Site icon Vistara News

Lok Sabha Election 2024: ಇಲ್ಲಿರೋದು ಗ್ಯಾರಂಟಿ ಅಲೆ ಮಾತ್ರ; ಹಸಿ ಸುಳ್ಳು ಹೇಳುತ್ತಿರುವ ಮೋದಿ, ದೇವೇಗೌಡ: ಸಿಎಂ ಸಿದ್ದರಾಮಯ್ಯ

Lok Sabha Election 2024 Only a guaranteed wave in Karnataka says Cm Siddaramaiah

ಚಿತ್ರದುರ್ಗ: ಚುನಾವಣೆ (Lok Sabha Election 2024) ಸಂದರ್ಭದಲ್ಲಿ ಮಾತ್ರ ಪ್ರಧಾನಿ ನರೇಂದ್ರ ಮೋದಿಗೆ ಕರ್ನಾಟಕ ನೆನಪಾಗುತ್ತದೆ. ಕರ್ನಾಟಕ ರಾಜ್ಯ ಭೀಕರ ಬರಗಾಲವನ್ನು ಎದುರಿಸುತ್ತಿದೆ. ಪ್ರವಾಹ ಬಂದಾಗ, ಬರಗಾಲ ಬಂದಾಗ ರಾಜ್ಯಕ್ಕೆ ಬಂದು ಜನರ ಕಷ್ಟ ಕೇಳಲಿಲ್ಲ. ಈಗ ಮತ ಕೇಳಲು ನರೇಂದ್ರ ಮೋದಿ (PM Narendra Modi), ಅಮಿತ್ ಶಾ (Amit Shah) ಬಂದಿದ್ದಾರೆ. ಕರ್ನಾಟಕದಲ್ಲಿ ಮೋದಿ (Modi wave in Karnataka) ಅಲೆಯಿಲ್ಲ. ಏಕೆಂದರೆ ಅವರ ಸುಳ್ಳು ಜನರಿಗೆ ಅರ್ಥವಾಗಿದೆ. ಕರ್ನಾಟಕದಲ್ಲಿ ಗ್ಯಾರಂಟಿಗಳ ಅಲೆಯಿದೆ. ಅಲ್ಲದೆ, ಪ್ರಧಾನಿ ನರೇಂದ್ರ ಮೋದಿ ಮತ್ತು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ (HD Devegowda) ಅವರು ಹಸೀ ಸುಳ್ಳು ಹೇಳಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಹೇಳಿದರು.

ಚಿತ್ರದುರ್ಗದಲ್ಲಿ ನಡೆದ ಕಾಂಗ್ರೆಸ್ ನ್ಯಾಯ ಸಂಕಲ್ಪ ಸಮಾವೇಶದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಕಳೆದ ಹತ್ತು ವರ್ಷಗಳಿಂದ ಕೇಂದ್ರದಲ್ಲಿ ಬಿಜೆಪಿ ಅಧಿಕಾರ ಹೊಂದಿದೆ. ನರೇಂದ್ರ ಮೋದಿ ಪ್ರಧಾನಮಂತ್ರಿ ಆಗಿದ್ದಾರೆ. ಹತ್ತು ವರ್ಷಗಳಲ್ಲಿ ದಲಿತರು, ಹಿಂದುಳಿದವರು, ಮಹಿಳೆಯರು, ಬಡವರ ಪರವಾಗಿ ಅವರು ಏನೂ ಮಾಡಿಲ್ಲ. ಆರ್ಥಿಕ ಶಕ್ತಿ ತುಂಬುವಲ್ಲಿ ವಿಫಲರಾಗಿದ್ದಾರೆ. 2014ರಲ್ಲಿ‌ ಮೋದಿಯವರು ಅನೇಕ ಭರವಸೆ ಕೊಟ್ಟಿದ್ದರು. ಆದರೆ ಯಾವುದನ್ನೂ ಈಡೇರಿಸಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಕಿಡಿಕಾರಿದರು.

Lok Sabha Election 2024 Only a guaranteed wave in Karnataka says Cm Siddaramaiah

ಈ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಒಂದಾಗಿದ್ದಾರೆ. ಸೋಲುವ ಭಯದಿಂದ ಈ ಇಬ್ಬರೂ ಒಂದಾಗಿದ್ದಾರೆ. ಸ್ವತಂತ್ರವಾಗಿ ಸ್ಪರ್ಧೆ ಮಾಡಿದರೆ ಸೋಲುತ್ತೇವೆ ಎಂದು ಅಪವಿತ್ರ ಮೈತ್ರಿ ಮಾಡಿಕೊಂಡಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಕಿಡಿಕಾರಿದರು.

ಪೈಪೋಟಿ ಮೇಲೆ ಸುಳ್ಳು

ಈ ಮೊದಲು ನರೇಂದ್ರ ಮೋದಿ ಪ್ರಧಾನಿಯಾದರೆ ದೇಶ ಬಿಟ್ಟು ಹೋಗುತ್ತೇನೆ, ಮುಂದಿನ ಜನ್ಮದಲ್ಲಿ ಮುಸ್ಲಿಂ ಆಗಿ ಹುಟ್ಟುತ್ತೇನೆ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಹೇಳಿದ್ದರು. ಆದರೆ ಈಗ ಕೋಮುವಾದಿ ಬಿಜೆಪಿ ಪಕ್ಷದ ಜತೆಗೆ ಸೇರಿಕೊಂಡಿದ್ದಾರೆ. ಮನಮೋಹನ್ ಸಿಂಗ್ ಖಾಲಿ ಚೊಂಬು ಕೊಟ್ಟಿದ್ದರು, ಮೋದಿ ಅದನ್ನು ಅಕ್ಷಯ ಪಾತ್ರೆ ಮಾಡಿಟ್ಟಿದಾರೆ. ಮೋದಿ, ದೇವೇಗೌಡರು ಪೈಪೋಟಿ ಮೇಲೆ ಸುಳ್ಳು ಹೇಳುತ್ತಿದ್ದಾರೆ. ಹಸಿ ಸುಳ್ಳುಗಳನ್ನು ಹೇಳುತ್ತಿದ್ದಾರೆ‌ ಎಂದು ಸಿಎಂ ಸಿದ್ದರಾಮಯ್ಯ ಆರೋಪಿಸಿದರು.

ಇದನ್ನೂ ಓದಿ: CM Siddaramaiah: ಕೇಂದ್ರದ ವಿರುದ್ಧ ಕಾಂಗ್ರೆಸ್‌ ಪ್ರತಿಭಟನೆ; ಮೋದಿ, ಅಮಿತ್ ಶಾಗೆ ಗೋ ಬ್ಯಾಕ್‌ ಘೋಷಣೆ

ರೈತರ ಸಾಲ ಮನ್ನಾ ಮಾಡದ ಮೋದಿ

ಮೋದಿಗೆ ರೈತರ ಸಾಲ ಮನ್ನಾ ಮಾಡಲು ಸಾಧ್ಯವಾಗಲಿಲ್ಲ. ಆದರೆ, ಬಂಡವಾಳಶಾಹಿಗಳ ಸಾಲಮನ್ನಾ ಮಾಡಿದ್ದಾರೆ. ಮೋದಿ ಯಾರ ಪರ ಎಂಬುದನ್ನು ಇದರಿಂದಲೇ ನೀವು ಅರ್ಥ ಮಾಡಿಕೊಳ್ಳಬೇಕು. ಅಚ್ಚೇ ದಿನ ಆಯೇಗಾ ಅಂದ್ರು ಬಂತಾ? ಡೀಸೆಲ್ ಬೆಲೆಯು ಆಗ ಎಷ್ಟಿತ್ತು? ಈಗ ಎಷ್ಟಾಗಿದೆ? ಅಂದು ಈ ಗ್ಯಾಸ್ ಬೆಲೆ, ಪೆಟ್ರೋಲ್ ಬೆಲೆ ಎಷ್ಟಿತ್ತು? ಇಂದು ಎಷ್ಟಾಗಿದೆ? ಅಚ್ಚೇ ದಿನ ಬರಲೇ ಇಲ್ಲ. ಕರ್ನಾಟಕಕ್ಕೆ ಮೋದಿಯವರ ಕೊಡುಗೆ ಏನೆಂದರೆ ಚೊಂಬು ಎಂದು ಸಿಎಂ ಸಿದ್ದರಾಮಯ್ಯ ದೂರಿದರು.

ಗ್ಯಾರಂಟಿ ಯೋಜನೆಗಳು ನಿಲ್ಲಲ್ಲ

ಚುನಾವಣೆ ಬಳಿಕ ಗ್ಯಾರಂಟಿ ಯೋಜನೆಗಳನ್ನು ಸ್ಥಗಿತಗೊಳಿಸುತ್ತಾರೆ ಎಂದು ಬಿಜೆಪಿಯವರು ಪ್ರಚಾರ ಮಾಡುತ್ತಿದ್ದಾರೆ. ನಾವು ಬಿಜೆಪಿಯವರು ಅಲ್ಲ, 2028ರವರೆಗೆ ನಮಗೆ ಆಶೀರ್ವಾದ ಮಾಡಿದ್ದಾರೆ. ಅಲ್ಲಿಯವರೆಗೆ ಗ್ಯಾರಂಟಿ ಯೋಜನೆಗಳನ್ನು ಮುಂದುವರಿಸುತ್ತೇವೆ. ಯಾವುದೇ ಕಾರಣಕ್ಕೂ ಗ್ಯಾರಂಟಿ ನಿಲ್ಲಿಸುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದರು.

ಇದೇ ಏಪ್ರಿಲ್‌ 26ರಂದು ಕರ್ನಾಟಕದಲ್ಲಿ ಮೊದಲ ಹಂತದ ಚುನಾವಣೆ ನಡೆಯುತ್ತಿದೆ. ನೀವು ಎಲ್ಲರೂ ಕಾಂಗ್ರೆಸ್ ಅಭ್ಯರ್ಥಿಯನ್ನು ಹೆಚ್ಚು ಬಹುಮತದಿಂದ ಗೆಲ್ಲಿಸಿಕೊಡಬೇಕು ಎಂದು ಸಿಎಂ ಸಿದ್ದರಾಮಯ್ಯ ಮನವಿ ಮಾಡಿದರು.

Exit mobile version