ಬೆಂಗಳೂರು: ಮುಂಬರುವ ಲೋಕಸಭಾ ಚುನಾವಣೆಗೆ (Lok Sabha Election 2024) ಇನ್ನು ಎಂಟು ತಿಂಗಳಷ್ಟೇ ಬಾಕಿ ಇದೆ. ಈ ಹಿನ್ನೆಲೆಯಲ್ಲಿ ಎಲ್ಲ ರಾಜಕೀಯ ಪಕ್ಷಗಳು (Political Parties) ಚುರುಕಾಗಿವೆ. ಇನ್ನು ಕಾಂಗ್ರೆಸ್‌ನಲ್ಲಿ ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ ಕನಿಷ್ಠ 20 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಗುರಿಯನ್ನು ಹಾಕಿಕೊಳ್ಳಲಾಗಿದೆ. ಇದಕ್ಕಾಗಿ ಈಗಾಗಲೇ ಗೆಲ್ಲುವ ಅಭ್ಯರ್ಥಿಗಳ ಹುಡುಕಾಟವನ್ನೂ ಕೈಪಡೆ ಪ್ರಾರಂಭಿಸಿದೆ. ಇತ್ತ ಬೆಳಗಾವಿಯಲ್ಲಿ ಈಗ ಇಬ್ಬರು ಘಟಾನುಘಟಿ ನಾಯಕರ ಮಧ್ಯೆ ಲೋಕಸಭಾ ಟಿಕೆಟ್‌ಗಾಗಿ ಪೈಪೋಟಿ ಶುರುವಾಗಿದೆ. ಸಚಿವರಾದ ಸತೀಶ್ ಜಾರಕಿಹೊಳಿ (Satish Jarkiholi) ಹಾಗೂ ಲಕ್ಷ್ಮಿ ಹೆಬ್ಬಾಳ್ಕರ್ (Laxmi Hebbalkar) ಅವರು ತಮ್ಮ ಪುತ್ರರಿಗೆ ಟಿಕೆಟ್ ಕೊಡಿಸಲು ಲಾಬಿಯನ್ನು ಪ್ರಾರಂಭ ಮಾಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಚಿವ ಸತೀಶ್ ಜಾರಕಿಹೊಳಿ, ಯಾರಾದರೂ ಒಬ್ಬರು ಅಭ್ಯರ್ಥಿ ಆಗಲೇ ಬೇಕಲ್ಲವೇ? ಇದರಲ್ಲಿ ಮುಸುಕಿನ ಗುದ್ದಾಟ ಅಂತ ಏನೂ ಇಲ್ಲ. ಪ್ರಯತ್ನ ಮೊದಲಿನಿಂದಲೂ ನಡೆಯುತ್ತಲಿದೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ತಮ್ಮ ಮಗನಿಗೆ ಟಿಕೆಟ್ ಬೇಡಿಕೆ ಇಟ್ಟಿರುವ ಬಗ್ಗೆ ಸುಳಿವು ನೀಡಿದ್ದಾರೆ.
ಬೆಳಗಾವಿಯಲ್ಲಿ ಲೋಕಸಭಾ ಟಿಕೆಟ್‌ಗಾಗಿ (Lok Sabha ticket from Belagavi) ಮುಸುಕಿನ ಗುದ್ದಾಟ ವಿಚಾರದ ಬಗ್ಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿರುವ ಸಚಿವ ಸತೀಶ್ ಜಾರಕಿಹೊಳಿ, ನಾನೂ ಕೂಡ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ನಿರ್ಧಾರ ಮಾಡಿದ್ದೆ. ಒಂದು ವೇಳೆ ಪಕ್ಷ ಅಧಿಕಾರಕ್ಕೆ ಬರದೇ ಇದ್ದಿದ್ದರೆ ನಾನು ಸ್ಪರ್ಧೆ ಮಾಡುತ್ತಿದ್ದೆ. ಈ ಬಗ್ಗೆ ನಾನು ಮುಂಚೆಯೇ ಹೇಳಿದ್ದೇನೆ. ಈಗ ಇಲ್ಲೇ ಇರುವ ಅವಕಾಶ ಸಿಕ್ಕಿದೆ. ಹಾಗಾಗಿ ಇಲ್ಲಿಯೇ ಇದ್ದೇನೆ. ಮುಂದೆ ನೋಡೋಣ. ರಾಜಕೀಯ ಇದ್ದೇ ಇರುತ್ತದೆ. ಅದೆಲ್ಲ ಸ್ವಾಭಾವಿಕ. ಕಳೆದ ಎಲೆಕ್ಷನ್ ಅನ್ನು ಒಟ್ಟಾಗಿ ಮಾಡಿದ್ದೇವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: Weather report : ಮುಕ್ಕಾಲು ಕರ್ನಾಟಕಕ್ಕೆ ಮಳೆ ಸಿಂಚನ; ಹಲವೆಡೆ ಭರ್ಜರಿ, ಕೆಲವೆಡೆ ಸಾಧಾರಣ ವರುಣ
ಇನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬದಲಾವಣೆ ಕುರಿತು ಆಗಾಗ ಚರ್ಚೆಗಳು ನಡೆಯುತ್ತಿರುವ ಬಗ್ಗೆ ಮಾಧ್ಯಮದವರು ಪ್ರಶ್ನೆ ಮಾಡಿದಾಗ, “ಸಿಎಂ ಕುರ್ಚಿ ಈಗ ಖಾಲಿ ಇಲ್ಲ” ಎಂದು ಸತೀಶ್ ಜಾರಕಿಹೊಳಿ ಉತ್ತರಿಸಿದರು.
ಯಾವುದೇ ಸರ್ಕಾರ ಬೀಳುತ್ತೆ ಅನ್ನೋದು ಸರಿಯಲ್ಲ: ಸಚಿವ ಸತೀಶ್ ಜಾರಕಿಹೊಳಿ
40 ಜನರು ಬಿಜೆಪಿಗೆ ಬರುತ್ತಾರೆ ಎಂಬ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವ ಸತೀಶ್ ಜಾರಕಿಹೊಳಿ, ಈ ಸನ್ನಿವೇಶಕ್ಕೆ ಈ ಮಾತು ಸರಿಯಲ್ಲ. ಅವರು ರಾಷ್ಟ್ರ ಮಟ್ಟದ ರಾಜಕಾರಣ ಮಾಡುವವರು. 40 ಜನರನ್ನು ತೆಗೆದುಕೊಂಡು ಏನು ಮಾಡ್ತಾರೆ? ಯಾವುದೇ ಸರ್ಕಾರ ಬೀಳುತ್ತೆ ಅನ್ನೋದು ಸರಿಯಲ್ಲ. ಸರ್ಕಾರ ಬಂದು ಮೂರು ತಿಂಗಳಾಗಿದೆ. ಸರ್ಕಾರ ಬೀಳುತ್ತೆ ಎಂಬ ಮಾತು ಐದು ವರ್ಷದವರೆಗೂ ಇದ್ದೇ ಇರುತ್ತದೆ. ಆದರೆ, ಆ ಕಾರ್ಯ ಸಫಲ ಆಗುವುದಿಲ್ಲ. ಪ್ರಯತ್ನ ಅಂತೂ ಅವರದ್ದು ಇದ್ದೇ ಇರುತ್ತದೆ ಎಂದು ಹೇಳಿದರು.
ಬಿಜೆಪಿ ಪಕ್ಷದಲ್ಲಿ ಬಿ.ಎಲ್. ಸಂತೋಷ್ ವಿರುದ್ಧವೇ ಮಾತನಾಡುತ್ತಾ ಇದ್ದಾರೆ. ಬಿಜೆಪಿಯಲ್ಲಿ ಕೆಲವರು ಕಾಂಗ್ರೆಸ್ ಸರ್ಕಾರ ಇರಲಿ ಅಂತ ಬಯಸುತ್ತಾ ಇದ್ದಾರೆ. ನಮ್ಮ ಮೇಲೆ ಅವರ ಆಶೀರ್ವಾದ ಇರಲಿ. ಬೆಳಗಾವಿ ಭಾಗದಲ್ಲಿ ಕಾಂಗ್ರೆಸ್‌ಗೆ ಬರುವ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಆ ಭಾಗದಲ್ಲಿ ಸದ್ಯಕ್ಕೆ ಯಾರೂ ಕಾಂಗ್ರೆಸ್‌ಗೆ ಬರುವವರು ಇಲ್ಲ. ಇದ್ದರೆ ನೇರವಾಗಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡುತ್ತಾರೆ ಎಂದು ಸತೀಶ್ ಜಾರಕಿಹೊಳಿ ಹೇಳಿದರು.
ಬಿಜೆಪಿ ಹಾಗೂ ಜೆಡಿಎಸ್‌ನ ಕೆಲವರು ಕಾಂಗ್ರೆಸ್ ಬರುವುದಕ್ಕೆ ತಯಾರಿದ್ದಾರೆ. ಅನೇಕರು ಭೇಟಿಯಾಗುತ್ತಾ ಇದ್ದಾರೆ. ಓಪನ್ ಆಗಿಯೇ ಭೇಟಿ ಆಗುತ್ತಲಿದ್ದಾರೆ. ಕೆಲವೊಂದು ಪರೋಕ್ಷವಾಗಿ ಸಂಪರ್ಕ ಆಗುತ್ತಲಿದೆ. ಎಲ್ಲದಕ್ಕೂ ಸಮಯ ಮತ್ತು ಸಂದರ್ಭ ಬೇಕಲ್ಲವೇ? ಯಾರೇ ಬಂದರೂ ಸ್ವಾಗತ ಮಾಡುತ್ತೇವೆ ಎಂದು ಸತೀಶ್ ಜಾರಕಿಹೊಳಿ ಹೇಳಿದರು.
ಇದನ್ನೂ ಓದಿ: Operation Hasta : 1 ತಿಂಗಳು ಟೈಂ ಕೊಡುವೆ 45 ಅಲ್ಲ 4 ಶಾಸಕರ ಸೆಳೆಯಿರಿ: ಬಿ.ಎಲ್. ಸಂತೋಷ್‌ಗೆ ಪ್ರಿಯಾಂಕ್ ಖರ್ಗೆ ಸವಾಲು
ಬೆಳಗಾವಿ ಪಾಲಿಕೆಯಲ್ಲಿ ಅಧಿಕಾರಿಗಳ ವರ್ಗಾವಣೆ ವಿಚಾರವಾಗಿ ತಮ್ಮ ಮತ್ತು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ನಡುವೆ ಕೋಲ್ಡ್‌ವಾರ್ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವ ಸತೀಶ್ ಜಾರಕಿಹೊಳಿ, ಎಲ್ಲವೂ ನನ್ನ ಅಡಿಯಲ್ಲಿಯೇ ಬರಬೇಕು ಅಂತಲ್ಲ. ಯಾವುದೋ ಒಂದು ಪೋಸ್ಟ್ ವಿಚಾರ ಅಷ್ಟೇ ಸಮಸ್ಯೆಯಾಗಿತ್ತು. ಯಾರೇ ಬಂದರೂ ಕೆಲಸ ಮಾಡಬೇಕು ಅಷ್ಟೇ. ಅವರಿಗಾಗಿ ಕೆಲಸ ಮಾಡಿದವರನ್ನು ಹಾಕಿಸಿಕೊಂಡಿದ್ದಾರೆ ಎಂದು ಪರೋಕ್ಷವಾಗಿ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಸತೀಶ್ ಜಾರಕಿಹೊಳಿ ಅಸಮಾಧಾನ ಹೊರಹಾಕಿದರು.