Site icon Vistara News

Narendra Modi: ಇಂದು ರಾತ್ರಿಯೇ ರಾಜ್ಯಕ್ಕೆ ಮೋದಿ ಆಗಮನ; ನಾಳೆಯಿಂದ ಅಬ್ಬರದ ಪ್ರಚಾರ, ವಿವರ ಇಲ್ಲಿದೆ

Narendra Modi

Lok Sabha Election 2024: PM Narendra Modi Visit To Karnataka, Here Is Campaign Schedule

ಬೆಂಗಳೂರು: ಕರ್ನಾಟಕದಲ್ಲಿ ಲೋಕಸಭೆ ಚುನಾವಣೆಯ (Lok Sabha Election 2024) ಮೊದಲ ಹಂತದ ಮತದಾನ ಮುಕ್ತಾಯವಾಗಿದೆ. ಎರಡನೇ ಹಂತದ ಮತದಾನವು ಮೇ 7ರಂದು ನಡೆಯಲಿದ್ದು, ಬಿಜೆಪಿ, ಕಾಂಗ್ರೆಸ್‌ ಸೇರಿ ಎಲ್ಲ ಪಕ್ಷಗಳು ಉತ್ತರ ಕರ್ನಾಟಕ ಭಾಗದ ಕಡೆ ಹೆಚ್ಚು ಒತ್ತು ಕೊಡುತ್ತಿವೆ. ಪಕ್ಷಗಳ ಬಹುತೇಕ ನಾಯಕರು ಉತ್ತರ ಕರ್ನಾಟಕದಲ್ಲಿಯೇ ಬೀಡುಬಿಟ್ಟಿದ್ದಾರೆ. ಎರಡನೇ ಹಂತದ 14 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲು ರಣತಂತ್ರ ರೂಪಿಸುತ್ತಿದ್ದಾರೆ. ಇದರ ಬೆನ್ನಲ್ಲೇ, ಭಾನುವಾರ (ಏಪ್ರಿಲ್‌ 28) ಹಾಗೂ ಸೋಮವಾರ (ಏಪ್ರಿಲ್‌ 29) ರಾಜ್ಯದಲ್ಲಿ ನರೇಂದ್ರ ಮೋದಿ (Narendra Modi) ಅವರು ಅಬ್ಬರದ ಪ್ರಚಾರ ಕೈಗೊಳ್ಳಲಿದ್ದಾರೆ.

ನರೇಂದ್ರ ಮೋದಿ ಅವರು ಶನಿವಾರ (ಏಪ್ರಿಲ್‌ 27) ರಾತ್ರಿಯೇ ಬೆಳಗಾವಿಗೆ ಆಗಮಿಸಲಿದ್ದು, ಕುಂದಾ ನಗರಿಯಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ. ಶನಿವಾರ ರಾತ್ರಿ ಮೋದಿ ಅವರನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಲು ಲೋಕಸಭೆ ಕ್ಷೇತ್ರದ ವ್ಯಾಪ್ತಿಯ 15 ಮಂದಿಗೆ ಸ್ವಾಗತ ಕೋರಲು ಅವಕಾಶ ನೀಡಲಾಗಿದೆ. ಬಾಳೇಶ್ ಚವ್ವನ್ನವರ್, ರಾಜೇಶ್ವರಿ ಒಡೆಯರ್, ಸುಭಾಷ್ ಸಣ್ಣ ವೀರಪ್ಪನವರ್ ಸೇರಿ ಬೆಳಗಾವಿಯ 15 ಹಲವು ಸಮುದಾಯಗಳ ಮುಖಂಡರಿಗೆ ಮೋದಿ ಅವರನ್ನು ಸ್ವಾಗತಿಸಲು ಅವಕಾಶ ಮಾಡಿಕೊಡಲಾಗಿದೆ. ಅವಕಾಶ ಪಡೆದ ಮುಖಂಡರು ಸಂತಸ ವ್ಯಕ್ತಪಡಿಸಿದ್ದಾರೆ.

ಏಪ್ರಿಲ್‌ 28ರಂದು ಎಲ್ಲೆಲ್ಲಿ ರ‍್ಯಾಲಿ?

ಏಪ್ರಿಲ್‌ 28ರಂದು ಬೆಳಗಾವಿಯಲ್ಲಿ ಬೆಳಗ್ಗೆ 10 ಗಂಟೆಗೆ ನಡೆಯುವ ಸಮಾವೇಶದಲ್ಲಿ ನರೇಂದ್ರ ಮೋದಿ ಪಾಲ್ಗೊಳ್ಳಲಿದ್ದಾರೆ. ಇಲ್ಲಿ ಜಗದೀಶ್‌ ಶೆಟ್ಟರ್‌ ಪರ ಮತಯಾಚಿಸಲಿರುವ ಅವರು ಬಳಿಕ 12 ಗಂಟೆಗೆ ಉತ್ತರ ಕನ್ನಡದ ಶಿರಸಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗಿಯಾಗಿ ವಿಶ್ವೇಶ್ವರ ಹೆಗಡೆ ಕಾಗೇರಿ ಪರ ಮತಯಾಚನೆ ಮಾಡಲಿದ್ದಾರೆ. ಇನ್ನು ಮಧ್ಯಾಹ್ನ 2 ಗಂಟೆಗೆ ದಾವಣಗೆರೆಯ ಹೈಸ್ಕೂಲ್‌ ಗ್ರೌಂಡ್‌ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಇನ್ನು ಸಂಜೆ 4 ಗಂಟೆಗೆ ಬಳ್ಳಾರಿಯ ಸಮಾವೇಶದ ಮೂಲಕ ಇಡೀ ದಿನದ ಪ್ರಚಾರಕ್ಕೆ ತೆರೆ ಎಳೆಯಲಿದ್ದಾರೆ.

ಏಪ್ರಿಲ್‌ 29ರಂದು ಒಂದೇ ಸಮಾವೇಶ

ಬಳ್ಳಾರಿಯಲ್ಲಿ ಪ್ರಚಾರ ಮುಗಿಸುವ ನರೇಂದ್ರ ಮೋದಿ ಅವರು ಏಪ್ರಿಲ್‌ 29ರಂದು ಬಾಗಲಕೋಟೆಯಲ್ಲಿ ನಡೆಯುವ ಒಂದೇ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಅಲ್ಲಿಂದ ಅವರು ಮಹಾರಾಷ್ಟ್ರಕ್ಕೆ ತೆರಳಲಿದ್ದಾರೆ ಎಂದು ತಿಳಿದುಬಂದಿದೆ. ಕರ್ನಾಟಕದಲ್ಲಿ 2ನೇ ಹಂತದ ಚುನಾವಣೆ ಪ್ರಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕರೆಸುವ ಮೂಲಕ ಕಾಂಗ್ರೆಸ್‌ಗೆ ಸೆಡ್ಡು ಹೊಡೆಯಲು ಬಿಜೆಪಿ ಇಷ್ಟೆಲ್ಲ ಪ್ಲಾನ್‌ ಮಾಡಿದೆ. ಉತ್ತರ ಕರ್ನಾಟಕ ಸೇರಿದಂತೆ ಹಲವು ಕಡೆ ಮೋದಿ ಅಭಿಮಾನಿಗಳು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಅಲ್ಲದೆ, ಯುವ ಸಮುದಾಯಕ್ಕೆ ಮೋದಿ ಅಚ್ಚುಮೆಚ್ಚು. ಇಂತಹ ಯುವ ವರ್ಗದ ಮತಗಳನ್ನು ಸಾಕಷ್ಟು ಸಂಖ್ಯೆಯಲ್ಲಿ ಸೆಳೆಯಲು ಪ್ಲ್ಯಾನ್‌ ಮಾಡಿಕೊಳ್ಳಲಾಗಿದೆ.

ಇದನ್ನೂ ಓದಿ: ಇವಿಎಂ ಧ್ವಂಸ; ಚಾಮರಾಜನಗರದ ಇಂಡಿಗನತ್ತ ಗ್ರಾಮದಲ್ಲಿ ಏಪ್ರಿಲ್‌ 29ರಂದು ಮರು ಮತದಾನ!

Exit mobile version