Site icon Vistara News

Lok Sabha Election 2024: ಸುಮಲತಾ ಅಕ್ಕ ತಾಳ್ಮೆಯಿಂದರಬೇಕೆಂದ ಆಪ್ತ ಸಚ್ಚಿದಾನಂದ!

Lok Sabha Election 2024 Sumalatha Ambareesh close aide Sachidananda asks her to be patient

ಬೆಂಗಳೂರು: ಅಂಬರೀಶ್ ಅಣ್ಣ ಅವರ ಅಭಿಮಾನಿ ಆಗಿ ಹೇಳುತ್ತೇನೆ. ಸಂಸದೆ ಸುಮಲತಾ (Sumalatha Ambareesh) ಅಕ್ಕನಿಗೆ ಭವಿಷ್ಯ ಇದೆ. ಅವರು ತಾಳ್ಮೆಯಿಂದ ಇರಬೇಕು ಎಂದು ಆಪ್ತ, ಸುಮಲತಾ ಬೆಂಬಲಿಗ ಸಚ್ಚಿದಾನಂದ (Sachidananda) ಹೇಳಿದ್ದಾರೆ. ಆದರೆ, ಈ ಲೋಕಸಭಾ ಚುನಾವಣೆಯಲ್ಲಿ (Lok Sabha Election 2024) ಸುಮಲತಾ ಅವರ ನಿರ್ಧಾರ ಮಾತ್ರ ಇನ್ನೂ ಕುತೂಹಲವಾಗಿದೆ.

ಮಾಧ್ಯಮದವರೊಂದಿಗೆ ಮಾತನಾಡಿದ ಸಚ್ಚಿದಾನಂದ, ಅಂಬರೀಶ್ ಅವರ ಕುಟುಂಬಕ್ಕೆ ಉತ್ತಮ ಹೆಸರಿದೆ. ನಮ್ಮ ರಾಷ್ಟ್ರೀಯ ನಾಯಕರು ಸುಮಲತಾ ಅವರ ಸಂಪರ್ಕದಲ್ಲಿದ್ದಾರೆ. ನಾಳೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಮಂಡ್ಯದಲ್ಲಿ ಸಭೆ ಕರೆದಿದ್ದಾರೆ. ಈ ಬಾರಿ ಮಂಡ್ಯದಲ್ಲಿ ಮೈತ್ರಿ ಅಭ್ಯರ್ಥಿ ಗೆಲ್ಲೋದು ಖಚಿತ. ಬಿಜೆಪಿ – ಜೆಡಿಎಸ್‌ ಒಟ್ಟಿಗೆ ಕೆಲಸ ಮಾಡಲಿದೆ ಎಂದು ಹೇಳಿದರು.

ಇದನ್ನೂ ಓದಿ: Lok Sabha Election 2024: ಎಚ್‌ಡಿಕೆ ಭೇಟಿ ಮಾಡಿದ ಕರಡಿ ಸಂಗಣ್ಣ; ಕೈ ಸೇರ್ಪಡೆಯೋ? ಬಿಜೆಪಿಗೆ ಬೆಂಬಲವೋ?

ಯಾರೇ ಅಭ್ಯರ್ಥಿಯಾದರೂ ಸುಮಲತಾ ಪ್ರಚಾರಕ್ಕೆ ಬರುತ್ತಾರಾ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಸಚ್ಚಿದಾನಂದ, ಸುಮಲತಾ ಅವರ ಬಗ್ಗೆ ಮಾತನಾಡುವಷ್ಟು ನಾನು ದೊಡ್ಡವನಲ್ಲ. ನಮಗೆ ಸುಮಲತಾ ಅವರು ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಬಂದು ಆಶೀರ್ವಾದ ಮಾಡಿದ್ದರು. ನಾನೊಬ್ಬ ಶ್ರೀರಂಗಪಟ್ಟಣದಲ್ಲಿ ಪರಾಜಿತ ಅಭ್ಯರ್ಥಿಯಾಗಿದ್ದೇನೆ. ನೂರಕ್ಕೆ ನೂರು ಅವರು ನನಗೆ ಬಾಹ್ಯ ಬೆಂಬಲ ನೀಡಿದ್ದರು. ಈಗಾಗಲೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಹಾಗೂ ಗೃಹ ಸಚಿವ ಅಮಿತ್‌ ಶಾ ಅವರು ಸುಮಲತಾ ಜತೆ ಮಾತನಾಡಿದ್ದಾರೆ ಎಂದು ತಿಳಿಸಿದರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸಂಸದೆ ಸುಮಲತಾ ಅಂಬರೀಶ್ ಅವರು ಮೇಲುಕೋಟೆಯನ್ನು ಹೊರತುಪಡಿಸಿ ಎಲ್ಲ ಅಭ್ಯರ್ಥಿಗಳ ಪರ ಎರಡು ದಿನ ಕ್ಯಾಂಪೇನ್ ಮಾಡಿದ್ದರು. ಅಲ್ಲದೆ, ಪ್ರಧಾನಿ ನರೇಂದ್ರ ಮೋದಿ ಅವರ ಪರ ಅವರು ವಿಶ್ವಾಸದ ಮಾತುಗಳನ್ನು ಹೇಳಿದ್ದಾರೆ. ನಾಳೆ ಮಂಡ್ಯದಲ್ಲಿ ವಿಜಯೇಂದ್ರ ಅವರು ಸಭೆ ಕರೆದಿದ್ದು, ಎಲ್ಲಾ ವಿಚಾರಗಳು ಅಲ್ಲಿ ಚರ್ಚೆಯಾಗಲಿದೆ ಎಂದು ಸಚ್ಚಿದಾನಂದ ಹೇಳಿದರು.

ಸುಮಲತಾ ಆಗ್ತಾರಾ ರೆಬೆಲ್?

ಈಗಾಗಲೇ ದೆಹಲಿಗೆ ಪರೇಡ್ ನಡೆಸಿದ್ದ ಸುಮಲತಾ ಅಂಬರೀಶ್‌ ಪ್ರಧಾನಿ ನರೇಂದ್ರ ಮೋದಿ, ಅಮಿತ್‌ ಶಾ, ಜೆ.ಪಿ. ನಡ್ಡಾ ಅವರನ್ನು ಭೇಟಿಯಾಗಿ ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಬೇಡಿಕೆ ಮಂಡಿಸಿದ್ದರು. ಆದರೆ, ಅಲ್ಲಿ ಅವರಿಗೆ ಯಾವ ಭರವಸೆ ಸಿಕ್ಕಿದೆ ಎಂಬುದು ಮಾತ್ರ ಇನ್ನೂ ರಹಸ್ಯವಾಗಿಯೇ ಇದೆ. ಮುಂದಿನ ದಿನದಲ್ಲಿ ತಮ್ಮ ನಿರ್ಧಾರವನ್ನು ಪ್ರಕಟ ಮಾಡುವುದಾಗಿ ಹೇಳಿದ್ದ ಸುಮಲತಾ, ತಾವು ಮಂಡ್ಯ ಬಿಟ್ಟು ಬೇರೆ ಎಲ್ಲಿಯೂ ಸ್ಪರ್ಧೆ ಮಾಡುವುದಿಲ್ಲ ಎಂದು ಹೇಳುತ್ತಾ ಬಂದಿದ್ದಾರೆ. ಆದರೆ, ಈಗ ಎಲ್ಲವೂ ಉಲ್ಟಾ ಆಗಿದೆ.

ಇದನ್ನೂ ಓದಿ: Lok Sabha Election 2024: ಮೋದಿ ಗೆಲುವಿಗಾಗಿ ಈ 4 ವರ್ಗಗಳನ್ನು ಟಾರ್ಗೆಟ್‌ ಮಾಡಿದ ಬಿಜೆಪಿ

ಸುಮಲತಾಗೆ ಸುಲಭವಲ್ಲ

ತನಗೇ ಟಿಕೆಟ್ ಅಂತ ಕಾನ್ಫಿಡೆಂಟ್ ಆಗಿದ್ದ ಸುಮಲತಾ ಅವರು ಈ ಬಾರಿಯೂ ಹಳೇ ನಿರ್ಧಾರವನ್ನು ತೆಗೆದುಕೊಳ್ತಾರಾ? ಪಕ್ಷೇತರವಾಗಿ ನಿಲ್ಲುವ ಮೂಲಕ ಮೈತ್ರಿ ಅಭ್ಯರ್ಥಿಗೆ ಟಕ್ಕರ್‌ ಕೊಡ್ತಾರಾ? ಎಂಬುದು ಸದ್ಯದ ಪ್ರಶ್ನೆಯಾಗಿದೆ. ಆದರೆ, ಕಳೆದ ಬಾರಿ ಸುಮಲತಾ ಸ್ಪರ್ಧೆ ಮಾಡಿದ್ದರಿಂದ ಅವರಿಗೆ ಬೆಂಬಲ ನೀಡಿದ್ದ ಬಿಜೆಪಿ ತನ್ನ ಅಭ್ಯರ್ಥಿಯನ್ನು ಹಾಕಿರಲಿಲ್ಲ. ಅಲ್ಲದೆ, ಕಾಂಗ್ರೆಸ್‌ – ಜೆಡಿಎಸ್‌ ಮೈತ್ರಿಯಲ್ಲಿ ಬಿರುಕು ಮೂಡಿದ್ದು ಸಹ ಸುಮಲತಾ ಅವರಿಗೆ ಪ್ಲಸ್‌ ಆಗಿತ್ತು. ಈಗ ಹಾಗಾಗದು. ಜೆಡಿಎಸ್‌ ತನ್ನ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲಿದ್ದು, ಬಿಜೆಪಿ ಮೈತ್ರಿ ಅಭ್ಯರ್ಥಿಯ ಬೆಂಬಲಕ್ಕೆ ನಿಲ್ಲಲಿದೆ. ಕಾಂಗ್ರೆಸ್‌ ಸಹ ತನ್ನ ಅಭ್ಯರ್ಥಿಯನ್ನು ಹಾಕಿದ್ದರಿಂದ ಈ ಬಾರಿ ಸ್ಪರ್ಧೆ ಮಾಡಿದರೂ ಏಕಾಂಗಿಯಾಗಬೇಕಾಗುತ್ತದೆ. ಇದರಿಂದ ಸುಮಲತಾಗೆ ಸುಲಭವಲ್ಲ ಎಂಬ ಸತ್ಯ ಅವರಿಗೂ ಗೊತ್ತಿದೆ. ಜತೆಗೆ ಮಗನ ರಾಜಕೀಯ ಭವಿಷ್ಯವನ್ನೂ ನೋಡಿಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಸುಮಲತಾ ಅಂಬರೀಶ್‌ ನಿರ್ಧಾರ ಈಗ ಮಹತ್ವ ಪಡೆದುಕೊಂಡಿದೆ.

Exit mobile version