Site icon Vistara News

Lok Sabha Election: ಪ್ರತಾಪ್ ಸಿಂಹ ಪರ ಒಕ್ಕಲಿಗ ಮುಖಂಡರು, ಕೊಡವ ಸಮಾಜ ಬ್ಯಾಟಿಂಗ್; ಟಿಕೆಟ್‌ಗೆ ಆಗ್ರಹ

Vokkaliga Yuva Vedike and Kodava samaja demands ticket for Pratap Simha

ಮೈಸೂರು: ಲೋಕಸಭಾ ಚುನಾವಣೆಯಲ್ಲಿ (Lok Sabha Election 2024) ಸಂಸದ ಪ್ರತಾಪ್ ಸಿಂಹಗೆ ಟಿಕೆಟ್ ಕೈ ತಪ್ಪುವ ವಿಚಾರ ಮುನ್ನೆಲೆಗೆ ಬಂದಿರುವ ಹಿನ್ನೆಲೆಯಲ್ಲಿ ಪ್ರತಾಪ್ ಸಿಂಹ ಪರ ಜಿಲ್ಲಾ ಒಕ್ಕಲಿಗರ ಯುವ ವೇದಿಕೆ ಮತ್ತು ಕೊಡವ ಸಮಾಜ ಬ್ಯಾಟ್‌ ಬೀಸಿವೆ. ನಗರದಲ್ಲಿ ಪ್ರತ್ಯೇಕವಾಗಿ ಸುದ್ದಿಗೋಷ್ಠಿ ನಡೆಸಿರುವ ಎರಡೂ ಸಮುದಾಯಗಳು ಮುಖಂಡರು, ಅಭಿವೃದ್ಧಿ ವಿಚಾರದಲ್ಲಿ ಪ್ರತಾಪ್ ಸಿಂಹ (Pratap Simha) ಅವರು ರಾಜಿಯಾಗಿಲ್ಲ, ಕಳೆದ 10 ವರ್ಷದಿಂದ ಅತ್ಯುತ್ತಮ ಕೆಲಸ ಮಾಡಿದ್ದಾರೆ. ಹೀಗಾಗಿ ಈ ಬಾರಿ ಅವರಿಗೇ ಬಿಜೆಪಿ ಟಿಕೆಟ್‌ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಒಕ್ಕಲಿಗ ಸಮುದಾಯದ ತಾಳ್ಮೆ ಕೆಣಕುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಇರುವ ಒಕ್ಕಲಿಗ ಸಂಸದನನ್ನು ತೆಗೆಯುತ್ತಿರುವುದು ಎಷ್ಟರ ಮಟ್ಟಿಗೆ ಸರಿ? ಬೇರೆ ಕ್ಷೇತ್ರದಲ್ಲಿ ಒಕ್ಕಲಿಗರು ಹೆಚ್ಚಿದ್ದರೂ ಸುಮ್ಮನಿದ್ದೇವೆ. ಆದರೆ ಒಕ್ಕಲಿಗರಿಗೆ ಇರುವ ಕ್ಷೇತ್ರವನ್ನೂ ಕಿತ್ತುಕೊಳ್ಳುವುದು ಎಷ್ಟರ ಮಟ್ಟಿಗೆ ಎಂದು ಒಕ್ಕಲಿಗ ಮುಖಂಡರು ಪ್ರಶ್ನಿಸಿದ್ದಾರೆ.

ಒಕ್ಕಲಿಗರ ಯುವ ಮುಖಂಡ ಸತೀಶ್ ಗೌಡ, ಇದೀಗ ಯದುವೀರ್ ಹೆಸರು ಕೇಳಿ ಬರುತ್ತಿದೆ. ಆದರೆ, ರಾಜಮನೆತನಕ್ಕೆ ನಮ್ಮ ವಿರೋಧ ಇಲ್ಲ. ಅವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಿ. ಈ ಹಿಂದೆ ವಿಶ್ವನಾಥ್ ಒಕ್ಕಲಿಗರ ವಿರುದ್ಧ ಮಾತನಾಡುತ್ತಿದ್ದ ಕಾರಣ ಪ್ರತಾಪ್ ಸಿಂಹಗೆ ಸಮುದಾಯ ಬೆಂಬಲ ನೀಡಿತ್ತು. ಆದಾದ ನಂತರ ಗೆದ್ದು ಅವರು ಸುಮ್ಮನೆ ಕುಳಿತಿಲ್ಲ. ನಾವು ಅವರ ಹಲವು ವಿಚಾರಕ್ಕೆ ಟೀಕೆ ಮಾಡಿದ್ದೇವೆ. ಆದರೆ ಅಭಿವೃದ್ಧಿ ವಿಚಾರವಾಗಿ ಅವರು ಎಂದೂ ರಾಜಿಯಾಗಿಲ್ಲ. ಕಳೆದ 10 ವರ್ಷದಿಂದ ಅತ್ಯುತ್ತಮ ಕೆಲಸ ಮಾಡಿದ್ದಾರೆ. ಅಭಿವೃದ್ಧಿ ಕೆಲಸದ ವಿಚಾರವಾಗಿ ಪ್ರತಾಪ್ ಸಿಂಹ ಯಾರ ಕಾಲಿಗಾದರೂ ಬಿದ್ದು ಕೆಲಸ ಮಾಡಿಸುತ್ತಾರೆ. ಆದರೆ ರಾಜ ವಂಶಸ್ಥ ಯದುವೀರ್ ಅವರಿಂದ ಇದು ಸಾಧ್ಯವೇ ಎಂದು ಕೇಳಿದ್ದಾರೆ.

ಇದನ್ನೂ ಓದಿ | Lok Sabha Election 2024: ಮಾ.15ರಿಂದ ದಕ್ಷಿಣ ಭಾರತದಲ್ಲಿ ಮೋದಿ ಪ್ರವಾಸ; ಕರ್ನಾಟಕಕ್ಕೆ ಭೇಟಿ ಯಾವಾಗ?

ಸುದ್ದಿಗೋಷ್ಠಿಯಲ್ಲಿ ರಾಜ್ಯ ಒಕ್ಕಲಿಗ ಸಂಘದ ನಿರ್ದೇಶಕ ಗಂಗಾಧರ್, ಪಾಲಿಕೆ ಮಾಜಿ ಸದಸ್ಯೆ ಪ್ರೇಮಾ ಶಂಕರೇಗೌಡ, ಜಿಲ್ಲಾ ಒಕ್ಕಲಿಗರ ಸಂಘದ ಜಿಲ್ಲಾ ನಿರ್ದೇಶಕ ರವಿಕುಮಾರ್, ಪ್ರಧಾನ ಕಾರ್ಯದರ್ಶಿ ಚೇತನ್, ನಮ್ಮೂರು ಸಮಾಜ ಸೇವಾ ಟ್ರಸ್ಟ್ ಸದಸ್ಯ ಸತೀಶ್‌ಗೌಡ ಸೇರಿ ಹಲವರು ಭಾಗಿಯಾಗಿದ್ದರು.

ಪ್ರತಾಪ್‌ ಸಿಂಹಗೆ ಟಿಕೆಟ್ ತಪ್ಪಿಸುವುದು ಸರಿಯಲ್ಲ: ಕೊಡವ ಸಮಾಜ

ಮೈಸೂರಿನ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿರುವ ಮೈಸೂರು ವಿಭಾಗದ ಕೊಡವ ಸಮಾಜದ ಮುಖಂಡರು, ಪ್ರತಾಪ್ ಸಿಂಹರಿಗೆ ಟಿಕೆಟ್ ನೀಡುವಂತೆ ಒತ್ತಾಯ ಮಾಡಿದ್ದಾರೆ. ಪ್ರತಾಪ್ ಸಿಂಹ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಅವರ ವಿರುದ್ಧ ಯಾವುದೇ ಭ್ರಷ್ಟಾಚಾರದ ಆರೋಪವಿಲ್ಲ. ಅಂತವರಿಗೆ ಟಿಕೆಟ್ ತಪ್ಪಿಸುವುದು ಸರಿಯಲ್ಲ. ಪಕ್ಷದ ವರಿಷ್ಠರು ಈ ಬಾರಿಯೂ ಪ್ರತಾಪ್ ಸಿಂಹರಿಗೆ ಟಿಕೆಟ್ ನೀಡಬೇಕು ಎಂದು ಕೊಡವ ಸಮಾಜದ ಮುಖಂಡರು ಒತ್ತಾಯಿಸಿದ್ದಾರೆ.

ಮೋದಿ ಇಲ್ಲದಿದ್ದರೆ ನಾನು ಶೂನ್ಯ: ಪ್ರತಾಪ ಸಿಂಹ

ಮೈಸೂರು: ಒಳ್ಳೆಯ ಕೆಲಸ ಮಾಡಿದ್ದೇನೆ‌‌. ಪಕ್ಷ ನನ್ನ ಕೈ ಬಿಡಲ್ಲ ಎಂಬ ಅಚಲ ನಂಬಿಕೆ ಇದೆ. ವಿತ್‌ಔಟ್ ಮೋದಿ, ಪ್ರತಾಪ್ ಸಿಂಹ ಶೂನ್ಯ. ನಾನು ಮೊದಲ ಬಾರಿಯೂ ಮೋದಿ ಹೆಸರಿನಲ್ಲಿ ಗೆದ್ದೆ. ಎರಡನೇ ಬಾರಿಯೂ ಅವರ ಹೆಸರಿನಲ್ಲೇ ಗೆದ್ದೆ. ಮೂರನೇ ಬಾರಿಯೂ ಅವರ ಹೆಸರಿನಲ್ಲೇ ಗೆಲ್ತೀನಿ. ಪಕ್ಷದ ವಿಶ್ವಾಸ ನನ್ನ ಮೇಲಿದೆ. ನನಗೆ ಮತ್ತೊಂದು ಅವಕಾಶ ಸಿಗುತ್ತದೆ ಎಂದು ಸಂಸದ ಪ್ರತಾಪ್‌ ಸಿಂಹ ವಿಶ್ವಾಸ ವ್ಯಕ್ತಪಡಿಸಿದರು.

ಲೋಕಸಭೆ ಟಿಕೆಟ್‌ ಬಗ್ಗೆ ನಗರದಲ್ಲಿ ಪ್ರತಿಕ್ರಿಯಿಸಿರುವ ಅವರು, 2013ರಲ್ಲಿ ನಾನು ಒಬ್ಬ ಪತ್ರಕರ್ತ. ಮೈಸೂರು ಚುನಾವಣೆ ಬಗ್ಗೆ ಯೋಚನೆ ಮಾಡುವ ಸ್ಥಿತಿಯಲ್ಲೂ ಇರಲಿಲ್ಲ. ಆಗ ಸಂಘದ ಆಶೀರ್ವಾದ, ಪಕ್ಷದ ಬಲದಿಂದ ಗೆದ್ದಿದ್ದೆ.
ಚುನಾವಣೆ ಅಂದರೆ ಆಕಾಂಕ್ಷಿಗಳು ಇರುತ್ತಾರೆ. ಅಂತಿಮವಾಗಿ ಯಡಿಯೂರಪ್ಪ, ರಾಜ್ಯಾಧ್ಯಕ್ಷರು, ನಮ್ಮ ಹೈಕಮಾಂಡ್ ಎಲ್ಲವನೂ ತೀರ್ಮಾನ ಮಾಡುತ್ತದೆ ಎಂದು ಹೇಳಿದರು.

ಇದನ್ನೂ ಓದಿ | Bengaluru Ring Road : ಬೆಂಗಳೂರಿನ 2 ರಿಂಗ್‌ ರೋಡ್‌ ಲೋಕಾರ್ಪಣೆ ಮಾಡಿದ ಮೋದಿ: ಏನೇನು ಲಾಭ?

ಮೋದಿ ಅವರ ಪುಸ್ತಕ ಬರೆದವನು ನಾನು. ನನ್ನ ಬಗ್ಗೆ ಮೋದಿ ಅವರಿಗೆ ಗೊತ್ತಿದೆ. ಮೋದಿ ಅವರು ನನಗೆ ಆಶೀರ್ವಾದ ಮಾಡುತ್ತಾರೆ. ಕಾಂಗ್ರೆಸ್‌ನಲ್ಲಿ ಸೋಲಿನ ಟಿಕೆಟ್‌ಗೆ ಹೊಡೆದಾಟವಿದೆ. ಇನ್ನೂ ಬಿಜೆಪಿಯಲ್ಲಿ ಗೆಲುವಿನ ಪೈಪೋಟಿ ಇರಬಾರದು ಎಂದರೆ ಹೇಗೆ? ಗೆಲ್ಲುವ ಕುದರೆ ಏರಲು ಎಲ್ಲರೂ ಪ್ರಯತ್ನ ಪಡುತ್ತಾ ಇರುತ್ತಾರೆ. ಮೋದಿ ಅವರ ಕೃಪೆಯಿಂದ ಕೆಲಸ ಮಾಡಿ, ಮೈಸೂರಲ್ಲಿ ಬಿಜೆಪಿ ಗೆಲುವ ಸ್ಥಿತಿಯನ್ನು ನಾನು ಮೂಡಿಸಿದ್ದೇನೆ‌.
ನನಗೆ ತಾಯಿ ಚಾಮುಂಡಿ, ಕಾವೇರಿ ತಾಯಿ, ಮೋದಿ ಆಶೀರ್ವಾದ ಇದೆ ಎಂದು ಹೇಳುವ ಮೂಲಕ ಮತ್ತೆ ತಮಗೇ ಟಿಕೆಟ್‌ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Exit mobile version