Site icon Vistara News

Lok Sabha Election 2024: ಏ.3ಕ್ಕೆ ಮಂಡ್ಯದಲ್ಲೇ ನಿರ್ಧಾರ ಪ್ರಕಟಿಸುವೆ ಎಂದ ಸುಮಲತಾ! ಸ್ವತಂತ್ರ ಸ್ಪರ್ಧೆ ಸುಳಿವು

Lok Sabha Election 2024

ಬೆಂಗಳೂರು: ಮಂಡ್ಯ ಲೋಕಸಭಾ ಕ್ಷೇತ್ರದ ಹಾಲಿ ಸಂಸದೆ ಸುಮಲತಾ ಅಂಬರೀಶ್‌ ಅವರು ಈ ಬಾರಿ ಚುನಾವಣೆಗೆ ಸ್ಪರ್ಧಿಸಬೇಕೋ, ಬೇಡವೋ ಎಂಬ ತೀರ್ಮಾನವನ್ನು ಏ.3ರಂದು ಮಂಡ್ಯದಲ್ಲಿ ಅಭಿಮಾನಿಗಳು, ಕಾರ್ಯಕರ್ತರ ಸಭೆ ನಡೆಸಿ, ಘೋಷಣೆ ಮಾಡುವುದಾಗಿ ಸುಮಲತಾ ಅಂಬರೀಶ್‌ ಪ್ರಕಟಿಸಿದ್ದಾರೆ. ಹೀಗಾಗಿ ಅವರ ಸ್ಪರ್ಧೆ ಬಗ್ಗೆ ಮತ್ತಷ್ಟು ಕುತೂಹಲ ಹೆಚ್ಚಿದೆ. ಅಲ್ಲದೇ ಅವರು ಅಭಿಮಾನಿಗಳ ಮುಂದೆ ಇಂದು ಆಡಿದ ಮಾತುಗಳನ್ನು ಗಮನಿಸಿದರೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಬಗ್ಗೆ ಪರೋಕ್ಷವಾಗಿ ಸುಳಿವು ನೀಡಿದಂತಿದೆ.

ಬೆಂಗಳೂರಿನ ಜೆ.ಪಿ.ನಗರದ ನಿವಾಸದಲ್ಲಿ ಸೇರಿದ್ದ ಅಪಾರ ಅಭಿಮಾನಿಗಳ ಸಮ್ಮುಖದಲ್ಲಿ ಸುಮಲತಾ ಮಾತನಾಡಿದ್ದಾರೆ. ಮಂಡ್ಯದಿಂದಲೇ ನನ್ನ ರಾಜಕೀಯ ಜೀವನ ಆರಂಭವಾಗಿದೆ. ಅಂಬರೀಶ್‌ ಅಭಿಮಾನಿಗಳ ಆಶೀರ್ವಾದದಿಂದ ನಾನು ಸಂಸದೆಯಾಗಿದ್ದೇನೆ. ಐದು ವರ್ಷಗಳ ಹಿಂದೆ ಈ ಪರಿಸ್ಥಿತಿಯೇ ನಿರ್ಮಾಣವಾಗಿತ್ತು. ಆಗ ನನಗೆ ಬೆಂಬಲವಾಗಿ ನಿಂತದ್ದು ಇದೇ ಅಭಿಮಾನಿಗಳು. ಮಂಡ್ಯ ಬಿಟ್ಟು ನನಗೆ ರಾಜಕಾರಣವೇ ಬೇಡ ಎಂದು ಹೇಳಿದ್ದೆ. ಈಗಲೂ ಅದೇ ನನ್ನ ಮಾತಾಗಿದೆ. ನನ್ನ ಸ್ವಾರ್ಥ ನೋಡಿ ನಾನು ತೀರ್ಮಾನ ತೆಗೆದುಕೊಳ್ಳಬಹುದಿತ್ತು. ಆದರೆ ಆ ರೀತಿ ಮಾಡಿಲ್ಲ. ನಾನು ಮಂಡ್ಯ ಬಿಟ್ಟು ಎಲ್ಲೂ ಹೋಗಲ್ಲ, ಮಂಡ್ಯ ಜನರೇ ಜನ್ನ ಶಕ್ತಿ. ಶೀಘ್ರದಲ್ಲೇ ನಿರ್ಧಾರ ಪ್ರಕಟಿಸಲಾಗುವುದು ಎಂದು ತಿಳಿಸಿದ್ದಾರೆ.

ಸುಮಲತಾ ಅವರಿಗೆ ಬೆಂಗಳೂರು ಉತ್ತರ, ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ಅಥವಾ ರಾಜ್ಯಸಭಾ ಸ್ಥಾನವನ್ನು ಕೊಡುವುದಾಗು ಬಿಜೆಪಿ ಹೈಕಮಾಂಡ್‌ ಹೇಳಿತ್ತು. ಆದರೂ, ಮಂಡ್ಯವೇ ತಮ್ಮ ರಾಜಕೀಯ ಕರ್ಮಭೂಮಿ ಎಂದು ಹೇಳಿದ್ದ ಸುಮಲತಾ ಅವರು ಇದೀಗ ತಮ್ಮ ನಿರ್ಧಾರವನ್ನು ಮಂಡ್ಯದಲ್ಲಿ ಪ್ರಕಟಿಸುವುದಾಗಿ ಹೇಳಿದ್ದಾರೆ.

ಪಕ್ಷೇತರ ಸ್ಪರ್ಧೆಗೆ ಅಭಿಮಾನಿಗಳ ಒತ್ತಾಯ

ಮಂಡ್ಯದಲ್ಲಿ ಹಾಲಿ ಸಂಸದೆ ಸುಮಲತಾ ಅಂಬರೀಶ್‌ ಅವರಿಗೆ ಲೋಕಸಭಾ ಚುನಾವಣೆಗೆ (Lok Sabha Election 2024) ಬಿಜೆಪಿ ಟಿಕೆಟ್‌ ನೀಡದ ಹಿನ್ನೆಲೆಯಲ್ಲಿ ಅಭಿಮಾನಿಗಳು ಅಸಮಾಧಾನ ಹೊರಹಾಕಿದ್ದರು. ಈ ನಡುವೆ ನಗರದ ಜೆ.ಪಿ.ನಗರದ ನಿವಾಸದದ ಬಳಿ ಶನಿವಾರ ಸಾವಿರಾರು ಅಭಿಮಾನಿಗಳು ಜಮಾಯಿಸಿ, ಮತ್ತೊಮ್ಮೆ ಸುಮಲತಾ ಅವರು ಪಕ್ಷೇತರವಾಗಿ ಸ್ಪರ್ಧಿಸಬೇಕು ಎಂದು ಆಗ್ರಹಿಸಿದರು.

ಚುನಾವಣೆ ಸ್ಪರ್ಧೆ ಸಂಬಂಧ ಸುಮಲತಾ ಅಂಬರೀಶ್‌ ಅವರು ಕರೆದಿದ್ದ ಮಹತ್ವದ ಸಭೆಯಲ್ಲಿ ಸಾವಿರಾರು ಅಭಿಮಾನಿಗಳು ಭಾಗಿಯಾಗಿದ್ದರು. ಮಂಡ್ಯ, ನಾಗಮಂಗಲ, ಮದ್ದೂರು, ಕೆ.ಆರ್.ಪೇಟೆ, ಮಳವಳ್ಳಿ, ಪಾಂಡವಪುರದಿಂದ ರೈತ ಪರ ಮುಖಂಡರು, ಅಭಿಮಾನಿಗಳು ಆಗಮಿಸಿದ್ದರು. ನಟ ಅಂಬರೀಶ್‌ ಭಾವಚಿತ್ರ ಹಿಡಿದು ಆಗಮಿಸಿದ್ದ ಅಭಿಮಾನಿಗಳನ್ನು ಕಂಡು ಸುಮಲತಾ ಅವರು ಭಾವುಕರಾದರು.

ಇದನ್ನೂ ಓದಿ | Saina Nehwal: ಸ್ತ್ರೀಯರು ಅಡುಗೆ ಮನೆಗೆ ಸೀಮಿತ; ಶಾಮನೂರು ಹೇಳಿಕೆಗೆ ಸೈನಾ ನೆಹ್ವಾಲ್ ಆಕ್ರೋಶ

ಕಳೆದ ಬಾರಿ ಮಂಡ್ಯ ಜನತೆ ಹೇಳಿದ್ದಕ್ಕೆ ಸುಮಲತಾ ಅವರು ಸ್ವತಂತ್ರವಾಗಿ ಸ್ಪರ್ಧಿಸಿ ಗೆದ್ದಿದ್ದರು. ಅಂದು ನೀವು ನಂಬಿದ್ದ ಜನರು ಇಂದು ಕೂಡ ಇದ್ದಾರೆ. ಹೀಗಾಗಿ ಒಂದು ಉತ್ತಮ ನಿರ್ಧಾರ ಕೈಗೊಳ್ಳಬೇಕು. ಮಂಡ್ಯದ ಜನತೆ ನಿಮ್ಮ ಜತೆ ಇದ್ದಾರೆ ಎಂದು ಸುಮಲತಾ ಅವರನ್ನು ಅಭಿಮಾನಿಗಳು, ಮುಖಂಡರು ಕೋರಿದರು.

Exit mobile version