ಮೈಸೂರು: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನಲೆಯಲ್ಲಿ ವಿವಿಧ ಧರ್ಮಗುರುಗಳು, ಹಿರಿಯ ಸಾಹಿತಿಗಳು, ಬುದ್ಧಿ ಜೀವಿಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದುಕೊಳ್ಳುತ್ತಿರುವ ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ (Yaduveer Krishnadatta Chamaraja Wadiyar) ಅವರು, ಹಿರಿಯ ಸಾಹಿತಿ ಎಸ್.ಎಲ್. ಭೈರಪ್ಪ (SL Bhyrappa) ನಿವಾಸಕ್ಕೆ ಶುಕ್ರವಾರ ನೀಡಿ ಮಾತುಕತೆ ನಡೆಸಿದರು. ಕುವೆಂಪುನಗರದ ಉದಯರವಿ ರಸ್ತೆಯಲ್ಲಿರುವ ನಿವಾಸದಲ್ಲಿ ಭೈರಪ್ಪನವರಿಗೆ ಹಾರ ಹಾಕಿ, ಶಾಲು ಹೊದಿಸಿ ಯದುವೀರ್ ಸನ್ಮಾನಿಸಿದರು. ಅವರಿಗೆ ಸ್ಥಳೀಯ ಶಾಸಕ ಶ್ರೀವತ್ಸ ಸೇರಿದಂತೆ ಹಲವು ಬಿಜೆಪಿ ಮುಖಂಡರು ಸಾಥ್ ನೀಡಿದರು.
ಈ ವೇಳೆ ಸಾಹಿತಿ ಎಸ್.ಎಲ್. ಭೈರಪ್ಪ ಮಾತನಾಡಿ, ಮತ್ತೊಮ್ಮೆ ಮೋದಿಯೇ ಪ್ರಧಾನಿ ಆಗುತ್ತಾರೆ. ಇದರಲ್ಲಿ ಅನುಮಾನವೇ ಬೇಡ. ದೇಶದಲ್ಲಿ ಉತ್ತಮ ವಾತಾವರಣ ಇದೆ. ಕರ್ನಾಟಕದಲ್ಲಿ ಸ್ವಲ್ಪ ವೋಟು ಒಡೆದು ಹೋಗುತ್ತೆ. ಆದರೆ ಬಿಜೆಪಿ ಏನು ತೀರಾ ಸೋತು ಹೋಗಲ್ಲ. ಅರ್ಧಕ್ಕಿಂತ ಜಾಸ್ತಿ ಸೀಟು ಗೆಲ್ಲುತ್ತೆ. ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಎಫೆಕ್ಟಿವ್ ಆಗಿ ಇರಲಿಲ್ಲ. ಅಧಿಕಾರವನ್ನು ಕಂಟ್ರೋಲ್ ಮಾಡಲು ಆಗಿರಲಿಲ್ಲ. ಆದರೆ ಕರ್ನಾಟಕದಲ್ಲಿ ಕಾಂಗ್ರೆಸ್ ಸ್ಟ್ರಾಂಗ್ ಇದೆ. ಆದರೆ ಅವರು ಹೋಗುತ್ತಿರುವ ದಾರಿ ಸರಿಯಿಲ್ಲ. ಗ್ಯಾರಂಟಿ ಕೊಟ್ಟು ಜನಪ್ರಿಯ ಆಗಿರಬಹುದು. ಆದರೆ ಇವರ ಬಳಿ ಹಣ ಇಲ್ಲ. ಈಗಾಗಿ ಕೇಂದ್ರದ ವಿರುದ್ಧ ಬೈಯ್ಯುತ್ತಾರೆ ಎಂದು ಹೇಳಿದರು.
ರಾಜ್ಯದವರ ಭಾಷೆ ಅನ್ ಡಿಗ್ನಿಫೈಡ್ ಲಾಂಗ್ವೇಜ್. ಕಾಂಗ್ರೆಸ್‌ನವರಿಗೆ ಗೌರವ ಕೊಟ್ಟು ಮಾತನಾಡುವ ಕಲ್ಚರ್ ಇಲ್ಲ. ಆದರೆ ಬಿಜೆಪಿ ಅವರಿಗೆ ಅದು ಇದೆ. ಅಕಸ್ಮಾತ್ ಬಿಜೆಪಿಯವರು ಒರಟಾಗಿ ಮಾತನಾಡುತ್ತಿದ್ದಾರೆ ಎಂದರೆ ಅವರು ಕಾಂಗ್ರೆಸ್‌ನ ಫಾಲೋ ಮಾಡುತ್ತಿದ್ದಾರೆ ಎಂದರ್ಥ. ಅವರು ಏನೇ ಮಾತನಾಡಿದರೂ ನಾವು ನಮ್ಮ ಘನತೆ ಕಡಿಮೆ ಮಾಡಿಕೊಳ್ಳಬಾರದು ಎಂದು ತಿಳಿಸಿದರು.
ಇದನ್ನೂ ಓದಿ | Parliament Flashback: ಕಾಂಗ್ರೆಸ್‌ನಿಂದ ನಾಲ್ಕು ಬಾರಿ ಗೆದ್ದು, ಬಿಜೆಪಿಯಿಂದ ಸ್ಪರ್ಧಿಸಿದಾಗ ಸೋತು ಹೋಗಿದ್ದ ಒಡೆಯರ್!
ನಮ್ಮ ಪ್ರತಾಪ್ ಸಿಂಹ ಡೈನಾಮಿಕ್ ಮ್ಯಾನ್
ನಮ್ಮ ಪ್ರತಾಪ್ ಸಿಂಹ ಡೈನಾಮಿಕ್ ಮ್ಯಾನ್. ಅವರು ತುಂಬಾ ಕೆಲಸ ಮಾಡಿದ್ದಾರೆ. ಕೊಡಗಿನಲ್ಲಿ ಟಿಪ್ಪು ಜಯಂತಿಗೆ ಬ್ರೇಕ್ ಹಾಕಿದ್ದಾರೆ. ಅವರಲ್ಲಿ ಫೈಟಿಂಗ್ ಸ್ಪಿರಿಟ್ ಇದೆ. ಇವತ್ತೂ ಕೂಡ ಫೈಟಿಂಗ್ ಸ್ಪಿರಿಟ್‌ನಲ್ಲಿ ಇದ್ದಾರೆ. ಟಿಕೆಟ್ ಮಿಸ್ ಆದ್ರೆ ಏನಾಗುತ್ತೆ. ಸಂಸದನಾದರೆ ಅಲ್ಲೇ ಕೇಂದ್ರೀಕೃತವಾಗಿರುತ್ತಾರೆ. ಅದನ್ನು ಬಿಟ್ಟು ಮಾಡಲು ಬಹಳ ಕೆಲಸ ಇದೆ. ಅದೇ ಸ್ಫೂರ್ತಿಯಲ್ಲಿ ಪ್ರತಾಪ್ ಸಿಂಹ ಇದ್ದಾರೆ. ಯದುವೀರ್‌ಗೆ ಟಿಕೆಟ್ ಕೊಟ್ಟಿರೋದಕ್ಕೆ ಒಂದಕ್ಕೊಂದು ವಿರೋಧ ಇಲ್ಲ.
ಯದುವೀರ್‌ಗೆ ಟಿಕೆಟ್ ಕೊಟ್ಟಿದ್ದು ಒಳ್ಳೆಯದೇ ಆಯ್ತು. ಯದುವೀರ್ ಹಿನ್ನೆಲೆ ನೋಡಿದಾಗ, ಇವರಿಗೆ ಸ್ಥಾನಮಾನ ಕೊಟ್ಟರೆ ಉತ್ತಮವಾಗಿ ನಿಭಾಯಿಸುತ್ತಾರೆ ಎನಿಸುತ್ತದೆ ಎಂದು ಎಸ್‌ಎಲ್.ಭೈರಪ್ಪ ಹೇಳಿದರು.
ಲೆಫ್ಟಿಸ್ಟ್ ಸಾಹಿತಿಗಳದ್ದು ಡಬಲ್ ಗೇಮ್
ಎಡಪಂಥೀಯ ಸಾಹಿತಿಗಳಲ್ಲಿ ಡಬಲ್ ಗೇಮ್ ತುಂಬಾ ಇರುತ್ತದೆ ಎಂದ ಅವರು, ಬಂಗಾಳ ಮಾಜಿ ಮುಖ್ಯಮಂತ್ರಿ ಜ್ಯೋತಿ ಬಸುರನ್ನು ಉದಾಹರಣೆ ಕೊಟ್ಟು, ಅವರ ಮಕ್ಕಳು ಕ್ಯಾಪಿಟಲಿಸ್ಟ್ ಆಗಿ ಏನಾದರೂ ಮಾಡಬಹುದು. ಇವರು ಮಾತ್ರ ಎಡಪಂಥೀಯ ಧೋರಣೆ ಹೊಂದಿದ್ದರು. ಬಂಗಾಳದಲ್ಲಿ ಇರುವಷ್ಟು ಬಡತನ ದೇಶದಲ್ಲಿ ಎಲ್ಲೂ ಇಲ್ಲ. ಲೆಫ್ಟಿಸಂ ಅನ್ನೋದು ಬರಿ ಮೋಸ ಮಾಡೋದೆ ಕೆಲಸ. ನನ್ನನ್ನ ಇವರೆಲ್ಲ ಕ್ಯಾಪಿಟಲಿಸ್ಟ್ ಅಂತಾರೆ. ಅದಿಲ್ಲದಿದ್ದರೆ ದೇಶ ಬೆಳವಣಿಗೆ ಆಗೋದೇ ಇಲ್ಲ. ಲೆಫ್ಟಿಸ್ಟ್‌ಗಳೆಲ್ಲ ಅಪ್ರಾಮಾಣಿಕರು ಎಂದು ಹರಿಹಾಯ್ದರು.
ಗುಜರಾತಿನವರು ಆ್ಯಕ್ಟೀವ್ ಹಾಗೂ ಹಾನೆಸ್ಟ್ ಆಗಿ ಕೆಲಸ ಮಾಡುತ್ತಾರೆ. ನಮ್ಮಲ್ಲಿ ಅಂಗಡಿ ವ್ಯಾಪಾರಿಗಳು ಅಂದ್ರೆ ಪೂರ್ಣ ಪ್ರಾಮಾಣಿಕರು ಅಂತ ಹೇಳೊಕೆ ಆಗಲ್ಲ. ಆದರೆ ಗುಜರಾತ್‌ನಲ್ಲಿ 6 ವರ್ಷದ ಮಗು ಕೈಯಲ್ಲಿ ಹಣ ಕೊಟ್ಟು ಕಳುಹಿಸಿದರೂ ವ್ಯಾಪಾರಸ್ಥರು ಪ್ರಾಮಾಣಿಕವಾಗಿ ಚಿಲ್ಲರೆ ಕೊಟ್ಟು ಕಳುಹಿಸುತ್ತಾರೆ. ಗುಜರಾತಿಗಳು ಸುಳ್ಳು ಹೇಳೊಕೆ ಹೋಗೋದಿಲ್ಲ. ಅದಿಲ್ಲ ಅಂದ್ರೆ ಯಾವ ದೇಶ ಉದ್ಧಾರ ಆಗೋಕೆ ಸಾಧ್ಯ ಹೇಳಿ. ಮೋದಿ ಅವರಿಗೂ ಅದೇ ಇದೆ.
ಅವರು ವ್ಯಾಪಾರಿಯಾಗಿ ಪ್ರಾಮಾಣಿಕರಾಗಿದ್ದಾರೆ. ವ್ಯಾಪಾರ ಕೇವಲ ಹಣಕ್ಕಾಗಿ ಅಲ್ಲ, ದೇಶಕ್ಕಾಗಿ ಮಾಡುತ್ತಾರೆ. ಅವರು ವ್ಯಾಪಾರ ಬಿಟ್ಟು ಬರುವಾಗ, ಅಲ್ಲಿದ್ದ ಬಡ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ತಮ್ಮ ಬಳಿ ಇದ್ದ 23 ಲಕ್ಷ ಕೊಟ್ಟು ಬಂದರು.
ಅದೊಂದು ಮಾದರಿ ಆಯ್ತು. ಕೇಂದ್ರ ಸರ್ಕಾರದಲ್ಲಿ ಅದನ್ನ ಅಳವಡಿಸಿಕೊಂಡರು. ಇದನ್ನೆಲ್ಲ ಕ್ಯಾಪ್ಟಲಿಸ್ಟ್ ಅನ್ನೋಕಾಗುತ್ತಾ ಎಂದು ಪ್ರಶ್ನಿಸಿದರು.
ಇದನ್ನೂ ಓದಿ | Lok Sabha Election 2024: ಸಿದ್ದರಾಮಯ್ಯ ಗೂಂಡಾ ಗುರು; ಯತೀಂದ್ರ ಜೈಲಿಗೆ ಹೋಗ್ತಾರೆ: ಆರ್. ಅಶೋಕ್ ಕೆಂಡ
ಕಾರು ವ್ಯಾಪಾರದಿಂದ ಹಣ ಬಂತು ಅಂದುಕೊಳ್ಳುವುದು ಆರ್ಥಿಕತೆ ಅಲ್ಲ. ಅದರಿಂದ ಎಷ್ಟು ಕುಟುಂಬಕ್ಕೆ ನೆರವಾಯಿತು ಎನ್ನುವುದು ನಿಜವಾದ ಆರ್ಥಿಕತೆ. ಮತ್ತೊಮ್ಮೆ ಮೋದಿ ಪ್ರಧಾನಿ ಆಗುತ್ತಾರೆ ನೋಡಿ. ಅದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ಪುನರುಚ್ಚರಿಸಿದರು.