ಬಾಗಲಕೋಟೆ: ಲೋಕಸಭೆ ಚುನಾವಣೆ (Lok Sabha Election) ಹಿನ್ನೆಲೆಯಲ್ಲಿ ಭಾನುವಾರ (ಏಪ್ರಿಲ್ 28) ಕರ್ನಾಟಕದ (Karnataka) ಬೆಳಗಾವಿ, ಉತ್ತರ ಕನ್ನಡ, ದಾವಣಗೆರೆ ಹಾಗೂ ವಿಜಯನಗರ ಜಲ್ಲೆಗಳಲ್ಲಿ ಅಬ್ಬರದ ಪ್ರಚಾರ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಸೋಮವಾರವೂ (ಏಪ್ರಿಲ್ 29) ಬಾಗಲಕೋಟೆಯಲ್ಲಿ ಪ್ರಚಾರ ನಡೆಸಲಿದ್ದಾರೆ. ಮೋದಿ ಸಮಾವೇಶದ ಹಿನ್ನೆಲೆಯಲ್ಲಿ ಬಾಗಲಕೋಟೆಯ ನವನಗರದಲ್ಲಿ 100 ಎಕರೆ ಪ್ರದೇಶದಲ್ಲಿ ಬೃಹತ್ ವೇದಿಕೆ ನಿರ್ಮಾಣ ಮಾಡಲಾಗಿದೆ.
ಸೋಮವಾರ ಮಧ್ಯಾಹ್ನ 12 ಗಂಟೆಗೆ ನರೇಂದ್ರ ಮೋದಿ ಅವರು ಬಾಗಲಕೋಟೆಗೆ ಆಗಮಿಸಲಿದ್ದಾರೆ. ಮೋದಿ ಭಾಷಣಕ್ಕಾಗಿ 90/100 ಅಡಿ ಮುಖ್ಯ ವೇದಿಕೆ ಪೆಂಡಾಲು ಹಾಕಲಾಗಿದೆ. 60/40 ಅಡಿಯ ಮುಖ್ಯ ವೇದಿಕೆಯಲ್ಲಿ, 32 ಜನರಿಗೆ ಆಸನ ವ್ಯವಸ್ಥೆ ಮಾಡಲಾಗಿದೆ. ಬಿಸಿಲು ಹೆಚ್ಚಾದ ಕಾರಣ ವೇದಿಕೆ ಹವಾನಿಯಂತ್ರಿತವಾಗಿ ಇರಲಿದೆ. ಇನ್ನು ಸಾರ್ವಜನಿಕರಿಗೆ 400 ಅಡಿ ಅಗಲ, 600 ಅಡಿ ಉದ್ದದ ಬೃಹತ್ ಪೆಂಡಾಲ್ ವೇದಿಕೆ ನಿರ್ಮಿಸಲಾಗಿದೆ. ಜರ್ಮನ್ ಮಾದರಿಯಲ್ಲಿ ವೇದಿಕೆ ನಿರ್ಮಿಸಲಾಗಿದೆ.
ಬಾಗಲಕೋಟೆ ಬಿಜೆಪಿ ಅಭ್ಯರ್ಥಿ ಪಿ.ಸಿ.ಗದ್ದಿಗೌಡರ್ ಹಾಗೂ ವಿಜಯಪುರ ಅಭ್ಯರ್ಥಿ ರಮೇಶ್ ಜಿಗಜಿಣಗಿ ಪರವಾಗಿ ಪ್ರಧಾನಿ ಮತಯಾಚನೆ ಮಾಡಲಿದ್ದಾರೆ. ಒಟ್ಟು 70ರ ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಭದ್ರತೆಗೆ 1,100ಕ್ಕೂ ಅಧಿಕ ಪೊಲೀಸರನ್ನು ನಿಯೋಜಿಸಲಾಗಿದೆ. ಮೂವರು ಎಸ್‌ಪಿ, ನಾಲ್ವರು ಎಎಸ್‌ಪಿ, 12 ಡಿಎಸ್‌ಪಿ, 32 ಸಿಪಿಐ, 88 ಪಿಎಸ್‌ಐ, 1,049 ಪೊಲೀಸ್ ಪೇದೆಗಳನ್ನು ಭದ್ರತೆಗಾಗಿ ನಿಯೋಜನೆ ಮಾಡಲಾಗಿದೆ. ವೇದಿಕೆ ಬಲಭಾಗ ಮೂರು ಹೆಲಿಪ್ಯಾಡ್‌ಗಳನ್ನು ನಿರ್ಮಿಸಲಾಗಿದೆ.
ಮೋದಿ ಅವರ ಸಮಾವೇಶದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಎರಡೂ ಕ್ಷೇತ್ರಗಳ ಅಭ್ಯರ್ಥಿಗಳು ಭಾಗವಹಿಸಲಿದ್ದಾರೆ. ಸಮಾವೇಶದಲ್ಲಿ ಸುಮಾರು 2 ಲಕ್ಷ ಜನ ಸೇರುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಭಾನುವಾರ ಬೆಳಗಾವಿ, ಉತ್ತರ ಕನ್ನಡ, ದಾವಣಗೆರೆ ಹಾಗೂ ವಿಜಯನಗರ ಜಿಲ್ಲೆಯಲ್ಲಿ ಅಬ್ಬರದ ಪ್ರಚಾರ ಮಾಡಿದ ನರೇಂದ್ರ ಮೋದಿ ಅವರು ಹೊಸಪೇಟೆಯಲ್ಲಿಯೇ ಉಳಿದುಕೊಂಡಿದ್ದಾರೆ. ಪ್ರಚಾರದುದ್ದಕ್ಕೂ ಕೇಂದ್ರ ಸರ್ಕಾರದ ಸಾಧನೆ ಜತೆಗೆ ಮೋದಿ ಅವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದರು.
ಇದನ್ನೂ ಓದಿ: PM Narendra Modi: ಪುಕ್ಕಲ ನಾಯಕ ದೇಶ ಆಳಬಲ್ಲನೇ? ರಾಹುಲ್ ಗಾಂಧಿಗೆ ಮೋದಿ ಟಾಂಗ್!