ಮೈಸೂರು: ಲೋಕಸಭೆ ಚುನಾವಣೆಯಲ್ಲಿ (Lok Sabha Election 2024) ಬಿಜೆಪಿಯನ್ನು ಮಣಿಸಲು ಕರ್ನಾಟಕ ಕಾಂಗ್ರೆಸ್ ನಾಯಕರು ತೊಡೆತಟ್ಟಿ ನಿಂತಿದ್ದರೆ, ರಾಜ್ಯಾದ್ಯಂತ ಅಬ್ಬರದ ಪ್ರಚಾರ ಕೈಗೊಳ್ಳುತ್ತಿದ್ದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಮಾತ್ರ ಮೈಸೂರು (Mysore) ಹಾಗೂ ಚಾಮರಾಜನಗರ (Chamarajanagar) ಲೋಕಸಭೆ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವ ಒತ್ತಡಕ್ಕೆ ಸಿಲುಕಿದ್ದಾರೆ. ಇದೇ ಕಾರಣಕ್ಕೆ ಅವರು ಮೈಸೂರು ಹಾಗೂ ಚಾಮರಾಜನಗರದಲ್ಲಿ ಎಡೆಬಿಡದೆ ಪ್ರಚಾರ ಕೈಗೊಳ್ಳುತ್ತಿದ್ದಾರೆ.
“ನಾನು ಮುಖ್ಯಮಂತ್ರಿಯಾಗಿ ಉಳಿಯಬೇಕು ಎಂದರೆ ವರುಣಾದಲ್ಲಿ 60 ಸಾವಿರ ಮತಗಳ ಲೀಡ್ ಬೇಕು” ಎಂಬುದಾಗಿ ಹೇಳಿರುವ ಸಿದ್ದರಾಮಯ್ಯ ಅವರು ಈಗಾಗಲೇ ಮೈಸೂರು ಭಾಗದಲ್ಲಿ ಏಳು ದಿನ ಉಳಿದುಕೊಂಡು ಅಬ್ಬರ ಪ್ರಚಾರ ಕೈಗೊಂಡಿದ್ದಾರೆ. ಇದರ ಬೆನ್ನಲ್ಲೇ ಅವರು ಏಪ್ರಿಲ್ 11 ಹಾಗೂ 12ರಂದು ಮೈಸೂರು ಹಾಗೂ ಚಾಮರಾಜನಗರ ಪ್ರವಾಸ ಕೈಗೊಳ್ಳಲು ತೀರ್ಮಾನಿಸಿದ್ದಾರೆ. ಇದರೊಂದಿಗೆ ಸತತ ಪ್ರಚಾರದ ಮೂಲಕ ಕ್ಷೇತ್ರದ ಮತದಾರರನ್ನು ಸೆಳೆಯಲು ಯತ್ನಿಸುತ್ತಿದ್ದಾರೆ.
ಸಿದ್ದರಾಮಯ್ಯನವರ ತವರು ಜಿಲ್ಲೆಯಾದ ಮೈಸೂರಿನಲ್ಲಿ ಎಂ.ಲಕ್ಷ್ಮಣ್ ಹಾಗೂ ಚಾಮರಾಜನಗರದಲ್ಲಿ ಸುನೀಲ್ ಬೋಸ್ ಅವರನ್ನು ಗೆಲ್ಲಿಸಲು ಸಿದ್ದರಾಮಯ್ಯ ಅವರು ಶತಾಯಗತಾಯ ಪ್ರಯತ್ನ ಮಾಡುತ್ತಿದ್ದಾರೆ. ಇದಕ್ಕಾಗಿ ಅವರು ಕರ್ನಾಟಕದ ಬೇರೆ ಯಾವ ಕ್ಷೇತ್ರಗಳಿಗೂ ನೀಡದಷ್ಟು ಆದ್ಯತೆಯನ್ನು ಎರಡೇ ಕ್ಷೇತ್ರಗಳಿಗೆ ನೀಡುತ್ತಿದ್ದಾರೆ. ಎರಡೂ ಕ್ಷೇತ್ರಗಳು ಸಿದ್ದರಾಮಯ್ಯ ಅವರಿಗೆ ಪ್ರತಿಷ್ಠೆಯಾಗಿದ್ದು, ಚುನಾವಣೆ ಬಳಿಕ ಅವರ ಭವಿಷ್ಯವನ್ನು ಈ ಎರಡೂ ಕ್ಷೇತ್ರಗಳೇ ನಿರ್ಧರಿಸಲಿವೆ ಎಂದೇ ಹೇಳಲಾಗುತ್ತಿದೆ.
ಸಿಎಂ ಸ್ಥಾನ ಉಳಿಯಲು 60 ಸಾವಿರ ಲೀಡ್ ಬೇಕು
ಸಿಎಂ ಸ್ಥಾನದಲ್ಲಿ ಉಳಿಯಬೇಕು ಎಂದರೆ ವರುಣಾ ಕ್ಷೇತ್ರದಲ್ಲಿ 60 ಸಾವಿರ ಮತಗಳ ಲೀಡ್ ಕೊಡಬೇಕು ಎಂದು ಕೆಲ ದಿನಗಳ ಹಿಂದಷ್ಟೇ ಸಿದ್ದರಾಮಯ್ಯ ಹೇಳಿದ್ದರು. ವರುಣಾ ಕ್ಷೇತ್ರದ ಬಿಳಿಗೆರೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ, “ನಾನು ಮುಖ್ಯಮಂತ್ರಿಯಾಗಿ ಮುಂದುವರಿಯಬೇಕೋ ಬೇಡವೋ? ನಾನು ಸಿಎಂ ಸ್ಥಾನದಲ್ಲಿ ಮುಂದುವರಿಯಬೇಕು ಎಂದರೆ ವರುಣಾ ಕ್ಷೇತ್ರದಲ್ಲಿ 60 ಸಾವಿರ ಲೀಡ್ ಕೊಟ್ಟು ಸುನೀಲ್ ಬೋಸ್ ಅವರನ್ನು ಗೆಲ್ಲಿಸಿ. ವರುಣಾ ನನ್ನ ಅದೃಷ್ಟದ ಕ್ಷೇತ್ರ. ಇಲ್ಲಿಂದ ಗೆದ್ದು ಎರಡು ಬಾರಿ ಮುಖ್ಯಮಂತ್ರಿಯಾಗಿದ್ದೇನೆ. ಈಗಲೂ ವರುಣಾ ಕ್ಷೇತ್ರದಲ್ಲಿ ಸುನೀಲ್ ಬೋಸ್ ಅವರನ್ನು 60 ಸಾವಿರ ಲೀಡ್ ಕೊಟ್ಟು ಗೆಲ್ಲಿಸಿ. ಆಗ ನನ್ನನ್ನು ಯಾರೂ ಮುಟ್ಟಲು ಆಗುವುದಿಲ್ಲ” ಎಂಬುದಾಗಿ ಹೇಳಿದ್ದರು. ಅವರ ಮೇಲೆ ಎಷ್ಟು ಒತ್ತಡ ಇದೆ ಎಂಬುದಕ್ಕೆ ಅವರ ಹೇಳಿಕೆಯೇ ಸಾಕ್ಷಿಯಾಗಿದೆ.
ಇದನ್ನೂ ಓದಿ: Lok Sabha Election 2024: ಹಾಸನದಲ್ಲಿ ಮೈತ್ರಿ ಸಮನ್ವಯ ಸಭೆ; ಪ್ರೀತಂಗೌಡ ಬೆಂಬಲಿಗರ ಮನವೊಲಿಸಲು ರಾಧಾಮೋಹನ್ ದಾಸ್ ಕಸರತ್ತು