ಬೆಂಗಳೂರು: ಲೋಕಸಭೆ ಚುನಾವಣೆ (Lok Sabha Election) ದಿನಾಂಕ ಘೋಷಣೆಯಾಗಿದೆ. ಶನಿವಾರದಿಂದಲೇ (ಮಾರ್ಚ್ 16) ಮಾದರಿ ನೀತಿ ಸಂಹಿತೆ (Code Of Conduct) ಜಾರಿಯಾಗಿದೆ. ಇದರ ಮಧ್ಯೆಯೇ, ಕರ್ನಾಟಕದಲ್ಲಿ ಹಣದ ಹೊಳೆ ಹರಿಯಲು ಶುರುವಾಗಿದೆ. ಇದಕ್ಕೆ ನಿದರ್ಶನ ಎಂಬಂತೆ, ಬೆಂಗಳೂರಿನಲ್ಲಿ (Bengaluru) ದಾಖಲೆ ಇಲ್ಲದೆ ಸಾಗಿಸುತ್ತಿದ್ದ 13 ಲಕ್ಷ ರೂಪಾಯಿಯನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಶಾಂತಿ ನಗರದ ಚೆಕ್‌ಪೋಸ್ಟ್‌ನಲ್ಲಿ ಶನಿವಾರ (ಮಾರ್ಚ್ 16) ರಾತ್ರಿ ಕಬ್ಬನ್ ಪಾರ್ಕ್ ಪೊಲೀಸರು ಸುಮಾರು 13 ಲಕ್ಷ ರೂಪಾಯಿಯನ್ನು ಜಪ್ತಿ ಮಾಡಿದ್ದಾರೆ. ಬೆಂಗಳೂರು ಸೆಂಟ್ರಲ್ ಕ್ಷೇತ್ರದ ಚೆಕ್‌ಪೋಸ್ಟ್‌ನಲ್ಲಿ ಕಾರಿನಲ್ಲಿ ಹಣ ಸಾಗಿಸಲಾಗುತ್ತಿತ್ತು. ಕಾರನ್ನು ತಡೆದ ಪೊಲೀಸರು ಪರಿಶೀಲನೆ ನಡೆಸಿದಾಗ 13 ಲಕ್ಷ ರೂ. ಸಿಕ್ಕಿದೆ. ಇದಕ್ಕೆ ದಾಖಲೆ ಇಲ್ಲದ ಕಾರಣ ಪೊಲೀಸರು ಹಣವನ್ನು ಜಪ್ತಿ ಮಾಡಿದ್ದಾರೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ.
ಕಠಿಣ ಕ್ರಮ ಎಂದ ರಾಜೀವ್ ಕುಮಾರ್
ಲೋಕಸಭೆ ಚುನಾವಣೆ ವೇಳೆ ಹಣ, ಉಚಿತ ಉಡುಗೊರೆಗಳ ವಿತರಣೆ ಕಂಡುಬಂದರೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಈಗಾಗಲೇ ಎಚ್ಚರಿಕೆ ನೀಡದ್ದಾರೆ. ಚುನಾವಣೆ ಆಯೋಗವು ಪಾರದರ್ಶಕವಾಗಿ, ಸುಸಜ್ಜಿತವಾಗಿ ನಡೆಸಲು ಚುನಾವಣೆ ಆಯೋಗವು ಬದ್ಧವಾಗಿದೆ. ಇದಕ್ಕಾಗಿ, ದೇಶಾದ್ಯಂತ ಚುನಾವಣಾ ಆಯೋಗದ ಅಧಿಕಾರಿಗಳು ಸಮೀಕ್ಷೆ ನಡೆಸಿದ್ದಾರೆ. ಜಿಲ್ಲಾಧಿಕಾರಿಗಳು ಸೇರಿ ಪ್ರಮುಖರೊಂದಿಗೆ ಮಾತುಕತೆ ನಡೆಸಿದ್ದಾರೆ. ಪಾರದರ್ಶಕ ಹಾಗೂ ನ್ಯಾಯಸಮ್ಮತವಾಗಿ ಚುನಾವಣೆಯನ್ನು ನಡೆಸುತ್ತೇವೆ ಎಂದು ರಾಜೀವ್ ಕುಮಾರ್ ಮಾಹಿತಿ ನೀಡಿದರು.
ಇದನ್ನೂ ಓದಿ: Lok Sabha Election 2024: ಲೋಕಸಭಾ ಚುನಾವಣೆಯ ವೇಳಾಪಟ್ಟಿ ಪ್ರಕಟ; ಪಕ್ಷಗಳಿಗೆ ಆಯೋಗ ಸೂಚಿಸಿದ್ದೇನು?
ಈಗಿನಿಂದಲೇ ದೇಶಾದ್ಯಂತ ಮಾದರಿ ನೀತಿ ಸಂಹಿತೆ ಜಾರಿಗೆ ಬರಲಿದೆ. ಯಾರು ಕೂಡ ನಿಯಮಗಳನ್ನು ಮೀರಬಾರದು. ಮಾದರಿ ನೀತಿ ಸಂಹಿತೆ ಜಾರಿ ವೇಳೆ ಹಿಂಸಾಚಾರ ಎಸಗಿದವರ ವಿರುದ್ಧ ಜಾಮೀನು ರಹಿತ ಕೇಸ್ ದಾಖಲಿಸಲಾಗುತ್ತದೆ. ಹಣ, ತೋಳ್ಬಲ, ತಪ್ಪು ಮಾಹಿತಿ ರವಾನೆಯನ್ನು ತಡೆಯಲು ಆಯೋಗವು ಸಕಲ ರೀತಿಯಲ್ಲಿ ಸಜ್ಜಾಗುತ್ತಿದೆ. ಇನ್ನು, ರಾಜಕೀಯ ವ್ಯಕ್ತಿಗಳು ಕೂಡ ವಿಷಯಗಳ ಆಧಾರಿತವಾಗಿ ಪ್ರಚಾರ ಮಾಡಬೇಕೇ ಹೊರತು, ಗೊಂದಲ, ಗಲಾಟೆಗೆ ಅವಕಾಶ ಮಾಡಿಕೊಡಬಾರದು ಎಂದು ಸೂಚಿಸಿದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ