Site icon Vistara News

Lok Sabha Election 2024: ಭ್ರಷ್ಟಾಚಾರ ನಿರ್ಮೂಲನೆಗೆ ಮೋದಿ ಸರ್ಕಾರ ಪಣ: ಸಚಿವ ಪ್ರಲ್ಹಾದ್‌ ಜೋಶಿ

ಹುಬ್ಬಳ್ಳಿ: ದೇಶದಲ್ಲಿ ಭ್ರಷ್ಟಾಚಾರ ನಿರ್ಮೂಲನೆಗೆ ಪ್ರಧಾನಿ ಮೋದಿ ಸರ್ಕಾರ ಕಠಿಬದ್ಧವಾಗಿದೆ. ಭ್ರಷ್ಟಾಚಾರ ಎಂದರೆ ಬಡವರ ಜೇಬಿಗೆ ಕತ್ತರಿ ಹಾಕುವ ಕೆಲಸ. ಅದನ್ನು ಎಂದಿಗೂ ಮೋದಿ ಸರ್ಕಾರ (Lok Sabha Election 2024) ಸಹಿಸುವುದಿಲ್ಲ ಎಂದು ಕೇಂದ್ರ ಸಂಸದೀಯ ಸಚಿವ ಪ್ರಲ್ಹಾದ್‌ ಜೋಶಿ ಹೇಳಿದರು.

ನಗರದಲ್ಲಿ ಭಾನುವಾರ ನಡೆದ ವಿವಿಧ ಸಮುದಾಯಗಳ ಬಿಜೆಪಿ ಪ್ರಮುಖರ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಆಡಳಿತದಲ್ಲಿ ಗಡಿ ಕಾಯುವ ನಮ್ಮ ಯೋಧರ ಕೈಗಳನ್ನು ಕಟ್ಟಿ ಹಾಕಲಾಗಿತ್ತು. ಭಾರತದ ಮೇಲೆ ದಾಳಿಯಾದರೆ ಉತ್ತರ ಕೊಡುವುದಕ್ಕೂ ಅವರಿಗೆ ಅಧಿಕಾರವಿರಲಿಲ್ಲ. ಆದರೀಗ ಪುಲ್ವಾಮಾದಂಥ ದಾಳಿಗೆ ಸರ್ಜಿಕಲ್ ಸ್ಟ್ರೈಕ್ ಮೂಲಕ ಉತ್ತರ ಕೊಡುವಂಥ ಬಲಾಢ್ಯ ದೇಶವಾಗಿದೆ. ಭಾರತದ ಮುನ್ನಡೆಗಾಗಿ ಮತ್ತೆ ಮೋದಿಯವರನ್ನು ಪ್ರಧಾನಿಯಾಗಿಸಲು ಬಿಜೆಪಿಯನ್ನು ಬಹುಮತದಿಂದ ಗೆಲ್ಲಿಸಬೇಕು ಎಂದು ಕರೆ ನೀಡಿದರು.

ಪ್ರಧಾನಿ ನರೇಂದ್ರ ಮೋದಿ ಮತ್ತು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರ ನೇತೃತ್ವದಲ್ಲಿ ಬಿಜೆಪಿ ಇಂದು ಸರ್ವವ್ಯಾಪಿ ಆಗಿದೆ. ಬಿಜೆಪಿ ಉತ್ತರ ರಾಜ್ಯಗಳಲ್ಲಷ್ಟೇ ಪ್ರಭಾವ ಇರೋ ಪಕ್ಷ, ಮೇಲ್ವರ್ಗದವರ ಪಕ್ಷ ಎನ್ನುತ್ತಿದ್ದರು. ಆದರೆ ಈಗ ಹಾಗಿಲ್ಲ. ಕಾಲ ಬದಲಾಗಿದೆ, ತಮ್ಮ ಪಕ್ಷವೂ ಸರ್ವ ವ್ಯಾಪಿಯಾಗಿದೆ ಎಂದು ಪ್ರತಿಪಾದಿಸಿದರು.

ಇದನ್ನೂ ಓದಿ | Lok Sabha Election 2024: ಬೆಂಗಳೂರು ಗ್ರಾಮಾಂತರ ಕ್ಷೇತ್ರವೀಗ ಅತಿ ಸೂಕ್ಷ್ಮ; ಅರೆ ಸೇನಾ ಪಡೆ ನಿಯೋಜಿಸಿದ ಚುನಾವಣಾ ಆಯೋಗ

ಬಿಜೆಪಿ ಇಂದು ದಲಿತ, ರೈತ, ಕೂಲಿ ಕಾರ್ಮಿಕ, ಮಹಿಳೆ, ವಿದ್ಯಾರ್ಥಿ-ಯುವ, ನೌಕರ, ಕುಲ ಕಸುಬುದಾರ ಹೀಗೆ ಸರ್ವ ವರ್ಗದವರನ್ನೂ ತಲುಪಿದೆ. ಎಲ್ಲಾ ಸಾಮಾಜಿಕ ಹಿನ್ನೆಲೆಯುಳ್ಳವರೂ ಬಿಜೆಪಿಯಲ್ಲಿ ಇದ್ದಾರೆ. ಉತ್ತರ ರಾಜ್ಯಗಳು ಮಾತ್ರವಲ್ಲ ಇಡೀ ದೇಶಾದ್ಯಂತ ಪಕ್ಷ ಆವರಿಸಿದೆ. ಇದಕ್ಕೆ ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ನಡ್ಡಾ ಅವರ ಕೊಡುಗೆ ಅಪಾರವಾಗಿದೆ ಎಂದು ಸಚಿವ ಜೋಶಿ ಬಣ್ಣಿಸಿದರು.

ಬಿಜೆಪಿ ಎಲ್ಲಾ ವರ್ಗದವರನ್ನೂ ಒಳಗೊಂಡ ಪರಿಣಾಮ ದೇಶದ 17ಕ್ಕೂ ಹೆಚ್ಚು ರಾಜ್ಯಗಳಲ್ಲಿ ಇಂದು ಬಿಜೆಪಿ ಸರ್ಕಾರವಿದೆ. ಅತ್ಯಂತ ಸಮಚಿತ್ತರಾಗಿ ಕೆಲಸ ಮಾಡುವಂಥ ನಾಯಕ ನಡ್ಡಾ ಅವರು ಪಕ್ಷ ಸಂಘಟನೆಯಲ್ಲಿ ಸಕ್ರಿಯರಾಗಿ ಇರುವುದರಿಂದ ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದೆ ಎಂದು ಹೇಳಿದರು.

ಧಾರವಾಡದಲ್ಲಿ 25,000 ಕೋಟಿ ರೂ. ಅಭಿವೃದ್ಧಿ ಕಾರ್ಯ

ಮೋದಿ ಅವರ ನಾಯಕತ್ವದಲ್ಲಿ ದೇಶ ಪರಿವರ್ತನೆ ಕಂಡಿದೆ. ಹುಬ್ಬಳ್ಳಿ-ಧಾರವಾಡದಲ್ಲಿ 25,000 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯಗಳಾಗಿವೆ. ಹುಬ್ಬಳ್ಳಿ-ಗದಗ ಚತುಷ್ಪಥ, ಹುಬ್ಬಳ್ಳಿ-ಚಿತ್ರದುರ್ಗ 6 ಪಥ ರಸ್ತೆ, ಕಿಮ್ಸ್ ಕಟ್ಟಡ, ರೈಲ್ವೆ ಮಾರ್ಗ, ವಿಮಾನ ನಿಲ್ದಾಣ ಹೀಗೆ ಅನೇಕನೇಕ ಅಭಿವೃದ್ಧಿ ಕಾರ್ಯಗಳನ್ನು ಸಾಧಿಸಲಾಗಿದೆ ಎಂದು ಜೋಶಿ ತಿಳಿಸಿದರು.

ತಲೆ ತಗ್ಗಿಸೋ ಕೆಲಸ ಮಾಡಿಲ್ಲ-ಮಾಡೋದೂ ಇಲ್ಲ:

ಎಂಪಿಯಾಗಿ ಕಳಿಸಿ ಎಂದೂ ಕ್ಷೇತ್ರದ ಜನ ತಲೆ ತಗ್ಗಿಸೋ ಕೆಲಸ ಮಾಡಲ್ಲ ಎಂದು 2004ರಲ್ಲೇ ಲೋಕಸಭೆ ಚುನಾವಣೆಯಲ್ಲಿ ಹೇಳಿದ್ದೆ. ಇಂದಿಗೂ ಅದಕ್ಕೆ ಬದ್ಧವಾಗಿ ನಡೆದುಕೊಂಡಿದ್ದೇನೆ. ಯಾವತ್ತೂ ನಾನು ತಲೆ ತಗ್ಗಿಸೋ ಕೆಲಸ ಮಾಡುವುದಿಲ್ಲ. ಹುಬ್ಬಳ್ಳಿ-ಧಾರವಾಡವನ್ನು ಅಭಿವೃದ್ಧಿಯಲ್ಲಿ ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋಗುವೆ ಎಂದು ಸಚಿವ ಜೋಶಿ ಭರವಸೆ ನೀಡಿದರು.

ಇದನ್ನೂ ಓದಿ | Neha Murder Case: ನೇಹಾ ನಿವಾಸಕ್ಕೆ ಜೆ.ಪಿ.ನಡ್ಡಾ, ರಾಧಾ ಮೋಹನ್ ದಾಸ್ ಭೇಟಿ; ಕುಟುಂಬಸ್ಥರಿಗೆ ಸಾಂತ್ವನ

ಸಭೆಯಲ್ಲಿ ಶಾಸಕರಾದ ಅರವಿಂದ ಬೆಲ್ಲದ, ಮಹೇಶ್ ಟೆಂಗಿನಕಾಯಿ, ಜಿಲ್ಲಾಧ್ಯಕ್ಷರಾದ ತಿಪ್ಪಣ್ಣ ಮಜ್ಜಗಿ, ನಿಂಗಪ್ಪ ಸುತಗಟ್ಟಿ, ಧಾರವಾಡ ಜಿಲ್ಲಾ ಚುನಾವಣಾ ಸಂಚಾಲಕರಾದ ಮ. ನಾಗರಾಜ್, ಮಾಜಿ ಶಾಸಕರಾದ ಅಶೋಕ್ ಕಾಟವೆ, ಸೀಮಾ ಮಸೂತಿ, ಪಕ್ಷದ ಪ್ರಮುಖರಾದ ಲಿಂಗರಾಜ ಪಾಟೀಲ ಹಾಗೂ ಪ್ರಮುಖರು ಉಪಸ್ಥಿತರಿದ್ದರು.

Exit mobile version