ಹುಬ್ಬಳ್ಳಿ: ಭಾರತವನ್ನು 60 ವರ್ಷಗಳ ಸುದೀರ್ಘ ಕಾಲ ಗಾಂಧಿ ಕುಟುಂಬವೇ ಆಳಿದ್ದು, ನಕಲಿ ಗಾಂಧಿ ಕಂಪನಿಯದ್ದೇ ಕಾರುಬಾರಿತ್ತು. ಹಾಗಿದ್ದರೂ ಅಭಿವೃದ್ಧಿ ಮಾತ್ರ ಶೂನ್ಯ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Lok Sabha Election 2024) ಆರೋಪಿಸಿದರು.
ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ಸತ್ತೂರಿನಲ್ಲಿ ಲೋಕಸಭೆ ಚುನಾವಣೆ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಗಾಂಧಿ ಕುಟುಂಬದಲ್ಲಿ ಅಂದಿಗೂ-ಇಂದಿಗೂ ಬಹು ವ್ಯತ್ಯಾಸವಿದೆ ಎಂದು ಹೇಳಿದರು.
ಈಗಿನ ಗಾಂಧಿ ಕಂಪನಿಯಲ್ಲಿ ಪ್ರಧಾನಿ ಅಭ್ಯರ್ಥಿಯೇ ಇಲ್ಲ
ಈಗಿನ ಗಾಂಧಿ ಕಂಪನಿಯಲ್ಲಿ ಪ್ರಧಾನಿ ಅಭ್ಯರ್ಥಿಯೇ ಇಲ್ಲ. ರಾಹುಲ್ ಗಾಂಧಿ ಪ್ರಧಾನಿ ಅಭ್ಯರ್ಥಿಯನ್ನಾಗಿ ಘೋಷಿಸುವ ಧೈರ್ಯವೂ ಕಾಂಗ್ರೆಸ್ಸಿಗಿಲ್ಲ. ರಾಹುಲ್ ರನ್ನು ಪ್ರಧಾನಿ ಅಭ್ಯರ್ಥಿ ಎಂದರೆ ಬರುವ ವೋಟು ಬರುವುದಿಲ್ಲ ಎಂಬ ಭಯ ಕಾಂಗ್ರೆಸ್‌ಗೆ ಎಂದು ಜೋಶಿ ಲೇವಡಿ ಮಾಡಿದರು.
ಇದನ್ನೂ ಓದಿ: E-Pass Mandatory: ಊಟಿ, ಕೊಡೈಕೆನಾಲ್ ಪ್ರವಾಸ ಹೊರಟಿದ್ದೀರಾ? ಹಾಗಿದ್ದರೆ ಗಮನಿಸಿ
ಒಂದು ಸುರಕ್ಷಿತ, ಸುಭದ್ರ ದೇಶಕ್ಕೆ ರಕ್ಷಣಾ ನೀತಿ, ಬಲಿಷ್ಠ ಆರ್ಥಿಕ ನೀತಿಗೆ ಯೋಚಿಸಬೇಕು. ಆದರೆ, ಕಾಂಗ್ರೆಸ್‌ಗೆ ದೇಶ ರಕ್ಷಣೆ ಬೇಕಿಲ್ಲ. ಬರೀ ಅಧಿಕಾರ, ವೋಟ್ ಬ್ಯಾಂಕ್ ಮತ್ತು ತುಷ್ಟೀಕರಣಕ್ಕೇ ಮಹತ್ವ ಕೊಡುತ್ತದೆ ಎಂದು ಆರೋಪಿಸಿದರು.
ಮೋದಿ ನೇತೃತ್ವದ ಭಾರತ ಬಲಿಷ್ಠ
ನರೇಂದ್ರ ಮೋದಿ ಅವರು ಪ್ರಧಾನಿಯಾದ ಮೇಲೆ ಭಾರತ ಬಲಿಷ್ಠವಾಗುತ್ತಿದೆ. ಜಾಗತಿಕವಾಗಿ ತನ್ನ ತಾಕತ್ತನ್ನು ಪ್ರದರ್ಶಿಸಿದೆ ಎಂದು ಪ್ರತಿಪಾದಿಸಿದರು.
ಹಿಂತಿರುಗಿ ನೋಡದ ಭಾರತ
ಆರ್ಥಿಕವಾಗಿ ಭಾರತ ಹಿಂತಿರುಗಿ ನೋಡದಂತೆ ಸಶಕ್ತವಾಗಿದೆ. ಅಭಿವೃದ್ಧಿಯಲ್ಲೂ ಮುಂದಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಇದು “ಮೋದಿ ಇಂಡಿಯಾ” ಎಂದು ಗುರುತಿಸುವಷ್ಟರ ಮಟ್ಟಿಗೆ ಪ್ರಗತಿ ಸಾಧಿಸಿದೆ ಎಂದು ಹೇಳಿದರು.
ಇದನ್ನೂ ಓದಿ: T20 World Cup 2024: ಟಿ20 ವಿಶ್ವಕಪ್ಗೆ ತಂಡ ಪ್ರಕಟಿಸಿದ ಆಸ್ಟ್ರೇಲಿಯಾ; ಅನುಭವಿ ಸ್ಮಿತ್ಗೆ ಅವಕಾಶವಿಲ್ಲ
ಕಾಂಗ್ರೆಸ್ 60 ವರ್ಷದ ಆಡಳಿತದಲ್ಲಿ 60000 ಕಿ.ಮೀ. ರಾಷ್ಟ್ರೀಯ ಹೆದ್ದಾರಿ ನಿರ್ಮಿಸಿತ್ತು. ಆದರೆ ವಾಜಪೇಯಿ ಅವರು ಐದೇ ವರ್ಷದಲ್ಲಿ 30000 ಕಿ.ಮೀ. ಹೆದ್ದಾರಿ ನಿರ್ಮಿಸಿದರು. ಇನ್ನು ಪ್ರಧಾನಿ ಮೋದಿ ಹತ್ತೇ ವರ್ಷದಲ್ಲಿ 4 ಲೈನ್, 6 ಲೈನ್, 8 ಲೈನ್, 10 ಲೈನ್ ಎಲ್ಲಾ ಸೇರಿ ಒಟ್ಟು 60000 ಕಿ.ಮೀ. ರಾಷ್ಟ್ರೀಯ ಹೆದ್ದಾರಿ ನಿರ್ಮಿಸಿದ್ದಾರೆ ಎಂದು ಸಚಿವ ಜೋಶಿ ವಿವರಿಸಿದರು.
ಭಯೋತ್ಪಾದನೆಗೆ ಬೀಗ
ಹಿಂದೆ ದೇಶಾದ್ಯಂತ ಬಾಂಬ್‌ಗಳು ಹಾರುತ್ತಿದ್ದವು. ಸೈನಿಕರನ್ನು, ಅಮಾಯಕ ಜನರನ್ನು ಕಳೆದುಕೊಂಡು ಮೇಣದ ಬತ್ತಿ ಹಚ್ಚಿ ಸುಮ್ಮನಾಗುವ ಕಾಲವಿತ್ತು. ಇದೀಗ ಈ ದಿನಗಳಿಲ್ಲ. ಭಯೋತ್ಪಾದಕರು ತಯಾರಾಗುವ ತಾಣದಲ್ಲೇ ಹೊಡೆದುರುಳಿಸುವಷ್ಟು ಸಾಮರ್ಥ್ಯವನ್ನು ಮೋದಿ ಭಾರತ ಹೊಂದಿದೆ ಎಂದರು.
ಸರ್ವ ವರ್ಗದ ಜನರ ಏಳಿಗೆಗಾಗಿ ಶ್ರಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರು ಬಡತನ ನಿರ್ಮೂಲನೆಗಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸಿದ್ದಾರೆ ಎಂದರು.
ಇದನ್ನೂ ಓದಿ: IPL 2024 Points Table: 3ನೇ ಸ್ಥಾನಕ್ಕೇರಿದ ಲಕ್ನೋ; ಕುಸಿತ ಕಂಡ ಹಾಲಿ ಚಾಂಪಿಯನ್ ಚೆನ್ನೈ
ಸಭೆಯಲ್ಲಿ ಮುಖಂಡರಾದ ನೀಲವ್ವ ಅರವಳದ, ಶಿವಣ್ಣ ಬಡವಣ್ಣನವರ, ಮಂಜುಳಾ ಸಾಕರೆಪುಂಡಲಿಕ ತಳವಾರ, ಮೈಲಾರ ಉಪ್ಪಿನ, ಮಾರುತಿ ಇಂಗನಳ್ಳಿ, ಶಂಕ್ರಣ್ಣ ನವಲೂರು, ಮಾಲತಿ ಹುಲಿಕಟ್ಟಿ ಹಾಗೂ ಪಕ್ಷದ ಮುಖಂಡರು, ಕಾರ್ಯಕರ್ತರು ಮತ್ತು ಇತರರು ಉಪಸ್ಥಿತರಿದ್ದರು.