ಬೆಂಗಳೂರು: ಲೋಕಸಭಾ ಚುನಾವಣೆ (Lok Sabha Election 2024) ಹೊತ್ತಿನಲ್ಲಿ ಮಾಜಿ ಐಎಎಸ್ ಅಧಿಕಾರಿ, ದಿವಂಗತ ಕೆ. ಶಿವರಾಮ್ ಪತ್ನಿ ವಾಣಿ (Vani Shivaram) ಸೋಮವಾರ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ (DK Shivakumar) ಸಮ್ಮುಖದಲ್ಲಿ ಇಂದು ಸಂಜೆ 4 ಗಂಟೆಗೆ ಕಾಂಗ್ರೆಸ್ ಸೇರ್ಪಡೆಗೊಳ್ಳಲಿದ್ದಾರೆ.
ಪತಿ ಆಸೆಯಂತೆ ರಾಜಕೀಯ ಪ್ರವೇಶ ಮಾಡುವುದಾಗಿ ಈಚೆಗೆ ವಾಣಿ ಶಿವರಾಂ ಹೇಳಿದ್ದರು. ಈಗ ಕಾಂಗ್ರೆಸ್ ಸೇರ್ಪಡೆಗೊಳ್ಳುವ ಮೂಲಕ ರಾಜಕೀಯ ಪ್ರವೇಶಕ್ಕೆ ಮುಂದಾಗಿದ್ದಾರೆ.
ಪತಿಯ ಆಸೆ ಬಗ್ಗೆ ವಾಣಿ ಶಿವರಾಮ್ ಹೇಳಿದ್ದೇನು?
ಈ ಹಿಂದೆ ವಿಸ್ತಾರ ನ್ಯೂಸ್ ಜತೆ ಮಾತನಾಡಿದ್ದ ವಾಣಿ ಶಿವರಾಮ್, ಪತಿಯ ಆಸೆ ಈಡೇರಿಸುವುದೇ ನನ್ನ ಮೊದಲ ಗುರಿ, ನನ್ನ ಇಡೀ ಕುಟುಂಬ ಜನಸೇವೆಗೆ ಮೀಸಲು ಎಂದು ಹೇಳುವ ಮೂಲಕ ಪರೋಕ್ಷವಾಗಿ ರಾಜಕೀಯಕ್ಕೆ ಪ್ರವೇಶ ನೀಡುವುದಾಗಿ ಹೇಳಿದ್ದರು.
ಅವರಿಲ್ಲದ ಈ ಬದುಕು ತುಂಬಾ ಕಷ್ಟವಾಗಿದೆ. ನೂರಾರು ಕಾಲ ಬಾಳಿ ಬದುಕುತ್ತಾರೆ ಎಂದುಕೊಂಡಿದ್ದೆ. ಜನ ಸೇವೆ ಮಾಡಬೇಕು ಅಂದುಕೊಂಡು ನಿರಾಸೆಯಲ್ಲಿ ಹೊರಟುಹೋಗಿದ್ದಾರೆ. ಹೀಗಾಗಿ ನನ್ನ ಮುಂದಿನ ಗುರಿ ಅವರ ಆಸೆ ಈಡೇರಿಸುವುದು, ಎಷ್ಟೇ ಕಷ್ಟವಾದ್ರೂ ಅವರ ಆಸೆ ಈಡೇರಿಸುವುದೇ ನನ್ನ ಮೊದಲ ಗುರಿ ಎಂದು ವಾಣಿ ಶಿವರಾಮ್ ತಿಳಿಸಿದ್ದರು.
ರಾಜಕೀಯ ಎಂಟ್ರಿ ಬಗ್ಗೆ ಸ್ಪಷ್ಟನೆ ನೀಡಿರುವ ವಾಣಿ ಶಿವರಾಮ್, ಇವತ್ತು ದೇವರೇ ಬಂದು ದೇವರನ್ನು ಕರೆದುಕೊಂಡು ಹೋಗಿದ್ದಾರೆ. ಅವರ ಆಸೆ, ಕನಸು ಈಡೇರಿಸುವ ಬಗ್ಗೆ ಹಠ, ಛಲ ತೊಟ್ಟಿದ್ದೇನೆ. ನನ್ನ ಇಡೀ ಕುಟುಂಬ ಜನರ ಸೇವೆಗೆ ಮೀಸಲು ಎಂದು ವಾಣಿ ಶಿವರಾಮ್ ಹೇಳಿದ್ದರು.
ಅವರು ಚಾಮರಾಜನಗರ ಕ್ಷೇತ್ರಕ್ಕೆ ಬೆಳಗ್ಗೆ 6 ಗಂಟೆಗೆ ಹೋಗಿ ರಾತ್ರಿ 12 ಗಂಟೆಗೆ ಬರುತ್ತಿದ್ದರು. ಯಾಕ್ರೀ ಇಷ್ಟು ಲೇಟಾಗಿ ಬರುತ್ತೀರಿ ಅಂದ್ರೆ ಜನರ ಕಷ್ಟ ಏನು ಅಂತ ನಮಗೆ ಗೊತ್ತು, ನನ್ನ ಆಸೆಗೆ ನೀನು ಅಡ್ಡಿ ಬರಬೇಡ ಎನ್ನುತ್ತಿದ್ದರು. ಅವರ ಕೊನೇ ಕ್ಷಣದವರೆಗೂ ಎಷ್ಟು ನಿರಾಸೆಯಾಗಿದ್ದಾರೆ ಎಂಬುವುದು ನಮಗೆ ಗೊತ್ತು. ಪ್ರೀತಿಸೋ ಜನರಿಗೋಸ್ಕರ ಅವರ ಆಸೆ ಈಡೇರಿಸಲು ರೆಡಿ ಎನ್ನುವ ಮೂಲಕ ಪರೋಕ್ಷವಾಗಿ ಚುನಾವಣೆಯಲ್ಲಿ ಸ್ಪರ್ಧೆಗೆ ಸಿದ್ಧ ಎಂದು ತಿಳಿಸಿದ್ದರು. ಆದರೆ, ಯಾವುದೇ ಪಕ್ಷದವರು ಅವರಿಗೆ ಟಿಕೆಟ್ ನೀಡದ ಹಿನ್ನೆಲೆಯಲ್ಲಿ ಈಗ ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದಾರೆ ಎನ್ನಲಾಗಿದೆ.