ಬೆಂಗಳೂರು: 2024ರ ಲೋಕಸಭಾ ಚುನಾವಣೆಗೆ(Lok Sabha Election 2024) ಕಾಂಗ್ರೆಸ್ ಭರ್ಜರಿ ತಯಾರಿ ನಡೆಸುತ್ತಿದೆ. ಆಪರೇಷನ್ ಹಸ್ತ (Operation Hasta) ಮೂಲಕ ಬಿಜೆಪಿ ನಾಯಕರನ್ನು ಈಗಾಗಲೇ ಕೈ ನಾಯಕರು ಸೆಳೆಯುತ್ತಿದ್ದಾರೆ. ಅಲ್ಲದೆ, ಕನಿಷ್ಠ 20 ಕ್ಷೇತ್ರಗಳನ್ನು ಗೆದ್ದುಕೊಂಡು ಬನ್ನಿ ಎಂದು ಹೈಕಮಾಂಡ್ (Congress High Command) ನೀಡಿರುವ ಟಾಸ್ಕ್‌ಗೆ ಅನುಗುಣವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ (KPCC President DK Shivakumar) ರಣತಂತ್ರವನ್ನು ಹೆಣೆಯುತ್ತಿದ್ದಾರೆ. ಹಾಗಾಗಿ ಗೆಲ್ಲುವ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಬೇಕು ಎಂಬ ನಿಟ್ಟಿನಲ್ಲಿ ಸಾಕಷ್ಟು ಕಸರತ್ತುಗಳನ್ನು ಮಾಡಲಾಗುತ್ತಿದೆ. ಕಾಂಗ್ರೆಸ್‌ನ ಈ ಎಲ್ಲ ಹುಮ್ಮಸ್ಸಿನ ಸಂಘಟನೆ ನಡುವೆಯೇ ಹೊಸದೊಂದು ತಲೆನೋವು ಶುರುವಾಗಿದೆ. ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ನೀಡುವಾಗ ಸಮುದಾಯಗಳನ್ನು ಪರಿಗಣಿಸುವಂತೆ ಲಾಬಿ ಜೋರಾಗಿದೆ. ಹೀಗೆ ಸಮುದಾಯ ಆಧರಿಸಿ ಟಿಕೆಟ್ ಕೊಟ್ಟರೆ ಗೆಲುವು ಅಷ್ಟು ಸುಲಭ ಅಲ್ಲ ಎಂಬ ಚಿಂತೆ ಈಗ ಕಾಂಗ್ರೆಸ್‌ನದ್ದಾಗಿದೆ.
ನಮ್ಮ ಸಮುದಾಯದ ವೋಟ್ ನೋಡಿ ಟಿಕೆಟ್ ಕೊಡಿ ಎಂದು ಹಲವರು ಈಗಾಗಲೇ ಪಟ್ಟು ಹಿಡಿದು ಕುಳಿತಿದ್ದಾರೆ ಎಂಬ ಮಾಹಿತಿ ಬಂದಿದೆ. ಕಾಂಗ್ರೆಸ್‌ಗೆ ಪ್ರಬಲ ವೋಟ್ ಬ್ಯಾಂಕ್ ಸಮುದಾಯಗಳೇ ಈಗ ಪಟ್ಟು ಹಿಡಿದು ಕುಳಿತಿರುವುದು ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಇದನ್ನೂ ಓದಿ: Weather Report : ಸೆ.10ರವರೆಗೆ ಬೆಂಗಳೂರು ಸೇರಿ 13 ಜಿಲ್ಲೆಗಳಲ್ಲಿ ಧಾರಾಕಾರ ಮಳೆ
ಅವರ ವಾದ ಏನು?
ನೀವು ಪ್ರತಿ ಸಾರಿಯಂತೆ ಈ ಬಾರಿ ಮಾಡಬೇಡಿ. ಎಲ್ಲರನ್ನೂ ಪರಿಗಣನೆಗೆ ತೆಗೆದುಕೊಳ್ಳಬೇಕು. ಕೇವಲ ಎರಡು ಸಮುದಾಯಗಳಿಗೆ ಟಿಕೆಟ್ ಕೊಟ್ಟು ಕೈ ತೊಳೆದುಕೊಳ್ಳಬೇಡಿ. ನಮ್ಮ ಸಮುದಾಯದ ವೋಟ್ ಅನ್ನು ನೀವು ಪರಿಗಣಿಸಬೇಕಾಗುತ್ತದೆ. ಹಾಗಾಗಿ ನಮ್ಮವರಿಗೂ ನೀವು ಟಿಕೆಟ್ ಕೊಡಬೇಕು ಎಂಬ ಬೇಡಿಕೆಯನ್ನು ಮುಸ್ಲಿಂ ಸಮುದಾಯದವರು ಇಟ್ಟಿದ್ದಾರೆ.
ನಮ್ಮ ಸಮುದಾಯವನ್ನು ನೀವು ವೋಟ್ ಬ್ಯಾಂಕ್ ಮಾಡಿಕೊಂಡರಷ್ಟೇ ಸಾಲದು. ನಮಗೂ ಆದ್ಯತೆ ನೀಡಿ. ನಮ್ಮವರೂ ಬೆಳೆಯಬೇಕು. ನಮಗೂ ಸಹ ನಮ್ಮ ಸಮುದಾಯದ ಪ್ರತಿನಿಧಿ ಬೇಕು ಎಂಬ ಆಸೆ, ಆಕಾಂಕ್ಷೆ ಇರುವುದಿಲ್ಲವೇ? ನೀವು ನಮ್ಮ ಪರ ಇದ್ದೇವೆ ಎಂದು ಬಾಯಿ ಮಾತಿನಲ್ಲಿ ಹೇಳಿದರೆ ಸಾಲದು. ಅದನ್ನು ಕಾರ್ಯಾನುಷ್ಠಾನ ಮಾಡಿ ತೋರಿಸಬೇಕು. ಹಾಗಾಗಿ ಮುಸ್ಲಿಂ ಸಮುದಾಯದವರಿಗೆ ಟಿಕೆಟ್ ನೀಡಿ ಎಂಬ ಬೇಡಿಕೆಯನ್ನು ಇಡಲಾಗಿದೆ.
ಈ ಬಾರಿ ವಿಧಾನಸಭಾ ಚುನಾವಣೆ ಗೆಲ್ಲಲು ನಮ್ಮ ಮುಸ್ಲಿಂ ಸಮುದಾಯದ ಪಾತ್ರ ಬಹಳವೇ ದೊಡ್ಡದಿದೆ. ನಾವು ಸಾಮೂಹಿಕವಾಗಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದ್ದ ಕಾರಣಕ್ಕೇ ನಿಮಗೆ 135 ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಯಿತು. ಕಾಂಗ್ರೆಸ್‌ಗೆ ಪ್ರಮುಖ ವೋಟ್ ಬ್ಯಾಂಕ್ (Vote Bank) ನಮ್ಮ ಸಮುದಾಯ ಎಂಬುದು ಇದರಿಂದ ಸಾಬೀತಾಗಿದೆ. ಹಾಗಾಗಿ ನಮ್ಮ ಸಮುದಾಯವನ್ನು ವೋಟ್ ಬ್ಯಾಂಕ್‌ಗೆ ಮಾತ್ರ ಸೀಮಿತ ಮಾಡಬೇಡಿ. ಈ ಬಾರಿ ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳ ಪೈಕಿ ನಮಗೆ ಕನಿಷ್ಠ ನಾಲ್ಕು ಕ್ಷೇತ್ರಗಳಿಗೆ ಟಿಕೆಟ್ ಕೊಡಿ ಎಂದು ಬೇಡಿಕೆ ಇಟ್ಟಿದ್ದಾರೆ. ಬೆಂಗಳೂರು ಕೇಂದ್ರ, ಹಾವೇರಿ, ತುಮಕೂರು ಸೇರಿ ಬೇರೆ ಕಡೆ ತಮಗೆ ಟಿಕೆಟ್ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಕುರುಬ, ಈಡಿಗ ಸಮುದಾಯದ ಪಟ್ಟು
ಇನ್ನು ಕುರುಬ ಹಾಗೂ ಈಡಿಗ ಸಮುದಾಯಗಳಿಂದಲೂ ಟಿಕೆಟ್‌ಗೆ ಬೇಡಿಕೆ ಬಂದಿದೆ. ಮೈಸೂರು, ಕೊಪ್ಪಳ, ಹಾವೇರಿ, ಬಾಗಲಕೋಟೆ ಕ್ಷೇತ್ರಗಳ ಟಿಕೆಟ್ ಕೊಡುವಂತೆ ಕುರುಬ ಸಮುದಾಯಗಳಿಂದ ಈಗಿನಿಂದಲೇ ಒತ್ತಾಯ ಕೇಳಿಬಂದಿದೆ. ಇನ್ನು ಈಡಿಗ ಸಮುದಾಯದಿಂದ ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಟಿಕೆಟ್ ಕೊಡುವಂತೆ ಪಟ್ಟು ಹಿಡಿಯಲಾಗಿದೆ. ಈ ಭಾಗದಲ್ಲಿ ತಮ್ಮ ತಮ್ಮ ಸಮುದಾಯಗಳ ಪ್ರಭಾವ ಇರುವುದರಿಂದ ಟಿಕೆಟ್ ಕೊಡುವಂತೆ ಒತ್ತಡ ಹೇರಲಾಗುತ್ತಿದೆ.
ಇದನ್ನೂ ಓದಿ: LoK Sabha Election 2024 : ಕಾಂಗ್ರೆಸ್ ನಡೆ ಪಂಚಾಯಿತಿಗಳ ಕಡೆ; ಪಾದಯಾತ್ರೆ ʼಗ್ಯಾರಂಟಿʼ!
ಈ ಬಾರಿ ಕೈ ನಾಯಕರಿಗೆ ಸಮುದಾಯದ ಬೇಡಿಕೆ ಈಡೇರಿಸುವುದಕ್ಕಿಂತಲೂ ಗೆಲ್ಲುವುದು ಮುಖ್ಯವಾಗಿದೆ. ಹೀಗಾಗಿ ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಸಮುದಾಯಗಳ ಬೇಡಿಕೆಯು ತಲೆನೋವು ತಂದೊಡ್ಡಿದೆ.