ರಾಮನಗರ: ನಿವೃತ್ತ ಐಎಎಸ್ ಅಧಿಕಾರಿ, ನಟ ಕೆ.ಶಿವರಾಮ್ ಅವರ ಪತ್ನಿಗೆ ಚಾಮರಾಜನಗರ ಕ್ಷೇತ್ರದ ಬಿಜೆಪಿ ಟಿಕೆಟ್ ನೀಡಬೇಕು ಎಂದು ಛಲವಾದಿ ಮಹಾಸಭಾ ಒತ್ತಾಯ ಮಾಡುತ್ತಿರುವ ನಡುವೆ ರಾಜಕೀಯ ಪ್ರವೇಶದ ಬಗ್ಗೆ ಕೆ.ಶಿವರಾಮ್ ಅವರ ಪತ್ನಿ ವಾಣಿ ಶಿವರಾಮ್ ಸ್ಪಷ್ಟನೆ ನೀಡಿದ್ದಾರೆ. ಪತಿಯ ಆಸೆ ಈಡೇರಿಸುವುದೇ ನನ್ನ ಮೊದಲ ಗುರಿ, ನನ್ನ ಇಡೀ ಕುಟುಂಬ ಜನಸೇವೆಗೆ ಮೀಸಲು ಎಂದು ಹೇಳುವ ಮೂಲಕ ಪರೋಕ್ಷವಾಗಿ ರಾಜಕೀಯಕ್ಕೆ ಪ್ರವೇಶ ನೀಡುವುದಾಗಿ ಹೇಳಿದ್ದಾರೆ.
ವಿಸ್ತಾರ ನ್ಯೂಸ್‌ಗೆ ಪ್ರತಿಕ್ರಿಯೆ ನೀಡಿರುವ ವಾಣಿ ಶಿವರಾಮ್ ಅವರು, ಇವತ್ತಿಗೆ ಅವರನ್ನು ಕಳೆದುಕೊಂಡು 11 ದಿನಗಳಾಗಿವೆ. ಅವರಿಲ್ಲದ ಈ ಬದುಕು ತುಂಬಾ ಕಷ್ಟವಾಗಿದೆ. ನೂರಾರು ಕಾಲ ಬಾಳಿ ಬದುಕುತ್ತಾರೆ ಎಂದುಕೊಂಡಿದ್ದೆ. ಜನ ಸೇವೆ ಮಾಡಬೇಕು ಅಂದುಕೊಂಡು ನಿರಾಸೆಯಲ್ಲಿ ಹೊರಟುಹೋಗಿದ್ದಾರೆ. ಹೀಗಾಗಿ ನನ್ನ ಮುಂದಿನ ಗುರಿ ಅವರ ಆಸೆ ಈಡೇರಿಸುವುದು, ಎಷ್ಟೇ ಕಷ್ಟವಾದ್ರೂ ಅವರ ಆಸೆ ಈಡೇರಿಸುವುದೇ ನನ್ನ ಮೊದಲ ಗುರಿ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ | Water Crisis: ಹೊಂದಾಣಿಕೆಗಾಗಿ ತಮಿಳುನಾಡಿಗೆ ಕಾವೇರಿ ನೀರು ಬಿಟ್ಟ ಸರ್ಕಾರ; ಆರ್. ಅಶೋಕ್ ವಾಗ್ದಾಳಿ
ರಾಜಕೀಯ ಎಂಟ್ರಿ ಬಗ್ಗೆ ಸ್ಪಷ್ಟನೆ ನೀಡಿರುವ ಅವರು, ಇವತ್ತು ದೇವರೇ ಬಂದು ದೇವರನ್ನು ಕರೆದುಕೊಂಡು ಹೋಗಿದ್ದಾರೆ. ಅವರ ಆಸೆ, ಕನಸು ಈಡೇರಿಸುವ ಬಗ್ಗೆ ಹಠ, ಛಲ ತೊಟ್ಟಿದ್ದೀನಿ. ನನ್ನ ಇಡೀ ಕುಟುಂಬ ಜನರ ಸೇವೆಗೆ ಮೀಸಲು ಎಂದು ಹೇಳಿದರು.
ಚಾಮರಾಜನಗರ ಲೋಕಸಭೆ ಸ್ಫರ್ಧೆ ವಿಚಾರ ಪ್ರತಿಕ್ರಿಯಿಸಿ, ಚಾಮರಾಜನಗರ ಕ್ಷೇತ್ರಕ್ಕೆ ಬೆಳಗ್ಗೆ 6 ಗಂಟೆಗೆ ಹೋಗಿ ರಾತ್ರಿ 12 ಗಂಟೆಗೆ ಬರುತ್ತಿದ್ದರು. ಯಾಕ್ರೀ ಇಷ್ಟು ಲೇಟಾಗಿ ಬರುತ್ತೀರಿ ಅಂದ್ರೆ ಜನರ ಕಷ್ಟ ಏನು ಅಂತ ನಮಗೆ ಗೊತ್ತು, ನನ್ನ ಆಸೆಗೆ ನೀನು ಅಡ್ಡಿ ಬರಬೇಡ ಎನ್ನುತ್ತಿದ್ದರು. ಅವರ ಕೊನೆ ಕ್ಷಣದವರೆಗೂ ಎಷ್ಟು ನಿರಾಸೆಯಾಗಿದ್ದಾರೆ ಎಂಬುವುದು ನಮಗೆ ಗೊತ್ತು. ಪ್ರೀತಿಸೋ ಜನರಿಗೋಸ್ಕರ ಅವರ ಆಸೆ ಈಡೇರಿಸಲು ರೆಡಿ ಎನ್ನುವ ಮೂಲಕ ಪರೋಕ್ಷವಾಗಿ ಚುನಾವಣೆಯಲ್ಲಿ ಸ್ಪರ್ಧೆಗೆ ಸಿದ್ಧ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ | HD Kumaraswamy: ಕಾಂಗ್ರೆಸ್ ಮತದಿಂದ ಸುಮಲತಾರನ್ನು ಗೆಲ್ಲಿಸಿದ ಕಲಿಯುಗದ ಶಕುನಿ ಸಿದ್ದರಾಮಯ್ಯ: ಎಚ್‌ಡಿಕೆ ಆಕ್ರೋಶ
ಸರ್ಕಾರದಿಂದ ಅಂತ್ಯಸಂಸ್ಕಾರಕ್ಕೆ ಜಾಗ ನೀಡದ ವಿಚಾರಕ್ಕೆ ಪ್ರತಿಕ್ರಿಯಿಸಿ, ಅವರ ಕೊನೆ ಪಯಣದಲ್ಲಿ ಅಭಿಮಾನಿಗಳು ಜಾಗ ನೀಡುವಂತೆ ಕೂಗುತ್ತಿದ್ದರು. ಅಂಬೇಡ್ಕರ್‌ಗೂ ಜಾಗ ನೀಡಲಿಲ್ಲ, ಇಂತಹ ಮಹಾಪುರುಷನಿಗೂ ಜಾಗ ನೀಡಲಿಲ್ಲ. ಎಷ್ಟೇ ಕೂಗಿ, ಗಲಾಟೆ ಮಾಡಿದರೂ ಜಾಗ ನೀಡಿಲ್ಲ. ಕೊನೆಗೆ ಅವರೇ ಸಂಪಾದನೆ ಮಾಡಿರುವ ಜಾಗದಲ್ಲಿ ತಾಯಿ ಸಮಾಧಿ ಪಕ್ಕದಲ್ಲೇ ಅಂತ್ಯಸಂಸ್ಕಾರ ಮಾಡಿದ್ದೇವೆ. ನಮ್ಮ ವಸ್ತು ಸದ್ಯಕ್ಕೆ ನಮ್ಮ ಬಳಿಯೇ ಇದೆ ಎಂದು ಬೇಸರ ಹೊರಹಾಕಿದರು.