ಬೆಂಗಳೂರು: ಮುಂಬರುವ ಲೋಕಸಭಾ ಚುನಾವಣೆಯಲ್ಲಿ (Lok Sabha Election 2024) ರಾಜ್ಯದಲ್ಲಿ ಇರುವ 28 ಲೋಕಸಭಾ ಕ್ಷೇತ್ರಗಳಿಗೆ ಕನಿಷ್ಠ 20 ಕ್ಷೇತ್ರಗಳನ್ನು ಗೆಲ್ಲುವ ಗುರಿಯನ್ನು ಹೊಂದಿರುವ ರಾಜ್ಯ ಕಾಂಗ್ರೆಸ್ (Congress Karnataka) ಆ ನಿಟ್ಟಿನಲ್ಲಿ ಕಾರ್ಯತಂತ್ರ ಹೆಣೆಯುತ್ತಿದೆ. ಅಲ್ಲದೆ, ಆರು ತಿಂಗಳು ಮೊದಲೇ ಅಭ್ಯರ್ಥಿಗಳನ್ನು ಅಂತಿಮಗೊಳಿಸುವತ್ತ ಕಾರ್ಯೋನ್ಮುಖವಾಗಿದೆ. ಒಂದೊಂದೇ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಫೈನಲ್ ಮಾಡುವತ್ತ ದೃಷ್ಟಿ ನೆಡಲಾಗಿದೆ. ಶುಕ್ರವಾರ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ (Chikkaballapur Lok Sabha constituency) ಕಾಂಗ್ರೆಸ್ ಟಿಕೆಟ್ ವಿಚಾರವಾಗಿ ಕೆಪಿಸಿಸಿ ಕಛೇರಿಯಲ್ಲಿ ಮಹತ್ವದ ಸಭೆಯನ್ನು ನಡೆಸಲಾಗಿದೆ. ವೀಕ್ಷಕ, ಸಚಿವ ಜಮೀರ್ ಅಹ್ಮದ್ (Minister Zameer Ahmed) ನೇತೃತ್ವದಲ್ಲಿ ಸಭೆ ನಡೆದಿದ್ದು, ಮಾಜಿ ಸಿಎಂ ವೀರಪ್ಪ ಮೊಯ್ಲಿ (Former CM Veerappa Moily), ವಿಧಾನ ಪರಿಷತ್ ಸದಸ್ಯ ಎಂ.ಆರ್. ಸೀತಾರಾಮ್ ಪುತ್ರ ರಕ್ಷ ರಾಮಯ್ಯ (Raksha Ramayya) ನಡುವೆ ತೀವ್ರ ಪೈಪೋಟಿ ಇದ್ದರೆ, ಮಾಜಿ ಸಚಿವ ಶಿವಶಂಕರ್ ರೆಡ್ಡಿ (Former MLA Shivasankar Reddy), ಮಾಜಿ ಶಾಸಕ ವೆಂಕಟರಮಣಪ್ಪ (Former MLA Venkataramanappa) ಸಹ ಆಕಾಂಕ್ಷಿಗಳಾಗಿದ್ದಾರೆ.
ವೀರಪ್ಪ ಮೊಯ್ಲಿ ಹಾಗೂ ರಕ್ಷಾ ರಾಮಯ್ಯ ಇಬ್ಬರೂ ಈ ಬಾರಿ ಚಿಕ್ಕಬಳ್ಳಾಪುರ ಲೋಕಸಭಾ ಟಿಕೆಟ್‌ಗೆ ತೀವ್ರ ಪೈಪೋಟಿ ನಡೆಸುತ್ತಿದ್ದಾರೆ. ವೀರಪ್ಪ ಮೊಯ್ಲಿ ತಾವು ಈಗಾಗಲೇ ಎರಡು ಬಾರಿ (2009, 2014) ಈ ಕ್ಷೇತ್ರದಲ್ಲಿ ಸಂಸದನಾಗಿ ಆಯ್ಕೆಯಾಗಿದ್ದೇನೆ. ಹೀಗಾಗಿ ಕ್ಷೇತ್ರದ ಮೇಲೆ ತಮಗೆ ಹಿಡಿತ ಜಾಸ್ತಿ ಇದ್ದು, ಟಿಕೆಟ್ ನೀಡಬೇಕು ಎಂದು ಪಟ್ಟು ಹಿಡಿದ್ದಾರೆ. ಅದೇ ರಕ್ಷಾ ರಾಮಯ್ಯ ಸಹ, ನಾನು ಪಕ್ಷದ ಪರವಾಗಿ ಸಾಕಷ್ಟು ಕೆಲಸ ಮಾಡಿದ್ದೇನೆ. ಕ್ಷೇತ್ರದಲ್ಲಿ ಕಳೆದ ಎರಡೂವರೆ ವರ್ಷದಿಂದ ಕೆಲಸ ಮಾಡುತ್ತಾ ಬಂದಿದ್ದೇನೆ. ಜನರ ವಿಶ್ವಾಸವನ್ನೂ ಗಳಿಸಿದ್ದೇನೆ. ಹೀಗಾಗಿ ನನಗೇ ಟಿಕೆಟ್ ಕೊಡಿ ಎಂಬ ವಾದವನ್ನು ಮುಂದಿಟ್ಟಿದ್ದಾರೆ. ಇದರ ನಡುವೆ ಮಾಜಿ ಸಚಿವ ಶಿವಶಂಕರ್ ರೆಡ್ಡಿ, ಮಾಜಿ ಶಾಸಕ ವೆಂಕಟರಮಣಪ್ಪ ಸಹ ತಮಗೆ ಟಿಕೆಟ್ ಕೊಡುವಂತೆ ಬೇಡಿಕೆಯನ್ನು ಮಂಡಿಸಿದ್ದಾರೆ.
ಇದನ್ನೂ ಓದಿ: CM Siddaramaiah : ಪ್ಯಾಲೆಸ್ತೀನ್ ಪರ ನಾಟಕ ತಡೆದ ಪೊಲೀಸರು; ಸಿಎಂ ಸಿದ್ದರಾಮಯ್ಯ ಗರಂ!
ನಾಳೆ ವರದಿ ಸಲ್ಲಿಸುವೆ: ಜಮೀರ್ ಅಹ್ಮದ್
ಇಂದು ಚಿಕ್ಕಬಳ್ಳಾಪುರ ಕ್ಷೇತ್ರದ ಕಾರ್ಯಕರ್ತರ ಅಭಿಪ್ರಾಯವನ್ನು ಸಂಗ್ರಹಿಸಿದ್ದೇನೆ. ಹೆಚ್ಚು ಜನ ಹೈಕಮಾಂಡ್ ತೀರ್ಮಾನಕ್ಕೆ ಬದ್ಧ ಅಂತ ಹೇಳಿದ್ದಾರೆ. ಐದು ಮಂದಿ ಆಕಾಂಕ್ಷಿಗಳು ಟಿಕೆಟ್ ಬಯಸಿದ್ದಾರೆ. ವೀರಪ್ಪ ಮೊಯ್ಲಿ, ವೆಂಕಟರಮಣಪ್ಪ, ಶಿವಶಂಕರರೆಡ್ಡಿ, ರಕ್ಷಾ ರಾಮಯ್ಯ ಸೇರಿದಂತೆ ಐವರು ಟಿಕೆಟ್ ಕೇಳಿದ್ದಾರೆ. ಕಾರ್ಯಕರ್ತರು ಮುಖಂಡರ ಅಭಿಪ್ರಾಯದ ವರದಿಯನ್ನು ನಾಳೆಯೇ ಸಲ್ಲಿಸುತ್ತೇನೆ ಎಂದು ಜಮೀರ್ ಅಹ್ಮದ್ ಖಾನ್ ತಿಳಿಸಿದ್ದಾರೆ.
ಲೋಕಸಭೆಗೆ ಸ್ಪರ್ಧಿಸುತ್ತೇನೆ: ವೀರಪ್ಪ ಮೊಯ್ಲಿ
ಈ ವೇಳೆ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ವೀರಪ್ಪ ಮೊಯ್ಲಿ, ನಾನು ಈ ಬಾರಿ ಲೋಕಸಭೆಗೆ ಸ್ಪರ್ಧಿಸುತ್ತೇನೆ. ಟಿಕೆಟ್‌ಗಾಗಿ ಇನ್ನೂ ಅರ್ಜಿ ಆಹ್ವಾನಿಸಿಲ್ಲ. ರಕ್ಷಾ ರಾಮಯ್ಯ ಟಿಕೆಟ್ ಕೇಳುವುದರಲ್ಲಿ ತಪ್ಪೇನಿಲ್ಲ. ಅಂತಿಮವಾಗಿ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ನಾನು ವೀಕ್ಷಕರನ್ನು ಭೇಟಿಯಾಗಿ ಬಂದಿದ್ದೇನೆ ಎಂದು ಹೇಳಿದ್ದಾರೆ.
ನನಗೆ ಟಿಕೆಟ್ ಸಿಗುವ ಭರವಸೆ ಇದೆ: ರಕ್ಷಾ ರಾಮಯ್ಯ
ಎರಡೂವರೆ ವರ್ಷದಿಂದ ನಾನು ಚಿಕ್ಕಬಳ್ಳಾಪುರದಲ್ಲಿ ಕೆಲಸ ಮಾಡುತ್ತಿದ್ದೇನೆ. ಯಾರಿಗೇ ಟಿಕೆಟ್ ಕೊಟ್ಟರೂ ಕೆಲಸ ಮಾಡುತ್ತೇನೆ. ವೀರಪ್ಪ ಮೊಯ್ಲಿ ಅವರಿಗೆ ಟಿಕೆಟ್ ಕೊಟ್ಟರೂ ಸಂತೋಷ. ಹೈಕಮಾಂಡ್ ನಾಯಕರು ಎಲೆಕ್ಷನ್‌ಗಳಲ್ಲಿ ಬ್ಯುಸಿ ಆಗಿದ್ದಾರೆ. ಸದ್ಯಕ್ಕೆ ನಾನು ಯಾರನ್ನೂ ಭೇಟಿ ಮಾಡಿಲ್ಲ. ಸಿಎಂ ಸಿದ್ದರಾಮಯ್ಯ ಅವರು ಯಾರಿಗೂ ಟಿಕೆಟ್ ಕೊಡುವ ಬಗೆಗ ಭರವಸೆ ನೀಡಿಲ್ಲ. ನನಗೆ ಟಿಕೆಟ್ ಸಿಗುವ ಭರವಸೆ ಇದೆ ಎಂದು ರಕ್ಷಾ ರಾಮಯ್ಯ ಹೇಳಿದರು.
ಆಕಾಂಕ್ಷಿಗಳು ಸಭೆಯಲ್ಲಿ ಇರಬಾರದು ಎಂದು ಹೇಳಿದ್ದರಿಂದ ನಾವೆಲ್ಲರೂ ಹೊರಗಡೆ ಇದ್ದೇವೆ. ಬ್ಲಾಕ್ ಅಧ್ಯಕ್ಷರು ಮಾಜಿ ಅಧ್ಯಕ್ಷರು, ಜಿಲ್ಲಾಧ್ಯಕ್ಷರು ಎಲ್ಲರ ಅಭಿಪ್ರಾಯವನ್ನು ಪಡೆದಿದ್ದಾರೆ. ಯಾರಿಗೆ ಟಿಕೆಟ್ ಕೊಟ್ಟರೂ ಸಂತೋಷದಿಂದ ಕೆಲಸ ಮಾಡುತ್ತೇವೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸಾಕಷ್ಟು ಕೆಲಸ ಮಾಡಿದ್ದೇನೆ. ಮೇಕೆದಾಟು, ಭಾರತ್ ಜೋಡೋ ಯಾತ್ರೆಗಳಲ್ಲಿ ಭಾಗವಹಿಸಿದ್ದೆ ಎಂದು ರಕ್ಷಾ ರಾಮಯ್ಯ ತಿಳಿಸಿದರು.
ಹೈಕಮಾಂಡ್ ನಾಯಕರು ವೀರಪ್ಪ ಮೊಯ್ಲಿ ಅವರಿಗೆ ಟಿಕೆಟ್ ಕೊಟ್ಟರೆ ಕೆಲಸ ಮಾಡುತ್ತೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ರಕ್ಷಾ ರಾಮಯ್ಯ, ಖಂಡಿತವಾಗಿ ಕೆಲಸ ಮಾಡುತ್ತೇನೆ. ನಮ್ಮ ಬೆಂಬಲಿಗರು ಗಲಾಟೆ ಮಾಡಿಲ್ಲ. ನನ್ನ ಪರ ಘೋಷಣೆ ಕೂಗಿರಬಹುದು. ಟಿಕೆಟ್ ಯಾರಿಗೆ ಕೊಟ್ಟರೂ ಬೇಸರವಿಲ್ಲ. ಅವರ ಪರವಾಗಿ ನಾನು ಕೆಲಸ ಮಾಡುತ್ತೇನೆ ಎಂದು ರಕ್ಷಾ ರಾಮಯ್ಯ ಹೇಳಿದರು.
ನಾನೂ ಟಿಕೆಟ್ ಆಕಾಂಕ್ಷಿ: ಶಿವಶಂಕರ್ ರೆಡ್ಡಿ
ಮಾಜಿ ಸಚಿವ ಶಿವಶಂಕರ್ ರೆಡ್ಡಿ ಮಾತನಾಡಿ, ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ನಾನೂ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ. ವೀರಪ್ಪ ಮೊಯ್ಲಿ, ರಕ್ಷಾ ರಾಮಯ್ಯ ಟಿಕೆಟ್ ಕೇಳಿದ್ದಾರೆ. ವೀಕ್ಷಕರಿಗೆ ನಮ್ಮ ಅಭಿಪ್ರಾಯವನ್ನು ಹೇಳಿದ್ದೇವೆ. ಹೈಕಮಾಂಡ್ ಏನು ಮಾಡುತ್ತದೋ ನೋಡೋಣ ಎಂದು ಹೇಳಿದ್ದಾರೆ.
ವೀರಪ್ಪ ಮೊಯ್ಲಿಗೆ ಟಿಕೆಟ್ ಕೊಟ್ಟರೆ ಸೂಕ್ತ: ಶಾಸಕ ಸುಬ್ಬಾರೆಡ್ಡಿ
ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಬಾಗೇಪಲ್ಲಿ ಶಾಸಕ ಸುಬ್ಬಾರೆಡ್ಡಿ, ಸಚಿವ ಜಮೀರ್ ಅಹ್ಮದ್ ಖಾನ್ ನೇತೃತ್ವದಲ್ಲಿ ಅಭ್ಯರ್ಥಿ ಆಯ್ಕೆ ಸಭೆ ನಡೆದಿದೆ. ಯಾರಿಗೆ ಟಿಕೆಟ್ ಕೊಟ್ಟರೂ ಕೆಲಸ ಮಾಡುತ್ತೇವೆ. ವೀರಪ್ಪ ಮೊಯ್ಲಿಗೆ ಟಿಕೆಟ್ ಕೊಟ್ಟರೆ ಸೂಕ್ತ ಎಂದು ಹೇಳಿದ್ದಾರೆ.
ಇದನ್ನೂ ಓದಿ: Vishwadarshana Education Society : ಡಾ. ವಿಜಯ ಸಂಕೇಶ್ವರ ಮೀಡಿಯಾ ಸ್ಕೂಲ್; ಪ್ರವೇಶ ದಿನಾಂಕ ವಿಸ್ತರಣೆ
ನಾಲ್ಕು ಜನ ಟಿಕೆಟ್ ಆಕಾಂಕ್ಷಿಗಳಿದ್ದಾರೆ: ಪ್ರದೀಪ್ ಈಶ್ವರ್
ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಶಾಸಕ ಪ್ರದೀಪ್ ಈಶ್ವರ್, ಚಿಕ್ಕಬಳ್ಳಾಪುರ ಕ್ಷೇತ್ರದ ಟಿಕೆಟ್‌ಗೆ ಅಭ್ಯರ್ಥಿಗಳ ಚರ್ಚೆ ಆಯಿತು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಜಿಲ್ಲಾಧ್ಯಕ್ಷರು ಎಲ್ಲರದ್ದೂ ಅಭಿಪ್ರಾಯವನ್ನು ಪಡೆದುಕೊಂಡಿದ್ದಾರೆ. ನಾಲ್ಕು ಜನ ಟಿಕೆಟ್ ಆಕಾಂಕ್ಷಿಗಳು ಇದ್ದಾರೆ. ಮಿಕ್ಕಿದ್ದು ಹಿರಿಯ ನಾಯಕರು ಮಾತಾಡುತ್ತಾರೆ. ನಾನು ಇನ್ನೂ ಸಾಮಾನ್ಯ ಕಾರ್ಯಕರ್ತ ಎಂದು ಹೇಳಿದ್ದಾರೆ.