Site icon Vistara News

ನಾಳೆ ಎರಡನೇ ಹಂತದ ಮತದಾನ; ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಮೊಬೈಲ್‌ನಲ್ಲೇ ಚೆಕ್ ಮಾಡಿ

Lok Sabha Election-2024

Lok Sabha Election 2024: Second Phase Voting In Karnataka Tomorrow, Check Your Name In Voting List

ಬೆಂಗಳೂರು: ಲೋಕಸಭಾ ಚುನಾವಣೆಯ (lok sabha election) ಮೂರನೇ ಹಂತದ ಮತದಾನವು ಮಂಗಳವಾರ (ಮೇ 7) ನಡೆಯಲಿದೆ. ಕರ್ನಾಟದಲ್ಲಿ ಎರಡನೇ ಅಥವಾ ಕೊನೆಯ ಹಂತದ ಮತದಾನವೂ ಮಂಗಳವಾರವೇ ನಡೆಯಲಿದೆ. ಹೀಗಾಗಿ ಮತದಾರರ ಪಟ್ಟಿಯಲ್ಲೊಮ್ಮೆ (voter list) ನಮ್ಮ ಹೆಸರು ಇದೆಯೇ ಎಂಬುದನ್ನು ಪರಿಶೀಲಿಸಿಕೊಳ್ಳುವುದು ಉತ್ತಮ. ಇದಕ್ಕಾಗಿ ಮತಗಟ್ಟೆಗೆ (election booth) ಹೋಗಬೇಕಾದ ಅವಶ್ಯಕತೆ ಈಗಿಲ್ಲ. ಸ್ಮಾರ್ಟ್ ಫೋನ್ (smart phone) ಕೈಯಲ್ಲಿ ಇದ್ದರೆ ಸಾಕು ಮನೆಯಲ್ಲೇ ಕುಳಿತು ಮತದಾರರ ಪಟ್ಟಿಯಲ್ಲಿ ನಮ್ಮ ಹೆಸರು ಇದೆಯೇ ಇಲ್ಲವೇ ಎಂಬುದನ್ನು ಚೆಕ್ ಮಾಡಿಕೊಳ್ಳಬಹುದು.

ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ಅಥವಾ ಮತದಾರರ ಸೇವಾ ಪೋರ್ಟಲ್ ನಲ್ಲಿರುವ ಆನ್ ಲೈನ್ ಮತದಾರರ ಪಟ್ಟಿಯಲ್ಲಿ ಹೆಸರು ಪರಿಶೀಲನೆ ನಡೆಸಿ ಮತಗಟ್ಟೆಯ ಕುರಿತಾದ ಸಂಪೂರ್ಣ ಮಾಹಿತಿ ಪಡೆದುಕೊಳ್ಳಲು ಈಗ ಅವಕಾಶವಿದೆ.

ಹೇಗೆ ನೋಡುವುದು?

ಸ್ಮಾರ್ಟ್ ಫೋನ್ ನಲ್ಲಿ ಚುನಾವಣಾ ಆಯೋಗದ ವೆಬ್ ಸೈಟ್ ನಲ್ಲಿ ಅಥವಾ ಮತದಾರರ ಸೇವಾ ಪೋರ್ಟಲ್ ಅನ್ನು ತೆರೆಯಿರಿ. ಬಳಿಕ ಅಲ್ಲಿ ಕೇಳಿರುವ ಅಗತ್ಯ ಮಾಹಿತಿಗಳನ್ನು ನಮೂದಿಸಿ. ಮುಖ್ಯವಾಗಿ ರಾಜ್ಯ, ಜಿಲ್ಲೆ, ವಿಧಾನಸಭಾ ಕ್ಷೇತ್ರವನ್ನು ಆಯ್ಕೆ ಮಾಡಿದ ಬಳಿಕ ಮತದಾರರ ಪಟ್ಟಿಯಲ್ಲಿ ದಾಖಲಾಗಿರುವಂತೆ ನಿಮ್ಮ ಪೂರ್ಣ ಹೆಸರು ಮತ್ತು ತಂದೆಯ ಹೆಸರನ್ನು ನಮೂದಿಸಬೇಕು. ಬಳಿಕ ಹುಟ್ಟಿದ ದಿನಾಂಕವನ್ನು ಹಾಕಿ ಎಪಿಕ್ (ಎಪಿಐಸಿ) ಸಂಖ್ಯೆಯನ್ನು ಹಾಕಿದ ಬಳಿಕ ಸರ್ಚ್ ಬಟನ್ ಒತ್ತಿದರೆ ಫಲಿತಾಂಶ ಪುಟ ತೆರೆದುಕೊಳ್ಳುತ್ತದೆ.

ಏನು ಮಾಹಿತಿ ?

ನಿಮ್ಮ ಹೆಸರು ಈಗಾಗಲೇ ಮತದಾರರ ಪಟ್ಟಿಯಲ್ಲಿ ಇದ್ದರೆ ಎಪಿಕ್ ಸಂಖ್ಯೆ, ವಿಳಾಸ ಮತ್ತು ಮತಗಟ್ಟೆಯ ಸಂಪೂರ್ಣ ಮಾಹಿತಿ ಇಲ್ಲಿ ಲಭ್ಯವಾಗುತ್ತದೆ. ಮತಗಟ್ಟೆಯ ಸ್ಥಳವನ್ನು ಮ್ಯಾಪ್ ಮೂಲಕ ಕ್ಲಿಕ್ ಮಾಡಿ ನೋಡಲು ಅವಕಾಶವೂ ಇಲ್ಲಿ ಇದೆ.

ಎಸ್ ಎಂಎಸ್ ಮೂಲಕ ಪರಿಶೀಲಿಸಿ

ವೆಬ್ ಪೋರ್ಟಲ್ ಮಾತ್ರವಲ್ಲ ಈ ಎಲ್ಲ ಮಾಹಿತಿಯನ್ನು ಎಸ್ ಎಂಎಸ್ ಮೂಲಕವೂ ಪರಿಶೀಲನೆ ನಡೆಸಬಹುದು.
ಇದಕ್ಕಾಗಿ ಮೊಬೈಲ್ ಫೋನ್ ನಿಂದ 59191 ಕ್ಕೆ ಎಪಿಕ್ ಸಂಖ್ಯೆಯನ್ನು ಹೊಂದಿರುವ ಎಸ್ ಎಂಎಸ್ ಕಳುಹಿಸಿ ಅಥವಾ ಮತದಾರರ ಸಹಾಯವಾಣಿ 1800-111-950ಕ್ಕೆ ಕರೆ ಮಾಡಿ ಕೂಡ ಮಾಹಿತಿ ತಿಳಿದುಕೊಳ್ಳಬಹುದು.

ಯಾವಾಗ ಕೊನೆ ದಿನ?

ಮತದಾರರ ಪಟ್ಟಿಯಲ್ಲಿ ಹೆಸರು ಪರಿಶೀಲನೆಗೆ ಮತದಾನದ ಹಿಂದಿನ ದಿನ ಕೊನೆಯ ದಿನವಾಗಿದೆ. ಒಂದು ವೇಳೆ ಹೆಸರು ಇಲ್ಲದೇ ಇದ್ದರೆ ಹೊಸ ಮತದಾರರ ನೋಂದಣಿಗೆ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಚುನಾವಣಾ ಆಯೋಗದ ವೆಬ್ ಸೈಟ್ ಅಥವಾ ಮತದಾರರ ಸೇವಾ ಪೋರ್ಟಲ್ ಗೆ ಭೇಟಿ ನೀಡಬಹುದು.

ಇದನ್ನೂ ಓದಿ: Lok Sabha Election 2024 : ಮತದಾನದ ಹಬ್ಬದಲ್ಲೂ ಲೂಟಿಗೆ ಇಳಿದ ಖಾಸಗಿ ಬಸ್‌! ವೋಟ್‌ ಹಾಕಲು ಬಸ್‌ ಏರುವವರಿಗೆ ಟಿಕೆಟ್ ದುಬಾರಿ!‌

Exit mobile version