ಬೆಂಗಳೂರು: ರಾಜ್ಯದ ಬೆಳಗಾವಿ, ಚಿಕ್ಕೋಡಿ ಸೇರಿ 14 ಕ್ಷೇತ್ರಗಳಲ್ಲಿ ಲೋಕಸಭಾ ಚುನಾವಣೆಯ 2ನೇ ಹಂತದ ಮತದಾನ (Lok Sabha Election 2024) ಮಂಗಳವಾರ ಮುಕ್ತಾಯವಾಯಿತು. ಮತದಾನ ಬಹಿಷ್ಕಾರ, ಪ್ರತಿಭಟನೆ ನಡುವೆ ಎಲ್ಲೆಡೆ ಶಾಂತಿಯುತವಾಗಿ ಮತದಾನ ನೆರವೇರಿದೆ. 2ನೇ ಹಂತದಲ್ಲಿ ಶೇ. 70.41 ಮತದಾನ (Voter Turnout) ದಾಖಲಾಗಿದ್ದು, ಬೇಸಿಗೆಯ ಬಿರು ಬಿಸಿಲನ್ನೂ ಲೆಕ್ಕಿಸದೇ ಮತದಾರರು ಉತ್ಸಾಹದಿಂದ ತಮ್ಮ ಹಕ್ಕು ಚಲಾಯಿಸಿರುವುದು ಕಂಡುಬಂದಿದೆ.
14 ಕ್ಷೇತ್ರಗಳಿಂದ 227 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಇವರಲ್ಲಿ 206 ಪುರುಷ, 21 ಮಹಿಳಾ ಅಭ್ಯರ್ಥಿಗಳಿದ್ದಾರೆ. ಮತದಾನ ಮುಕ್ತಾಯವಾಗಿದ್ದರಿಂದ ಅಭ್ಯರ್ಥಿಗಳ ಭವಿಷ್ಯ ಇವಿಎಂಗಳಲ್ಲಿ ಭದ್ರವಾಗಿದ್ದು, ಜೂನ್ 4ರಂದು ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬೀಳಲಿದೆ. ಎರಡನೇ ಹಂತದಲ್ಲಿ ಚಿಕ್ಕೋಡಿ ಕ್ಷೇತ್ರದಲ್ಲಿ ಅತಿ ಹೆಚ್ಚು ಶೇ.76.99 ಮತದಾನವಾಗಿದ್ದು, ಕಲಬುರಗಿ ಕ್ಷೇತ್ರದಲ್ಲಿ ಅತಿ ಕಡಿಮೆ ಅಂದರೆ ಶೇ 61.73 ಮತದಾನವಾಗಿದೆ. ಇನ್ನೂ ಈ ಬಾರಿ ದಕ್ಷಿಣ ಕರ್ನಾಟಕಕ್ಕೆ (ಶೇ.69.23) ಹೋಲಿಸಿದರೆ ಉತ್ತರ ಕರ್ನಾಟಕವೇ(ಶೇ.70.41) ಶೇಕಡಾವಾರು ಮತದಾನದಲ್ಲಿ ಮುಂದಿದೆ.
ದಿನದ ಅಂತ್ಯಕ್ಕೆ ಒಟ್ಟಾರೆ ಶೇಕಡಾವಾರು ಮತದಾನ ಹೀಗಿದೆ. ನ್ಯಾಯಯುತ ಹಾಗೂ ಪಾರದರ್ಶಕ ಚುನಾವಣೆಯಲ್ಲಿ ಭಾಗವಹಿಸಿ ಅಮೂಲ್ಯವಾದ ಕೊಡುಗೆಯನ್ನು ನೀಡಿದ ಪ್ರತಿ ಮತದಾರರಿಗೂ ಧನ್ಯವಾದಗಳು.@ECISVEEP@SpokespersonECI#ceokarnataka #LokaSabhaElection2024#Election2024#YourVoteYourVoice#DeshkaGarv #voteindia pic.twitter.com/Td8oZeG2EI
— Chief Electoral Officer, Karnataka (@ceo_karnataka) May 7, 2024
ಕರ್ನಾಟಕದ 14 ಕ್ಷೇತ್ರಗಳಲ್ಲಿ ನಡೆದ ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನದಲ್ಲಿ ಶೇ.69.23 ಮತದಾನ ದಾಖಲಾಗಿತ್ತು. ಮಂಗಳವಾರ ಮುಗಿದಿರುವ 2ನೇ ಹಂತದ ಚುನಾವಣೆಯಲ್ಲಿ ಶೇ. 70.41 ಮತದಾನ ದಾಖಲಾಗಿದೆ. ಇನ್ನು 2019 ಚುನಾವಣೆಯ ಮೊದಲ ಹಂತದಲ್ಲಿ ಶೇ. 68.96, ಎರಡನೇ ಹಂತದಲ್ಲಿ 68.66 ಮತದಾನವಾಗಿತ್ತು.
ಇದನ್ನೂ ಓದಿ | West Bengal: ಬಂಗಾಳದಲ್ಲಿ ಮತದಾನದ ವೇಳೆ ಹಿಂಸೆ; ಬಿಜೆಪಿ ಅಭ್ಯರ್ಥಿ ಮೇಲೆ ಟಿಎಂಸಿ ಕಾರ್ಯಕರ್ತರ ದಾಳಿ!
ಯಾವ ಕ್ಷೇತ್ರದಲ್ಲಿ ಎಷ್ಟು ಮತದಾನ?
ಕ್ಷೇತ್ರ | 2024 | 2019 |
ಚಿಕ್ಕೋಡಿ | ಶೇ. 76.99 | ಶೇ. 75.62 |
ಬೆಳಗಾವಿ | ಶೇ. 71 | ಶೇ. 67.84 |
ಬಾಗಲಕೋಟೆ | ಶೇ.70.10 | ಶೇ. 70.70 |
ವಿಜಯಪುರ | ಶೇ. 64.71 | ಶೇ.61.89 |
ಕಲಬುರಗಿ | ಶೇ. 61.73 | ಶೇ. 61.18 |
ರಾಯಚೂರು | ಶೇ. 64.10 | ಶೇ. 58.34 |
ಬೀದರ್ | ಶೇ. 63.55 | ಶೇ. 63 |
ಕೊಪ್ಪಳ | ಶೇ. 69.87 | ಶೇ. 68.56 |
ಬಳ್ಳಾರಿ | ಶೇ.72.35 | ಶೇ. 69.76 |
ಹಾವೇರಿ | ಶೇ.76.78 | ಶೇ. 74.21 |
ಧಾರವಾಡ | ಶೇ. 72.53 | ಶೇ. 70.29 |
ಉತ್ತರ ಕನ್ನಡ | ಶೇ. 73.52 | ಶೇ. 74.16 |
ದಾವಣಗೆರೆ | ಶೇ. 76.23 | ಶೇ. 73.19 |
ಶಿವಮೊಗ್ಗ | ಶೇ. 76.05 | ಶೇ. 76.58 |
2024ರ ಕರ್ನಾಟಕ ರಾಜ್ಯದ ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ಪಾಲ್ಗೊಂಡ ಎಲ್ಲಾ ಜವಾಬ್ದಾರಿಯುತ ಮತದಾರರಿಗೂ ಅಭಿನಂದನೆಗಳು@ECISVEEP@SpokespersonECI #ceokarnataka #LokaSabhaElection2024#Election2024#YourVoteYourVoice#VotingMatters #voting#DeshkaGarv #voteindia pic.twitter.com/QHevVkUfcX
— Chief Electoral Officer, Karnataka (@ceo_karnataka) May 7, 2024
ಉತ್ಸಾಹದಿಂದ ಹಕ್ಕು ಚಲಾವಣೆ
ಯುವಕ-ಯುವತಿಯರು, ಮಹಿಳೆಯರು, ವೃದ್ಧರು ಸೇರಿ ಎಲ್ಲ ವಯೋಮಾನದ ಮತಾದಾರರು ಅತ್ಯಂತ ಉತ್ಸಾಹದಿಂದ ಪ್ರಜಾಪ್ರಭುತ್ವದ ಅತಿದೊಡ್ಡ ಹಬ್ಬದಲ್ಲಿ ಪಾಲ್ಗೊಂಡು ಮತ ಚಲಾಯಿಸುವ ಮೂಲಕ ಸಂಭ್ರಮಿಸಿದರು. ಇನ್ನು ಹಲವೆಡೆ ಹೆಚ್ಚಿನ ಸಂಖ್ಯೆಯಲ್ಲಿ ವಿಶೇಷಚೇತನರು, ವೃದ್ಧರು, ಶತಾಯುಷಿ ಮತದಾರರು ಹಕ್ಕು ಚಲಾವಣೆ ಮಾಡುವ ಮೂಲಕ ಯುವ ಮತದಾರರಿಗೆ ಮಾದರಿಯಾದರು.
ಇದನ್ನೂ ಓದಿ | Lok Sabha Election 2024: ಕರ್ನಾಟಕದಲ್ಲಿ ದಾಖಲೆಯ ಮತದಾನ; ಕಳೆದ ಬಾರಿಗಿಂತ ಏರಿಕೆ, ಮಂಡ್ಯದಲ್ಲಿ ಅತಿ ಹೆಚ್ಚು!
ಗಮನ ಸೆಳೆದ ವಿಷಯಾಧಾರಿತ ಮತಗಟ್ಟೆಗಳು
ಎರಡನೇ ಹಂತದ ಮತದಾನದಲ್ಲಿ ವಿಭಿನ್ನ ವಿಷಯಾಧಾರಿತ ಮತಗಟ್ಟೆಗಳು ಗಮನಸೆಳೆದವು. ಮಹಿಳೆಯರಿಂದ ಕಾರ್ಯ ನಿರ್ವಹಿಸಲ್ಪಡುವ ಮಾದರಿ ಮತಗಟ್ಟೆಯಾದ ಸಖಿ ಮತಗಟ್ಟೆ, ಅದೇ ರೀತಿ ವಿಶೇಷ ಚೇತನರ ಮಾದರಿ ಮತಗಟ್ಟೆ, ಸಾಂಪ್ರದಾಯಿಕ ಮತಗಟ್ಟೆ, ಗ್ರೀನ್ ಬೂತ್, ಯುವ ಮತಗಟ್ಟೆಗಳು ಮತದಾರರನ್ನು ಆಕರ್ಷಿಸಿದವು.
ಕಾಗವಾಡದಲ್ಲಿ ಶತಾಯುಷಿ ಮಹಿಳೆ ಮತದಾನ
ಕಾಗವಾಡ ತಾಲೂಕಿನ ಕೆಂಪವಾಡ ಗ್ರಾಮದ 103 ವಯಸ್ಸಿನ ಹಿರಿಯ ಮಹಿಳೆ ನೀಲವ್ವ ಶಿವಗೌಡ ಗಾಳಿ ಅವರು ಉತ್ಸಾಹದಿಂದ ಮತ ಚಲಾಯಿಸಿದರು. ಅದೇ ರೀತಿ ಬಸವನ ಬಾಗೇವಾಡಿ ಮತಕ್ಷೇತ್ರದಲ್ಲಿ ತಮ್ಮ 96 ವರ್ಷದ ಇಳಿ ವಯಸ್ಸಿನಲ್ಲಿ ಸಿದ್ದವ್ವ ಡೊನೂರ ಅವರು ಮರಿಮೊಮ್ಮಗಳೊಡನೆ ಮಸಬಿನಾಳ ಗ್ರಾಮದ ಮತಗಟ್ಟೆಗೆ ಬಂದು ಮತವನ್ನು ಚಲಾಯಿಸಿ ಎಲ್ಲರಿಗೂ ಆದರ್ಶರಾದರು.
ಸವದತ್ತಿ ತಾಲೂಕಿನ ಆಲದಕಟ್ಟಿ ಕೆ.ಎಂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಲದಕಟ್ಟಿ ಕೆ.ಎಂ ಗ್ರಾಮದ ನಿವಾಸಿ ಅಂತಾರಾಷ್ಟ್ರೀಯ ಮಟ್ಟದ ವ್ಹೀಲ್‌ಚೇರ್ ಬಾಸ್ಕೆಟ್ ಬಾಲ್ ಕ್ರೀಡಾಪಟು ಕುಮಾರಿ ಲಕ್ಷ್ಮೀ ರಾಯಪ್ಪ ರಾಯಣ್ಣವರ ಅವರು ಸ್ವಗ್ರಾಮದಲ್ಲಿ ಮತ ಚಲಾಯಿಸಿ ಅನಿಸಿಕೆ ಹಂಚಿಕೊಂಡರು. ಇನ್ನು ಅಂತಾರಾಷ್ಟ್ರೀಯ ಈಜುಗಾರ ವಿಶೇಷ ಮತದಾರರಾದ ಮೊಯಿನ್ ಅವರು ಬೆಳಗಾವಿ ನಗರದಲ್ಲಿ ತಮ್ಮ ಅಮೂಲ್ಯವಾದ ಮತ ಚಲಾಯಿಸಿದರು.
ಇದನ್ನೂ ಓದಿ | Lok Sabha Election 2024: ಸಂಜೆ 5ಗಂಟೆವರೆಗೆ ಶೇ.66.05 ವೋಟಿಂಗ್; ಚಿಕ್ಕೋಡಿಯಲ್ಲಿ ಅತಿ ಹೆಚ್ಚು
ಹಲವೆಡೆ ಮತದಾನ ಬಹಿಷ್ಕಾರ
ವಿವಿಧ ಕಾರಣಗಳಿಗಾಗಿ ಹಲವೆಡೆ ಜನರು ಮತದಾನ ಬಹಿಷ್ಕಾರ ಮಾಡಿರುವುದು ಕಂಡುಬಂದಿದೆ. ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣ 18ನೇ ವಾರ್ಡ್‌ನಲ್ಲಿ ವೈದ್ಯರ ನಿರ್ಲಕ್ಷ್ಯದಿಂದ ಗರ್ಭಿಣಿ ಸಾವು ಪ್ರಕರಣ ಖಂಡಿಸಿ ಮತಗಟ್ಟೆ ಸಂಖ್ಯೆ 147 ರಲ್ಲಿ ಜನರು ಮತದಾನ ಬಹಿಷ್ಕಾರ ಮಾಡಿದರು. ಅದೇ ರೀತಿ ಕುಕನೂರು ತಾಲೂಕಿನ ಗುದ್ನೆಪ್ಪನಮಠ ಗ್ರಾಮದಲ್ಲಿ ಸೇವಾದಾರರ ಭೂಮಿಯನ್ನು ಸರ್ಕಾರಿ ಕಟ್ಟಡಗಳ ನಿರ್ಮಾಣಕ್ಕೆ ಒತ್ತುವರಿ ವಿರೋಧಿಸಿ ಮತದಾನ ಬಹಿಷ್ಕಾರವಾಗಿದೆ.
ರಾಯಚೂರಿನ ಮಾನ್ವಿ ತಾಲೂಕಿನ ಮುಷ್ಟೂರು ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಹಿನ್ನೆಲೆ ಮತಗಟ್ಟೆ ಸಂಖ್ಯೆ 254 ಹಾಗೂ 255 ರಲ್ಲಿ ಮತದಾನ ಸ್ಥಗಿತವಾಗಿತ್ತು. ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ಕ್ಷೇತ್ರದ ಚಿಲಕನಹಟ್ಟಿ ಗ್ರಾಮದ ಮಾರುತಿ ನಗರದಲ್ಲಿ ಪ್ರತ್ಯೇಕ ಮತದಾನ ಕೇಂದ್ರ ಮಾಡದ ಹಿನ್ನೆಲೆ ಮತದಾರರು ಮತ ಹಾಕಲಿಲ್ಲ. ಕಂದಾಯ ಗ್ರಾಮ ಮಾಡಿ ಮೂಲಭೂತ ಸೌಲಭ್ಯ ನೀಡಲು ಆಗ್ರಹಿಸಿ ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಹಳವ ತರ್ಲಗಟ್ಟ ಗ್ರಾಮದಲ್ಲಿ ಮತದಾನ ಬಹಿಷ್ಕಾರ ಮಾಡಲಾಗಿದೆ.
ವೋಟರ್ ಲಿಸ್ಟ್‌ನಲ್ಲಿ ಹೆಸರು ಡಿಲೀಟ್; ಮತದಾರರ ಆಕ್ರೋಶ
ಹುಬ್ಬಳ್ಳಿ: ಮತಗಟ್ಟೆಯಲ್ಲಿ 200 ರಿಂದ 300 ಜನ ಮತದಾರರ ಹೆಸರುಗಳು ಡಿಲೀಟ್ ಆಗಿವೆ ಎಂದು ಮತಗಟ್ಟೆ ಮುಂದೆ ಮತದಾರರು ಆಕ್ರೋಶ ಹೊರಹಾಕಿದ ಘಟನೆ ಹುಬ್ಬಳ್ಳಿಯ ಪೆಂಡಾರಗಲ್ಲಿ ಸರ್ಕಾರಿ ಶಾಲೆಯಲ್ಲಿ ನಡೆಯಿತು. ಪೆಂಡಾರಗಲ್ಲಿಯ ಮತಗಟ್ಟೆ ಸಂಖ್ಯೆ 26 ಹಾಗೂ 27 ರಲ್ಲಿ ಹಲವು ಹೆಸರು ನಾಪತ್ತೆಯಾಗಿವೆ ಎಂದು ಮತದಾರರು ಕಿಡಿಕಾರಿದರು.
ಇದನ್ನೂ ಓದಿ | Lok Sabha Election: 3ನೇ ಹಂತದಲ್ಲಿ ಶೇ.60ರಷ್ಟು ಮತದಾನ, ಕಳೆದ ಬಾರಿಗಿಂತಲೂ ಕಡಿಮೆ
ಬಿಜೆಪಿ ಪರ ಮತ ಹಾಕಿ ಎಂದ ಅಧಿಕಾರಿ ವಿರುದ್ಧ ಆಕ್ರೋಶ
ಚಿಕ್ಕೋಡಿ: ಬಿಜೆಪಿ ಪರ ಮತ ಚಲಾಯಿಸುವಂತೆ ಮತಗಟ್ಟೆ ಒಳಗಿನ ಅಧಿಕಾರಿ ಒತ್ತಾಯ ಮಾಡಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ಮತಗಟ್ಟೆ ಎದುರು ಪ್ರತಿಭಟನೆ ಮಾಡಿದ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದ ಕೋಟೆಬಾಗ ಶಾಲೆಯ ಬೂತ್ ನಂಬರ್ 162 ರಲ್ಲಿ ನಡೆಯಿತು. ಮಹಿಳೆಯರಿಗೆ ಬಿಜೆಪಿ ಪರ ಮತಚಲಾಯಿಸುವಂತೆ ಸಿಬ್ಬಂದಿ ಒತ್ತಾಯ ಮಾಡಿದ್ದಾರೆ ಎಂದು ಮತಗಟ್ಟೆಗೆ ಕೈ ಕಾರ್ಯಕರ್ತರು ಆಗಮಿಸಿ ಆಕ್ರೋಶ ಹೊರಹಾಕಿದರು. ಇದರಿಂದ ಅವರನ್ನು ತಡೆಯಲು ಹೋದ ಪೊಲೀಸರು ಹಾಗೂ ಕಾರ್ಯಕರ್ತರ ನಡುವೆ ವಾಗ್ವಾದ ನಡೆಯಿತು.
ಮೊದಲ ಹಂತದ ಚುನಾವಣೆಯಲ್ಲಿ ಶೇ.69.23 ಮತದಾನ
ರಾಜ್ಯದಲ್ಲಿ ಲೋಕಸಭಾ ಚುನಾವಣೆ 2024ರ (Lok Sabha Election 2024) ಮೊದಲ ಹಂತದ ಮತದಾನ ಏ.26ರಂದು ನಡೆದಿತ್ತು. ಬೆಂಗಳೂರು, ಮೈಸೂರು ಸೇರಿ 14 ಕ್ಷೇತ್ರಗಳಿಗೆ ನಡೆದಿದ್ದ ಚುನಾವಣೆಯಲ್ಲಿ ಶೇ.69.23 ಮತದಾನ ದಾಖಲಾಗಿತ್ತು. ಮೊದಲ ಹಂತದಲ್ಲಿ ಮಂಡ್ಯ ಕ್ಷೇತ್ರದಲ್ಲಿ ಅತಿಹೆಚ್ಚು ಮತದಾನವಾಗಿತ್ತು, ಬೆಂಗಳೂರು ಸೆಂಟ್ರಲ್ ಕ್ಷೇತ್ರದಲ್ಲಿ ಅತಿ ಕಡಿಮೆ ಮತದಾನ ದಾಖಲಾಗಿತ್ತು.
ಯಾವ ಕ್ಷೇತ್ರದಲ್ಲಿ ಎಷ್ಟು ಮತದಾನ?
ಕ್ಷೇತ್ರ | 2024 | 2019 |
ಉಡುಪಿ-ಚಿಕ್ಕಮಗಳೂರು | ಶೇ. 76.06 | ಶೇ. 76.07 |
ಹಾಸನ | ಶೇ. 77.51 | ಶೇ. 77.35 |
ದಕ್ಷಿಣ ಕನ್ನಡ | ಶೇ. 77.43 | ಶೇ. 77.99 |
ಚಿತ್ರದುರ್ಗ | ಶೇ. 73.11 | ಶೇ. 70.80 |
ತುಮಕೂರು | ಶೇ. 77.70 | ಶೇ. 77.43 |
ಮಂಡ್ಯ | ಶೇ. 81.48 | ಶೇ. 80.59 |
ಮೈಸೂರು–ಕೊಡಗು | ಶೇ. 70.45 | ಶೇ. 69.51 |
ಚಾಮರಾಜನಗರ | ಶೇ. 76.59 | ಶೇ. 75.35 |
ಬೆಂಗಳೂರು ಗ್ರಾಮಾಂತರ | ಶೇ.67.29 | ಶೇ. 64.98 |
ಬೆಂಗಳೂರು ಉತ್ತರ | ಶೇ.54.42 | ಶೇ. 54.76 |
ಬೆಂಗಳೂರು ಸೆಂಟ್ರಲ್ | ಶೇ. 52.81 | ಶೇ. 54.32 |
ಬೆಂಗಳೂರು ದಕ್ಷಿಣ | ಶೇ. 53.15 | ಶೇ. 53.70 |
ಚಿಕ್ಕಬಳ್ಳಾಪುರ | ಶೇ. 76.82 | ಶೇ. 76.74 |
ಕೋಲಾರ | ಶೇ. 78.07 | ಶೇ. 77.25 |
2019ರ ಲೋಕಸಭಾ ಚುನಾವಣೆಯ ಒಟ್ಟು ಮತದಾನ ಎಷ್ಟು?
2019ರ ಲೋಕಸಭಾ ಚುನಾವಣೆಯಲ್ಲಿ ಎರಡೂ ಹಂತ ಸೇರಿ ಒಟ್ಟು ಶೇ. 68.96 ಮತದಾನ ನಡೆದಿತ್ತು. ಮಂಡ್ಯದಲ್ಲಿ ಅತಿಹೆಚ್ಚು ಶೇ. 80.59, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಅತಿ ಕಡಿಮೆ ಶೇ. 53.70 ಮತದಾನ ದಾಖಲಾಗಿತ್ತು.