ಹುಬ್ಬಳ್ಳಿ: ರಾಜ್ಯದಲ್ಲಿ ಲೋಕಸಭೆ ಚುನಾವಣೆಗೆ (Lok Sabha Election 2024) ಸಾಕಷ್ಟು ಕಾಲಾವಕಾಶವಿದೆ. ಅಷ್ಟರೊಳಗೆ ಪಕ್ಷದಲ್ಲಿ ಬಂಡಾಯ ಎದ್ದಿರುವ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ (KS Eshwarappa) ಅವರಲ್ಲಿ ಸಕಾರಾತ್ಮಕ ಬದಲಾವಣೆ ಆಗಲಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ವಿಶ್ವಾಸ ವ್ಯಕ್ತಪಡಿಸಿದರು. ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ (Ex CM Basavaraj Bommai), ಈಶ್ವರಪ್ಪ ಅವರ ಮನವೊಲಿಕೆಯಾಗಲಿದೆ ಎಂದು ಹೇಳಿದರು. ಆದರೆ, ಕ್ಷೇತ್ರ ಬದಲಾವಣೆ ಆಗುವ ಬಗ್ಗೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ (Ramesh Jarkiholi) ಮಾತನ್ನು ಅಲ್ಲಗಳೆದರು.
ಹುಬ್ಬಳ್ಳಿಯಲ್ಲಿ ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಈಶ್ವರಪ್ಪ ಅವರ ಮನವೊಲಿಕೆ ಪ್ರಯತ್ನ ನಡೆದಿದೆ. ಈಶ್ವರಪ್ಪ ಪಕ್ಷದ ಹಿರಿಯ ನಾಯಕರು. ಪುತ್ರನಿಗೆ ಹಾವೇರಿ ಟಿಕೆಟ್ ಸಿಗದಿದ್ದಕ್ಕೆ ಸಿಟ್ಟಾಗಿದ್ದಾರೆ ಅಷ್ಟೇ. ಚುನಾವಣೆಯೊಳಗೆ ಎಲ್ಲ ಸರಿ ಹೋಗಲಿದೆ ಎಂದು ತಿಳಿಸಿದರು.
ಶಿವಮೊಗ್ಗ ಕ್ಷೇತ್ರದಲ್ಲಿ ಲೋಕಸಭೆ ಚುನಾವಣೆಗೆ ಮತದಾನ ಇರೋದು ಏಪ್ರಿಲ್ 26ಕ್ಕೆ. ಇನ್ನೂ 40 ದಿನಗಳ ಕಾಲಾವಕಾಶವಿದೆ. ಅಷ್ಟರೊಳಗೆ ಸಾಕಷ್ಟು ಬದಲಾವಣೆ ಆಗುತ್ತದೆ. ಈಶ್ವರಪ್ಪ ಅವರ ಬಂಡಾಯ ಶಮನವಾಗಲಿದೆ. ಆ ನಿಟ್ಟಿನಲ್ಲಿ ಪಕ್ಷದ ವರಿಷ್ಟರು ಅವರೊಂದಿಗೆ ಮಾತುಕತೆ ನಡೆಸಿ ಇಲ್ಲ ಸರಿ ಮಾಡಲಿದ್ದಾರೆ ಎಂದು ಪ್ರಲ್ಹಾದ್ ಜೋಶಿ ಹೇಳಿದರು.
ಮೂರ್ನಾಲ್ಕು ದಿನಗಳಲ್ಲಿ ಬಹಿರಂಗ ಪ್ರಚಾರಕ್ಕೆ ಸಿದ್ಧತೆ
ಚುನಾವಣೆ ತಯಾರಿ ನಡೆದಿದೆ. ಸದ್ಯ ಪಕ್ಷದಲ್ಲಿ ಆಂತರಿಕವಾಗಿ ಸಭೆ ನಡೆಯುತ್ತಿದ್ದು, ಇನ್ನು ಮೂರ್ನಾಲ್ಕು ದಿನಗಳಲ್ಲಿ ಬಹಿರಂಗ ಪ್ರಚಾರಕ್ಕೆ ಇಳಿಯಲಾಗುತ್ತದೆ ಎಂದು ಪ್ರಲ್ಹಾದ್ ಜೋಶಿ ತಿಳಿಸಿದರು
ಬೆಳಗಾವಿಗೆ ಜಗದೀಶ ಶೆಟ್ಟರ್ ಹೆಸರೇ ಮುಂಚೂಣಿಯಲ್ಲಿದೆ
ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಜಗದೀಶ್ ಶೆಟ್ಟರ್ ಅವರ ಹೆಸರೇ ಇನ್ನೂ ಮುಂಚೂಣಿಯಲ್ಲಿದೆ. ಬೆಳಗಾವಿ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಜಗದೀಶ್ ಶೆಟ್ಟರ್ ಅವರ ಹೆಸರೇ ಇದೆ. ಅವರು ಕೂಡಾ ಅಲ್ಲಿ ಸ್ಪರ್ಧೆ ಮಾಡುವುದಾಗಿ ಒಪ್ಪಿದ್ದಾರೆ ಎಂದು ಪ್ರಲ್ಹಾದ್ ಜೋಶಿ ತಿಳಿಸಿದರು.
ತಮಗೆ ಗೊತ್ತಿರುವ ಹಾಗೆ ಬಿಜೆಪಿ ಲಿಸ್ಟ್‌ನಲ್ಲಿ ಸದ್ಯ ಜಗದೀಶ ಶೆಟ್ಟರ್ ಅವರ ಹೆಸರೇ ಮುಂಚೂಣಿ ಇದೆ. ಈ ಬಗ್ಗೆ ರಾಷ್ಟ್ರೀಯ ನಾಯಕರು ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ಜೋಶಿ ಪ್ರತಿಕ್ರಿಯೆ ನೀಡಿದರು.
ಜೆಡಿಎಸ್ 3 ಕ್ಷೇತ್ರ ಕೇಳೋದು ಸಹಜ
ರಾಜ್ಯದಲ್ಲಿ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್ 3 ಕ್ಷೇತ್ರಗಳನ್ನು ಕೇಳುವುದು ಸಹಜವೇ ಇದೆ. ಈ ಬಗ್ಗೆ ಇನ್ನೂ ಯಾವುದು ಫೈನಲ್ ಆಗಿಲ್ಲ. ಸದ್ಯದಲ್ಲೇ ಪಕ್ಷದ ವರಿಷ್ಠರು ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಪ್ರಲ್ಹಾದ್ ಜೋಶಿ ಹೇಳಿದರು.
ಈ ಬಾರಿ ಚುನಾವಣೆಗೆ 50 ದಿನಗಳಷ್ಟು ಸುದೀರ್ಘ ಅವಧಿ ಸಿಕ್ಕಿದೆ. ಎಲ್ಲ ವಿಧಾನಸಭೆ ಕ್ಷೇತ್ರಗಳಲ್ಲಿ ಮುಖಂಡರು ಮತ್ತು ಕಾರ್ಯಕರ್ತರೊಂದಿಗೆ ಸಮನ್ವಯ ಸಾಧಿಸಿ ಪ್ರಚಾರ ಕಾರ್ಯಕ್ಕೆ ಇಳಿಯಲಾಗುವುದು ಎಂದು ಪ್ರಲ್ಹಾದ್ ಜೋಶಿ ಮಾಹಿತಿ ನೀಡಿದರು.
ಈಶ್ವರಪ್ಪ ಮನವೊಲಿಕೆ ಆಗುವ ವಿಶ್ವಾಸವಿದೆ: ಬಸವರಾಜ ಬೊಮ್ಮಾಯಿ
ಮಾಜಿ ಡಿಸಿಎಂ ಅವರ ಮನವೊಲಿಕೆಗೆ ರಾಷ್ಟ್ರೀಯ ನಾಯಕರು ಅವರೊಂದಿಗೆ ಮಾತನಾಡುತ್ತಿದ್ದಾರೆ. ಅವರ ಮನವೊಲಿಕೆ ಆಗುತ್ತದೆ ಎಂದು ಮಾಜಿ ಸಿಎಮ್ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ಹುಬ್ಬಳ್ಳಿಯ ಆದರ್ಶ ನಗರದ ನಿವಾಸದ ಬಳಿ ಮಾತನಾಡಿದ ಅವರು, ರಾಷ್ಟ್ರೀಯ ನಾಯಕರು ಈಶ್ವರಪ್ಪ ನವರ ಮನವೊಲಿಕೆ ಮಾಡುತ್ತಿದ್ದಾರೆ. ಅವರ ಮನವೊಲಿಕೆ ಆಗುವ ವಿಶ್ವಾಸ ಇದೆ ಎಂದು ಹೇಳಿದ್ದಾರೆ.
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಕ್ಷೇತ್ರ ಬದಲಾವಣೆ ಆಗುತ್ತವೆ ಎಂದು ನೀಡಿರುವ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಬಸವರಾಜ್ ಬೊಮ್ಮಾಯಿ, ರಮೇಶ್ ಜಾರಕಿಹೊಳಿ ಹೈಕಮಾಂಡ್ ಜತೆ ಸಂಪರ್ಕದಲ್ಲಿ ಇರಬಹುದು. ಕ್ಷೇತ್ರ ಬದಲಾವಣೆ ಕುರಿತು ಜಾರಕಿಹೊಳಿ ಏನು ಹೇಳಿದ್ದಾರೆ ಎಂದು ಗೊತ್ತಿಲ್ಲ ಎಂದು ಹೇಳಿದರು.
ಇದನ್ನೂ ಓದಿ: PM Narendra Modi: ಮಾ. 18ರಂದು ಶಿವಮೊಗ್ಗಕ್ಕೆ ಪ್ರಧಾನಿ ಮೋದಿ; ಅದ್ಧೂರಿ ಎಂಟ್ರಿಗೆ ಪ್ಲ್ಯಾನ್!
ಇವತ್ತು ಧಾರವಾಡ ಲೋಕಸಭೆ ಕ್ಷೇತ್ರ ವ್ಯಾಪ್ತಿಯ ಶಿಗ್ಗಾಂವಿ ಕ್ಷೇತ್ರದಲ್ಲಿ ಪ್ರಚಾರ ಮಾಡುತ್ತಿದ್ದೇವೆ. ಕ್ಷೇತ್ರದ ಅಭ್ಯರ್ಥಿ ಪ್ರಲ್ಹಾದ್ ಜೋಶಿ ಅವರಿಗೂ ಆಹ್ವಾನ ಕೊಡಲಾಗಿದೆ. ಈ ಬಾರಿ ಶಿಗ್ಗಾಂವಿ ಕ್ಷೇತ್ರದಿಂದ ಜೋಶಿ ಅವರಿಗೆ ಕಳೆದ ಬಾರಿಗಿಂತ ಹೆಚ್ಚಿನ ಲೀಡ್ ಕೊಡಿಸುತ್ತೇವೆ. ಸೋಮವಾರ (ಮಾ.18) ಹಾವೇರಿ ಲೋಕಸಭೆ ವ್ಯಾಪ್ತಿಯ ಗದಗ ಜಿಲ್ಲೆಗೆ ಭೇಟಿ ನೀಡಲಿದ್ದೇನೆ ಎಂದು ಹೇಳಿದರು.