ಬೆಂಗಳೂರು: ಲೋಕಸಾಭಾ ಚುನಾವಣೆಯಲ್ಲಿ (Lok Sabha Election 2024) ಸ್ಪರ್ಧಿಸಲು ಧಾರವಾಡ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಹಾವೇರಿ ಕ್ಷೇತ್ರದಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಬೆಳಗಾವಿಯಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ಸೋಮವಾರ ನಾಮಪತ್ರ ಸಲ್ಲಿಸಿದ್ದು, ಈ ವೇಳೆ ತಮ್ಮ ಆಸ್ತಿಯನ್ನು ಘೋಷಿಸಿಕೊಂಡಿದ್ದಾರೆ. ಈ ಮೂವರು ನಾಯಕರಲ್ಲಿ ಯಾರು ಎಷ್ಟು ಆಸ್ತಿ ಹೊಂದಿದ್ದಾರೆ ಎಂಬ ಮಾಹಿತಿ ಇಲ್ಲಿದೆ.
ಪ್ರಲ್ಹಾದ್ ಜೋಶಿ 21 ಕೋಟಿ ರೂ. ಆಸ್ತಿ ಒಡೆಯ
ಧಾರವಾಡ: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ನಾಮಪತ್ರದಲ್ಲಿ ಆಸ್ತಿ ಘೋಷಣೆ ಮಾಡಿಕೊಂಡಿದ್ದು, ಜೋಶಿ ಕುಟುಂಬದ ಒಟ್ಟು ಆಸ್ತಿ ಮೌಲ್ಯ 21,09,60,953 ರೂ. ಆಗಿದೆ. ಕಳೆದ 5 ವರ್ಷದಲ್ಲಿ ಇವರ ಕುಟುಂಬದ ಆಸ್ತಿಯಲ್ಲಿ 7 ಕೋಟಿ ರೂ. ಹೆಚ್ಚಳವಾಗಿದೆ.
2019ರ ಚುನಾವಣೆಯಲ್ಲಿ ಜೋಶಿ ಕುಟುಂಬದ ಒಟ್ಟು ಆಸ್ತಿ 14.71 ಕೋಟಿ ಇತ್ತು. ಜೋಶಿ ವೈಯಕ್ತಿಕ ಆಸ್ತಿಯಲ್ಲಿಯೂ ಏರಿಕೆಯಾಗಿದ್ದು, ಅವರ ವೈಯ್ಯಕ್ತಿಕ ಆಸ್ತಿ ಮೌಲ್ಯ 13,97,29,450 ರೂ. ಇದೆ. ಕಳೆದ ಚುನಾವಣೆಯಲ್ಲಿ ಜೋಶಿ ಒಟ್ಟು ಆಸ್ತಿ ಮೌಲ್ಯ 11.13 ಕೋಟಿ ಇತ್ತು. ಆಸ್ತಿ ಜೊತೆಗೆ ಇವರ ಸಾಲದಲ್ಲಿ ಕೂಡ ಏರಿಕೆ ಕಂಡುಬಂದಿದೆ. ಕಳೆದ ಚುನಾವಣೆಯಲ್ಲಿ 5.17 ಕೋಟಿ ರೂ.ಸಾಲ ಹೊಂದಿದ್ದ ಜೋಶಿ, 6.63 ಕೋಟಿ ಸಾಲ ಹೊಂದಿದ್ದಾರೆ.
ಇದನ್ನೂ ಓದಿ | Lok Sabha Election 2024: ಪ್ರಲ್ಹಾದ್ ಜೋಶಿ, ಬೊಮ್ಮಾಯಿ, ಜೊಲ್ಲೆ ಸೇರಿ ಐವರು ಬಿಜೆಪಿ ನಾಯಕರಿಂದ ನಾಮಪತ್ರ ಸಲ್ಲಿಕೆ
ಇನ್ನು ಪ್ರಲ್ಹಾದ್ ಜೋಶಿ ಅವರ ವೈಯಕ್ತಿಕ ಚರಾಸ್ತಿ 2.72 ಕೋಟಿ ರೂ. ಇದ್ದು, ಒಟ್ಟು ಸ್ಥಿರಾಸ್ತಿ 11.24 ಕೋಟಿ ರೂ. ಇದೆ. ಪತ್ನಿ ಜ್ಯೋತಿ ಚರಾಸ್ತಿ 5.93 ಕೋಟಿ, ಸ್ಥಿರಾಸ್ತಿ 86.39 ಲಕ್ಷ ಮೌಲ್ಯವಾಗಿದೆ. ಪತ್ನಿ ಜ್ಯೋತಿ ಹೆಸರಿನಲ್ಲಿ 1.37 ಕೋಟಿ ಸಾಲ ಇದ್ದು, ಜೋಶಿ ಬಳಿ 184 ಗ್ರಾಂ ಚಿನ್ನ, 5 ಕೆಜಿ ಬೆಳ್ಳಿ ಆಭರಣ, ಪತ್ನಿ ಬಳಿ 500 ಗ್ರಾಂ ಚಿನ್ನ ಹಾಗೂ 2 ಕೆಜಿ ಬೆಳ್ಳಿ ಇದೆ. ಪುತ್ರಿ ಅನನ್ಯಾ ಬಳಿ 250 ಗ್ರಾಂ ಚಿನ್ನ ಇದ್ದು, ಜೋಶಿ ಕುಟುಂಬದ ಬಳಿ ಇಲ್ಲ ಯಾವುದೇ ಸ್ವಂತ ವಾಹನ ಇಲ್ಲ ಎಂದು ಅಫಿಡವಿಟ್‌ನಲ್ಲಿ ತಿಳಿಸಲಾಗಿದೆ.
ಮಾಜಿ ಸಿಎಂ ಬೊಮ್ಮಾಯಿ ಆಸ್ತಿ 29.58 ಕೋಟಿ
ಹಾವೇರಿ: ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಅವರು ಸೋಮವಾರ ನಾಮಪತ್ರ ಸಲ್ಲಿಸಿದ್ದು, ಒಟ್ಟು 29.58 ಆಸ್ತಿ ಹೊಂದಿರುವುದಾಗಿ ಆಪಿಡವಿಟ್‌ನಲ್ಲಿ ತಿಳಿಸಿದ್ದಾರೆ.
ಬಸವರಾಜ ಬೊಮ್ಮಾಯಿ ಬಳಿ 3 ಲಕ್ಷ ರೂ. ನಗದು ಇದ್ದು, ಬ್ಯಾಂಕ್ ಹಾಗೂ ಪೈನಾನ್ಸ್‌ಗಳಲ್ಲಿ 51 ಲಕ್ಷ ರೂ. ಠೇವಣಿ, ಬಾಂಡ್, ವಿವಿಧ ಕಂಪನಿ ಶೇರ್‌ಗಳಲ್ಲಿ 3.30 ಕೋಟಿ ರೂ. ಹೂಡಿಕೆ ಮಾಡಿದ್ದಾರೆ. 10 ಲಕ್ಷ ರೂ. ಸಾಲ ನೀಡಿದ್ದು, 1.59 ಕೋಟಿ ರೂ. ಮೌಲ್ಯದ ಚಿನ್ನಾಭರಣ ಹೊಂದಿದ್ದಾರೆ. ಮಾಜಿ ಸಿಎಂ ಯಾವುದೇ ಸ್ವಂತ ವಾಹನ ಹೊಂದಿಲ್ಲ. ಒಟ್ಟು 6.12 ಕೋಟಿ ರೂ. ಮೌಲ್ಯದ ಚರಾಸ್ತಿ ಹೊಂದಿದ್ದಾರೆ.
96.80 ಲಕ್ಷ ರೂ. ಮೌಲ್ಯದ ಕೃಷಿ ಜಮೀನು, 7 ಕೋಟಿ ರೂ. ಮೌಲ್ಯದ ಕೃಷಿಯೇತರ ಜಮೀನು, 6.30 ಕೋಟಿ ರೂ. ಮೌಲ್ಯದ ವಾಣಿಜ್ಯ ಕಟ್ಟಡ, ಬೆಂಗಳೂರು ಹಾಗೂ ಶಿಗ್ಗಾಂವಿಯಲ್ಲಿ 9.18 ಕೋಟಿ ರೂ. ಮೌಲ್ಯದ ವಾಸದ ಮನೆ ಸೇರಿ23.45 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ.
5.31 ಕೋಟಿ ರೂ. ಸಾಲದ ಹೊರೆಯೂ ಇವರಿಗಿದೆ. 20 ಕೋಟಿ ರೂ. ಮೌಲ್ಯದ ಪಿತ್ರಾರ್ಜಿತ ಆಸ್ತಿ ಬಸವರಾಜ ಬೊಮ್ಮಾಯಿ ಅವರಿಗೆ ಬಂದಿದೆ. ಪತ್ನಿ ಬಳಿ 1.32 ಕೋಟಿ ಮೌಲ್ಯದ ಚರಾಸ್ತಿ, ಪುತ್ರಿ ಬಳಿ 1.53 ಕೋಟಿ ಚರಾಸ್ತಿ ಇದೆ.
ಶೆಟ್ಟರ್ ಹೊಂದಿದ್ದಾರೆ 12.45 ಕೋಟಿ ಆಸ್ತಿ
ಬೆಳಗಾವಿ: ಬೆಳಗಾವಿಯಲ್ಲಿ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ನಾಮಪತ್ರ ಸಲ್ಲಿಕೆ ಮಾಡಿದ್ದು, ಈ ವೇಳೆ ಒಟ್ಟು 12.45 ಕೋಟಿ ಆಸ್ತಿ ಘೋಷಿಸಿಕೊಂಡಿದ್ದಾರೆ. ಚರಾಸ್ತಿ 2.63 ಕೋಟಿ, ಸ್ಥಿರಾಸ್ತಿ 9.82 ಕೋಟಿ, ಸಾಲ 57.26 ಲಕ್ಷ ಹಾಗೂ 15.37 ಲಕ್ಷ ನಗದನ್ನು ಶೆಟ್ಟರ್ ಹೊಂದಿದ್ದಾರೆ.
ಇದನ್ನೂ ಓದಿ | Lok Sabha Election 2024: ಗೀತಾ ಶಿವರಾಜ್‌ಕುಮಾರ್ ಬಳಿ ಇದೆ 11.54 ಕೆಜಿ ಚಿನ್ನ, 30 ಕೆಜಿ ಬೆಳ್ಳಿ; ಒಟ್ಟು ಆಸ್ತಿ ಎಷ್ಟು?
43.94 ಲಕ್ಷ ಮೌಲ್ಯದ ಚಿನ್ನಾಭರಣ ಇದ್ದರೂ ಇವರ ಬಳಿ ಸ್ವಂತ ವಾಹನ ಇಲ್ಲ. ಶೆಟ್ಟರ್ ಪತ್ನಿ ಶಿಲ್ಪಾ ಶೆಟ್ಟರ್ ಹೆಸರಿನಲ್ಲಿ 2.50 ಲಕ್ಷ ನಗದು ಇದೆ. ಚರಾಸ್ತಿ 91.10 ಲಕ್ಷ , ಸ್ಥಿರಾಸ್ತಿ 1ಲಕ್ಷ ಹಾಗೂ 14.40 ಲಕ್ಷ ಸಾಲ ಇದೆ. ಇನ್ನು 70.90 ಲಕ್ಷ ಮೌಲ್ಯದ 1.1 ಕೆಜಿ ಚಿನ್ನ, 3 ಕೆಜಿ ಬೆಳ್ಳಿ ಹೊಂದಿದ್ದಾರೆ.