Site icon Vistara News

Lok Sabha Election 2024: ಬೆಂಗಳೂರಲ್ಲಿ ನಾಳೆಯಿಂದ ಏ.26ರ ಮಧ್ಯರಾತ್ರಿವರೆಗೆ ನಿಷೇಧಾಜ್ಞೆ; ಮದ್ಯ ಮಾರಾಟವೂ ಬಂದ್‌

Lok Sabha Election 2024

ಬೆಂಗಳೂರು: ರಾಜ್ಯದಲ್ಲಿ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ (Lok Sabha Election 2024) ನಡೆಯುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ನಗರದಲ್ಲಿ ಏ.24ರ ಸಂಜೆ 6 ಗಂಟೆಯಿಂದ ಏ.26ರ ಮಧ್ಯರಾತ್ರಿವರೆಗೆ 144 ಸೆಕ್ಷನ್ ಜಾರಿಗೊಳಿಸಲಾಗಿದೆ. ಅಲ್ಲದೇ ಮದ್ಯ ಮಾರಾಟಕ್ಕೂ ನಿಷೇಧ ವಿಧಿಸಲಾಗಿದೆ.

ಈ ಬಗ್ಗೆ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಬಿ.ದಯಾನಂದ್ ಆದೇಶ ಹೊರಡಿಸಿದ್ದಾರೆ. ಬುಧವಾರ ಸಂಜೆ 6 ಗಂಟೆಯಿಂದ ಬೆಂಗಳೂರು ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಜತೆಗೆ 5 ಲೋಕಸಭಾ ಕ್ಷೇತ್ರಗಳಲ್ಲಿ ಹೆಚ್ಚುವರಿ ಭದ್ರತೆ ಕೈಗೊಳ್ಳಲಾಗಿದೆ. ನಿಷೇಧಾಜ್ಞೆಯು ಏಪ್ರಿಲ್ 26ರ ಮಧ್ಯರಾತ್ರಿಯವರೆಗೆ ಜಾರಿಯಲ್ಲಿರಲಿದೆ. ಈ ವೇಳೆಯಲ್ಲಿ ಮದ್ಯ ಮಾರಾಟಕ್ಕೆ ಅವಕಾಶವಿಲ್ಲ ಎಂದು ತಿಳಿಸಿದ್ದಾರೆ.

ಬೆಂಗಳೂರಿನ 5 ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಹೆಚ್ಚುವರಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ. 13 ಸಾವಿರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ. 11 ಸಿಆರ್‌ಪಿಎಫ್, 14 ಕೆಎಸ್‌ಆರ್‌ಪಿ ಹಾಗೂ 40 ಸಿಎಆರ್ ತುಕಡಿಯನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ. ನಗರ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ಭದ್ರತೆ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ | Lok Sabha Election 2024: ಏಪ್ರಿಲ್‌ 26ರಂದು ಮೈಸೂರು ಅರಮನೆ ವೀಕ್ಷಣೆಗೆ ಪ್ಲ್ಯಾನ್‌ ಮಾಡಿದ್ದೀರಾ? ಮತ ಹಾಕದೇ ಬಂದರೆ ನೋ ಎಂಟ್ರಿ!

ಮತದಾನಕ್ಕೆ ವೋಟರ್ ಐಡಿ ಇಲ್ಲದಿದ್ದರೆ ಚಿಂತೆ ಬೇಡ, ಈ ದಾಖಲೆಗಳು ಸಾಕು

ಬೆಂಗಳೂರು: ಲೋಕಸಭಾ ಚುನಾವಣೆ- 2024ರ (Lok Sabha election 2024) ಅಂಗವಾಗಿ ರಾಜ್ಯದಲ್ಲಿ (karnataka) ಏಪ್ರಿಲ್ 26ರಂದು ಮತದಾನ (voting) ನಡೆಯಲಿದ್ದು, ಈ ಸಂದರ್ಭದಲ್ಲಿ ಮತದಾರರ ಗುರುತು ಚೀಟಿಯನ್ನು (voter id) ಪ್ರತಿಯೊಬ್ಬ ಅರ್ಹ ಮತದಾರನೂ ಹೊಂದಿರಲೇಬೇಕು. ಚುನಾವಣಾ ಪ್ರಕ್ರಿಯೆಯಲ್ಲಿ (Voter ID) ಇದು ಅತ್ಯಂತ ಮಹತ್ವದ ಪಾತ್ರ ವಹಿಸುತ್ತದೆ.

ಮತದಾರರ ಗುರುತು ಚೀಟಿಯು ಚುನಾವಣಾ ಪ್ರಕ್ರಿಯೆಯಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಮತದಾರನ ಗುರುತು, ವಾಸಸ್ಥಳ, ಜನನ ಮತ್ತು ಇತರ ವಿವರಗಳನ್ನು ದೃಢೀಕರಿಸುವ ಇದು ಮಹತ್ವದ ಅಧಿಕೃತ ದಾಖಲೆಗಳಲ್ಲಿ ಒಂದಾಗಿದೆ.
ಮತದಾನವು ನಮ್ಮ ಮೂಲಭೂತ ಹಕ್ಕು ಮಾತ್ರವಲ್ಲ ಪ್ರತಿಯೊಬ್ಬ ನಾಗರಿಕನ ಕರ್ತವ್ಯವೂ ಜವಾಬ್ದಾರಿಯಾಗಿದೆ. ಇದಕ್ಕಾಗಿ ವೋಟರ್ ಐಡಿ ಬಹಳ ಮುಖ್ಯವಾದ ದಾಖಲೆಯಾಗಿದೆ. ಯಾಕೆಂದರೆ ಅದನ್ನು ಹೊಂದಿರುವವರ ಗುರುತು ಮತ್ತು ವಿವರಗಳನ್ನು ಪರಿಶೀಲಿಸಲು ಸಹಕಾರಿಯಾಗುತ್ತದೆ.

ಇದನ್ನೂ ಓದಿ: Voter Slip by Mobile: ಮತಪಟ್ಟಿಯಲ್ಲಿ ಹೆಸರು ಪರಿಶೀಲನೆ, ವೋಟರ್ ಸ್ಲಿಪ್ ಡೌನ್‌ಲೋಡ್‌ ಮೊಬೈಲ್‌ನಲ್ಲೇ ಮಾಡಿ!

ಯಾರು ಅರ್ಹರು?

ಭಾರತದ ಚುನಾವಣಾ ಆಯೋಗದ ಪ್ರಕಾರ ನಾಗರಿಕರು ಈ ಕೆಳಗಿನ ಷರತ್ತುಗಳ ಅಡಿಯಲ್ಲಿ ಮತದಾರರಾಗಲು ಅರ್ಹರಾಗಿರುತ್ತಾರೆ. 18 ವರ್ಷ ವಯಸ್ಸಿನ ಪ್ರತಿಯೊಬ್ಬ ನಾಗರಿಕರು ಯಾವುದಾದರೂ ನಿರ್ಧಿಷ್ಟ ಕಾರಣದಿಂದ ಅನರ್ಹಗೊಳಿಸದ ಹೊರತು ಮತದಾರರ ಗುರುತು ಚೀಟಿ ಪಡೆಯಲು ದಾಖಲಾತಿ ನಡೆಸಲು ಅರ್ಹರಾಗಿರುತ್ತಾರೆ.
ಅರ್ಹ ಮತದಾರನ ಸಾಮಾನ್ಯ ನಿವಾಸದ ಸ್ಥಳದಲ್ಲಿ ಮಾತ್ರ ನೋಂದಣಿ ಮಾಡಿಸಬಹುದು ಹಾಗೂ ಒಂದೇ ಸ್ಥಳದಲ್ಲಿ ಮಾತ್ರ ನೋಂದಣಿ ಸಾಧ್ಯ.


ಸಾಗರೋತ್ತರ ಭಾರತೀಯರ ಪಾಸ್‌ಪೋರ್ಟ್‌ನಲ್ಲಿನೀಡಿರುವ ವಿಳಾಸದಲ್ಲಿ ಸಾಮಾನ್ಯವಾಗಿ ವಾಸಿಸುತ್ತಾರೆ ಎಂದು ಪರಿಗಣಿಸಲಾಗುತ್ತದೆ. ಆದರೆ ಮತದಾರರು ತಮ್ಮ ಮನೆಯ ವಿಳಾಸದಲ್ಲಿ ಸಾಮಾನ್ಯವಾಗಿ ವಾಸಿಸುತ್ತಿದ್ದಾರೆ ಎಂದು ಪರಿಗಣಿಸಲಾಗುವುದು.

ವೋಟರ್ ಐಡಿ ಇಲ್ಲದೆ ಮತ ಚಲಾಯಿಸಬಹುದೇ?

ಭಾರತೀಯ ಚುನಾವಣಾ ಆಯೋಗದ ಪ್ರಕಾರ ಮತಗಟ್ಟೆಗಳಲ್ಲಿ ಮತದಾರರ ಗುರುತಿನ ಅಗತ್ಯವಿದೆ. ಮತ ಚಲಾಯಿಸಲು ಚುನಾವಣಾ ಆಯೋಗ ನೀಡಿದ ಮತದಾರರ ಗುರುತಿನ ಚೀಟಿ ಅಥವಾ ಅಧಿಕೃತ ಗುರುತಿನ ಯಾವುದೇ ಒಂದು ದಾಖಲೆಯನ್ನು ಒದಗಿಸಬೇಕು.

ಭಾರತೀಯ ಚುನಾವಣಾ ಆಯೋಗ (ಇಸಿಐ) ನೀಡಿದ ಸೂಚನೆಗಳ ಪ್ರಕಾರ ಮತದಾರರ ಗುರುತಿನ ಚೀಟಿ ಇಲ್ಲದೆಯೂ ಚುನಾವಣೆಯಲ್ಲಿ ಮತ ಚಲಾಯಿಸಬಹುದು. ಅಧಿಕೃತ ಮತದಾರರ ಪಟ್ಟಿಯಲ್ಲಿ ಹೆಸರು ಇರುವವರೆಗೆ ಮತ ಚಲಾಯಿಸಲು ಮತದಾರರು ಅರ್ಹನಾಗಿರುತ್ತಾರೆ.

ಹೆಸರಿದೆಯೇ ಪರಿಶೀಲಿಸಿ

ಮತದಾನ ಪ್ರಕ್ರಿಯೆಯಲ್ಲಿ (ಇಸಿಐ) ಪಾಲ್ಗೊಳ್ಳುವ ಮೊದಲು ಭಾರತದ ಚುನಾವಣಾ ಆಯೋಗದ ಅಧಿಕೃತ ಮತದಾರರ ಪಟ್ಟಿಯಲ್ಲಿ ಹೆಸರು ಇದೆಯೇ ಎಂದು ಪರಿಶೀಲಿಸಬೇಕು. ಮತಪತ್ರವನ್ನು ಚಲಾಯಿಸುವ ಮೊದಲು ಈ ಪಟ್ಟಿಯನ್ನು ಪರಿಶೀಲಿಸುವುದು ನಿರ್ಣಾಯಕವಾಗಿದೆ ಏಕೆಂದರೆ ಅದರಲ್ಲಿ ನೀವು ಮತ ಚಲಾಯಿಸುವ ಅರ್ಹತೆಯನ್ನು ದೃಢೀಕರಿಸುತ್ತದೆ.

ಮತದಾರರ ಗುರುತಿನ ಚೀಟಿಯನ್ನು ಹೊಂದಿಲ್ಲದಿದ್ದರೆ ಚುನಾವಣಾ ಆಯೋಗವು ಗೊತ್ತುಪಡಿಸಿದ ಪರ್ಯಾಯ ದಾಖಲೆಗಳನ್ನು ಮತದಾರರು ಬಳಸಬಹುದು.

ಇತರ ದಾಖಲೆ ಯಾವುದು?

ಮತದಾರರ ಪಟ್ಟಿಯಲ್ಲಿ ಹೆಸರಿದ್ದು, ಗುರುತಿಗಾಗಿ ಎಪಿಕ್ ಅಥವಾ ಮತದಾರರ ಐಡಿ ಹೊಂದಿಲ್ಲದಿದ್ದರೆ ಸಾರ್ವತ್ರಿಕ ಚುನಾವಣೆಯ ವೇಳೆ ವೋಟರ್ ಐಡಿ ಇಲ್ಲದೆಯೇ ಮತವನ್ನು ಚಲಾಯಿಸಲು ಬಳಸಬಹುದಾದ ದಾಖಲೆಗಳು ಇಂತಿವೆ.

ಆಧಾರ್ ಕಾರ್ಡ್, MNREGA ಜಾಬ್ ಕಾರ್ಡ್, ಬ್ಯಾಂಕ್/ ಪೋಸ್ಟ್ ಆಫೀಸ್ ನೀಡಿದ ಭಾವಚಿತ್ರವಿರುವ ಪಾಸ್‌ಬುಕ್‌ಗಳು, ಕಾರ್ಮಿಕ ಸಚಿವಾಲಯದ ಯೋಜನೆಯಡಿ ಆರೋಗ್ಯ ವಿಮೆ ಸ್ಮಾರ್ಟ್ ಕಾರ್ಡ್, ಚಾಲನಾ ಪರವಾನಿಗೆ, ಪ್ಯಾನ್ ಕಾರ್ಡ್, NPR ಅಡಿಯಲ್ಲಿ RGI ನೀಡಿದ ಸ್ಮಾರ್ಟ್ ಕಾರ್ಡ್, ಭಾರತೀಯ ಪಾಸ್ ಪೋರ್ಟ್, ಭಾವಚಿತ್ರದೊಂದಿಗೆ ಪಿಂಚಣಿ ದಾಖಲೆ, ಕೇಂದ್ರ/ ರಾಜ್ಯ ಸರ್ಕಾರ/ ಪಿಎಸ್‌ಯು/ ಪಬ್ಲಿಕ್ ಲಿಮಿಟೆಡ್ ಕಂಪೆನಿಗಳು ಉದ್ಯೋಗಿಗಳಿಗೆ ನೀಡಿದ ಭಾವಚಿತ್ರವಿರುವ ಸೇವಾ ಗುರುತಿನ ಚೀಟಿಗಳು, ಎಂಪಿಗಳು/ ಎಂಎಲ್‌ಎಗಳು/ ಎಂಎಲ್‌ಸಿಗಳಿಗೆ ನೀಡಲಾದ ಅಧಿಕೃತ ಗುರುತಿನ ಚೀಟಿಗಳು, ವಿಶಿಷ್ಟ ಅಂಗವೈಕಲ್ಯ ಐಡಿ (UDID) ಕಾರ್ಡ್ ಗಳನ್ನು ದಾಖಲೆಯಾಗಿ ಮತದಾನದ ವೇಳೆ ಗುರುತು ಚೀಟಿಯಾಗಿ ಮತದಾನ ಕೇಂದ್ರದಲ್ಲಿ ತೋರಿಸಬಹುದಾಗಿದೆ.

ನೋಂದಣಿ ಸ್ಥಿತಿ ಪರಿಶೀಲನೆ ಹೇಗೆ?

ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಕಾಣಿಸಿಕೊಂಡರೆ ಮಾತ್ರ ಮತ ಚಲಾಯಿಸಬಹುದು. ಪಟ್ಟಿಯಲ್ಲಿ ಹೆಸರು ಇದೆಯೇ, ಇಲ್ಲವೇ ಎಂಬುದನ್ನು ಚುನಾವಣಾ ಆಯೋಗದ ಅಧಿಕೃತ ವೆಬ್ ಸೈಟ್ ನಲ್ಲಿ https://electoralsearch.eci.gov.in ಗೆ ಲಾಗಿನ್ ಆಗಿ ನೋಡಬಹುದು. ಅಲ್ಲದೇ ಮತದಾರರ ಸಹಾಯವಾಣಿ 1950ಕ್ಕೆ ಕರೆಯೂ ಪರಿಶೀಲನೆ ನಡೆಸಬಹುದಾಗಿದೆ.

Exit mobile version