳಿದೆ. ಶರತ್ ಪವಾರ್ ಇಲ್ಲಿಗೆ ಬಂದು ಹೋದರು. ಆದರೆ, ಈಗ ಏನಾಗಿದೆ? ಇಲ್ಲಿಗೆ ಬಂದು ಹೋದ ಮೇಲೂ ಅವರು ಎನ್‌ಡಿಎ ಒಕ್ಕೂಟಕ್ಕೆ (NDA Alliance) ಬೆಂಬಲ ನೀಡಿದ್ದಾರೆ ಎಂದು ಎಚ್.ಡಿ. ದೇವೇಗೌಡ ಹೇಳಿದರು.

ಲೋಕಸಭೆಗೆ ಸ್ಪರ್ಧೆ ಮಾಡಲ್ಲ: ಎಚ್.ಡಿ. ದೇವೇಗೌಡ

ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡುವ ಬಗ್ಗೆ ಮಾತುಗಳು ಕೇಳಿ ಬರುತ್ತಿವೆ. ನೀವು ಮುಂದಿನ ಬಾರಿ ಸ್ಪರ್ಧೆ ಮಾಡುತ್ತೀರಾ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ, ತಲೆ ಅಲ್ಲಾಡಿಸಿದ ಎಚ್.ಡಿ. ದೇವೇಗೌಡರು, ಇಲ್ಲ ಎಂಬ ರೀತಿಯಲ್ಲಿ ಉತ್ತರಿಸಿದರು. ಬಳಿಕ ಮಾತನಾಡಿ, ಪಕ್ಷ ಸಂಘಟನೆ ಮಾತ್ರ ಎಂದಷ್ಟೇ ಹೇಳಿದರು.

ಸಿದ್ದರಾಮಯ್ಯ ವಿರುದ್ಧ “ನೈಸ್”‌ ತರಾಟೆ

ನೈಸ್ ಹಗರಣದ (Nice scandal) ಬಗ್ಗೆ ಪ್ರಸ್ತಾಪ ಮಾಡಿದ ಎಚ್.ಡಿ. ದೇವೇಗೌಡ, ಬಸವರಾಜ ಬೊಮ್ಮಾಯಿ (Basavaraj Bommai) ಅವರು ಸಿಎಂ‌ ಆಗಿದ್ದಾಗ ಸದನ ಸಮಿತಿಯನ್ನು ರಚನೆ ಮಾಡಿದ್ದರು. ಸದನ ಸಮಿತಿ ವರದಿಯಲ್ಲಿ 11,668 ಎಕರೆ ವಾಪಸ್ ಕೊಡುವ ಬಗ್ಗೆ ಉಲ್ಲೇಖಿಸಲಾಗಿದೆ. ಯಾರ ಭೂಮಿ ಇದು? ಭೂಮಿ ವಾಪಸ್ ಪಡೆಯಲು ಸಿಎಂ ಸಿದ್ದರಾಮಯ್ಯಗೆ (CM Siddaramaiah) ಏನು ಕಷ್ಟ ಇದೆ? ನೈತಿಕತೆ ಬಗ್ಗೆ ಅವರು ಮಾತನಾಡುತ್ತಾರೆ. ಇದರಲ್ಲಿ ಬರುವ ಹಣವನ್ನು ಐದು ಗ್ಯಾರಂಟಿ (Congress Guarantee Scheme) ಉಚಿತ ಕಾರ್ಯಕ್ರಮಗಳಿಗೆ ಬಳಸಿಕೊಳ್ಳಿ. ಕೋಟ್ಯಂತರ ರೂಪಾಯಿ ಹಣ ಇದರಲ್ಲಿ ಬರುತ್ತದೆ. ಒಂದು ಎಕರೆಗೆ ಐದು, ಹತ್ತು ಕೋಟಿ ಬರುತ್ತದೆ. ಸಿದ್ದರಾಮಯ್ಯ ಅವರೇ ನೀವು ಮಾತಾಡೋ ಮಾತು ಹೃದಯದ ಅಂತರಾಳದಿಂದ ಬರಬೇಕು. ಅಧಿಕಾರ ಇರುತ್ತದೆ, ಹೋಗುತ್ತದೆ. ಆದರೆ, ನೈತಿಕತೆ ಮುಖ್ಯ ಎಂದು ಹೇಳಿದರು.

ಸಿದ್ದರಾಮಯ್ಯ ವಿರುದ್ಧ ಎಚ್.ಡಿ. ದೇವೇಗೌಡ ವಾಗ್ದಾಳಿ

ಇದನ್ನೂ ಓದಿ: CM Siddaramaiah : ಸಿಎಂಗೆ ಡಬಲ್ ಟ್ರಬಲ್‌‌ ! ಸಚಿವರ ಮೇಲೆ ಕಾಂಗ್ರೆಸ್‌ ಶಾಸಕರಿಂದಲೇ ದೂರು

ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಘೋಷಿಸಿದ ದೇವೇಗೌಡ

ಶಿಕ್ಷಕರ ಕ್ಷೇತ್ರಕ್ಕೆ ಜೆಡಿಎಸ್ ಅಭ್ಯರ್ಥಿಯಾಗಿ ಎ.ಪಿ. ರಂಗನಾಥ್

ಯಾವುದೇ ಗೊಂದಲವಿಲ್ಲದೆ ಮತ್ತೆ ಪಕ್ಷವನ್ನು ಅಧಿಕಾರಕ್ಕೆ ತರುವ ಬಗ್ಗೆ ಕಾರ್ಯಕರ್ತರ ಜತೆ ಸೇರಿ ಹೋರಾಟ ಮಾಡುತ್ತೇವೆ. ಶಿಕ್ಷಕರ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಎ.ಪಿ. ರಂಗನಾಥ್ ಸ್ಪರ್ಧೆ ಮಾಡಲಿದ್ದಾರೆ ಎಂದು ಎಚ್.ಡಿ. ದೇವೇಗೌಡ ಘೋಷಣೆ ಮಾಡಿದರು.

Exit mobile version