ಮಂಡ್ಯ: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ವಿವಿಧ ಪಕ್ಷಗಳ ಅಭ್ಯರ್ಥಿಗಳ ನಾಮಪತ್ರ ಸಲ್ಲಿಸುತ್ತಿದ್ದಾರೆ. ಈ ನಡುವೆ ಸೋಮವಾರ ಮಂಡ್ಯ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು (Star Chandru) ನಾಮಪತ್ರ ಸಲ್ಲಿಸಿದ್ದು, ಈ ವೇಳೆ ತಮ್ಮ ಆಸ್ತಿಯ ವಿವರ ಘೋಷಿಸಿದ್ದಾರೆ. ಇವರು 400 ಕೋಟಿ ರೂ. ಆಸ್ತಿಯ ಒಡೆಯರಾಗಿದ್ದು, ನೂರಾರು ಕೋಟಿ ಒಡೆಯರಾದರೂ ಸ್ಟಾರ್ ಚಂದ್ರು ಹೆಸರಲ್ಲಿ ಒಂದೇ ಒಂದು ಕಾರಿಲ್ಲ.
ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಸಮ್ಮುಖದಲ್ಲಿ ಸ್ಟಾರ್ ಚಂದ್ರು ನಾಮಪತ್ರ ಸಲ್ಲಿಸಿದ್ದಾರೆ. ಇನ್ನು ಸ್ಟಾರ್ ಚಂದ್ರು (ವೆಂಕಟರಮಣೇ ಗೌಡ) ಹಾಗೂ ಅವರ ಪತ್ನಿ ಕುಸಮಾ ಇಬ್ಬರೂ ಕೋಟ್ಯಧೀಶರಾಗದ್ದು, ಸ್ಟಾರ್ ಚಂದ್ರು ಹೆಸರಲ್ಲಿ 237 ಕೋಟಿ ರೂ. ಹಾಗೂ ಪತ್ನಿ ಕುಸುಮಾ ಹೆಸರಲ್ಲಿ 146 ಕೋಟಿ ರೂ. ಆದಾಯವಿದೆ. ಚಂದ್ರ ಅವರಿಗೆ ಪಿತ್ರಾರ್ಜಿತವಾಗಿ (ಅವಿಭಕ್ತ ಕುಟುಂಬದ ಆಸ್ತಿ) ಬಂದಿರುವ ಆಸ್ತಿಯೇ 26 ಕೋಟಿ ಇದೆ. ಹಿಂದು ಅವಿಭಕ್ತ ಕುಟುಂಬದ ಸ್ಥಿರಾಸ್ತಿ (ಎಚ್‌ಯುಎಫ್) ಮೌಲ್ಯ 26 ಕೋಟಿ. ಇವರ ಚರಾಸ್ತಿ 99.36 ಕೋಟಿ ರೂ. ಇದೆ. ಕೈಯಲ್ಲಿರುವ ನಗದು 1,36,14,355 ರೂ. ಎಂದು ತಮ್ಮ ಅಫಿಡವಿಟ್‌ನಲ್ಲಿ ಮಾಹಿತಿ ನೀಡಿದ್ದಾರೆ.
ಪತ್ನಿಯೂ ಕೋಟ್ಯಧೀಶೆ
ಪತ್ನಿ ಕುಸುಮಾ ಹೆಸರಲ್ಲಿ 4.20 ಕೋಟಿ ಚರಾಸ್ತಿ ಹೊಂದಿದ್ದಾರೆ. ಸ್ಥಿರಾಸ್ತಿ ಮೌಲ್ಯ 127 ಕೋಟಿ ರೂ. ಇವರ ಒಟ್ಟು ಆಸ್ತಿಯ ಮೌಲ್ಯ 146 ಕೋಟಿ ಇದೆ. ನಗದು 64,94,175 ರೂ. ಇಟ್ಟುಕೊಂಡಿದ್ದಾರೆ. ಸ್ಟಾರ್ ಚಂದ್ರು ಅವರ ಸ್ಥಿರಾಸ್ತಿ ಮೌಲ್ಯ 237 ಕೋಟಿ ರೂ. 3 ಟ್ರ್ಟಾಕ್ಟರ್ ಹೊಂದಿರುವ ಸ್ಟಾರ್ ಚಂದ್ರು ಮಾಲೀಕತ್ವದಲ್ಲಿ ಕಾರು ಇಲ್ಲ. ಪತ್ನಿ ಕುಸುಮಾ ಬಳಿಯೂ ಯಾವುದೇ ವಾಹನ ಇಲ್ಲ.
ಇದನ್ನೂ ಓದಿ | K Sudhakar: ಡಾ.ಕೆ.ಸುಧಾಕರ್ 7.7 ಕೋಟಿ ರೂ. ಆಸ್ತಿಗೆ ಒಡೆಯ; ಇವರಿಗಿಂತ ಪತ್ನಿಯೇ ಶ್ರೀಮಂತೆ!
ಚಿನ್ನ 4.2 ಕೆಜಿ (2.30 ಕೋಟಿ ಮೌಲ್ಯ), ವಜ್ರ 71 ಸಿಟಿಎಸ್ (15 ಲಕ್ಷ ರೂ.). ಬೆಳ್ಳಿ 26 ಕೆಜಿ (21.50 ಲಕ್ಷ ರೂ.) ಹೊಂದಿದ್ದಾರೆ. ಸ್ಟಾರ್ ಚಂದ್ರು ಪತ್ನಿ ಕುಸುಮಾ ಬಳಿಯೂ ಯಾವುದೇ ಸಾಲ ಇಲ್ಲ. ಸ್ಟಾರ್ ಚಂದ್ರು ವಿರುದ್ಧ ಯಾವುದೇ ಕ್ರಿಮಿನಲ್ ಪ್ರಕರಣ ಇಲ್ಲ. ಉದ್ಯಮಿಯಾಗಿ ಕಾಲಕಾಲಕ್ಕೆ ತೆರಿಗೆ ಪಾವತಿಸಿರುವುದಾಗಿ ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ.
ವೆಂಕಟರಮಣೇಗೌಡ ಬಿಎಸ್‌ಸಿ ಪದವೀಧರರಾಗಿದ್ದು, ಉದ್ಯಮ ಮತ್ತು ಸಾಮಾಜಿಕ ಚಟುವಟಿಕೆಗಳು ತಮ್ಮ ಉದ್ಯೋಗ ಎಂದು ಅಫಿಡವಿಟ್‌ನಲ್ಲಿ ಘೋಷಿಸಿದ್ದಾರೆ. ಪತ್ನಿ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದು, ಪತಿ-ಪತ್ನಿಯ ಆದಾಯದ ಮೂಲ ಉದ್ಯಮ, ಬಾಡಿಗೆ ಹಾಗೂ ಬಡ್ಡಿ ಆದಾಯ ಎಂದು ತಿಳಿಸಿದ್ದಾರೆ
ಬಿಜೆಪಿಯ ಯದುವೀರ್ ಆಸ್ತಿ ಮೌಲ್ಯ 4.99 ಕೋಟಿ ರೂ.; ಇವರ ಬಳಿ ಸ್ವಂತ ಕಾರೂ ಇಲ್ಲ
ಬೆಂಗಳೂರು: ಲೋಕಸಭೆ ಚುನಾವಣೆ (Lok Sabha Election) ಹಿನ್ನೆಲೆಯಲ್ಲಿ ಮೈಸೂರು ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ (Yaduveer) ಅವರು ಜ್ಯೋತಿಷಿಗಳ ಸೂಚನೆಯಂತೆ ನಾಮಪತ್ರ ಸಲ್ಲಿಸಿದರು. ತಾಯಿ ಪ್ರಮೋದಾದೇವಿ ಒಡೆಯರ್, ಶಾಸಕ ಶ್ರೀವತ್ಸ ಜತೆ ಸೇರಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಉಮೇದುವಾರಿಕೆ ಸಲ್ಲಿಸಿದರು. ಏಪ್ರಿಲ್ 3ರಂದು ಬೃಹತ್ ರ‍್ಯಾಲಿ ಮೂಲಕ ಅವರು ನಾಮಪತ್ರ ಸಲ್ಲಿಸಿದ್ದಾರೆ. ಸೋಮವಾರ ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದ್ದಾರೆ. ಇನ್ನು, ಯದುವೀರ್ ಅವರು ಆಸ್ತಿಯ ಕುರಿತ ಅಫಿಡವಿಟ್‌ಅನ್ನೂ (Affidavit) ಚುನಾವಣಾ ಆಯೋಗಕ್ಕೆ (Election Commission) ನೀಡಿದ್ದು, ಅವರ ಬಳಿ ನಗದು ಸೇರಿ ಒಟ್ಟು 4.99 ಕೋಟಿ ರೂ. ಆಸ್ತಿ ಇದೆ ಎಂದು ಉಲ್ಲೇಖಿಸಲಾಗಿದೆ.
ಹೌದು, ಮೈಸೂರಿನ ರಾಜಮನೆತನಕ್ಕೆ ಸೇರಿದರೂ ಯದುವೀರ್ ಅವರು 4,99,59,303 ರೂ. ಮೌಲ್ಯದ ಚರಾಸ್ತಿ ಹೊಂದಿದ್ದಾರೆ. ಇನ್ನು ಯದುವೀರ್ ಅವರ ಪತ್ನಿ 1,04,25,000 ಮೌಲ್ಯದ ಆಸ್ತಿ ಹೊಂದಿದ್ದಾರೆ ಎಂಬುದಾಗಿ ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ. ಇನ್ನು ಇವರ ಪುತ್ರನ (Dependent) ಹೆಸರಿನಲ್ಲಿ 3.63 ಕೋಟಿ ರೂ. ಆಸ್ತಿ ಇದೆ. ಯದುವೀರ್ ಅವರ ಕುಟುಂಬದಲ್ಲಿ (ಪತ್ನಿ ಹಾಗೂ ಪುತ್ರ) ಯಾರೂ ಸಾಲ ಹೊಂದಿಲ್ಲ ಎಂಬುದಾಗಿ ಯದುವೀರ್ ಅವರು ಅಫಿಡವಿಟ್‌ನಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ | Sowmya Reddy: ಸೌಮ್ಯಾ ರೆಡ್ಡಿ ಆಸ್ತಿ 2.13 ಕೋಟಿ ರೂ.; ತಂದೆ ಬಳಿಯೇ ಮಾಡಿದ್ದಾರೆ ಸಾಲ!
ಯದುವೀರ್ ಅವರ ಬಳಿ 1 ಲಕ್ಷ ರೂ. ನಗದು ಇದ್ದರೆ, ಪತ್ನಿ ಬಳಿ 75 ಸಾವಿರ ರೂ. ಇದೆ. ಇನ್ನು, ಯದುವೀರ್ ಅವರ ಹೆಸರಿನಲ್ಲಿ ಬೈಕ್, ಕಾರು ಸೇರಿ ಯಾವುದೇ ವಾಹನವಿಲ್ಲ. ಬಿಜೆಪಿ ಅಭ್ಯರ್ಥಿಯು 28.42 ಲಕ್ಷ ರೂ. ಆದಾಯದ ಕುರಿತು ಉಲ್ಲೇಖ ಮಾಡಿದ್ದಾರೆ. ಗಮನಾರ್ಹ ಸಂಗತಿ ಎಂದರೆ, ಯದುವೀರ್ ಅವರು ಯಾವುದೇ ಬಗೆಯ ಸ್ಥಿರಾಸ್ತಿಯನ್ನು ಹೊಂದಿಲ್ಲ. ಇವರು ಆದಾಯ ತೆರಿಗೆಯನ್ನೂ ಬಾಕಿ ಉಳಿಸಿಕೊಂಡಿಲ್ಲ.