Site icon Vistara News

Lok Sabha Election 2024 : ಬೆಂಗಳೂರು ದಕ್ಷಿಣದಲ್ಲಿ ‘ತೇಜಸ್ವಿ’ನಿ ಕಂಪನ!

Tejaswini ananth kumar narendra modi and Tejasvi surya

ಬೆಂಗಳೂರು: ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಗೆ (Lok Sabha Election 2024) ಈಗಲೇ ಅಖಾಡ ಸಿದ್ಧವಾಗುತ್ತಿದೆ. ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ (PM Narendra Modi) ವಿರುದ್ಧ ಮಹಾಘಟಬಂಧನ್‌ ಅಡಿ ಪ್ರತಿಪಕ್ಷಗಳು “ಇಂಡಿಯಾ” ಒಕ್ಕೂಟವನ್ನು (INDIA Alliance) ರಚಿಸಿಕೊಂಡು ಈಗಾಗಲೇ ಸಂದೇಶವನ್ನು ರವಾನೆ ಮಾಡಿವೆ. ಈ ಮಧ್ಯೆ ಕೇಂದ್ರ ಬಿಜೆಪಿ ಸಹ ಎನ್‌ಡಿಎ (NDA) ಪುನರುಜ್ಜೀವನಕ್ಕೆ ಶ್ರಮ ವಹಿಸುತ್ತಿದೆ. ಅಲ್ಲದೆ, ದಕ್ಷಿಣ ಭಾರತದ ರಾಜ್ಯಗಳತ್ತ ಕಣ್ಣಿಟ್ಟಿದೆ. ಈ ನಡುವೆ ಕಳೆದ ಭಾರಿ ಅಭೂತಪೂರ್ವ ಯಶಸ್ಸು ತಂದು ಕೊಟ್ಟ ಕರ್ನಾಟಕದತ್ತ ಹೆಚ್ಚಿನ ಚಿತ್ತವನ್ನು ಇರಿಸಿದೆ. ಇಲ್ಲಿ 28 ಲೋಕಸಭಾ ಕ್ಷೇತ್ರದಲ್ಲಿ 25 ಕ್ಷೇತ್ರದಲ್ಲಿ ಬಿಜೆಪಿ ಗೆದ್ದುಕೊಂಡಿತ್ತು. ಇನ್ನೊಂದು ಕಡೆ ಬಿಜೆಪಿ ಬೆಂಬಲಿತ ಅಭ್ಯರ್ಥಿ ಗೆದ್ದಿದ್ದರು. ಹೀಗಾಗಿ ಈ ಸ್ಥಾನಗಳನ್ನು ಉಳಿಸಿಕೊಳ್ಳಲು ರಣತಂತ್ರವನ್ನು ಹೆಣೆಯುತ್ತಿದೆ. ಅದರ ಭಾಗವಾಗಿ ಈಗಲೇ ಟಿಕೆಟ್‌ ಹಂಚಿಕೆ ಬಗ್ಗೆ ತಲೆಕೆಡಿಸಿಕೊಂಡಿದೆ ಎಂದು ಹೇಳಲಾಗುತ್ತಿದೆ. ಇನ್ನು ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ (Bangalore South Lok Sabha constituency) ಉರುಳಿಸಿರುವ ದಾಳ ಹಾಲಿ ಅಭ್ಯರ್ಥಿಗೆ ತಲೆನೋವಾಗಿದೆ. ಅಲ್ಲೀಗ ‘ತೇಜಸ್ವಿ’ನಿ ಕಂಪನ ಶುರುವಾಗಿದೆ.

ಬೆಂಗಳೂರು ದಕ್ಷಿಣಕ್ಕೆ ತಾನೇ ಅಭ್ಯರ್ಥಿ ಎಂದು ಹಾಲಿ ಸಂಸದ ತೇಜಸ್ವಿ ಸೂರ್ಯ (Tejaswi Surya) ಹೇಳಿಕೊಳ್ಳುವಂತಿಲ್ಲ. ಎರಡನೇ ಅವಧಿ ಖಾತ್ರಿ ಎಂದು ಎದೆ ಎತ್ತಿ ಎಲ್ಲಿಯೂ ಹೇಳದಂತೆ ಹೈಕಮಾಂಡ್‌‌ ಈಗ ತಡೆಯೊಡ್ಡಿದೆ. ಮಾಜಿ ಕೇಂದ್ರ ಸಚಿವ ಅನಂತ್ ಕುಮಾರ್ ಪತ್ನಿ ತೇಜಸ್ವಿನಿ ಅನಂತ್‌ ಕುಮಾರ್‌ (Tejaswini Ananth Kumar) ಅವರ ಪ್ರಧಾನಿ ಭೇಟಿಯು ಇದಕ್ಕೆ ಪುಷ್ಟಿ ನೀಡುತ್ತಿದೆ. ಬದಲಾವಣೆಗೆ ಅವಕಾಶವಿದೆ ಎಂಬ ಸಂದೇಶವನ್ನು ವರಿಷ್ಠರು ಈ ಮೂಲಕ ಪರೋಕ್ಷವಾಗಿ ರವಾನೆ ಮಾಡಿದ್ದಾರೆ.

ಜುಲೈ 20ರಂದು ಪ್ರಧಾನಿ ಕಚೇರಿಯಲ್ಲಿ ನರೇಂದ್ರ ಮೋದಿ ಅವರನ್ನು ತೇಜಸ್ವಿನಿ ಅನಂತಕುಮಾರ್‌ ಭೇಟಿಯಾಗಿದ್ದರು. ಈ ಬಗ್ಗೆ ಭಾನುವಾರ (ಜುಲೈ 23) ಮೈಸೂರಿನಲ್ಲಿ ಪ್ರತಿಕ್ರಿಯೆ ನೀಡಿದ್ದ ತೇಜಸ್ವಿನಿ, “ಅನಂತ್ ಕುಮಾರ್ ಹಾದಿಯಲ್ಲಿ ಹೋಗುತ್ತಿದ್ದೇನೆ. ಯಾವುದೇ ಆಕಾಂಕ್ಷೆಗಳನ್ನು ಇಟ್ಟುಕೊಂಡು ರಾಜಕಾರಣ ಮಾಡಬಾರದು ಎಂದು ಅವರು ಹೇಳುತ್ತಿದ್ದರು. ಹಿಂದೆಯೂ ನಾನು ಅವಕಾಶ ಕೇಳಿಲ್ಲ, ಈಗಲೂ ಕೇಳಲ್ಲ. ಯಾವುದೇ ನಿರೀಕ್ಷೆಗಳನ್ನು ಇಟ್ಟುಕೊಂಡಿಲ್ಲ. ಅವಕಾಶ ಕೊಟ್ಟರೆ ನೋಡೋಣ. ಎಲ್ಲದಕ್ಕೂ ಸಮಯ ಉತ್ತರ ಕೊಡಲಿದೆ” ಎಂದು ಹೇಳಿಕೆ ನೀಡಿದ್ದರು.

ಈಗ ಸ್ಪರ್ಧೆಗೆ ಸಿದ್ಧ ಎಂದು ತೇಜಸ್ವಿನಿ ಅನಂತಕುಮಾರ್‌‌ ಹೇಳುವ ಮೂಲಕ ತಾವೂ ಸ್ಪರ್ಧಾಕಾಂಕ್ಷಿ ಎಂಬುದನ್ನು ಹೇಳಿಕೊಂಡಿದ್ದಾರೆ. ಇನ್ನು ಕಾಂಗ್ರೆಸ್‌‌ಗೆ ಹೋಗುವ ಸುದ್ದಿಯನ್ನು ಅಲ್ಲಗಳೆದಿದ್ದಾರೆ. ಪಕ್ಷದೊಂದಿಗೇ ಇರುವೆ, ಪಕ್ಷವೂ ನನ್ನೊಂದಿಗಿದೆ ಎಂದ ಬಿಜೆಪಿ ಉಪಾಧ್ಯಕ್ಷೆಯಾಗಿರುವ ತೇಜಸ್ವಿನಿ ಸ್ಪಷ್ಟಪಡಿಸಿದ್ದಾರೆ. ಈ ಹೇಳಿಕೆಯು ಈಗ ರಾಜಕೀಯ ಕಂಪನಕ್ಕೆ ಕಾರಣವಾಗಿದೆ. ನೀನೇ ಮುಂದೆ ಹೋಗು ಎಂದರೆ ಹೋಗುತ್ತೇನೆ. ಬೇರೆಯವರಿಗೆ ಬೆಂಬಲಿಸು ಎಂದರೂ ಪಾಲಿಸುತ್ತೇನೆ ಎಂಬ ಚಾಣಾಕ್ಷ ಉತ್ತರವನ್ನು ಅವರು ನೀಡಿದ್ದಾರೆ.

ಇದನ್ನೂ ಓದಿ: Power Point with HPK : ಈಗ ರಮೇಶ್‌ ಜಾರಕಿಹೊಳಿ ಎದುರು ಬಂದು ನಿಂತ್ರೆ ಲಕ್ಷ್ಮಿ ಹೆಬ್ಬಾಳ್ಕರ್‌ ಏನು ಮಾಡಬಹುದು?

ಬಿಜೆಪಿಗೆ ಈ ಬಾರಿ ಇರುವ ಆತಂಕಗಳೇನು?

– ಅಸಮಾಧಾನಿತರನ್ನು ಕಡೆಗಣಿಸಿದ್ದರಿಂದ ವಿಧಾನಸಭೆ ಚುನಾವಣೆಯಲ್ಲಿ ಸೋಲು
– ಅನಂತಕುಮಾರ್‌‌‌‌ಗೆ ಸೂಕ್ತ ಗೌರವ ನೀಡಿಲ್ಲ ಎಂಬ ಆರೋಪ
– ತೇಜಸ್ವಿ ಸೂರ್ಯ ವಿರುದ್ಧ ಕುಟುಂಬ ರಾಜಕಾರಣದ ಆರೋಪ ಮಾಡುತ್ತಿರುವ ಕಾಂಗ್ರೆಸ್‌
– ಚಿಕ್ಕಪ್ಪ ಎಲ್‌.ಎ. ರವಿಸುಬ್ರಹ್ಮಣ್ಯ ಬಸವನಗುಡಿ ಶಾಸಕ
– ಮಗಳು ಸೋತಿದ್ದರಿಂದ ಬಿಜೆಪಿ ವಿರುದ್ಧ ಸಿಡಿದೆದ್ದಿರುವ ರಾಮಲಿಂಗಾರೆಡ್ಡಿ
– ಬಿಜೆಪಿ ವಿರುದ್ಧ ಶತಾಯಗತಾಯ ಗೆಲ್ಲಬೇಕೆಂಬ ಛಲ
– ಗೋವಿಂದರಾಜನಗರದಲ್ಲೂ ಈ ಬಾರಿ ಕಾಂಗ್ರೆಸ್‌‌‌‌ ಶಾಸಕ ಆಯ್ಕೆ
– ತೇಜಸ್ವಿ ಸೂರ್ಯ ವಿರುದ್ಧ ಎಲ್ಲರೂ ಒಟ್ಟಾಗುವ ಅಪಾಯ
– ತೇಜಸ್ವಿನಿ ಅನಂತಕುಮಾರ್‌ ಸ್ಪರ್ಧಿಸಿದರೆ ಜನಬೆಂಬಲದ ನಿರೀಕ್ಷೆ
– ತೇಜಸ್ವಿನಿಯವರೊಂದಿಗೆ ಪ್ರಧಾನಿ ಮೋದಿ ಮಾತನಾಡಿ ಸಂದೇಶ
– ಸ್ಪರ್ಧೆಯ ಅವಕಾಶವನ್ನು ತಳ್ಳಿಹಾಕದ ತೇಜಸ್ವಿನಿ ಅನಂತಕುಮಾರ್‌‌‌
– ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷರಿಗೆ ಟಿಕೆಟ್‌‌‌ ಕೈತಪ್ಪುವ ಆತಂಕ
– ಟಿಕೆಟ್‌‌‌ ತಮ್ಮದೇ ಎಂದು ಖಾತ್ರಿಯಿಂದ ಹೇಳಲು ಈಗಲೇ ಅಸಾಧ್ಯ

Exit mobile version